ಮತ್ತೊಂದು ಜೆಡಿಎಸ್ ವಿಕೆಟ್ ಪತನಕ್ಕೆ ಸಿದ್ದರಾಮಯ್ಯನವರೇ ವೇದಿಕೆ
ತುಮಕೂರು, ನ 2: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕಾರ್ಯವೈಖರಿಯ ವಿರುದ್ದ ಸ್ವಪಕ್ಷೀಯ ಶಾಸಕರೇ ವಿರೋಧ ವ್ಯಕ್ತ ಪಡಿಸುತ್ತಿರುವುದು ಗೊತ್ತಿರುವ ವಿಚಾರ. ಮುಂಬರುವ ಅಸೆಂಬ್ಲಿ ಚುನಾವಣೆಯ ವೇಳೆ ಬಹುತೇಕ ಅವರುಗಳೆಲ್ಲಾ ಪಕ್ಷ ಬಿಡುವುದು ಖಚಿತ.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಕೃಷ್ಣರಾಜ ನಗರ ಶಾಸಕ ಸಾ.ರಾ.ಮಹೇಶ್, ಕೋಲಾರ ಶಾಸಕ ಶ್ರೀನಿವಾಸ ಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಕುಮಾರಸ್ವಾಮಿ ವಿರುದ್ದ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ.
ಉಪ ಚುನಾವಣೆ: ದೊಡ್ಡಗೌಡ್ರು ಠಿಕಾಣಿ ಹೂಡಿದ್ರೂ, ಜೆಡಿಎಸ್ಸಿಗೆ ಠೇವಣಿ ಲಾಸ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ನಮ್ಮ ಮೊದಲ ಟಾರ್ಗೆಟ್ ಎನ್ನುವ ರೀತಿಯಲ್ಲಿ ದಳಪತಿಗಳು ಮೊದಲು ಮುಗಿಬೀಳುವುದು ಅವರ ಮೇಲೆಯೇ. ಈಗ, ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಜೆಡಿಎಸ್ ಶಾಸಕ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅದು ಅಂತಿಂತಹ ವಾಗ್ದಾಳಿ ಆಗಿರಲಿಲ್ಲ..
ಪಕ್ಷದ ಚಟುವಟಿಕೆಯಿಂದ ಬಹುತೇಕ ದೂರವೇ ಉಳಿದಿರುವ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಪಾರ್ಟಿ ಬಿಡಲು ಸಜ್ಜಾಗಿರುವ ಮುಖಂಡರ ಪೈಕಿ ಒಬ್ಬರು. ಕಳೆದ ವಾರ ಗುಬ್ಬಿಯಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮಕ್ಕೆ ಗುಬ್ಬಿ ವಾಸಣ್ಣ ಎಂದೇ ಹೆಸರಾಗಿರುವ ಶ್ರೀನಿವಾಸ್ ಅವರಿಗೆ ಆಹ್ವಾನ ಇರಲಿಲ್ಲ. ಆ ಸಿಟ್ಟನ್ನೆಲ್ಲಾ ಅವರು ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲಿ ಹೊರಹಾಕಿದ್ದಾರೆ.
ನಮಗೂ ಆತ್ಮಗೌರವ ಇದೆ, ಕಾರ್ಯಕ್ರಮಕ್ಕೆ ಹೋಗಲ್ಲ; ಎಚ್ಡಿಕೆ ವಿರುದ್ಧ ವಾಸಣ್ಣ ಆಕ್ರೋಶ

ಚಾಲುಕ್ಯ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನೂತನವಾಗಿ ಚಾಲುಕ್ಯ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಆ ವೇಳೆ, ಕ್ಷೇತ್ರದ ಶಾಸಕರಾದ ಶ್ರೀನಿವಾಸ್, ಮಾಜಿ ಸಚಿವರಾದ ಜಯಚಂದ್ರ, ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಕಾಂತರಾಜ್, ಮಾಜಿ ಶಾಸಕರಾದ ರಾಜಣ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ವಾಸಣ್ಣ ಅವರು ಸಿದ್ದರಾಮಯ್ಯನವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು. ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿಗೆ ಈ ಕಾರ್ಯಕ್ರಮವೇ ವೇದಿಕೆ ಎಂದು ವ್ಯಾಖ್ಯಾನಿಸಲಾಗಿತ್ತು.

ಸಿದ್ದರಾಮಣ್ಣ ಕರೆದುಕೊಂಡರೆ ಹೋದರೆ ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ
ಅದೇ ದಿಕ್ಕಿನಲ್ಲಿ ಸಾಗುತ್ತಿರುವ ರಾಜಕೀಯದಂತೆ, "ಸಿದ್ದರಾಮಣ್ಣ ಕರೆದುಕೊಂಡರೆ ಹೋದರೆ ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ. ಕುಮಾರಸ್ವಾಮಿಯವರು ಪಕ್ಷ ಬಿಟ್ಟು ಹೋಗುವವರು ಹೋಗಲಿ ಎಂದು ಹೇಳಿದ್ದನ್ನು ನಾನು ಪ್ರೀತಿಯಿಂದ " ಎಂದು ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ಈ ಮಾತನ್ನು ವಾಸಣ್ಣ, ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಹೇಳಿರುವುದರಿಂದ, ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಗೆ ಸಿದ್ದರಾಮಯ್ಯ ಷರಾ ಬರೆದಂತಿದೆ. ಗುಬ್ಬಿ ವಾಸಣ್ಣ ಅವರು ಕುಮಾರಸ್ವಾಮಿ ವಿರುದ್ದ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆ ನಡೆದ ಕಾರ್ಯಕ್ರಮಕ್ಕೆ ನನಗಾಗಲಿ, ಕಾರ್ಯಕರ್ತರಿಗಾಗಲಿ ಆಹ್ವಾನವಿರಲಿಲ್ಲ
"ಮೊನ್ನೆ ನಡೆದ ಕಾರ್ಯಕ್ರಮಕ್ಕೆ ನನಗಾಗಲಿ, ಕಾರ್ಯಕರ್ತರಿಗಾಗಲಿ ಆಹ್ವಾನವಿರಲಿಲ್ಲ. ಆ ಕಾರ್ಯಕ್ರಮದಲ್ಲಿ ದೇವೇಗೌಡ್ರನ್ನು ಸೋಲಿಸಲು ನಾನು ಕಾರಣ ಎಂದು ಹೇಳಿದ್ದರು. ನಿನ್ನದು ನಾಲಿಗೆನಾ ಏನು? ನಾನು ದೈವಭಕ್ತನಲ್ಲ, ನೀನು ಮತ್ತು ನಿನ್ನ ಕುಟುಂಬ ಎಲ್ಲಾ ದೇವರನ್ನು ಪೂಜಿಸುವವರಲ್ವಾ, ಮಾಟಮಂತ್ರ ಮಾಡುವವರಲ್ವಾ, ನೀನು ಹೇಳಿದ ದೇವಸ್ಥಾನಕ್ಕೆ ನಾನು ಬರುತ್ತೇನೆ, ಅಲ್ಲಿ ಆಣೆ ಮಾಡೋಣ. ಪ್ರತಿಯೊಂದು ಸಂದರ್ಭದಲ್ಲೂ ಆತನಿಗೆ (ಕುಮಾರಸ್ವಾಮಿ) ನಾನು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದೆ" ಎಂದು ಎಸ್.ಆರ್.ಶ್ರೀನಿವಾಸ್ ಅವರು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಪಕ್ಷದ ಇನ್ನೊಂದು ವಿಕೆಟ್ ಸದ್ಯದಲ್ಲೇ ಬೀಳುವ ಮುನ್ಸೂಚನೆ
"ಕುಮಾರಸ್ವಾಮಿ ನೀನು ಹೊಟ್ಟೆಗೆ ಏನು ತಿಂತೀಯಾ, ಸ್ವಾಭಿಮಾನದಿಂದ ಬದುಕುತ್ತಿರುವವನು ನಾನು, ನಿನಗೆ ನಾಚಿಕೆಯಾಗಲ್ವಾ? ಬಾಯಿ ಬಿಟ್ಟರೆ ಅಸತ್ಯ, ಕರ್ಚೀಫಿಗೆ ಗ್ಲಿಸರಿನ್ ಹಾಕಿ ಕಣ್ಣೀರು ಹಾಕುವವನು ನೀನು" ಎಂದು ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ. ಇವರು ಆಡಿದ ಎಲ್ಲಾ ಮಾತಿಗೆ ಸಿದ್ದರಾಮಯ್ಯನವರು ಸಾಕ್ಷಿಯಾಗಿದ್ದರು. ಒಟ್ಟಿನಲ್ಲಿ, ಜೆಡಿಎಸ್ ಪಕ್ಷದ ಇನ್ನೊಂದು ವಿಕೆಟ್ ಸದ್ಯದಲ್ಲೇ ಬೀಳುವ ಮುನ್ಸೂಚನೆ ಈ ಕಾರ್ಯಕ್ರಮದಲ್ಲಿ ಬಂದಿದೆ, ಅದಕ್ಕೆ ಸಿದ್ದರಾಮಯ್ಯನವರೇ ವೇದಿಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.