ಬೆಂಗಳೂರಿನಲ್ಲಿ ಶುರುವಾಗುತ್ತಿದೆ ದ್ರಾಕ್ಷಿ-ಕಲ್ಲಂಗಡಿ ಮೇಳ, ವಿವರ ಇಲ್ಲಿದೆ
ಬೇಸಿಗೆ ಶುರುವಾದ ಹಿನ್ನೆಲೆ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣು ಸಿಲಿಕಾನ್ ಸಿಟಿ ಮಂದಿಯ ಬಾಯಲ್ಲಿ ನೀರೂರಿಸಲು ಸಜ್ಜಾಗಿವೆ. ಪ್ರತಿ ವರ್ಷದಂತೆ ಈ ಬಾರಿಯೂ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್) ಬೃಹತ್ ಮಟ್ಟದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಆಯೋಜಿಸುತ್ತಿದೆ.
ಫೆಬ್ರವರಿ 24ರಂದು ಬೆಳಿಗ್ಗೆ 11 ಗಂಟೆಗೆ ದ್ರಾಕ್ಷಿ-ಕಲ್ಲಂಗಡಿ ಮಾರಾಟ ಮೇಳದ ಉದ್ಘಾಟನೆಯು ಬೆಂಗಳೂರಿನ ಲಾಲ್‌ಬಾಗ್ ಬಳಿ ಇರುವ ಹಾಪ್‌ಕಾಮ್ಸ್ ಕೇಂದ್ರ ಕಚೇರಿ ಆವರಣದಲ್ಲಿ ನೆರವೇರಲಿದೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ಮೇಳ ಉದ್ಘಾಟಿಸಲಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಉದಯ್ ಬಿ ಗರುಡಾಚಾರ್, ಸಂಸದ ಪಿ.ಸಿ.ಮೋಹನ್ ಭಾಗಿಯಾಗಲಿದ್ದಾರೆ.

ಈ ಮೇಳದಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳ ಮಾರಾಟ ವ್ಯವಸ್ಥೆ ಕೂಡ ಇರಲಿದೆ. ರಾಜ್ಯದ ವಿವಿಧೆಡೆ ರೈತರು ಬೆಳೆದಿರುವ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣು ಮಾರಾಟಕ್ಕೆ ಲಭ್ಯ ಇರಲಿದೆ. ಬೇಸಿಗೆ ಶುರುವಾಗುತ್ತಿದ್ದಂತೆ ಈ ಹಣ್ಣುಗಳ ಸೀಸನ್ ಶುರುವಾಗುವ ಕಾರಣ ಹಾಪ್‌ಕಾಮ್ಸ್ ಪ್ರತಿ ವರ್ಷವೂ ಈ ಮೇಳ ಆಯೋಜಿಸುತ್ತದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈ ಹಣ್ಣುಗಳನ್ನು ಮಾರಾಟ ಮಾಡಲು ಹಾಪ್‌ಕಾಮ್ಸ್ ವೇದಿಕೆ ಒದಗಿಸಿದೆ.
ರಾಜ್ಯದ ಚಿಕ್ಕಬಳ್ಳಾಪುರ, ಇತರ ಕೆಲವು ಜಿಲ್ಲೆಗಳಿಂದ ನೂರಾರು ಮೆಟ್ರಿಕ್ ಟನ್‌ನಷ್ಟು ವಿವಿಧ ತಳಿಯ ದ್ರಾಕ್ಷಿಯನ್ನು ಖರೀದಿಸಿ ಮಾರಾಟ ಮಾಡುವ ಗುರಿ ಹೊಂದಿದ್ದು, ಬೆಂಗಳೂರಿನ ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳಲ್ಲಿ ಕಲ್ಲಂಗಡಿಯನ್ನು ಕೂಡ ಮಾರಾಟ ಮಾಡುವ ಗುರಿ ಹೊಂದಿದೆ. ಥಾಮ್ಸನ್ ಸೀಡ್‌ಲೆಸ್, ಶರದ್, ಕೃಷ್ಣ ಶರದ್, ಗ್ಲೋಬ್, ಸೋನಿಕಾ ಸೇರಿದಂತೆ ಹತ್ತಾರು ತಳಿಯ ದ್ರಾಕ್ಷಿ ಮೇಳದಲ್ಲಿ ಲಭ್ಯವಾಗಲಿದೆ.
ಚಿಕ್ಕಬಳ್ಳಾಪುರ, ವಿಜಯಪುರ, ಬಾಗಲಕೋಟೆ, ಕೋಲಾರ, ಕೊಪ್ಪಳ ಸೇರಿದಂತೆ ಎಲ್ಲಾ ರೈತರಿಂದ ಹಣ್ಣು ತರಿಸಿಕೊಂಡು ಟನ್‌ಗಟ್ಟಲೆ ದ್ರಾಕ್ಷಿ, ಕಲ್ಲಂಗಡಿಯನ್ನು ಖರೀದಿಸಲಾಗಿದೆ. ದ್ರಾಕ್ಷಿಯು ನೈಸರ್ಗಿಕ ಸಕ್ಕರೆ, ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜಗಳಿಗೆ ಹೆಸರುವಾಸಿಯಾಗಿದ್ದರೆ, ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್-ಎ, ವಿಟಮಿನ್ ಸಿ, ಬಿ-1, ಬಿ-2, ಪೊಟ್ಯಾಶಿಯಂ, ಮೆಗ್ನೀಷಿಯಂನಂತಹ ಪೋಷಕಾಂಶಗಳಿವೆ. ಇದು ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಬೆಂಗಳೂರಿನಲ್ಲಿರುವ ಎಲ್ಲ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಈ ಹಣ್ಣುಗಳ ಮಾರಾಟ ನಡೆಯಲಿದೆ. ಬೇಸಿಗೆ ಪೂರ್ಣಗೊಳ್ಳುವವರೆಗೆ ಈ ಕೊಡುಗೆ ಇರಲಿದೆ.

ಕರಾವಳಿ, ಮಲೆನಾಡಿನ ಪ್ರದೇಶ ಹೊರತುಪಡಿಸಿ ರಾಜ್ಯದಾದ್ಯಂತ ಬೆಳೆದ ಕಿರಣ್ ಕಲ್ಲಂಗಡಿ, ಹಳದಿ ಬಣ್ಣದ ಕಲ್ಲಂಗಡಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಕೋಲಾರ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಬೆಳೆದ ಬೆಂಗಳೂರು ನೀಲಿ, ಕೃಷ್ಣ ಶರದ್, ಸೋನಾಕ, ಸೂಪರ್ ಸೋನಾಕ, ಇಂಡಿಯನ್ ರೆಡ್ ಗ್ಲೋಬ್ ಥಾಮ್ಸನ್ ಸೀಡ್‌ಲೆಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ದ್ರಾಕ್ಷಿ ಹಣ್ಣುಗಳನ್ನು ಮೇಳದಲ್ಲಿ ಖರೀದಿಸುವ ಅವಕಾಶವಿದೆ ಎಂದು ಹಾಪ್‌ಕಾಮ್ಸ್ ಹೇಳಿದೆ.












Click it and Unblock the Notifications