Friendship Day- ಗೆಳೆಯರೇ, ನನ್ನ ಗೆಳತಿಯರೇ...
ಇಂದು ಆಗಸ್ಟ್ 7, ಅಂತಾರಾಷ್ಟ್ರೀಯ ಸ್ನೇಹ ದಿನ. ಗೆಳೆತನ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಬಹುಮುಖ್ಯವಾದ ಬಂಧ. ನಮ್ಮ ಬಾಲ್ಯದಿಂದ ಹಿಡಿದು ಶಾಲೆ ಕಾಲೇಜು ಹಂತರದವರೆಗೂ ಸ್ನೇಹಿತರೊಂದಿಗೆ ಕಳೆದ ಕಾಲ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳೆನಿಸುತ್ತವೆ.
ಬಾಲ್ಯದ ಗೆಳೆತನದ ನೆನಪು ಬಲು ಸುಮಧುರ. ನಮ್ಮ ಅಂದಿನ ಮುಗ್ಧ ಮನಸು, ಭಾವನೆಗಳು ಪರಿಶುದ್ಧ. ತುಂಟಾಟ ಬಲು ಮಜಾ. ಸ್ನೇಹಿತರೊಂದಿಗೆ ನಾವು ಮಾಡುತ್ತಿದ್ದ ಕೀಟಲೆ, ಹುಡುಗಾಟ, ತರಲೆ ಎಲ್ಲವೂ ಅವಿಸ್ಮರಣೀಯ.
ನಾವು ಕಷ್ಟದಲ್ಲಿ ಸಿಲುಕಿದಾಗ ಸಹಾಯಕ್ಕೆ ಧಾವಿಸಿ ಬರುವುದು ಬಂಧುಗಳಿಗಿಂತ ಹೆಚ್ಚಾಗಿ ಸ್ನೇಹಿತರೇ ಎಂಬುದು ನಾವೆಲ್ಲರೂ ಅರಿತಿರುವ ಸತ್ಯ. ಸ್ನೇಹ ಎಂಬುದೇ ನಿಸ್ವಾರ್ಥ, ಪ್ರೀತಿಯ ಸಂಬಂಧ.
ಇಂದು ಭಾನುವಾರ ಸ್ನೇಹಿತರ ದಿನದಂದು ನಮ್ಮ ಆ ನೆನಪುಗಳನ್ನ ಮೆಲುಕು ಹಾಕುವ ಸಮಯ. ಸ್ನೇಹಿತರನ್ನು ಭೇಟಿ ಮಾಡುವ ಸಮಯ. ಸ್ನೇಹಿತರಿಗೆ ನಿಮ್ಮ ಪ್ರೀತಿಯನ್ನು ತೋರ್ಪಡಿಸುವ ಸಮಯ.

ಪರಮಾಪ್ತ ಸ್ನೇಹಿತರಿಗೆ ಶುಭಾಶಯ
* ಈ ಜಗತ್ತಿಗೆ ಅಳಿವಿಲ್ಲ, ನಮ್ಮ ಸ್ನೇಹಕ್ಕೆ ಅಂತ್ಯವಿಲ್ಲ
* ಎಲ್ಲಾದರೂ ಇರು, ಎಂಥಾದರೂ ಇರು ಈ ಸ್ನೇಹ ಮರೆಯದಿರು
* ನನ್ನ ಜೀವನದ ಅತ್ಯುತ್ತಮ ಸಂಪಾದನೆ ಎಂದರೆ ಅದು ನಿನ್ನ ಸ್ನೇಹ
* ಎಲ್ಲ ಭಾಗ್ಯಕ್ಕಿಂತ ಮಿಗಿಲು ಸ್ನೇಹ ಭಾಗ್ಯ
* ನೀನು ನನ್ನ ನಿಜವಾದ ಸ್ನೇಹಿತ
* ನಮ್ಮಿಬ್ಬರದು ಪವಿತ್ರ ಸ್ನೇಹ
* ನನ್ನ ಮುಗುಳ್ನಗೆಯ ಕ್ಷಣಗಳನ್ನು ಹೆಚ್ಚಿಸಿದ ನಿನ್ನ ಸ್ನೇಹಕ್ಕೆ ನನ್ನದೊಂದು ಸಲಾಂ

ದೊಡ್ಡವರು ಹೇಳಿದ್ದು
* "ಹೊಸ ಸ್ನೇಹಿತರು ನಿಮಗೆ ಹೊಸ ಶಕ್ತಿ ತುಂಬುತ್ತಾರೆ" - ಶಾನಾ ರಾಡ್ರಿಗೆಸ್
* "ಏನು, ನೀನೂ ಕೂಡ? ನಾನೊಬ್ಬನೇ ಅಂತ ಭಾವಿಸಿದ್ದೆ ಅಂತ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹೇಳಿದ ಕ್ಷಣವೇ ಸ್ನೇಹ ಕುಡಿಯೊಡೆದಿರುತ್ತದೆ" - ಸಿ.ಎಸ್. ಲಿವಿಸ್.
* "ಇಲ್ಲಿ ಯಾರೂ ಅಪರಿಚಿತರಲ್ಲ. ಎಲ್ಲರೂ ಕೂಡ ನೀವು ಭೇಟಿಯಾಗದೇ ಇರುವ ಸ್ನೇಹಿತರೇ."- ವಿಲಿಯಮ್ ಬಟ್ಲರ್ ಯೀಟ್ಸ್
* "ಸ್ನೇಹವು ನಮ್ಮ ಜೀವನದ ಸವಾಲುಗಳಿಗೆ ಪರಿಹಾರ ಕೊಡುವುದಿಲ್ಲ. ಆದರೆ, ಸವಾಲು ನನ್ನೊಬ್ಬನಿಗೆ ಮಾತ್ರವಲ್ಲ ಎಂಬುದು ನಮ್ಮ ಸ್ನೇಹದಿಂದ ಗೊತ್ತಾಗುತ್ತದೆ" - ಸಿ ಸ್ಯಾಂಪ್ಸನ್.
* "ಹಗಲಲ್ಲಿ ಒಬ್ಬನೇ ನಡೆಯುವುದಕ್ಕಿಂತ, ಕತ್ತಲಲ್ಲಿ ಸ್ನೇಹಿತರ ಜೊತೆ ಬೇಕಾದರೆ ನಡೆಯುತ್ತೇನೆ" - ಹೆಲೆನ್ ಕೆಲರ್.

ಸ್ನೇಹಿತರ ಸ್ಯಾಂಡಲ್ವುಡ್ ಸಿನಿಮಾ
ಸ್ಯಾಂಡಲ್ವುಡ್‌ನಲ್ಲಿ ಸ್ನೇಹ ಮತ್ತು ಸ್ನೇಹಿತರ ಬಗ್ಗೆ ಹಲವು ಸಿನಿಮಾಗಳು ಬಂದಿವೆ. ಇತ್ತೀಚಿನ ಇಂಥ ಕೆಲ ಚಿತ್ರಗಳು ಇಲ್ಲಿವೆ:
ಕಿರಿಕ್ ಪಾರ್ಟಿ, ಮೊಗ್ಗಿನ ಮನಸು, ದಿಗ್ಗಜರು, ಆಪ್ತಮಿತ್ರ, ಸ್ನೇಹ ಲೋಕ, ನಮ್ಮೂರ ಮಂದಾರ ಹೂವೆ, ಶ್ರೀರಾಮಚಂದ್ರ... ಹೀಗೆ ಹಲವು ಚಿತ್ರಗಳು ನೆನಪಿಗೆ ಬರುತ್ತವೆ.
ಪುಟಾಣಿ ಏಜೆಂಟ್ 123 ಸಿಂಹದ ಮರಿ ಸೈನ್ಯ, ಸಿಪಾಯಿ ಇತ್ಯಾದಿ ಸಿನಿಮಾಗಳನ್ನು ಮರೆಯಲು ಸಾಧ್ಯವೇ? ವಿಷ್ಣುವರ್ಧನ್, ದ್ವಾರಕೀಶ್ ಒಟ್ಟಿಗೆ ಅಭಿನಯಿಸಿರುವ ಬಹುತೇಕ ಚಿತ್ರಗಳು ಅಪೂರ್ವ ಸ್ನೇಹದ ಸಿನಿಮಾಗಳೇ ಆಗಿವೆ.
ಸ್ನೇಹಿತರ ಕುರಿತು ಕನ್ನಡದಲ್ಲಿ ಹಲವು ಹಾಡುಗಳು ಸೂಪರ್ ಹಿಟ್ ಎನಿಸಿವೆ. ಅದರಲ್ಲೂ ಅಂಬರೀಷ್, ವಿಷ್ಣವರ್ಧನ್ ಅಭಿನಯದ 'ದಿಗ್ಗಜರು' ಸಿನಿಮಾದ "ಕುಚಿಕು, ಕುಚಿಕು, ಕುಚಿಕೂ... ನಾವು ಚಡ್ಡಿ ದೋಸ್ತಿ ಕಣೋ ಕುಚಿಕು" ಹಾಡು ಸ್ನೇಹಕ್ಕೆ ಐಕಾನ್ ಸಾಂಗ್ ಎಂಬಂತಿದೆ.
'ಸಿಪಾಯಿ' ಸಿನಿಮಾದಲ್ಲಿ ರವಿಚಂದ್ರನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ 'ನಾನು ಸ್ನೇಹ ಜೀವಿ, ನೀನೂ ಸ್ನೇಹ ಜೀವಿ, ಲೋಕದಲ್ಲಿ ಸ್ನೇಹ ಚಿರಂಜೀವಿ' ಹಾಡು ಕೂಡ ಒಂದು ರೀತಿ ಐಕಾನಿಕ್ ಸಾಂಗ್ ಎನಿಸಿದೆ. ರವಿಚಂದ್ರನ್ ಅವರ "ಗೆಳೆಯರೆ, ನನ್ನ ಗೆಳತಿಯರೇ..." ಎಂಬ ಪರಿಶುದ್ಧ ಕಾಲೇಜು ಸ್ನೇಹಿತರ ಹಾಡು ಮರೆತುಹೋಗಲು ಹೇಗೆ ಸಾಧ್ಯ..!

ಬಾಲಿವುಡ್ ಸಿನಿಮಾಗಳು
ಹಿಂದಿಯಲ್ಲೂ ಸ್ನೇಹಕ್ಕೆ ಪ್ರಾಧಾನ್ಯ ನೀಡಿರುವ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಕಂಗನಾ ರಾಣಾವತ್ ನಟಿಸಿರುವ ಕ್ವೀನ್, ಆಮೀರ್ ಖಾನ್ ನಟಿಸಿರುವ ಥ್ರೀ ಈಡಿಯಟ್ಸ್ ಇತ್ಯಾದಿ ಚಿತ್ರಗಳು ನೆನಪಿಗೆ ಬರುತ್ತವೆ.
ಹಾಗೆಯೇ, "ಜಿಂದಗಿ ನ ಮಿಲೇಗಿ ದುಬಾರ", "ರಂಗ್ ದೇ ಬಸಂತಿ" ಮೊದಲಾದ ಸಿನಿಮಾಗಳೂ ಸ್ನೇಹಿತರ ಸುಮಧುರ ಸಂಬಂಧದ ಕುರಿತ ಕಥೆ ಹೊಂದಿವೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications