Get Updates
Get notified of breaking news, exclusive insights, and must-see stories!

ಮೈಸೂರು ಮಹಾರಾಜರಿಗೆ ಪ್ರಿಯವಾಗಿದ್ದ 'ಅರಮನೆ ಹಣ್ಣು' ಯಾವುದು?

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಮೈಸೂರು ಮಹಾರಾಜರ ಆಡಳಿತದಲ್ಲಿ ನೂರಾರು ವಿಶೇಷತೆಗಳನ್ನು ನಾವು ಕಾಣಬಹುದಾಗಿದೆ. ಕಲೆ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಬಹಳಷ್ಟಿವೆ. ಅದರ ಜೊತೆಗೆ ಕೃಷಿಗೆ ಅವರು ಬಹಳಷ್ಟು ಒತ್ತು ನೀಡಿದ್ದರು ಎನ್ನುವುದಕ್ಕೆ ಇವತ್ತಿಗೂ ಇರುವ ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆಯ ಖ್ಯಾತಿ ಸಾಕ್ಷಿಯಾಗಿದೆ. ಇದರ ನಡುವೆ ಮಹಾರಾಜರು ಮತ್ತೊಂದು ಹಣ್ಣಿಗೆ ಪ್ರಾಮುಖ್ಯತೆ ನೀಡಿದ್ದರಲ್ಲದೆ, ಅವತ್ತಿನ ಕಾಲದಲ್ಲಿ ಅದು 'ಅರಮನೆ ಹಣ್ಣು' ಎಂದೇ ಖ್ಯಾತಿ ಪಡೆದಿತ್ತು ಎಂಬುದೇ ಮತ್ತೊಂದು ವಿಶೇಷ.

ಇಷ್ಟಕ್ಕೂ ಮೈಸೂರು ಮಹಾರಾಜರಿಗೆ ಪ್ರಿಯವಾಗಿ, ಬ್ರಿಟೀಷ್ ಅಧಿಕಾರಿಗಳು ಕೂಡ ಇಷ್ಟಪಡುತ್ತಿದ್ದ ಆ ಹಣ್ಣು ಮೈಸೂರಿನಲ್ಲಿ ಬೆಳೆಯುತ್ತಿರಲಿಲ್ಲ. ಅದನ್ನು ಶ್ರೀರಂಗಪಟ್ಟಣದಲ್ಲಿ ಬೆಳೆಸಲಾಗುತ್ತಿತ್ತು. ಹಣ್ಣುಗಳ ಪೈಕಿ ಉತ್ತಮವಾದ ಹಣ್ಣನ್ನು ಅಲ್ಲಿಂದ ಅರಮನೆಗೆ ತಲುಪಿಸಲಾಗುತ್ತಿತ್ತು. ಈ ಹಣ್ಣನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ತಂದು ಅರಮನೆಗೆ ನೀಡಲು ವ್ಯಕ್ತಿಯೊಬ್ಬರನ್ನು ನೇಮಿಸಲಾಗಿತ್ತು. ಅವರು ತಾವು ಬೆಳೆದ ಹಣ್ಣನ್ನು ಪ್ರಾಣಿ, ಪಕ್ಷಿಗಳಿಂದ ಸಂರಕ್ಷಿಸಿ ಉತ್ತಮ ಮತ್ತು ರಸಭರಿತ ಹಣ್ಣನ್ನು ಆಯ್ದು ಬುಟ್ಟಿಯಲ್ಲಿ ತುಂಬಿ ಮೈಸೂರು ಅರಮನೆಗೆ ತಂದು ಮಹಾರಾಜರಿಗೆ ನೀಡಿ ಹೋಗುತ್ತಿದ್ದರು.

ಇಷ್ಟಕ್ಕೂ ಮಹಾರಾಜರ ಪ್ರೀತಿಗೆ ಪಾತ್ರವಾಗಿ 'ಅರಮನೆ ಹಣ್ಣು'ಎಂದೇ ಖ್ಯಾತವಾಗಿದ್ದ ಆ ಹಣ್ಣು ಗಂಜಾಂ ಅಂಜೂರ. ಇದು ಮಹಾರಾಜರ ಕಾಲದಲ್ಲಿಯೇ ದೇಶ ವಿದೇಶಗಳ ಗಮನಸೆಳೆದಿತ್ತು. ಅವತ್ತಿನ ಕಾಲದಲ್ಲಿ ಬ್ರಿಟೀಷ್ ಅಧಿಕಾರಿಗಳಿಗೆ ಈ ಹಣ್ಣನ್ನು ಮಹಾರಾಜರು ಉಡುಗೊರೆಯಾಗಿ ನೀಡುತ್ತಿದ್ದರು. ತನ್ನದೇ ಆದ ರುಚಿ ಹೊಂದಿದ್ದ ಅಂಜೂರವನ್ನು ಶ್ರೀರಂಗಪಟ್ಟಣದ ಗಂಜಾಂನಲ್ಲಿ ಬೆಳೆಸಲು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಚ್ಚಿನ ಒತ್ತು ನೀಡಿದ್ದರು. ಹೀಗಾಗಿ ಅವತ್ತಿನ ಕಾಲದಲ್ಲಿಯೇ ಗಂಜಾಂ ಅಂಜೂರ ಅರಮನೆ ಹಣ್ಣಾಗಿ ಎಲ್ಲೆಡೆ ಗಮನಸೆಳೆದಿತ್ತು.

 ಕಾವೇರಿ ನದಿ ದಡದ ಗಂಜಾಂನಲ್ಲಿ ಅಂಜೂರ ಬೆಳೆ

ಕಾವೇರಿ ನದಿ ದಡದ ಗಂಜಾಂನಲ್ಲಿ ಅಂಜೂರ ಬೆಳೆ

ಕಾವೇರಿ ನದಿ ದಡದಲ್ಲಿರುವ ಶ್ರೀರಂಗಪಟ್ಟಣದ ಗಂಜಾಂನಲ್ಲಿ ನೀರಿನ ಅನುಕೂಲವಿದ್ದುದರಿಂದ ಅಲ್ಲಿ ಅಂಜೂರ ಬೆಳೆಯಲು ಉತ್ತಮ ಅವಕಾಶವಿತ್ತು. 1940ರ ಕಾಲಘಟ್ಟದಲ್ಲಿ ಗಂಜಾಂನಲ್ಲಿ ಅಂಜೂರ ಬೆಳೆಯಲು ಪ್ರೋತ್ಸಾಹ ನೀಡಿದ ಕಾರಣ ಸುಮಾರು 150ಕ್ಕೂ ಹೆಚ್ಚು ಅಂಜೂರ ಹಣ್ಣಿನ ತೋಟಗಳಿದ್ದವು ಎಂದು ಹೇಳಲಾಗಿದೆ. ಅಂಜೂರ ಬೆಳೆಯಲು ಬೆಳೆಗಾರರಿಗೆ ಅನುಕೂಲವಾಗುವಂತೆ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ತಲಾ ಐದು ಗುಂಟೆ ಜಮೀನು ನೀಡಿದ್ದರಲ್ಲದೆ, ಅಂಜೂರ ತೋಟ ನಿರ್ಮಾಣಕ್ಕೆ ಅನುಕೂಲವಾಗುವಂತೆ ತೋಟದ ಸುತ್ತ ಮಣ್ಣಿನ ಗೋಡೆಯನ್ನು ನಿರ್ಮಿಸಲು ಹಣಕಾಸು ನೆರವನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.

 ಬ್ರಿಟೀಷರಿಗೂ ಪ್ರಿಯವಾಗಿದ್ದ ಅರಮನೆ ಹಣ್ಣು

ಬ್ರಿಟೀಷರಿಗೂ ಪ್ರಿಯವಾಗಿದ್ದ ಅರಮನೆ ಹಣ್ಣು

ಇನ್ನು ಗಂಜಾಂ ಅಂಜೂರದ ಬಗ್ಗೆ ನೋಡುವುದಾದರೆ ಇದು ಹೈದರ್ ಆಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿಯೂ ಇದನ್ನು ಬೆಳೆಯಲಾಗುತ್ತಿತ್ತು ಎನ್ನಲಾಗಿದೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿತು. ಮಹಾರಾಜರ ಮೂಲಕ ಬ್ರಿಟೀಷ್ ಅಧಿಕಾರಿಗಳ ಗಮನಸೆಳೆದಿತ್ತು. ಅರಮನೆಯಲ್ಲಿ ಇದು ಜಾಗಪಡೆಯುವುದರೊಂದಿಗೆ 'ಅರಮನೆ ಹಣ್ಣು' ಎಂಬ ಖ್ಯಾತಿಗೂ ಪಾತ್ರವಾಯಿತು. ಆಗಿನ ದಿನಗಳಲ್ಲಿ ಅರಮನೆಗೆ ಭೇಟಿ ನೀಡುತ್ತಿದ್ದ ಬ್ರಿಟೀಷ್ ಅಧಿಕಾರಿಗಳು ಸೇರಿದಂತೆ ಅತಿಥಿಗಳಿಗೆ ಗಂಜಾಂ ಅಂಜೂರವನ್ನು ನೀಡಲಾಗುತ್ತಿತ್ತು.

 ಅರಮನೆಗೆ ಹಣ್ಣು ಸಾಗಿಸುತ್ತಿದ್ದ ಗಂಜಾಂನ ಲಕ್ಕಯ್ಯ

ಅರಮನೆಗೆ ಹಣ್ಣು ಸಾಗಿಸುತ್ತಿದ್ದ ಗಂಜಾಂನ ಲಕ್ಕಯ್ಯ

ಸ್ವಾತಂತ್ರ್ಯ ಪೂರ್ವದಲ್ಲಿಯೇ ದೇಶ ವಿದೇಶಿಗರ ಸೆಳೆದಿದ್ದ ಅಂಜೂರವನ್ನು ಶ್ರೀರಂಗಪಟ್ಟಣದ ಗಂಜಾಂನಿಂದ ಮೈಸೂರು ಅರಮನೆಗೆ ತಂದುಕೊಡಲು ಗಂಜಾಂನ ಲಕ್ಕಯ್ಯ ಎಂಬುವರನ್ನು ನೇಮಕ ಮಾಡಲಾಗಿತ್ತು. ಅವರು ತೋಟದಲ್ಲಿ ಬೆಳೆದ ಅಂಜೂರಗಳ ಪೈಕಿ ಅತ್ಯುತ್ತಮವಾದ, ರಸಭರಿತ ಹಣ್ಣನ್ನು ಆಯ್ದು ಅದನ್ನು ಬಿದಿರಿನ ಬುಟ್ಟಿಯಲ್ಲಿರಿಸಿ ಮೈಸೂರಿನ ಅರಮನೆಗೆ ತಲುಪಿಸಿ ಹೋಗುತ್ತಿದ್ದರು. ಅಂಜೂರದ ಕಾರಣದಿಂದ ಅವರು ನೇರವಾಗಿ ಅರಮನೆಗೆ ಪ್ರವೇಶ ಮಾಡುವ ಅವಕಾಶ ಹೊಂದಿದ್ದರಲ್ಲದೆ, ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಪ್ರೀತಿಗೆ ಕಾರಣರಾಗಿದ್ದರು.

 ಆಸಕ್ತಿ ಕಳೆದುಕೊಂಡ ಬೆಳಗಾರರು

ಆಸಕ್ತಿ ಕಳೆದುಕೊಂಡ ಬೆಳಗಾರರು

ಸ್ವಾತಂತ್ರ್ಯ ನಂತರವೂ ಗಂಜಾಂ ಅಂಜೂರ ಗಮನ ಸೆಳೆದಿತ್ತು. ಅದರ ಮಾರಾಟಕ್ಕಾಗಿ ಗಂಜಾಂನ ಗುಂಬಸ್ ರಸ್ತೆಯಲ್ಲಿ ಅಂಜೂರ ಮಾರಾಟ ಕೇಂದ್ರವನ್ನು ತೆರೆಯಲಾಗಿತ್ತು. ಅಲ್ಲಿ ಅಂಜೂರದ ಮಾರಾಟವೂ ನಡೆಯುತ್ತಿತ್ತು. ಆದರೆ ತದ ನಂತರ ಅದಕ್ಕೆ ನೀಡುತ್ತಿದ್ದ ಪ್ರಾಮುಖ್ಯತೆ ಕಡಿಮೆಯಾಯಿತು. ಸರ್ಕಾರಗಳು ತೋರಿದ ನಿರ್ಲಕ್ಷ್ಯದ ಕಾರಣದಿಂದ ಅಂದಿನ ಅಂಜೂರ ಮಾರಾಟದ ಕೇಂದ್ರ ಇವತ್ತು ಪಾಳು ಬಿದ್ದಿದೆ. ಇನ್ನು ರಾಜರ ಕಾಲದಲ್ಲಿ ಮಣ್ಣಿನ ಗೋಡೆ ಕಟ್ಟಿ ಮಾಡಿದ್ದ ಅಂಜೂರ ತೋಟದ ಗೋಡೆಗಳ ಅವಶೇಷಗಳಷ್ಟೆ ಉಳಿದಿವೆ. 1960ರ ತನಕವೂ ಅಂಜೂರದ ಕಾಲವಾಗಿತ್ತು. ಈಗ ಅದರ ಬಗ್ಗೆ ಬೆಳೆಗಾರರು ಹೆಚ್ಚಿನ ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ.

 ರೈತರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲು

ರೈತರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲು

ತೋಟಗಾರಿಕಾ ಇಲಾಖೆ ಗಂಜಾಂ ಅಂಜೂರವನ್ನು ಬೆಳೆಸಿ ಉಳಿಸುವ ಪ್ರಯತ್ನ ಮಾಡುತ್ತಿದ್ದು ಗಂಜಾಂನಲ್ಲಿರುವ ಫಾರ್ಮ್ ನಲ್ಲಿ ಗಿಡಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಜತೆಗೆ ಆಸಕ್ತಿ ಇರುವ ಕೃಷಿಕರಿಗೆ ಗಿಡಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಬೆಳೆಯಲು ರೈತರು ಮುಂದೆ ಬಂದರೆ ಮತ್ತೆ 'ಗಂಜಾಂ ಅಂಜೂರ'ದ ಅಧ್ಯಾಯ ಆರಂಭವಾಗಬಹುದೇನೋ? ಆದರೆ ಅಂಜೂರವನ್ನು ಕಷ್ಟಪಟ್ಟು ಬೆಳೆದರೂ ಹಣ್ಣುಗಳನ್ನು ಪಕ್ಷಿ, ಅಳಿಲು, ಸೇರಿದಂತೆ ಪ್ರಾಣಿ ಪಕ್ಷಿಗಳಿಂದ ಕಾಪಾಡಿ ಹಣ್ಣನ್ನು ಪಡೆಯುವುದು ಸುಲಭದ ಕೆಲಸವಲ್ಲ. ಹೀಗಾಗಿಯೇ ರೈತರು ನಿರಾಸಕ್ತಿ ತೋರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

 ಕಡಿಮೆ ಆಮ್ಲ ಮತ್ತು ಹೆಚ್ಚಿನ ಸಕ್ಕರೆ ಅಂಶ

ಕಡಿಮೆ ಆಮ್ಲ ಮತ್ತು ಹೆಚ್ಚಿನ ಸಕ್ಕರೆ ಅಂಶ

ಇದೆಲ್ಲದರ ನಡುವೆ ಇತರೆಡೆ ಬೆಳೆಯುವ ಅಂಜೂರಕ್ಕಿಂತ ಗಂಜಾಂ ಅಂಜೂರದಲ್ಲಿ ವಿಶೇಷ ಏನಿದೆ ಎನ್ನುವುದನ್ನು ನೋಡಿದ್ದೇ ಆದರೆ ಇದು ಹಣ್ಣಾಗಿ ಮಾಗಿದರೂ ಬೇಗ ಹುಳು ಹತ್ತುವುದಿಲ್ಲ ಬಲಿತ ಕಾಯಿ ಹಸಿರಾಗಿದ್ದರೂ ಹಣ್ಣಾಗುವಾಗ ನಸುಗೆಂಪು ಬಣ್ಣಕ್ಕೆ ತಿರುಗುತ್ತದೆ. ಮಾಗಿದ ಹಣ್ಣಿನ ತುದಿಯಲ್ಲಿ ಜೇನಿನಂತ ರಸವಿರುವುದು ವಿಶೇಷವಾಗಿದೆ. ಇದರಲ್ಲಿ ಎ ಮತ್ತು ಬಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕಡಿಮೆ ಆಮ್ಲ ಮತ್ತು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದೆ.

ವರ್ಷಕ್ಕೆ ಎರಡು ಬಾರಿ ಹಣ್ಣು ಬಿಡುತ್ತದೆ. ಹಣ್ಣನ್ನು ಪೊಟಾಸಿಯಂ ಮೆಟಾಬೈ ಸಲ್ಫೇಟ್ ದ್ರಾವಣದಿಂದ ಸಂಸ್ಕರಿಸಿ ಒಣಗಿಸುವ ಮೂಲಕ ಬಣ್ಣಕೆಡದಂತೆ ಸಂಸ್ಕರಿಸಿ ಇಡಲಾಗುತ್ತದೆ. ಅದು ಏನೇ ಇರಲಿ. ಇವತ್ತು ಬೇರೆ ಬೇರೆ ಕಡೆಗಳಲ್ಲಿ ಅಂಜೂರ ಬೆಳೆಯಲಾಗುತ್ತಿದ್ದರೂ ಗಂಜಾಂ ಅಂಜೂರ ಮಾತ್ರ ತನ್ನದೇ ಆದ ರುಚಿ ಹಾಗೂ ವಿಶೇಷತೆಗಳಿಂದ ಇತಿಹಾಸದ ಕಥೆ ಹೇಳುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+