Potato Bajji Recipe: ಸಂಜೆಯ ಚುಮು ಚುಮು ಚಳಿಗೆ ಮಾಡಿ ಆಲೂಗಡ್ಡೆ ಬಜ್ಜಿ
ಚಳಿಗಾಲ...ಆಗಾಗ ಮೋಡ....ತಣ್ಣನೆಯ ಗಾಳಿ. ಸಂಜೆಯ ಹೊತ್ತಿನಲ್ಲಿ ಕಾಫಿ, ಟೀ ಜೊತೆ ಸವಿಯಲು ಯಾವುದಾದರೂ ಬಜ್ಜಿ ಇದ್ದರೆ ಅದರ ಗಮ್ಮತ್ತೇ ಬೇರೆ. ಆದರೆ ಯಾವ ಬಜ್ಜಿ ಮಾಡುವುದು?, ಮನೆಮಂದಿಯ ಜೊತೆ ಕೂತು ಸವಿಯುವುದು ಎಂಬ ಚಿಂತೆ ಬೇಡ. ಮನೆಯಲ್ಲಿ ಆಲೂಗಡ್ಡೆ ಇದ್ದರೆ ಸುಲಭವಾಗಿ ಆಲೂ ಬಜ್ಜಿ ಮಾಡಿ ಸವಿಯಿರಿ. ಮಿತ್ರರಿಗೂ ರೆಸಿಪಿ ಕಳಿಸಿ ಅವರಿಗೂ ಟ್ರೈ ಮಾಡಲು ಹೇಳಿ.
ಸಂಜೆ ಹೊತ್ತು ಅದರಲ್ಲೂ ಈಗಿನ ಚಳಿಗಾಲದಲ್ಲಿ ಮನೆ ಮಂದಿಯೆಲ್ಲ ಇಷ್ಟಪಡುವಂತಹ ಸುಲಭವಾಗಿ ಮಾಡಬಹುದಾದ ಸಂಜೆಯ ತಿಂಡಿ ಆಲೂಗಡ್ಡೆ ಬಜ್ಜಿ. ಆಲೂಗಡ್ಡೆ ಬಜ್ಜಿ ಮಾಡಲು ದೊಡ್ಡ ಗಾತ್ರದ ಆಲೂಗಡ್ಡೆಯನ್ನು ಆಯ್ಕೆ ಮಾಡಿಕೊಳ್ಳಿ. ಚಿಕ್ಕ ಚಿಕ್ಕ ಆಲೂಗಡ್ಡೆಗಳು ಸಾಂಬಾರ್ ಮಾಡಲು ಆದೀತು.

ಬಿಸಿ ಬಿಸಿ ಬಜ್ಜಿ ಮಾಡುವುದು ಹೇಗೆ?; ಆಲೂಗಡ್ಡೆ ಬಜ್ಜಿ ಮಾಡಲು ಮೊದಲ ತಯಾರಿ ಆಲೂಗಡ್ಡೆಯನ್ನು ಸಣ್ಣಗೆ ಸ್ಲೈಸ್‌ಗಳನ್ನಾಗಿ ಮಾಡಿಕೊಳ್ಳುವುದು. ಈ ಸ್ಲೈಸ್ಅನ್ನು ತಣ್ಣೀರಿಗೆ ಹಾಕಿ ತೆಗೆಯಿರಿ. ಆಗ ಆಲೂ ಹೆಚ್ಚಿ ಇಟ್ಟ ಬಳಿಕ ಕಪ್ಪಾಗುವುದಿಲ್ಲ. ಅಲ್ಲದೇ ಬಜ್ಜಿಯೂ ಗರಿಗರಿಯಾಗಿ ಬರುತ್ತದೆ. ಬೇಕಾದರೆ ಹೆಚ್ಚಿ ನೀರಿಗೆ ಹಾಕಿದ ಮೇಲೆ ಸ್ಲೈಸ್ ಮೇಲೆ ಚಿಟಿಕೆ ಉಪ್ಪನ್ನು ಸಹ ಉದುರಿಸಿಕೊಳ್ಳಿ.
ಈಗ ಬಜ್ಜಿಗೆ ಬೇಕಾದ ಪೇಸ್ಟ್ ಮಾಡಿಕೊಳ್ಳೋಣ. ಆಲೂಗಡ್ಡೆ ಬಜ್ಜಿಗೆ ಖಾರ ಜಾಸ್ತಿ ಇದ್ದರೆ ಸಂಜೆಯ ಚಳಿಗೆ ಇನ್ನೂ ಸಹ ಹೊಂದಿಕೆಯಾಗುತ್ತದೆ. ಪೇಸ್ಟ್ ಇಲ್ಲದೇ ನೇರವಾಗಿಯೂ ಖಾರದ ಪುಡಿ ಹಾಕಿಕೊಂಡು ಬಜ್ಜಿಯನ್ನು ಮಾಡಬಹುದು. ಪೇಸ್ಟ್ ಮಾಡಿಕೊಳ್ಳಲು ಮಿಕ್ಸಿಗೆ ಹಸಿಮೆಣಸಿನಕಾಯಿ, ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣೆಗೆ ರುಬ್ಬಿಟ್ಟುಕೊಳ್ಳಿ.
ಈಗ ಹಿಟ್ಟು ಕಲಸೋಣ. ಎಷ್ಟು ಬಜ್ಜಿ ಬೇಕು ಎಂಬ ಆಧಾರದ ಮೇಲೆ ಕಡಲೆ ಹಿಟ್ಟು, ಅರ್ಧ ಚಮಚ ಕಾಳು ಮೆಣಸಿನ ಪುಡಿ, ಸ್ವಲ್ಪ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಹೋಳಿನ ನಿಂಬೆಹಣ್ಣಿನ ರಸ, ಸ್ವಲ್ಪ ಬಿಸಿ ಎಣ್ಣೆ ಸೇರಿಸಿಕೊಳ್ಳಿ. ಮಿಕ್ಸಿ ಮಾಡಿಕೊಂಡಿರುವ ಪೇಸ್ಟ್ ಹಾಕಿಕೊಂಡು ಹಿಟ್ಟು ಕಲಸಿ, ಸ್ವಲ್ಪ ನೀರಾಗಿರುವಂತೆಯೇ ಹಿಟ್ಟು ಇರಲಿ.
ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ ಎಣ್ಣೆ ಪೂರ್ಣ ಕಾಯುವ ತನಕ ಬಿಡಿ. ಎಣ್ಣೆ ಕಾಯುವಾಗ ಸ್ಲೈಸ್ ಮಾಡಿಕೊಂಡ ಆಲೂಗಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿಕೊಳ್ಳಿ. ಎಣ್ಣೆ ಕಾದಿದೆ ಎಂದು ಖಚಿತ ಮಾಡಿಕೊಂಡು ಹಿಟ್ಟಿನಲ್ಲಿ ಅದ್ದಿ ಆಲೂ ಸ್ಲೈಸ್‌ಅನ್ನು ಬಿಡಿ. ಗೋಲ್ಡನ್ ಬ್ರೌನ್ ಬರುವ ತನಕ ಕರಿಯಿರಿ. ಒಲೆಯ ಬೆಂಕಿಯೂ ಒಂದೇ ಹದದಲ್ಲಿ ಇರಲಿ, ಹೆಚ್ಚು ಉರಿ ಇಟ್ಟರೆ ಬಜ್ಜಿಗೆ ಕಾವು ಜಾಸ್ತಿಯಾಗಿ ಕಪ್ಪಾಗುತ್ತದೆ.
ಬಾಣಲೆಯಿಂದ ತೆಗೆದ ಕರಿದ ಬಜ್ಜಿಯನ್ನು ಪೇಪರ್ ಮೇಲೆ ಹಾಕಿ. ಪ್ಲೇಟ್‌ಗೆ ಹಾಕಿಕೊಂಡು ಕಾಫಿ, ಟೀ ಜೊತೆ ಸವಿಯಿರಿ. ಸಂಜೆ ದಿಢೀರ್ ಆಗಿ ಮನೆಗೆ ಅತಿಥಿಗಳು ಬಂದರೂ ಸಹ ಈ ಮಾದರಿ ಬಜ್ಜಿ ಮಾಡಿ ಅವರಿಗೆ ಕೊಡಿ, ಕಾಫಿ ಜೊತೆ ಎರಡು ಬಜ್ಜಿ ಹೆಚ್ಚಾಗಿಯೇ ತಿನ್ನುತ್ತಾರೆ.












Click it and Unblock the Notifications