ಥರಗುಟ್ಟುತ್ತಿದೆ ಯೂರೋಪ್; ರಾತ್ರಿ ಲೈಟ್ ಆಫ್, ಕೊರೆವ ಚಳಿಯಲ್ಲೂ ತಣ್ಣೀರು- ಏನಿಂಥ ಸ್ಥಿತಿ?
ಯೂರೋಪ್ ಎಂದರೆ ನಮ್ಮ ಕಣ್ಮುಂದೆ ಬರುವುದು ಶ್ರೀಮಂತ ದೇಶಗಳೇ. ಯಾವುದಕ್ಕೂ ಲೋಪ ಇಲ್ಲದ, ಕೊರತೆ ಇಲ್ಲದ ವ್ಯವಸ್ಥೆ. ಇಂಥ ಐರೋಪ್ಯ ದೇಶಗಳು ಈಗ ನಡುಗುತ್ತಿರುವ ಪರಿಸ್ಥಿತಿ ಉದ್ಭವಿಸಿದೆ.
ರಷ್ಯಾದ ಅನಿಲ ಮತ್ತು ವಿದ್ಯುತ್ ಮೇಲೆ ಅವಲಂಬಿತವಾಗಿರುವ ಯೂರೋಪ್ ಈಗ ವಿಲವಿಲ ಒದ್ದಾಡುವಂತಾಗಿದೆ. ರಷ್ಯಾದಿಂದ ಗ್ಯಾಸ್ ಸರಬರಾಜು ಬಹುತೇಕ ನಿಂತು ಹೋಗಿದೆ. ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಇಂಥದ್ದೊಂದು ಸ್ಥಿತಿಯನ್ನು ಯೂರೋಪ್ ಈ ಹಿಂದೆ ಅಂದಾಜು ಮಾಡಿರಲಿಲ್ಲ.
ಈಗ ನೀವು ಫ್ರಾನ್ಸ್, ಇಟಲಿ, ಜರ್ಮನಿಯಂಥ ಶ್ರೀಮಂತ ದೇಶಗಳಿಗೆ ಹೋಗಿ ನೋಡಿದರೆ ಅಲ್ಲಿ ನಗರಗಳು ಕತ್ತಲಲ್ಲಿ ಕಾಣೆಯಾದಂತೆ ತೋರುತ್ತವೆ. ಕೊರೆವ ಚಳಿಯಲ್ಲೂ ಜನರು ತಣ್ಣೀರು ಸ್ನಾನ ಮಾಡುತ್ತಿದ್ದಾರೆ ಎಂದರೆ ನಂಬುವುದು ಕಷ್ಟ.
ವಿದ್ಯುತ್ ಮತ್ತು ಗ್ಯಾಸ್ ಸಂಗ್ರಹ ಉಳಿಸಲು ಐರೋಪ್ಯ ದೇಶಗಳು ಹರಸಾಹಸ ಮಾಡುತ್ತಿವೆ. ಜನಪ್ರತಿನಿದಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ಇಂಧನ ಉಳಿತಾಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ರಷ್ಯಾದಿಂದ ತೈಲ ಮತ್ತು ಅನಿಲದ ಸರಬರಾಜು ಸಂಪೂರ್ಣವಾಗಿ ನಿಂತು ಹೋಗುವ ಸಾಧ್ಯತೆ ಇರುವುದರಿಂದ ಆ ಪರಿಸ್ಥಿತಿಯನ್ನು ಎದುರಿಸಲು ಯೂರೋಪ್ ಸಜ್ಜಾಗುತ್ತಿದೆ. ಬೇರೆ ಕಡೆಯಿಂದ ಅನಿಲ ಇತ್ಯಾದಿಯನ್ನು ಪಡೆಯಲು ಪ್ರಯತ್ನ ಮಾಡುತ್ತಿದೆ.

ಬೀದಿ ದೀಪ ಬಂದ್
ಬೆಂಗಳೂರಿನಲ್ಲಿ ಈ ಹಿಂದೆ ಬೀದಿ ದೀಪಗಳು ಹಗಲಲ್ಲೂ ಉರಿಯುತ್ತಿದ್ದವು. ಅವುಗಳ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ನಂತರ ಅ ಸಮಸ್ಯೆಗೆ ಇತಿಶ್ರೀ ಹಾಡಲಾಯಿತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಕೆಲವಾರು ವರ್ಷಗಳಿಂದಲೂ ಇಂಥದ್ದೇ ರೀತಿಯಲ್ಲಿ ಅಭಿಯಾನ ನಡೆದಿದೆ. ಅದಕ್ಕಾಗಿ ಸ್ವಯಂಸೇವಕರ ದೊಡ್ಡ ಪಡೆಯೇ ಹುಟ್ಟಿಕೊಂಡಿದೆ. ಅವರು ಬೀದಿ ಬೀದಿಗೂ ತೆರಳಿ ಅನಗತ್ಯವಾಗಿ ಉರಿಯುವ ದೀಪಗಳನ್ನು ಆರಿಸುವ ಕೆಲಸ ಮಾಡುತ್ತಾರೆ. ಉದಾಹರಣೆಗೆ, ಅಂಗಡಿ ಬಂದ್ ಮಾಡಿದ ಬಳಿಕವೂ ಹೊರಗೆ ದೀಪ ಉರಿಯುತ್ತಿದ್ದರೆ ಅದನ್ನು ಸ್ವಯಂಸೇವಕರು ಆಫ್ ಮಾಡುತ್ತಾರೆ.
ಈಗ ರಷ್ಯಾ ಉಕ್ರೇನ್ ಯುದ್ದ ಪರಿಣಾಮವಾಗಿ ದೇಶದಲ್ಲಿ ವಿದ್ಯುತ್ ಬಿಕ್ಕಟ್ಟು ಶುರವಾದ ಬಳಿಕ ಈ ಸ್ವಯಂಸೇವಕರು ಇನ್ನಷ್ಟು ಚುರುಕುಗೊಂಡಿದ್ದಾರೆ. ಜನರೂ ಕೂಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅನಗತ್ಯವಾಗಿ ವಿದ್ಯುತ್ ಬಳಕೆಯನ್ನು ನಿಲ್ಲಿಸುತ್ತಿದ್ದಾರೆ.
ಇದು ಫ್ರಾನ್ಸ್ ಮಾತ್ರವಲ್ಲ, ಜರ್ಮನಿ, ಇಟಲಿ ಇತ್ಯಾದಿ ಹಲವು ದೇಶಗಳಲ್ಲಿ ನಡೆಯುತ್ತಿರುವ ಜನ ಜಾಗೃತಿ ಅಭಿಯಾನ.

ಆರ್ಥಿಕತೆಯೇ ಬಂದ್ ಆಗುವ ಭೀತಿ
ಬಹುತೇಕ ಯೂರೋಪ್ ರಷ್ಯಾದ ತೈಲ ಮತ್ತು ವಿದ್ಯುತ್ ಪೂರೈಕೆ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಈಗಾಗಲೇ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ. ಹಾಗೊಂದು ವೇಳೆ ಆದಲ್ಲಿ ಯೂರೋಪ್ ದೇಶಗಳ ಕಾರ್ಖಾನೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬರಬಹುದು.

ಎಸಿ ಬಂದ್, ತಣ್ಣೀರು ಸ್ವಾನ
ಕಾರ್ಖಾನೆ ಇತ್ಯಾದಿ ಅಗತ್ಯ ಚಟುವಟಿಕೆಗಳು ಮುಚ್ಚುವುದರಿಂದ ಸ್ವಲ್ಪವಾದರೂ ತಪ್ಪಿಸಲು ಮನೆಮನೆಯಿಂದಲೂ ವಿದ್ಯುತ್ ಉಳಿಸುವುದು ಅನಿವಾರ್ಯ. ಯೂರೋಪ್‌ನ ಕೊರೆವ ಚಳಿಯಲ್ಲಿ ಜನರಿಗೆ ಎಸಿ ಅಗತ್ಯ. ಈಗ ಎಸಿಯನ್ನೂ ಬಂದ್ ಮಾಡಲಾಗುತ್ತಿದೆ. ಹೀಟರ್ ಬಳಕೆ ನಿಲ್ಲಿಸಲಾಗುತ್ತಿದೆ. ಚಳಿಯಲ್ಲೂ ಜನರು ತಣ್ಣೀರು ಸ್ನಾನ ಮಾಡಲು ಮುಂದಾಗುತ್ತಿದ್ದಾರೆ ಎಂದರೆ ಯೂರೋಪ್‌ನ ಎನರ್ಜಿ ಕ್ರೈಸಿಸ್ ಎಷ್ಟಿರಬಹುದು ಎಂದು ಅಂದಾಜಿಸಬಹುದು.
ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ನೀರು ಬಿಸಿ ಮಾಡುವ ಕೆಲಸಕ್ಕೂ ಬ್ರೇಕ್ ಕೊಡಲಾಗಿದೆ. ಅಲ್ಲಿ ಈಜುವವರು ಥರಗುಟ್ಟಿಸುವ ತಣ್ಣೀರಿನಲ್ಲೇ ಬಿದ್ದು ಈಜಿ ಜೈಸಬೇಕು ಎಂಬಂತಾಗಿದೆ.

ಸಂಸತ್ ಭವನವೂ ಕತ್ತಲಲ್ಲಿ
ಜರ್ಮನಿ ರಾಜಧಾನಿ ಬರ್ಲಿನ್‌ನಲ್ಲಿರುವ ಸಂಸತ್ ಭವನ ಕತ್ತಲಲ್ಲಿದ್ದಂತೆ ಕಾಣುತ್ತದೆ. ಭವನದ ಗಾಜಿನ ಗೋಪುರಕ್ಕೆ ಹಾಕಲಾಗಿರುವ ಲೈಟಿಂಗ್ ಅನ್ನು ಬಂದ್ ಮಾಡಲಾಗುತ್ತಿದೆ. ಶಾಸಕರು, ಸಂಸದರ ಕಚೇರಿಗಳಲ್ಲಿ ಎಸಿ ಬಂದ್ ಮಾಡಲಾಗುತ್ತಿದೆ. ಬರ್ಲಿನ್ ನಗರದಲ್ಲಿ ತಮ್ಮ ಲೈಟಿಂಗ್‌ಗಳಿಂದಲೇ ಪ್ರಮುಖ ಆಕರ್ಷಣೆಯಾಗಿದ್ದ ಸಿಟಿ ಹಾಲ್, ಜಿವಿಶ್ ಮ್ಯೂಸಿಯಂ ಇತ್ಯಾದಿ 200 ಸ್ಥಳಗಳು ಈಗ ವಿದ್ಯುತ್ ದೀಪ ಇಲ್ಲದೇ ಕಾರ್ಮೋಡ ಕವಿದಂತೆ ಉಳಿದಿವೆ.
ನೆದರ್‌ಲೆಂಡ್ಸ್ ಸರಕಾರ ತನ್ನ ನಾಗರಿಕರಿಗೆ ಐದು ನಿಮಿಷಕ್ಕಿಂತ ಹೆಚ್ಚು ಕಾಲ ಶವರ್ ಬಳಸದಂತೆ ಸೂಚಿಸಿದೆ. ಏರ್ ಡ್ರೈಯಿಂಗ್ ಬದಲು ಫ್ಯಾನ್ ಬಳಸುವಂತೆ ಮನವಿ ಮಾಡಿದೆ.
ಸ್ಪೇನ್ ದೇಶವಂತೂ ವಿವಿಧ ಕಚೇರಿಗಳಲ್ಲಿ ಎಸಿ ಮೇಲೆ ನಿರ್ಬಂಧ ವಿಧಿಸುವ ಕಾನೂನನ್ನೇ ರೂಪಿಸಲಾಗಿದೆ. ಸೋಮವಾರ ಈ ಕಾನೂನು ಜಾರಿಗೆ ಬಂದಿದೆ.
ಫ್ರಾನ್ಸ್ ದೇಶದ ಔರೇಲ್ಹಾನ್ ಎಂಬ ಪುಟ್ಟ ಪಟ್ಟಣದಲ್ಲಿರುವ ಎಲ್ಲಾ 1700 ಬೀದಿ ದೀಪಗಳನ್ನು ಬಂದ್ ಮಾಡಲಾಗಿದೆ. ಇಡೀ ಪಟ್ಟಣ ಅಕ್ಷರಶಃ ಕತ್ತಲಲ್ಲಿ ಮುಳುಗಿದಂತೆ ಕಾಣುತ್ತದೆ.
ಶಾಲೆಗಲ್ಲೂ ಬಿಸಿಗೆ ಹೀಟರ್ ಹೆಚ್ಚು ಬಳಸಂತೆ ಸರಕಾರಗಳು ಮನವಿ ಮಾಡುತ್ತಿವೆ. ಮಕ್ಕಳಿಗೆ ಬೆಚ್ಚಗಿಡುವ ಸ್ವೆಟರ್ ಇತ್ಯಾದಿ ಉಡುಗೆಗಳನ್ನು ಹಾಕಿ ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಗುತ್ತಿದೆ. ಇವೆಲ್ಲವನ್ನೂ ನೋಡುತ್ತಿದ್ದರೆ ಯೂರೋಪ್‌ಗೆ ಇದೆಂಥ ಸ್ಥಿತಿ ಬಂತು ಎಂದು ಅಚ್ಚರಿಯಿಂದ ಉದ್ಗರಿಸಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications