Mahakumbh 2025: ಮಹಾಕುಂಭ ಮೇಳದಲ್ಲಿ ಹಿಂದೂಯೇತರರ ಮಳಿಗೆಗಳ ನಿರ್ಬಂಧಕ್ಕೆ ಕೂಗು
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ ನಡೆಯಲಿದೆ. ಕೋಟ್ಯಂತರ ಜನ ಸೇರುವ ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದೆಡೆ ಈ ಮಹಾಕುಂಭ ಮೇಳದಲ್ಲಿ ಇದೀಗ ಹಿಂದೂಯೇತರರಿಗೆ ನಿರ್ಬಂಧ ಹೇರಲು ಒತ್ತಾಯ ಕೇಳಿಬಂದಿದೆ.
ಅಖಿಲ ಭಾರತೀಯ ಅಖಾಡ ಪರಿಷತ್ ಮುಖ್ಯಸ್ಥ ಮಹಂತ್ ರವೀಂದ್ರ ಪುರಿ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭ-2025ರಲ್ಲಿ ಹಿಂದೂಯೇತರರು ಅಂಗಡಿಗಳನ್ನು ಹಾಕುವುದನ್ನು ನಿರ್ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

ಮಹಾಕುಂಭ ಮೇಳದಲ್ಲಿ ನೈರ್ಮಲ್ಯ ಹಾಗೂ ಸುರಕ್ಷತೆಯ ಉದ್ದೇಶದಿಂದ ಹಿಂದೂಯೇತರರು ಚಹಾ, ಜ್ಯೂಸ್ ಅಥವಾ ಹೂವಿನ ಅಂಗಡಿಗಳನ್ನು ತೆರೆಯಲು ಅನುಮತಿಸಬಾರದು. ಏಕೆಂದರೆ ಅವರು ಉಗುಳುವುದು ಅಥವಾ ಮೂತ್ರ ವಿಸರ್ಜನೆಯಂತಹ ಅನೈರ್ಮಲ್ಯ ಅಭ್ಯಾಸಗಳಲ್ಲಿ ತೊಡಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಇದಕ್ಕೆ ಅನುಮತಿಸಿದರೆ, ಅಂತಹ ಯಾವುದೇ ಕ್ರಮಗಳು ನಡೆದರೆ ಮಹಾಕುಂಭಕ್ಕೆ ಬರುವ ನಾಗಾ ಸಂತರೊಂದಿಗೆ ಸಂಘರ್ಷಕ್ಕೆ ಕಾರಣವಾಗಬಹುದು. ಜೊತೆಗೆ ಕಾರ್ಯಕ್ರಮದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ತರಬಹುದು ಎಂದು ರವೀಂದ್ರ ಪುರಿ ಅವರು ಎಚ್ಚರಿಸಿದ್ದಾರೆ.
ಮಹಾಕುಂಭವು ಒಂದು ಪ್ರಮುಖ ಧಾರ್ಮಿಕ ಸಭೆಯಾಗಿದ್ದು, ಲಕ್ಷಾಂತರ ಯಾತ್ರಾರ್ಥಿಗಳಿಗೆ ಭವ್ಯವಾದ ಮತ್ತು ಪವಿತ್ರ ವಾತಾವರಣವನ್ನು ಕಲ್ಪಿಸಲು ಈಗಾಗಲೇ ಅಲ್ಲಿ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಹಾಗಾಗಿ ಮಳಿಗೆಗಳಲ್ಲಿ ಹಿಂದೂಯೇತರ ಭಾಗವಹಿಸುವಿಕೆಯನ್ನು ನಿರ್ಬಂಧಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

ರವೀಂದ್ರ ಪುರಿ ಅವರ ಒತ್ತಾಯಕ್ಕೆ ಅಖಿಲ ಭಾರತ ಮುಸ್ಲಿಂ ಜಮಾತ್ ವಿರೋಧ ವ್ಯಕ್ತಪಡಿಸಿದೆ. ಮಹಾಕುಂಭದಿಂದ ಹಿಂದೂಯೇತರರನ್ನು ಹೊರಗಿಡುವ ಪ್ರಸ್ತಾಪವು ಸಮಾಜದೊಳಗೆ ವಿಭಜನೆಯನ್ನು ಉಂಟುಮಾಡುತ್ತದೆ. ಕುಂಭಮೇಳದ ಒಳಗೊಳ್ಳುವ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಕಾರಣ ನೀಡಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ 2025ಕ್ಕೆ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬರೋಬ್ಬರಿ 5,500 ಕೋಟಿ ರೂಪಾಯಿಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ಮತ್ತು ಹರಿದ್ವಾರದಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ ನಡೆಯುತ್ತದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳವೆಂದು ಕರೆಯಲಾಗುತ್ತದೆ. ಸದ್ಯ ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವುದು ಮಹಾಕುಂಭ ಮೇಳ ಆಗಿರುವುದರಿಂದ ಭಾರತದ ಮೂಲೆಮೂಲೆಯಿಂದ ಮಾತ್ರವಲ್ಲದೆ, ಜಗತ್ತಿನ ವಿವಿಧೆಡೆಯಿಂದಲೂ ಹೆಚ್ಚಿನ ಜನ ಭಾಗಿಯಾಗುತ್ತಾರೆ.
ದೇವತೆಗಳು ಮತ್ತು ರಾಕ್ಷಸರು ಅಮರರಾಗಲು ಅಮೃತವನ್ನು ಪಡೆಯಲು ಇಬ್ಬರ ನಡುವೆ ನಡೆದ ಯುದ್ಧದಲ್ಲಿ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯ ನದಿಗಳ ಮೇಲೆ ಅಮೃತವು ಬಿತ್ತು ಎಂದು ನಂಬಲಾಗಿದೆ. ಇದನ್ನು ದೇವತೆಗಳ ಸ್ಥಳ ಎಂದೇ ನಂಬಲಾಗಿದೆ. ಪ್ರಯಾಗ್‌ರಾಜ್ ಕುಂಭಮೇಳವು ಜಗತ್ತಿನಲ್ಲೇ ಅತಿ ಹೆಚ್ಚು ಜನ ಸೇರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದು ಎನ್ನಲಾಗಿದೆ. ಕುಂಭಮೇಳದ ಸಮಯದಲ್ಲಿ ಅಲ್ಲಿನ ಪವಿತ್ರ ನದಿಗಳ ನೀರು ಅಮೃತವಾಗಿ ಬದಲಾಗುತ್ತದೆ ಎನ್ನುವ ನಂಬಿಕೆಯೂ ಇದೆ.












Click it and Unblock the Notifications