Christmas 2023: ಇದು ಪ್ರಕೃತಿಯೇ ಸೃಷ್ಟಿ ಮಾಡಿದ ‘ಕ್ರಿಸ್ ಮಸ್’ ಸ್ಟಾರ್!
ಕ್ರಿಸ್ ಮಸ್ ಹಬ್ಬ ಬರುತ್ತಿದ್ದು ಹಬ್ಬ ಆಚರಿಸುವ ಮನೆಗಳಲ್ಲಿ ಕ್ರಿಸ್ ಮಸ್ ಹೂಗಳ ಅಲಂಕಾರ ಎಲ್ಲರನ್ನು ಆಕರ್ಷಿಸುತ್ತದೆ. ಹೀಗೆ ಆಕರ್ಷಣೀಯವಾಗಿಸುವ ಹೂವಿನ ಬಗ್ಗೆ ಹೇಳಲೆ ಬೇಕಾಗುತ್ತದೆ. ಇದನ್ನು ಹೆಚ್ಚಿನವರು ಕ್ರಿಸ್ ಮಸ್ ಹೂ ಎಂದೇ ಕರೆಯುತ್ತಾರೆ. ಅಷ್ಟೇ ಅಲ್ಲದೆ ಇದು ಕ್ರಿಸ್ ಮಸ್ ಹಬ್ಬದ ಸಮಯದಲ್ಲಿಯೇ ಅರಳವುದು ವಿಶೇಷವಾಗಿದೆ.
ಕ್ರಿಸ್ ಮಸ್ ಹೂವಿನ ಗಿಡ ಹಿಂದೆ ಎಲ್ಲೆಂದರಲ್ಲಿ ಬೆಳೆಯುತ್ತಿತ್ತು. ಕೆಲವರು ತಮ್ಮ ಮನೆಯ ಬೇಲಿಗಳಿಗೆ ತಂದು ನೆಡುತ್ತಿದ್ದರು. ಆದರೆ ಈಗ ಇದರ ತಳಿಗಳನ್ನು ಅಭಿವೃದ್ಧಿ ಮಾಡಲಾಗಿದ್ದು ಕುಂಡದಲ್ಲಿ ಬೆಳೆಯುವ ಮೂಲಕ ತಮ್ಮ ಮನೆಯಂಗಳದಲ್ಲಿ ಜಾಗ ನೀಡಿದ್ದಾರೆ. ಇದರಿಂದ ಈ ಹೂ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮೊದಲೆಲ್ಲ ಇದನ್ನು ತಮ್ಮ ಹೂ ತೋಟದಲ್ಲಿ ಬೆಳೆಯದೆ ತೋಟದ ಬೇಲಿಗಳಿಗೆ ಆಧಾರವಾಗಿ ನೆಡುತ್ತಿದ್ದರು. ಅದು ಬೇಲಿಯ ಅಂಚಿನಲ್ಲಿಯೇ ಬೆಳೆದು ಹೂ ಬಿಟ್ಟು ಕಂಗೊಳಿಸುತ್ತಿತ್ತು.

ಇದರ ಹೆಸರು ಗೊತ್ತಿಲ್ಲದವರು ತಮಗೆ ತೋಚಿದ ಹೆಸರನ್ನಿಟ್ಟು ಕರೆಯುತ್ತಿದ್ದರು. ಕೆಲವರು ಕೆಂಪು ಹೂ ಎಂದು ಕರೆದರೆ, ಮತ್ತೆ ಕೆಲವರು ಕ್ರಿಸ್‌ಮಸ್ ಸ್ಟಾರ್ ಎನ್ನುತ್ತಿದ್ದರು. ಅದು ನಾಲ್ಕೈದು ಮೀಟರ್ ಎತ್ತರಕ್ಕೆ ಬೆಳೆದು ಹೂ ಬಿಡುತ್ತಿತ್ತು. ಆದರೆ ಈಗ ಹಾಗಿಲ್ಲ. ಪುಟ್ಟಗಿಡಗಳಾಗಿ ಕುಂಡದಲ್ಲಿ ನೆಟ್ಟು ಬೆಳೆಸುವಷ್ಟರ ಮಟ್ಟಿಗೆ ಬಂದು ನಿಂತಿದೆ. ಜತೆಗೆ ಕೆಂಪು ಹೂ ಮಾತ್ರವಲ್ಲದೆ, ಬಗೆ ಬಗೆಯ ಬಣ್ಣದ ಹೂ ಬಿಟ್ಟು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಮೂಲತಃ ಮಧ್ಯ ಅಮೇರಿಕಾದ ಸಸ್ಯ
ಕ್ರಿಸ್ ಮಸ್ ಸ್ಟಾರ್ ಹೂ ಪಾಯಿನ್ಸೆಟಿಯ ಪಲ್ಚರಿಮ ಯಫೋರ್ಬಿಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಇದನ್ನು ಕ್ರಿಸ್‌ಮಸ್ ಫ್ಲವರ್ ಪೇಯಿಂಟೆಡ್ ಲೀಫ್, ಲಾಬ್ ಸ್ಟರ್ ಪ್ಲಾಂಟ್, ಮೆಕ್ಸಿಕಿನ್ ಫ್ಲೇಮ್ ಲೀಫ್ ಎಂಬ ಹೆಸರುಗಳಿಂದ ಕರೆಯಲಾಗುತ್ತಿದ್ದು, ಮೂಲತಃ ಮಧ್ಯ ಅಮೆರಿಕದ್ದು ಎಂದು ಹೇಳಲಾಗಿದೆ. ತನ್ನ ವಿಶಿಷ್ಟ ಸೌಂದರ್ಯದಿಂದಾಗಿ ಇತರ ಕಡೆಗಳಿಗೆ ಅಲ್ಲಿಂದ ವರ್ಗಾಯಿಸಲ್ಪಟ್ಟು ಈಗ ಪ್ರಪಂಚದಾದ್ಯಂತ ಬೆಳೆಯುತ್ತಿರುವುದಷ್ಟೆ ಅಲ್ಲದೆ ವಿವಿಧ ತಳಿಗಳಾಗಿ ಅಭಿವೃದ್ಧಿ ಹೊಂದಿರುವುದನ್ನು ಕೂಡ ಕಾಣ ಬಹುದಾಗಿದೆ.
ಗಿಡದ ಎಲೆಗಳು ಕಡು ಹಸಿರು ಬಣ್ಣವನ್ನು ಹೊಂದಿದ್ದು, ಮೇಲ್ನೋಟಕ್ಕೆ ಅಂಡಾಕಾರವಾಗಿರುತ್ತದೆ. ಗಿಡದಲ್ಲಿ ಬಿಳಿ ಬಣ್ಣದಿಂದ ಕೂಡಿದ ರಾಸಾಯನಿಕ ದ್ರವವಿದ್ದು, ಇದು ವಿಷಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯವು ಅಕ್ಟೋಬರ್ ಅಥವಾ ನವೆಂಬರ್‌ನಿಂದ ಹೂ ಬಿಡಲು ಪ್ರಾರಂಭಿಸಿ ಫೆಬ್ರವರಿ ತನಕವೂ ಹೂ ಬಿಡುತ್ತಿರುತ್ತದೆ. ಹೂ ಬಿಡುವಿಕೆಯಲ್ಲಿ ಇದು ಇತರೆ ಸಸ್ಯಗಳಿಕ್ಕಿಂತ ಭಿನ್ನವಾಗಿದ್ದು, ಹೂಗಳು ಸಹ ವಿಶೇಷತೆಯಿಂದ ಕೂಡಿರುತ್ತದೆ.

ಹಲವು ರೀತಿಯ ತಳಿಗಳ ತಯಾರು
ಗಿಡದ ಕೊಂಬೆಗಳ ತುದಿಯಲ್ಲಿ ಕೆಂಪು ಬಣ್ಣದ ಎಲೆಗಳನ್ನೊಳಗೊಂಡ ಪುಷ್ಪಗುಚ್ಛಗಳು ಸೃಷ್ಟಿಯಾಗಿ ಗಿಡ ಪೂರ್ತಿ ಕೆಂಪಾಗಿ ಕಂಗೊಳಿಸುತ್ತವೆ. ಪುಷ್ಪಗಳು (ಹೂ) ಚಿಕ್ಕದಾಗಿದ್ದು, ಹೆಣ್ಣು ಹಾಗೂ ಗಂಡು ಹೂವುಗಳು ಜೊತೆಯಾಗಿ ಸಯಾಥಿಯಮ್ ಎನ್ನುವಂತಹ ವಿಶಿಷ್ಟ ಪುಷ್ಪಗುಚ್ಛ ಉಂಟಾಗಿರುತ್ತದೆ. ನೋಡಲು ಬಟ್ಟಲಿನಾಕಾರದಲ್ಲಿರುವ ಸಯಾಥಿಯಮ್‌ನ ಮೇಲೆ ಹಳದಿ ಬಣ್ಣದ ಮಕರಂಧದ ತಟ್ಟೆಗಳು ಇರುತ್ತವೆ. ಈ ರೀತಿಯ ಹಲವಾರು ಸಯಾಥಿಯಮ್ ಗಳ ಸುತ್ತ ಕೃತಕವಾಗಿ ತಯಾರು ಮಾಡಿದ ಹೂಗುಚ್ಛವಿದ್ದು, ಇದರ ಅಡಿಯಲ್ಲಿ ಕೆಂಪು ಬಣ್ಣದ ಎಲೆಗಳು ಸೇರಿಕೊಂಡಿದ್ದು, ಈ ಎಲೆಗಳು ಸಸ್ಯ ಮತ್ತು ಹೂಗಳಿಗೂ ಮೆರಗು ನೀಡಿದೆ.
ಕೆಂಪು ಎಲೆಗಳ ಆಕರ್ಷಣೆಗೆ ಒಳಗಾದ ಕೀಟಗಳು ಹೂವಿನೆಡೆಗೆ ಬಂದು ಅದರಲ್ಲಿ ಸಿಲುಕಿಕೊಳ್ಳುತ್ತದೆ. ಕೆಂಪು ಎಲೆಗಳ ಮಾರ್ಪಾಟು ಕೀಟಾಕರ್ಷಣೆಗಾಗಿ ಸಸ್ಯವೇ ಮಾಡಿಕೊಂಡಿದ್ದಾಗಿದೆ. ಈ ಹೂವಿನ ಸೌಂದರ್ಯಕ್ಕೆ ಮಾರು ಹೋದ ವಿಜ್ಞಾನಿಗಳು ಈ ಸಸ್ಯದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಬೇರೆ ಬೇರೆ ರೀತಿಯ ತಳಿಗಳನ್ನು ತಯಾರು ಮಾಡಿದ್ದಾರೆ. ಇವುಗಳಲ್ಲಿ ಹೂವಿನ ಸುತ್ತಲೂ ಕೆಂಪು ಎಲೆಯ ಬದಲಾಗಿ ಬಿಳಿಯ ಎಲೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಬಿಳಿ ಪಲ್ಚರಿಮ ಎಂದು ಹೆಸರಿಡಲಾಗಿದೆ. ಜತೆಗೆ ಗುಲಾಬಿ ಬಣ್ಣವನ್ನೂ ಸೃಷ್ಟಿಸಿದ್ದಾರೆ.
ಇದು ಭೂಮಿಯಲ್ಲಿ ಸೃಷ್ಟಿಯಾದ ನಕ್ಷತ್ರ
1972ರಲ್ಲಿ ಹಾಲಿವುಡ್‌ನಲ್ಲಿ ಪಾಯಿನ್ಸೆಟಿಯ ಪಲ್ಚರಿಮ ಹೆನ್ರಿಯಟಕ್ ಡಬಲ್ ಪಾಯಿನ್‌ಸೆಟ್ಯ ಎನ್ನುವಂತಹ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ಗಿಡದ ತುದಿಯಲ್ಲಿ ಬಿಡುವ ಹೂವಿನ ಸುತ್ತಲೂ ಎರಡು ರೀತಿಯ ಎಲೆಗಳು ಇರುತ್ತವೆ. ಹೊರಭಾಗದಲ್ಲಿ ಅಗಲವಾಗಿ ಮಿರುಗುವ ಕುಂಕುಮ ಬಣ್ಣದ ಎಲೆಗಳಿದ್ದರೆ, ಒಳಭಾಗದಲ್ಲಿ ಸಣ್ಣ ಸಣ್ಣ ಬಣ್ಣದ ಎಲೆಗಳು ಇವೆ. ಈ ಜಾತಿಯ ಹೂಗಳು ಗಾತ್ರದಲ್ಲಿ ಹಿರಿದಾಗಿಯೂ ದಪ್ಪವಾಗಿಯೂ ಇರುತ್ತದೆ. ಸಾಕಷ್ಟು ಬಿಸಿಲು ಬೀಳುವ ಸ್ಥಳದಲ್ಲಿ ಯಥೇಚ್ಛವಾಗಿ ಈ ಸಸ್ಯಗಳು ಬೆಳೆಯುತ್ತವೆ ಅಲ್ಲದೆ, ಉತ್ತಮವಾದ ಹೂಗಳನ್ನು ಸಹ ಬಿಡುತ್ತವೆ. ಸಸ್ಯಾಭಿವೃದ್ಧಿಯನ್ನು ಕಾಂಡದ ತುಂಡುಗಳನ್ನು ನೆಡುವ ಮೂಲಕ ಮಾಡುತ್ತಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕ್ರಿಸ್ ಮಸ್ ಸಮಯದಲ್ಲಿ ಈ ಹೂವನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಗಿಡಗಳು ನೋಡಲು ಸ್ಟಾರ್ ನಂತೆಯೇ ಇರುವುದರಿಂದ ಭೂಮಿ ಮೇಲಿನ ನಕ್ಷತ್ರವಾಗಿ ಪ್ರಕೃತಿ ನಡುವೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಇದೇ ಸಮಯದಲ್ಲಿ ಹೂ ಅರಳುವುದರಿಂದ ಕ್ರಿಸ್ ಮಸ್ ಹೂವಾಗಿಯೇ ಜನಪ್ರಿಯವಾಗುತ್ತಿದೆ. ಅದು ಏನೇ ಇರಲಿ ಕ್ರಿಸ್ ಮಸ್ ಸ್ಟಾರ್ ಪುಷ್ಪಪ್ರೇಮಿಗಳನ್ನು ತನ್ನತ್ತ ಸೆಳೆಯುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications