Guinness Record: ಉದ್ದ ನಾಲಿಗೆಯಿಂದ ಚಿತ್ರ ಬಿಡಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ ವ್ಯಕ್ತಿ
ನಾಲಿಗೆ ಆಹಾರದ ರುಚಿಯನ್ನು ತಿಳಿಸುತ್ತದೆ. ಕೆಲ ಆರೋಗ್ಯ ಸಮಸ್ಯೆಗಳಾದಾಗ ಅದರ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ನಾಲಿಗೆಯಿಂದ ಗಿನ್ನಿಸ್ ದಾಖಲೆ ಬರೆದಿದ್ದಾನೆ. ಇದು ನಿಜಕ್ಕೂ ಅಚ್ಚರಿ ಹಾಗೂ ಅಪರೂಪದ ಘಟನೆಯಾಗಿದೆ.
ಕ್ಯಾಲಿಫೋರ್ನಿಯಾದ ನಿಕ್ ಸ್ಟೋಬರ್ಲ್ ಎಂಬ ವ್ಯಕ್ತಿ ತನ್ನ ನಾಲಿಗೆಯಿಂದ ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ. ಅಂದಹಾಗೆ ಈ ವ್ಯಕ್ತಿಯ ನಾಲಿಗೆ ಎಲ್ಲರಂತೆ ಇಲ್ಲ. ಬದಲಿಗೆ 10.1 ಸೆಂಟಿಮೀಟರ್ ಅಥವಾ 3.97 ಇಂಚು ಉದ್ದವಾಗಿದೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.

ಸಾಮಾನ್ಯ ಮಾನವ ನಾಲಿಗೆಯ ಉದ್ದ 7.9 ಸೆಂ.ಮೀ ನಿಂದ 8.5 ಸೆಂ.ಮೀ ವರೆಗೆ ಇರುತ್ತದೆ. ಅಂದರೆ 3.1 ಇಂಚುಗಳಿಂದ 3.3 ಇಂಚುಗಳವರೆಗೆ ಇರುತ್ತದೆ. ಆದರೆ ಅಮೆರಿಕದ ನಿಕ್ ಸ್ಟೋಬರ್ಲ್ ವಿಶ್ವದ ಅತಿ ಉದ್ದದ ನಾಲಿಗೆಯನ್ನು ಹೊಂದಿದ್ದಾರೆ. ಅವರು ಇದರಿಂದ ವರ್ಣಚಿತ್ರಗಳನ್ನು ರಚಿಸುತ್ತಾರೆ.
ಹೌದು... ನಿಕ್ ತನ್ನ ನಾಲಿಗೆಯಿಂದ ಚಿತ್ರ ಕೂಡ ಬಿಡಿಸುತ್ತಾರೆ. ಉದ್ದವಾದ ನಾಲಿಗೆಯನ್ನು ಹೊಂದಿರುವುದು ನಿಕ್‌ಗೆ ಅನೇಕ ರೀತಿ ಅನುಕೂಲವಾಗಿದೆ. ನಿಕ್ ಹೇಳುವಂತೆ ಅವನ ನಾಲಿಗೆ ಅವನ ಮುಖದಿಂದ ಕೆಚಪ್ ತೆಗೆಯಲು ಕೂಡ ಬಳಕೆಯಾಗುತ್ತದೆಯಂತೆ. ನಿಕ್ ಸಹೋದರ ಚಾಡ್ ಕೂಡ ತುಂಬಾ ಉದ್ದವಾದ ನಾಲಿಗೆಯನ್ನು ಹೊಂದಿದ್ದಾರೆ.
ನೇರ ಪ್ರದರ್ಶನದಲ್ಲಿ ನಾಲಿಗೆಯಿಂದ ಚಿತ್ರ
ಇತ್ತೀಚೆಗೆ ನಿಕ್ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ನೇರ ಪ್ರದರ್ಶನದ ಸಮಯದಲ್ಲಿ ಅವರು ತಮ್ಮ ನಾಲಿಗೆಯಿಂದ ನಿರೂಪಕರಾದ ಹಾಲಿ ವಿಲ್ಲೋಬಿ ಮತ್ತು ಫಿಲಿಪ್ ಸ್ಕೋಫೀಲ್ಡ್ ಅವರ ಚಿತ್ರಗಳನ್ನು ಬಿಡಿಸಿದ್ದಾರೆ. ಅವರು ತನ್ನ ನಾಲಿಗೆಯನ್ನು ಚಾಚಿ ಬಣ್ಣವನ್ನು ಎತ್ತಿಕೊಂಡು ಚಿತ್ರಿಸುವುದನ್ನು ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹಾಲಿ ವಿಲ್ಲೋಬಿ ಮತ್ತು ಫಿಲಿಪ್ ಸ್ಕೋಫೀಲ್ಡ್ ಅವರ ಚಿತ್ರಗಳನ್ನು ಬಿಡಿಸುವಾಗ ಕಾಮಿಡಿ ಮಾಡಿದ ನಿಕ್, 'ನೀವಿಬ್ಬರೂ ತುಂಬಾ ಸುಂದರವಾಗಿದ್ದೀರಿ ಮತ್ತು ನಿಮ್ಮ ಸೌಂದರ್ಯವನ್ನು ಸೆರೆಹಿಡಿಯುವುದು ತುಂಬಾ ಕಷ್ಟ ಆದರೆ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ' ಎಂದು ಅದ್ಭುತವಾಗಿ ಚಿತ್ರವನ್ನು ಬಿಡಿಸಿದ್ದಾರೆ.
ಬಾಲ್ಯದಿಂದಲೂ ನಾಲಿಗೆಯಿಂದ ಚಿತ್ರ ಬಿಡಿಸುವ ಕಲೆ
ನಿಕ್ ಹೇಳುವಂತೆ ಬಾಲ್ಯದಿಂದಲೂ ಅವನ ನಾಲಿಗೆ ಸಾಮಾನ್ಯಕ್ಕಿಂತ ಉದ್ದವಾಗಿತ್ತು. ಮೊದಲು ನೋಡಿದಾಗ ಜನರು ಅವನನ್ನು ಗೇಲಿ ಮಾಡುತ್ತಿದ್ದರು. ಪ್ರೌಢಶಾಲೆಗೆ ಹೋದಾಗ ನಿಕ್ ಅವರನ್ನು ಸ್ನೇಹಿತರು ದೀರ್ಘ ನಾಲಿಗೆಯ ಕಿಸ್ ರಾಕರ್ ಹಾಗೂ ಜೀನ್ ಸಿಮ್ಮನ್ಸ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.
ಆದರೆ ಇದೀಗ ಅದೇ ಉದ್ದ ನಾಲಿಗೆಯಿಂದ ನಿಕ್ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ನಿಕ್ ತನ್ನ ನಾಲಿಗೆಯಿಂದ ಬಿಡಿಸಿದ ವರ್ಣಚಿತ್ರವನ್ನು ಮಾರಾಟ ಮಾಡುವ ಮೂಲಕ $1200 ಅಂದರೆ 1 ಲಕ್ಷ ರೂ. ಗಳಿಸಿದ್ದಾರೆ. ನಾಲಿಗೆಯಿಂದ ಚಿತ್ರವನ್ನು ಬಿಡಿಸುವುದನ್ನು ನಿಕ್ ಕಲಿತಿರುವುದು ಒಂದು ಯೂಟ್ಯೂಬ್‌ನಿಂದ ಎಂದು ಹೇಳಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ನಾಲಿಗೆಯಿಂದ ಚಿತ್ರ ಬಿಡಿಸುವ ಯೂಟ್ಯೂಬ್ ವಿಡಿಯೋ ನೋಡಿದ ನಂತರ ತಾವು ಈ ಹವ್ಯಾಸವನ್ನು ಬೆಳೆಸಿಕೊಂಡರಂತೆ. ಇದರಿಂದಾಗಿ ಇಂದು ನಿಕ್ ಅವರು ಚಿತ್ರ ಬಿಡಿಸಲು ಸಮರ್ಥರಾಗಿದ್ದಾರೆ.












Click it and Unblock the Notifications