ಇಂದು ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆಯ ವಿಶೇಷತೆಯೇನು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) ಕೇಂದ್ರ ಬಜೆಟ್-2025 ಮಂಡಿಸುತ್ತಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡನೆ ವೇಳೆಯೂ ನಿರ್ಮಲಾ ಸೀತಾರಾಮನ್ ಅವರು ತಮ್ಮ ವಸ್ತ್ರದ ಮೂಲಕ ಗಮನ ಸೆಳೆಯುತ್ತಿದ್ದರು. ಇಂದು ಬಜೆಟ್ ಮಂಡಿಸಲು ಸಜ್ಜಾಗಿರುವ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಸೀರೆ ಧರಿಸಿದ್ದು, ಇದರ ಹಿಂದೆ ದೊಡ್ಡ ಕಥೆಯೇ ಇದೆ. ಅಂದಹಾಗೆ ನಿರ್ಮಲಾ ಅವರು ಇಂದು ಮಧುಬನಿ ಸೀರೆಯಲ್ಲಿ ಮಿಂಚುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸಲು ವಿಶೇಷವಾದ ಬಿಹಾರದ ಮಧುಬನಿ ಕಲೆಯ ಸೀರೆ ಧರಿಸಿ ಸಂಸತ್‌ಗೆ ಬಂದಿದ್ದಾರೆ. ಇದನ್ನು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರ ಕೌಶಲ್ಯ ಹಾಗೂ ಬಿಹಾರದ ಮಧುಬನಿ ಕಲೆಯ ಗೌರವಾರ್ಥವಾಗಿ ಕೇಂದ್ರ ಸಚಿವೆ ಈ ಸೀರೆ ಧರಿಸಿದ್ದಾರೆ. 2021ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರನ್ನು ನಿರ್ಮಲಾ ಸೀತಾರಾಮನ್ ಅವರು ಮಧುಬನಿಗೆ ಹೋಗಿದ್ದಾಗ ಭೇಟಿಯಾಗಿದ್ದರು.

ಬಿಹಾರದ ಮಧುಬನಿ ಕಲೆಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದರು. ಆಗ ದುಲಾರಿ ದೇವಿ ಅವರು ಈ ಸೀರೆ ತೋರಿಸಿ ಬಜೆಟ್ ದಿನ ಧರಿಸಲು ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧುಬನಿ ಕಲೆಯ ವಿಶೇಷ ಸೀರೆ ಧರಿಸಿ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.
ಭಾರತದ ಚಿತ್ರಕಲೆ ಶೈಲಿಗಳಲ್ಲಿ ಮಧುಬನಿಕಲೆ ಕೂಡ ಪ್ರಮುಖವಾದದ್ದು. ಇದನ್ನು ಮಿಥಿಲ ಕಲೆ ಎಂದೂ ಕರೆಯಲಾಗುತ್ತದೆ. ಬಿಹಾರ ರಾಜ್ಯದ ಮಿಥಿಲ ಪ್ರದೇಶದಲ್ಲಿ ಈ ಕಲೆಯು ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಾಮಾನ್ಯವಾಗಿ ಈ ಮಧುಬನಿ ಕಲೆಯ ಚಿತ್ರಗಳನ್ನು ನೈಸರ್ಗಿಕ ವರ್ಣಗಳು ಮತ್ತು ವರ್ಣದ್ರವ್ಯಗಳನ್ನು ಬಳಸಿ ಈ ಚಿತ್ರಗಳನ್ನು ರಚಿಸಲಾಗುತ್ತದೆ.

ಈ ಚಿತ್ರಗಳನ್ನು ಮೂಡಿಸಲು ಬೆರಳುಗಳು, ಕೊಂಬೆಗಳು, ಕುಂಚ, ಮುಳ್ಳು ಪೆನ್ನುಗಳು, ಮತ್ತು ಬೆಂಕಿ ಪೊಟ್ಟಣದ ಕಡ್ಡಿಗಳನ್ನು ಸಹ ಉಪಯೋಗಿಸಲಾಗುತ್ತದೆ. ಇದು ನೋಡುವುದಕ್ಕೆ ರೇಖಾಗಣಿತದಂತೆ ಆಕರ್ಷಕವಾಗಿ ಕಂಡುಬರುತ್ತದೆ. ಪ್ರತಿ ಆಚರಣೆ ಮತ್ತು ಹಬ್ಬಗಳನ್ನು ಸಹ ಈ ಕಲೆಯ ಚಿತ್ರಗಳ ಮೂಲಕ ವಿವರಿಸಲಾಗುತ್ತದೆ. ಹೋಳಿ, ಕಾಳಿ ಪೂಜೆ ಅಥವಾ ಹುಟ್ಟಹಬ್ಬ ಸೇರಿದಂತೆ ಪ್ರತಿ ವಿಶೇಷ ಆಚರಣೆಗಳನ್ನು ಕೂಡ ಈ ಮಧುಬನಿ ಕಲೆಯ ಮೂಲಕ ಮೂಡಿಸುತ್ತಾರೆ.
ಮಧುಬನಿ ಚಿತ್ರಕಲೆ ಅಥವಾ ಮಿಥಿಲಾ ಚಿತ್ರಕಲೆಯು ಐತಿಹ್ಯವನ್ನು ಹೊಂದಿದೆ. ಸದ್ಯ ಸಾಂಪ್ರದಾಯಿಕವಾಗಿ ಮಧುಬನಿ ಕಲೆಯು ದರ್ಭಾಂಗ್ ಪಟ್ಟಣ ಹಾಗೂ ಮಿಥಿಲಾ ಸೇರಿದಂತೆ ಇತರ ಪ್ರದೇಶಗಳಲ್ಲಿನ ಹಳ್ಳಿಗಳ ಮಹಿಳೆಯರು ನೈಪುಣ್ಯ ಹೊಂದಿದ್ದಾರೆ. ಮೊದಲು ಈ ಚಿತ್ರಕಲೆಯು ಹೊಸದಾಗಿ ಸುಣ್ಣ ಹಾಕಿರುವ ಮಣ್ಣಿನ ಗೋಡೆಗಳು ಮತ್ತು ಗುಡಿಸಲುಗಳ ನೆಲದ ಮೇಲೆ ಮೂಡಿಸಲಾಗುತ್ತಿತ್ತು. ಕಾಲ ಕ್ರಮೇಣ ಇದು ವಸ್ತ್ರಗಳು, ಕರಕುಶಲ ಕಾಗದ ಮತ್ತು ಕ್ಯಾನ್ವಾಸ್ ಮೇಲೆಯೂ ಮಾಡಿದ್ದಾರೆ.
ಈ ಚಿತ್ರಗಳನ್ನು ಮೂಡಿಸಲು ಅಕ್ಕಿಯ ಗಂಜಿಯನ್ನು ಸಹ ಬಳಸಲಾಗುತ್ತದೆ. ಮಧುಬನಿ ಚಿತ್ರಕಲೆ ಸೀಮಿತ ಪ್ರದೇಶದಲ್ಲಿ ಮಾತ್ರವೇ ಉಳಿದಿದೆ. ಮಿಥಿಲ ಪ್ರದೇಶದ ಈ ಕೌಶಲವನ್ನು ಶತಮಾನಗಳಿಂದ ಉಳಿಸಿಕೊಂಡು ಬರಲಾಗಿದೆ. ಅಲ್ಲದೆ ಮಧುಬನಿ ಕಲೆಗೆ ಜಿ.ಐ (Geographical Indication) ಸ್ಥಾನಮಾನ ಕೂಡ ಸಿಕ್ಕಿದೆ. ಈ ಮೂಲಕ ನಿರ್ಮಲಾ ಸೀತಾರಾಮನ್ ಅವರು ಇಂದು ಮಧುಬನಿ ಕಲೆಯಲ್ಲಿ ಮೂಡಿಬಂದಿರುವ ವಿಶೇಷ ಸೀರೆ ಧರಿಸಿ ಬಜೆಟ್ ಮಂಡಿಸುತ್ತಿದ್ದಾರೆ.












Click it and Unblock the Notifications