ಬೆಂಗಳೂರಿನಲ್ಲಿ ಮಾಲಿನ್ಯ ತಡೆಯಲು ಬರುತ್ತಿವೆ ನೀರಿನ ಕಾರಂಜಿಗಳು; ಇದು ಹೇಗೆ ಸಾಧ್ಯ?
ಬೆಂಗಳೂರು ನಗರವನ್ನು ಬಾಧಿಸುತ್ತಿರುವ ಸಮಸ್ಯೆಗಳು ಒಂದಾ ಎರಡಾ? ಈಗ ರಣಭೀಕರ ಮಳೆ ಬಂದು ನಗರದ ಅನೇಕ ಭಾಗ ನೀರಿನಿಂದ ಮುಳುಗಡೆಯಾಗಿದೆ. ವಾಯುಮಾಲಿನ್ಯ, ಟ್ರಾಫಿಕ್ ಸಮಸ್ಯೆಗಳು ಬೆಂಗಳೂರನ್ನು ಕಾಡುತ್ತಿರುವ ಇತರ ಕೆಲ ಪ್ರಮುಖ ಸಮಸ್ಯೆಗಳು.
ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಗ್ರಹಿಸಲು ಮೂರು ವರ್ಷಗಳ ಹಿಂದೆ ಬಿಬಿಎಂಪಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒಂದು ಕ್ರಿಯಾ ಯೋಜನೆ ರೂಪಿಸಿದ್ದವು. ಅದರ ಭಾಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಬೃಹತ್ ನೀರಿನ ಕಾರಂಜಿಗಳನ್ನು ಅಳವಡಿಸುವ ಯೋಜನೆಯೂ ಒಂದು. ಇದೀಗ ಈ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಳ್ಳುವ ಮನಸು ಮಾಡಿದಂತಿದೆ.
ನಗರದ 40 ಪ್ರಮುಖ ವೃತ್ತಗಳಲ್ಲಿ ವಾಟರ್ ಫೌಂಟೇನ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಟೆಂಡರ್ ಕರೆಯಲು ನಿರ್ಧರಿಸಿದೆ. ಈ ಚಿಲುಮೆಗಳ ನಿರ್ಮಾಣಕ್ಕೆ ಅಂದಾಜು 29 ಕೋಟಿ ರೂ ವೆಚ್ಚವಾಗುವ ನಿರೀಕ್ಷೆ ಇದೆ. ಆರು ತಿಂಗಳಲ್ಲಿ ಇವುಗಳನ್ನು ವಿವಿಧೆಡೆ ನಿರ್ಮಿಸುವ ಗುರಿ ಇದೆ.
ಡೈರಿ ಸರ್ಕಲ್, ವಿಂಡ್ಸರ್ ಮೇನಾರ್, ಟ್ರಿನಿಟಿ ಸರ್ಕಲ್, ಕೆಆರ್ ಮಾರುಕಟ್ಟೆ ಮಕ್ಕಳ ಕೂಟ ಜಂಕ್ಷನ್, ಉಪ್ಪಾರಪೇಟೆ ಪೊಲೀಸ್ ಠಾಣೆ ಜಂಕ್ಷನ್ ಇತ್ಯಾದಿ ಬಹಳ ಟ್ರಾಫಿಕ್ ಹೆಚ್ಚಿರುವ ಪ್ರದೇಶಗಳಲ್ಲಿ ವಾಟರ್ ಫೌಂಟೇನ್‌ಗಳನ್ನು ಬಿಬಿಎಂಪಿ ನಿರ್ಮಿಸುತ್ತಿದೆ.

ನೀರಿನ ಚಿಲುಮೆಗಳು ಯಾಕೆ?
ಬೆಂಗಳೂರಿನಲ್ಲಿ 40 ಕಡೆ ನೀರಿನ ಚಿಲುಮೆಗಳನ್ನು ನಿರ್ಮಿಸಲು ಎರಡು ಕಾರಣ ನೀಡಲಾಗಿದೆ. ಒಂದು ಬೆಂಗಳೂರಿನ ಸೌಂದರ್ಯೀಕರಣದ ಉದ್ದೇಶವಾದರೆ, ಇನ್ನೊಂದು ವಾಯು ಮಾಲಿನ್ಯ ನಿಯಂತ್ರಣದ ಉದ್ದೇಶ. ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯೇ ನೀರಿನ ಚಿಲುಮೆಗಳ ನಿರ್ಮಾಣಕ್ಕೆ ಶಿಫಾರಸು ಮಾಡಿತ್ತು.
ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಯ ಅಡಿಯಲ್ಲಿ ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮತ್ತು ವಾಯು ಗುಣಮಟ್ಟ ಹೆಚ್ಚಿಸಲು ವಿವಿಧ ಯೋಜನೆಗಳಿಗೆ ಬೆಂಗಳೂರು ಕಳೆದ 2 ವರ್ಷದಲ್ಲಿ 425 ಕೋಟಿ ರೂ ಹಣ ಪಡೆದಿದೆ. ಇದರಲ್ಲಿ ನೀರಿನ ಚಿಲುಮೆ ನಿರ್ಮಾಣವೂ ಒಳಗೊಂಡಿದೆ. ಈ ಬಹುತೇಕ ಯೋಜನೆಗಳನ್ನು ಬಿಬಿಎಂಪಿ ಕೈಗೆತ್ತಿಕೊಂಡಿಲ್ಲ. ಈಗ ವಾಟರ್ ಫೌಂಟೇನ್ ಯೋಜನೆಯನ್ನು ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ನೀರಿನ ಕೊರತೆ ಇರುವುದರಿಂದ ಸಂಸ್ಕರಿತ ನೀರನ್ನು ಈ ಕಾರಂಜಿಗಳಿಗೆ ಬಳಕೆ ಮಾಡಲಾಗುತ್ತದೆ.

ಹಿಂದೆ ಇದ್ದ ಅಸಂಖ್ಯ ಫೌಂಟೇನ್‌ಗಳು
ಬೆಂಗಳೂರಿನಲ್ಲಿ ವಾಟರ್ ಫೌಂಟೇನ್ ಎಂದರೆ ಸಾಮಾನ್ಯವಾಗಿ ಪ್ಲಾನಿಟೋರಿಯಂ ಎದುರು ಇರುವ ಇಂದಿರಾ ಗಾಂಧಿ ನೀರಿನ ಕಾರಂಜಿ ಪಾರ್ಕ್ ನೆನಪಿಗೆ ಬರುತ್ತದೆ. ಆದರೆ, ಹಿಂದಿನ ತಲೆಮಾರಿನ ಜನರಿಗೆ ಬೆಂಗಳೂರಿನಲ್ಲಿ ಅನೇಕ ಕಡೆ ನೀರಿನ ಕಾರಂಜಿಗಳು ಇದ್ದದ್ದು ನೆನಪಿರಬಹುದು. ಈಗ ಬಹುತೇಕ ವಾಟರ್ ಫೌಂಟೇನ್‌ಗಳು ನಿರುಪಯುಕ್ತವಾಗಿವೆ. ಅನೇಕ ಉದ್ಯಾನವನಗಳಲ್ಲಿ ನೀರಿನ ಕಾರಂಜಿ ಇದ್ದರೂ ಅವು ಕೆಲಸ ಮಾಡದೇ ತುಕ್ಕು ಹಿಡಿದು ಕೂತಿವೆ.
ಬೆಂಗಳೂರಿಗೆ ಆಗ ಯಾರಾದರೂ ಭೇಟಿ ಮಾಡಿದರೆ ವಾಟರ್ ಫೌಂಟೇನ್‌ಗಳು ಕಣ್ಣು ಸೂರೆಗೊಳ್ಳುತ್ತಿದ್ದವು. ಈಗ ಬಿಬಿಎಂಪಿ ಮತ್ತೊಮ್ಮೆ ಇಂಥ ಕಾರಂಜಿಗಳತ್ತ ಗಮನ ಹರಿಸುತ್ತಿರುವುದರಿಂದ ಬೆಂಗಳೂರು ಮತ್ತೆ ಹಳೆ ವೈಭವ ಪಡೆಯುತ್ತಾ?
ಇದೀಗ ಒಂದೊಂದು ಪ್ರದೇಶದಲ್ಲೂ ಅಲ್ಲಿನ ಕಟ್ಟಡಗಳ ವಿನ್ಯಾಸಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ನೀರಿನ ಕಾರಂಜಿ ನಿರ್ಮಿಸುವ ಯೋಜನೆ ಬಿಬಿಎಂಪಿಯದ್ದು. ಉದಾಹರಣೆಗೆ, ಟೌನ್ ಹಾಲ್ ಕಟ್ಟಡವನ್ನು ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ನಿರ್ಮಾಣವಾಗುವ ನೀರಿನ ಕಾರಂಜಿಯನ್ನೂ ಅದೇ ಶೈಲಿಯಲ್ಲಿ ಕಟ್ಟುವ ಉದ್ದೇಶ ಇದೆ.

ವಾಯು ಮಾಲಿನ್ಯ ನಿಯಂತ್ರಣ ಹೇಗೆ?
ಬೆಂಗಳೂರಿನಲ್ಲಿ ವಾಹನ ದಟ್ಟನೆ ಬಹಳ ಇದೆ. ಇದರಿಂದ ಧೂಳು ಮತ್ತು ಹೊಗೆ ಇಡೀ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಇಂಥ ಸ್ಥಳದಲ್ಲಿ ನೀರಿನ ಕಾರಂಜಿಯನ್ನು ಅಳವಡಿಸಿದರೆ, ಗಾಳಿಯಲ್ಲಿ ತೇಲುವ ಮಲಿನಕಾರಿ ವಸ್ತುಗಳನ್ನು ನೀರು ಹೀರಿಕೊಳ್ಳುತ್ತದೆ. ನಿರಂತರವಾಗಿ ನೀರಿನ ಬುಗ್ಗೆ ಆಗುತ್ತಿದ್ದರೆ ಗಾಳಿಯಲ್ಲಿರುವ ಶುಷ್ಕತೆಯನ್ನು ಕಡಿಮೆ ಮಾಡಿ ಗಾಳಿ ಸ್ಚಚ್ಛಗೊಳ್ಳುತ್ತದೆ. ಉಸಿರಾಡಲು ಸುಲಭವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆದರೆ, ಕಾರಂಜಿಯಿಂದ ಹೊಮ್ಮುವ ನೀರು ಬಹಳ ಹರಡಬೇಕು. ಅದಕ್ಕೆ ವಾಟರ್ ಫೌಂಟೇನ್ ಬಹಳ ಅಗಲ ಮತ್ತು ಎತ್ತರ ಇರುವಂತೆ ನಿರ್ಮಾಣವಾಗಬೇಕು. ಇದರಿಂದ ನೀರು ಬಹಳ ತೆಳುವಾಗಿ ಹೆಚ್ಚು ವ್ಯಾಪ್ತಿಗೆ ಚಿಮ್ಮುತ್ತದೆ. ಈ ಮೂಲಕ ವಾಯು ಮಾಲಿನ್ಯವನ್ನು ತಗ್ಗಿಸಲು ಸಾಧ್ಯವಾಗುತ್ತದೆ.
ಈ ರೀತಿಯ ನೀರಿನ ಚಿಲುಮೆಯಿಂದ ವಾಯು ಮಾಲಿನ್ಯ ಕಡಿಮೆ ಆಗುವುದಲ್ಲದೇ, ಸ್ಥಳದ ವಾತಾವರಣ ಉಷ್ಣತೆಯನ್ನು ಕಡಿಮೆ ಮಾಡಿ ತಂಪುಗೊಳಿಸಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಅನಿಸಿಕೆ.

ಪಾಸಿಟಿವ್, ನೆಗಟಿವ್ ಅಯಾನ್ಸ್
ಕೆಲ ಪಾಶ್ಚಿಮಾತ್ಯ ಸಂಶೋಧನೆಗಳು ನೀರಿನ ಕಾರಂಜಿಯಿಂದ ವಾಯು ಶುದ್ಧವಾಗುವುದನ್ನು ದೃಢಪಡಿಸಿವೆ. ಒಳಾಂಗಣದಲ್ಲಿ ನೀರಿನ ಚಿಲುಮೆಯಿಂದ ಗಾಳಿ ಸ್ಚಚ್ಛಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
ವಾತಾವರಣದ ಗಾಳಿಯಲ್ಲಿ ಪಾಸಿಟಿವ್ ಮತ್ತು ನೆಗಟಿವ್ ಅಯಾನ್‌ಗಳೆರಡೂ ಇರುತ್ತವೆ. ಮನೆಯಲ್ಲಿರುವ ಟಿವಿ, ಫ್ರಿಡ್ಜ್, ಓವನ್, ಮೈಕ್ರೋವೇವ್ ಇತ್ಯಾದಿಇಂದ ಪಾಸಿಟಿವ್ ಅಯಾನ್‌ಗಳು ಬಿಡುಗಡೆ ಆಗುತ್ತವೆ. ಇದರಿಂದ ಚಡಪಡಿಕೆ, ಸುಸ್ತು ಇತ್ಯಾದಿ ಅನುಭವವಾಗುತ್ತದೆ. ಇದನ್ನು ಹೋಗಲಾಡಿಸಲು ನೆಗಟಿವ್ ಅಯಾನ್‌ಗಳ ಅಗತ್ಯ ಇರುತ್ತದೆ. ನೀರಿನ ಚಿಲುಮೆಗಳಿಂದ ನೆಗಟಿವ್ ಅಯಾನ್‌ಗಳು ಬರುತ್ತದೆ. ಇದರಿಂದ ಒಣಹವೆಯನ್ನು ಹೋಗಲಾಡಿಸಿ ಗಾಳಿ ಶುದ್ಧಗೊಳ್ಳುತ್ತದೆ. ಗಾಳಿಯ ಗುಣಮಟ್ಟ ಹೆಚ್ಚುತ್ತದೆ ಎಂಬ ವಾದ ಇದೆ.

ಮಾಲಿನ್ಯ ನಿಯಂತ್ರಣ ಸಂದೇಹ
ನೀರಿನ ಕಾರಂಜಿಗಳಿಂದ ವಾಯು ಮಾಲಿನ್ಯ ನಿಯಂತ್ರಣ ಆಗಬಹುದು ಎಂಬ ವಾದವನ್ನು ಎಲ್ಲರೂ ಒಪ್ಪುತ್ತಿಲ್ಲ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಪ್ರೊಫೆಸರ್ ಟಿವಿ ರಾಮಚಂದ್ರ ಈ ಯೋಜನೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ನೀರಿನ ಚಿಲುಮೆಯಿಂದ ಮಾಲಿನ್ಯವನ್ನು ಹೆಚ್ಚು ನಿಯಂತ್ರಿಸಲು ಆಗದೇ ಹೋಗಬಹುದು ಎಂಬುದು ಅವರ ಸಂದೇಹ.
"ಮಲಿನಕಾರಕ ವಸ್ತು ವೇಗವಾಗಿ ಮೇಲೇರುತ್ತದೆ. ನೀರಿನ ಕಾರಂಜಿಯಿಂದ ಚಿಮ್ಮುವ ನೀರು ತಲುಪಲಾಗದಷ್ಟು ಎತ್ತರಕ್ಕೆ ಮಾಲಿನ್ಯ ವಸ್ತು ಏರಿರುತ್ತದೆ. ಇದರಿಂದ ಹೆಚ್ಚು ಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಎತ್ತರಕ್ಕೆ ನೀರು ಚಿಮ್ಮುವಂತೆ ಚಿಲುಮೆ ನಿರ್ಮಾಣವಾಗಬೇಕು. ಹಾಗೆಯೇ, ಮಲಿನಕಾರಿ ವಸ್ತುವನ್ನು ಹೀರಿಕೊಂಡ ನೀರನ್ನು ಸರಿಯಾದ ಕ್ರಮದಲ್ಲಿ ಶುದ್ಧಗೊಳಿಸಬೇಕು. ಇನ್ನು ಸಂಸ್ಕರಿತ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆಯೂ ಅಧಿಕಾರಿಗಳು ಗಮನ ಕೊಡಬೇಕು" ಎಂದು ಪ್ರೊ| ಟಿ ವಿ ರಾಮಚಂದ್ರ ಎಚ್ಚರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications