ವಿದ್ಯುತ್ ಕಂಬವೇರಿ ತಂತಿಗಳ ಮೇಲೆ ಹಾಯಾಗಿ ಮಲಗಿದ ಪವರ್ ಮ್ಯಾನ್, ಆಮೇಲೇನಾಯ್ತು?
ಇತ್ತೀಚೆಗೆ ಕೆಲವರು ಮಾಡುವ ಹುಚ್ಚಾಟಗಳು ಗಾಬರಿ ಹುಟ್ಟಿಸಿದರೂ ತಡೆಯಲಾರದ ನಗುವನ್ನೂ ತರಿಸುತ್ತವೆ. ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಇಂತಹ ಹುಚ್ಚಾಟಗಳು ಎಲ್ಲೆಡೆ ಕಾಣಸಿಗುತ್ತಿವೆ. ಸಾಮಾನ್ಯವಾಗಿ ನಾವೆಲ್ಲ ಮಲಗಲು ಸ್ವಲ್ಪ ಜಾಗ ಸಿಕ್ಕರೆ ಸಾಕು, ಒಂದು ಹಾಸಿಗೆ ಇದ್ದರೆ ಕಾಲು ಚಾಚಿಕೊಂಡು ನಿದ್ರೆ ಮಾಡೋಣ ಅಂದಕೊಳ್ತೀವಿ..
ಆದ್ರೆ, ಪ್ರಪಂಚ ಇಷ್ಟು ವಿಶಾಲವಾಗಿ ಇದ್ರೂ ವ್ಯಕ್ತಿಯೊಬ್ಬ ಮಲಗಲು ಆರಿಸಿಕೊಂಡಿರೋ ಜಾಗ ನೋಡಿದ್ರೆ... ಯಾವೋ ಇವೆಲ್ಲ ಅನ್ನೋದು ಗ್ಯಾರಂಟಿ. ಇಷ್ಟಕ್ಕೂ ಈ ಭೂಪ ಬೇರೆಲ್ಲೂ ಜಾಗ ಸಿಗಲಿಲ್ವೋ ಏನೋ, ಸೀದಾ ಲೈಟ್ ಕಂಬವನ್ನೇ ಏರಿಸಿ ಸಾಹಸ ಪ್ರದರ್ಶಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ ವಿದ್ಯುತ್ ತಂತಿಗಳನ್ನೇ ಬೆಡ್ ಮಾಡಿಕೊಂಡು ಹಾಯಾಗಿ ಮಲಗಿದ್ದಾನೆ.

ಇದನ್ನು ಕಂಡ ಜನರೆಲ್ಲ ಜೀವ ಕೈಯಲ್ಲಿಟ್ಟುಕೊಂಡೇ ಬೆಚ್ಚಿಬಿದ್ದಿದ್ದಾರೆ. ಇಂತಹ ವಿಚಿತ್ರ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೊದಲಿಗೆ ಯಾರೋ ಪ್ರಾಂಕ್ ಮಾಡಲು ಈ ದುಸ್ಸಾಹಸ ಮಾಡಿರುಬಹುದು ಎಂದು ಅನಿಸಿದರೂ ಅಸಲಿಗೆ ಆತ ಮಾಡಿರೋದು ಅಂತಿತ ಸಾಹಸವೇನಲ್ಲ ಎಂದು ಆಮೇಲೆ ಹೇಳಿದ್ದಾರೆ.
ಈ ಘಟನೆ ನಡೆದಿರುವುದು ಪಕ್ಕದ ಆಂಧ್ರಪ್ರದೇಶದಲ್ಲಿ ಎಂದು ಹೇಳಲಾಗುತ್ತಿದೆ. ಅಲ್ಲಿನ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗಿಪುರಂನಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ವಿದ್ಯುತ್ ಕಂಬ ಏರಿ ಗ್ರಾಮಸ್ಥರ ಜೀವ ಬಾಯಿಗೆ ತರಿಸಿದ್ದಾನೆ. ಇಷ್ಟಕ್ಕೂ ಈ ದುಸ್ಸಾಹಸ ಮಾಡಿರುವ ವ್ಯಕ್ತಿ ಸಾಮಾನ್ಯನಲ್ಲ.
ಈತನ ಒಳಗಿದ್ದ ಎಣ್ಣೆ ಇಷ್ಟೆಲ್ಲ ಅವಾಂತರ ಮಾಡಿಸಿದೆ ಎಂದು ತಿಳಿದುಬಂದಿದೆ. ಎಣ್ಣೆ ಏಟಿನಲ್ಲಿ ವಿದ್ಯುತ್ ಕಂಬದ ವೃತ್ತದಲ್ಲಿದ್ದ ತಂತಿಗಳು ಬೆಡ್ ರೀತಿ ಕಾಣಿಸಿದೆ. ತನ್ನ ಗಮ್ಯಸ್ಥಾನ ತಲುಪಬೇಕು ಎಂದು ಸೀದಾ ಕಂಬವನ್ನೇ ಏರಿಬಿಟ್ಟಿದ್ದಾನೆ. ಈ ವೇಳೆ ಅಲ್ಲಿನ ತಂತಿಗಳಲ್ಲಿ ವಿದ್ಯುತ್ ಸಂಪರ್ಕವೂ ಇತ್ತು ಎನ್ನಲಾಗಿದೆ.
ಈ ಭೂಪ ಕಂಬ ಏರುತ್ತಿರುವುದನ್ನು ಕಂಡ ಗ್ರಾಮಸ್ಥರು ತಲೆ ಉಪಯೋಗಿಸಿ, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅದೃಷ್ಟವಶಾತ್ ಈ ವ್ಯಕ್ತಿ ನಿರಾತಂಕವಾಗಿ ತಂತಿಗಳ ಮೇಲೆ ಒಂದು ನಿದ್ದೆ ಮುಗಿಸಿದ್ದಾನೆ. ಗ್ರಾಮಸ್ಥರು ಸ್ವಲ್ಪ ಯಾಮಾರಿದ್ದರೂ ಈತ ಸೀದಾ ಶಿವನಪಾದ ಸೇರಿಕೊಳ್ಳಬೇಕಿತ್ತು ಎಂದಿದ್ದಾರೆ.
ಇನ್ನು ಮೇಲೆ ಮಲಗಿದ್ದ ಅಧಿಪತಿಯನ್ನು ಕೆಳಗಿಳಿಸಲು ಗ್ರಾಮಸ್ಥರು ಹರಸಾಹಸವನ್ನೇ ಪಟ್ಟಿದ್ದಾರೆ ಎನ್ನಲಾಗಿದೆ. ಎಷ್ಟು ಕೂಗು ಹಾಕಿದರೂ ಆತ ನೆಮ್ಮದಿಯಾಗಿ ತಲೆಮೇಲೆ ಕೈಯಿಟ್ಟು ಸುಖ ನಿದ್ದೆ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಕೊನೆಗೆ ನಶೆ ಇಳಿದ ಮೇಲೆ ಪವರ್ ಹಾಸಿಗೆಯಿಂದ ಎಚ್ಚರವಾಗಿದೆ. ಕೊನೆಗೆ ನಾನೇಕೆ ಇಷ್ಟು ಮೇಲಿದ್ದೇನೆ ಎಂದು ತಲೆಕೆರೆದುಕೊಂಡು ಕೆಳಗಿಳಿದಿದ್ದಾನೆ.
ಪವರ್ ಮೇಲೆಯೇ ಮಲಗಿ ಪವರ್ ತೋರಿದ ಈತನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕೆಲವರು ಹಾಡನ್ನೂ ಬರೆದುಬಿಟ್ಟಿದ್ದಾರೆ. ಉಪ್ಪಿ ಹೇಳುವ ಹೇಳ್ಕೋಳಾಕ್ ಒಂದೂರು...ತಲೆ ಮೇಲೆ ಒಂಚೂರು, ಮಲಗಾಕೆ ಲೈಟ್ ಕಂಬ ಮಂಚಾ...ಎಂದು ಹಾಸ್ಯ ಮಾಡಿದ್ದಾರೆ. ಈತ ಕಂಬವನ್ನೇ ಏರಿದ್ದಾನೆ ಅಂದ್ರೆ ಕುಡಿದಿರೋದು ಎಣ್ಣೆಯಲ್ಲ, ಯಾವುದೋ ಎನರ್ಜಿ ಡ್ರಿಂಕ್ ಇರಬೇಕು ಎಂದು ಕಾಲೆಳೆದಿದ್ದಾರೆ.












Click it and Unblock the Notifications