ಈ ದಿನಾಂಕಕ್ಕೂ ಮುನ್ನ ಪಿಎಫ್ ಖಾತೆಗೆ ನಾಮಿನಿ ಸೇರಿಸಿ..
ದೇಶದಲ್ಲಿ ಸಂಬಳ ಪಡೆಯುವ ಬಹುತೇಕ ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ (EPF) ನಲ್ಲಿ ಖಾತೆಯನ್ನು ಹೊಂದಿದ್ದಾರೆ. ಈ ಖಾತೆಯಲ್ಲಿ ಉದ್ಯೋಗಿಗಳ ಸಂಬಳದ ಭಾಗವನ್ನು ಪ್ರತಿ ತಿಂಗಳು ಠೇವಣಿ ಮಾಡಲಾಗುತ್ತದೆ. ಇದು ಅವರ ಒಟ್ಟಾರೆ ಉಳಿತಾಯ ಮತ್ತು ನಿವೃತ್ತಿ ಯೋಜನೆಗೆ ಕೊಡುಗೆ ನೀಡುವ ಯೋಜನೆ ಆಗಿದೆ.
ಪ್ರಸ್ತುತ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವ ಅಗತ್ಯವಿದೆ ಎಂಬುದನ್ನು ಗಮನಿಸಬೇಕು. ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸಿಕೊಳ್ಳದಿದ್ದರೆ, ನೀವು ಭವಿಷ್ಯದಲ್ಲಿ ತೊಂದರೆಗೆ ಒಳಗಾಗಬಹುದು. EPFO ಅಧಿಕೃತ ಪ್ರಕಟಣೆಯ ಪ್ರಕಾರ, ನಿಮ್ಮ ಪಿಎಫ್ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಡಿಸೆಂಬರ್ 31, 2021 ಆಗಿದೆ. ಹಾಗಾಗಿ ಅದಕ್ಕೂ ಮುನ್ನವೇ ನೀವು ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಿಕೊಳ್ಳಿ.
ಈ ಬಗ್ಗೆ ಹೇಳಿಕೆ ನೀಡಿರುವ ಇಪಿಎಫ್‌ಒ, "ಚಂದಾದಾರರು ತಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರನ್ನು ಭವಿಷ್ಯದಲ್ಲಿ ನೋಡಿಕೊಳ್ಳಲು ಮತ್ತು ಆನ್‌ಲೈನ್ ಪಿಎಫ್, ಪಿಂಚಣಿ ಮತ್ತು ವಿಮೆ (sic) ಮೂಲಕ ಅವರನ್ನು ರಕ್ಷಿಸಲು ನಾಮಿನಿಯನ್ನು ನೋಂದಾಯಿಸಿಕೊಳ್ಳುವುದು ಅತೀ ಅವಶ್ಯಕವಾಗಿದೆ," ಎಂದು ಹೇಳಿದೆ. ಹಾಗೆಯೇ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಸೇವೆಗಳ ಲಾಭ ಪಡೆಯಲು ಜನರು ತಮ್ಮ ನಾಮಿನಿಯನ್ನು ಸೇರ್ಪಡೆ ಮಾಡುವಂತೆ ಇಪಿಎಫ್‌ಒ ತಿಳಿಸಿದೆ.

PF ಖಾತೆದಾರರು EPFO ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಇ-ನಾಮಿನಿ ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಬಹುದು. ಹಾಗಾದರೆ ನಾಮಿನಿಯನ್ನು ಸೇರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..,
ನಿಮ್ಮ PF ಖಾತೆಗೆ ಇ-ನಾಮಿನೇಷನ್ ಅನ್ನು ಹೇಗೆ ಸಲ್ಲಿಸುವುದು?
* ಮೊದಲು EPFO ವೆಬ್‌ಸೈಟ್ epfindia.gov.in. ಗೆ ಭೇಟಿ ನೀಡಿ
* 'Services' ಆಯ್ಕೆಯ ಕೆಳಗೆ 'For Employees' ಅನ್ನು ಆಯ್ಕೆ ಮಾಡಿ
* 'Member UAN/Online Service (OCS/OTCP)' ಆಯ್ಕೆಯನ್ನು ಕ್ಲಿಕ್ ಮಾಡಿ
* ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ
* 'Manage' ಪೇಜ್‌ನಲ್ಲಿ e-nomination ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸಿ
* ನಿಮ್ಮ ಕುಟುಂಬದ ಡಿಕ್ಲೆರೇಷನ್ ಹಾಗೂ ಕುಟುಂಬದ ವಿವರಗಳನ್ನು ಸೇರಿಸಲು ಅಥವಾ ನಾಮಿನಿ ವಿವರಗಳನ್ನು ಬದಲಾಯಿಸಲು, 'yes' ಎಂದು ಕ್ಲಿಕ್ ಮಾಡಿ
* ನಾಮಿನಿಯ ಎಲ್ಲಾ ಮಾಹಿತಿಯನ್ನು ಇಲ್ಲಿ ಸಲ್ಲಿಕೆ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ
* ನೀವು ಹೆಚ್ಚು ನಾಮಿನಿಯನ್ನು ಸೇರ್ಪಡೆ ಮಾಡಲು ಬಯಸಿದರೆ 'Add New' ಆಯ್ಕೆ ಮಾಡಿ
* ಹೆಚ್ಚುವರಿ ನಾಮಿನಿಗಳ ಮಾಹಿತಿಯನ್ನು ಉಲ್ಲೇಖ ಮಾಡಿದರೆ ಪ್ರಕ್ರಿಯೆಯು ಅಂತ್ಯವಾಗಲಿದೆ.
ಒಮ್ಮೆ ನೀವು ನಿಮ್ಮ ಕುಟುಂಬದ ಮಾಹಿತಿಯನ್ನು ಹಾಕಿದರೆ ನಿಮ್ಮ ಇ-ನಾಮಿನೇಷನ್ ನಿಮ್ಮ PF ಖಾತೆಗೆ ಸಲ್ಲಿಸಲಾಗುತ್ತದೆ. ಕೊನೆಯ ದಿನಾಂಕವಾದ ಡಿಸೆಂಬರ್ 31, 2021 ರ ಮೊದಲು ನಾಮಿನಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿದೆ ಎಂಬುವುದನ್ನು ನೆನಪಿನಲ್ಲಿ ಇಡಿ. ನೀವು ನಾಮಿನಿ ಸಲ್ಲಿಸುವುದು ಮುಖ್ಯವಾಗಿದೆ. ಯಾವುದೇ ಅನಾಹುತ ಸಂಭವಿಸಿದರೆ ನಾಮಿನಿಯು ವಿಮೆಯಂತಹ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ನಾಮಿನಿ ಸಲ್ಲಿಕೆ ಮಾಡದಿದ್ದರೆ, ನಿಮ್ಮ ಸಾವಿನ ಬಳಿಕ ಹಣವನ್ನು ಪಡೆಯುವುದು ಕಷ್ಟವಾಗುತ್ತದೆ.
ಇನ್ನು ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಖಾತೆಯ ಸಂಖ್ಯೆ(UAN) ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಗಸ್ಟ್ 30 ರೊಳಗೆ ಈ ಜೋಡಣೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಇಪಿಎಫ್‌ಒ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಇಪಿಎಫ್‌ಒ ತನ್ನ ಚಂದಾದಾರರಿಗಾಗಿ ಪರಿಚಯಿಸಿರುವ ಆನ್‌ಲೈನ್ ಸೌಲಭ್ಯವನ್ನು ಬಳಸಿಕೊಂಡು ಅನೇಕ ಸೌಲಭ್ಯ ಪಡೆದುಕೊಳ್ಳಬಹುದು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications