ಸಾವಿರಾರು ಕೋಟಿ ರೂ. ಖರ್ಚು ಮಾಡಿ ಅಫ್ಘನ್ ಸೇನೆ ತರಬೇತಿ: ಅಮೆರಿಕದ ಪ್ರಯತ್ನ ನೀರಲ್ಲಿ ಹೋಮ
ಕಾಬೂಲ್, ಆಗಸ್ಟ್ 17: ಇಡೀ ಅಫ್ಘಾನಿಸ್ತಾನ ಇಂದು ತಾಲಿಬಾನ್ ವಶದಲ್ಲಿದೆ. ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ರಚನೆಯಾದ ತಾಲಿಬಾನ್ ಉಗ್ರರ ಸರ್ಕಾರವನ್ನು ವಿಶ್ವವೇ ಟೀಕಿಸುತ್ತಿದ್ದರೆ ರಷ್ಯಾ, ಪಾಕಿಸ್ತಾನ, ಚೀನಾ ಮತ್ತು ಇರಾನ್ ಸರ್ಕಾರ ಸ್ವಾಗತಿಸಿವೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಭೂಭಾಗಗಳಲ್ಲಿ ತಾಲಿಬಾನಿಗಳ ಆಕ್ರಮಣ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಾಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಆದರೆ ಅಫ್ಘನ್ ಸರ್ಕಾರದೊಂದಿಗಿದ್ದ ಸೈನಿಕರ ಸಂಖ್ಯೆಗೆ ಹೋಲಿಸಿದರೆ ತಾಲಿಬಾನಿಗಳ ಸಂಖ್ಯೆ ತೀರ ವಿರಳ. ಆದರೂ ಅಫ್ಘನ್ ಸೇನೆ ತಾಲಿಬಾನಿಗಳ ವಿರುದ್ಧ ಗುಂಡು ಹಾರಿಸದೆ ಕೈಕಟ್ಟಿ ಕೂತಿದ್ದು ವಿಪರ್ಯಾಸವೇ ಸರಿ.
ಸಮಾರು ಎರಡು ದಶಕಗಳ ಕಾಲ ಆಫ್ಘನ್ ಸೇನೆಯನ್ನು ಅಮೆರಿಕ ಭದ್ರತಾ ಪಡೆಗಳು ತರಬೇತಿಗೊಳಿಸಿದ್ದವು. ಇದಕ್ಕಾಗಿ 8300 ಕೋಟಿ ಅಮೆರಿಕನ್ ಡಾಲರ್ ವೆಚ್ಚ ಮಾಡಲಾಗಿದೆ. ಅಂಥದ್ದರಲ್ಲಿ ಆಫ್ಘನ್ ಸೈನ್ಯ ನೈತಿಕ ಬಲವಿಲ್ಲದೆ ತಾಲಿಬಾನ್ ಉಗ್ರರ ಎದುರು ಮಂಡಿಯೂರಿದರು.

ಒಂದೇ ಒಂದು ಗುಂಡು ಕೂಡ ಹಾರಲಿಲ್ಲ
ಕಲ್ಪನೆ ಕೂಡ ಮಾಡಲು ಸಾಧ್ಯವಾಗದಂತೆ ಆಫ್ಘನ್ ಸೈನ್ಯ ಗೆದ್ದಲು ಹಿಡಿದ ಮರದಂತೆ ತಾಲಿಬಾನಿಗಳು ಮುಂದೆ ಪಟಪಟನೆ ಮುರಿದು ಬಿದ್ದರು. ತನ್ನ ಬಲ ಪ್ರದರ್ಶಿಸಲು ಅಫ್ಘನ್ ಸೈನ್ಯಕ್ಕೆ ಇದೊಂದು ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ ಹಲವು ಸಂದರ್ಭಗಳಲ್ಲಿ ಅಫ್ಘನ್ ಸೇನೆಯ ಗನ್‌ಗಳಿಂದ ಒಂದೇ ಒಂದು ಗುಂಡು ಕೂಡ ಹಾರಲಿಲ್ಲ. ಇದರಿಂದಾಗಿ ತಾಲಿಬಾನ್ಗಳ ಉದ್ದೇಶ ಸಂಪೂಣವಾಗಿ ಈಡೇರಿತು.
ಎರಡು ದಶಕಗಳ ಕಾಲ ಅಮೆರಿಕ ಮಾಡಿದ ಹೂಡಿಕೆ ನೀರಲ್ಲಿ ಹೋಮದಂತಾಗಿದ್ದಲ್ಲದೇ, ಇದರ ಎಲ್ಲ ಲಾಭ ಗಳಿಸಿದವರು ಮಾತ್ರ ತಾಲಿಬಾನ್‌ಗಳು. ಇಡೀ ಜಗತ್ತಿನ ರಾಷ್ಟ್ರಗಳ ಸಿಟ್ಟು ದವಡೆಗೆ ಮಾತ್ರ ಸೀಮಿತವಾಗಿದ್ದರೆ, ಇತ್ತ ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಕೇವಲ ರಾಜಿಕೀಯ ಅಧಿಕಾರವನ್ನು ಮಾತ್ರ ಕಸಿದುಕೊಳ್ಳದೇ, ಈವರೆಗೆ ಅಮೆರಿಕ ಪೂರೈಕೆ ಮಾಡಿದ್ದ ಗನ್ಗಳು, ಶಸ್ತ್ರಾಸ್ತ್ರ, ಹೆಲಿಕಾಪ್ಟರ್ಗಳು ತಾಲಿಬಾನ್ ವಶವಾದವು.

ಅಪಾರ ಪ್ರಮಾಣದ ಶಸ್ತ್ರಾಸ್ತ್ರ ತಾಲಿಬಾನ್ ಪಾಲು
ಕನಿಷ್ಠ ಪಕ್ಷ ಜಿಲ್ಲಾ ಕೇಂದ್ರಗಳನ್ನೂ ಕಾಪಾಡಿಕೊಳ್ಳಲು ಹೆಣಗಾಡಿದ ಆಫ್ಘನ್ ಸೇನಾ ಪಡೆಗಳಿಂದ ತಾಲಿಬಾನಿಗಳು ಅಮೆರಿಕ ಪೂರೈಸಿದ್ದ ಆಧುನಿಕ ಮಿಲಿಟರಿ ಸಲಕರಣೆಗಳನ್ನು ಕಿತ್ತುಕೊಂಡಿದ್ದಾರೆ. ಅದರಲ್ಲಿ ಕಂಬೋಟ್ ಏರ್ಕ್ರಾಫ್ಟ್ (ಯುದ್ಧ ವಿಮಾನ)ಗಳೂ ಇವೆ. ಪ್ರಾಂತ್ಯಗಳು ಮತ್ತು ಸೇನಾ ನೆಲೆಗಳನ್ನು ಮಿಂಚಿನ ವೇಗದಲ್ಲಿ ತೆಕ್ಕೆಗೆ ತೆಗೆದುಕೊಂಡ ತಾಲಿಬಾನ್ಗಳಿಗೆ ದೊರೆತ ಅತಿದೊಡ್ಡ ಬಹುಮಾನ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಗರ.
ತಾಲಿಬಾನ್‌ಗಳು ಅಮೆರಿಕ ಪೂರೈಸಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ದಿಢೀರ್ ಆಗಿ ವಶಪಡಿಸಿಕೊಂಡರು ಎಂದು ಯು.ಎಸ್. ರಕ್ಷಣಾಧಿಕಾರಿಗಳು ಸೋಮವಾರ ಖಾತ್ರಿಪಡಿಸಿದ್ದಾರೆ.

ಆಫ್ಘನ್ ಸೇನೆ ಪ್ರತಿ ಹೋರಾಟ ಮಾಡಲಿಲ್ಲ
ಆಫ್ಘನ್ ಸೈನ್ಯವನ್ನು ತಪ್ಪಾಗಿ ಗ್ರಹಿಸಿದೆವು ಎನ್ನವುದನ್ನು ಈಗ ಸ್ವತಃ ಅಮೆರಿಕ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಸೈನ್ಯ ಹಾಗೂ ಗುಪ್ತಚರ ಸಂಸ್ಥೆ ಎರಡೂ ವಿಫಲವಾಗಿವೆ. ಏಕೆಂದರೆ, ಎಲ್ಲಾ ಪ್ರದೇಶಗಳಲ್ಲಿ ಆಫ್ಘನ್ ಸೇನೆ ಪ್ರತಿ ಹೋರಾಟವನ್ನೇ ಮಾಡದೆ ತಮ್ಮ ವಾಹನ, ಶಸ್ತ್ರಾಸ್ತ್ರಗಳನ್ನು ತಾಲಿಬಾನ್ಗೆ ಒಪ್ಪಿಸಿ ಶರಣಾಗಿದೆ.
ಸುಸಜ್ಜಿತ ಆಫ್ಘನ್ ಸೈನ್ಯ ಹಾಗೂ ಪೊಲೀಸ್ ಪಡೆಯನ್ನು ತಯಾರಿಸುವಲ್ಲಿ ಅಮೆರಿಕ ಸಂಪೂರ್ಣ ವಿಫಲವಾಗಿದ್ದಲ್ಲದೇ, ಇಲ್ಲಿಯವರೆಗೂ ತಾನೂ ಹೂಡಿದ ಮಿಲಿಟರಿ ಹಾಗೂ ಹಣ ಪೋಲಾಗಿದೆ. ತಾಲಿಬಾನಿಗಳ ವಿರುದ್ಧ ತಿರುಗಿ ಬೀಳಲು ಅಫ್ಘನ್ ಸೈನ್ಯದ ಮನಸ್ಥಿತಿಯೇ ಸತ್ತುಹೋಗಿರುವುದು ದುರಂತ.

ನೈತಿಕ ಶಕ್ತಿಯ ಕೊರತೆ
"ಹಣದಿಂದ ನೈತಿಕ ಶಕ್ತಿಯನ್ನು ಖರೀದಿಸಲು ಆಗುವುದಿಲ್ಲ, ನಾಯಕತ್ವದ ಖರೀದಿ ಸಾಧ್ಯವಿಲ್ಲ," ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮುಖ್ಯ ವಕ್ತಾರರಾದ ಜಾನ್ ಕಿರ್ಬಿ ಸೋಮವಾರ ಹೇಳಿದ್ದರು.
ಅಮೆರಿಕ ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಬರಾಕ್ ಒಬಾಮ ಆಡಳಿತ ಅವಧಿಯಲ್ಲಿ ಆಫ್ಘನ್ ಯುದ್ಧದ ರಣತಂತ್ರ ಹೆಣೆಯುವುದರಲ್ಲಿ ನೇರವಾಗಿ ಭಾಗಿಯಾಗಿದ್ದ, ನಿವೃತ್ತ ಸೇನಾ ಲೆಫ್ಟಿನೆಂಟ್ ಜನರಲ್ ಡಗ್ ಲ್ಯುಟ್ ಹೇಳುವಂತೆ, ಆಫ್ಘನ್ನರು ಅಮೆರಿಕದಿಂದ ಸಾಕಷ್ಟು ಸಂಪನ್ಮೂಲವನ್ನು ಪಡೆದರು. ಆದರೆ ಅದಕ್ಕೂ ಮುಖ್ಯವಾಗಿ ಕಣ್ಣಿಗೆ ಕಾಣದ ನೈತಿಕ ಶಕ್ತಿಯ ಕೊರತೆ ಅವರಲ್ಲಿತ್ತು ಎಂದು ಹೇಳಿದ್ದಾರೆ.

ಮೆಟ್ಟಿ ನಿಲ್ಲುವಂಥ ನೈತಿಕ ಸಂಗತಿ ಇರಲಿಲ್ಲ
"ಯುದ್ಧದ ಮೂಲ ಸಿದ್ಧಾಂತ ನಿಂತಿರುವುದು ವಾಸ್ತವ ಸಂಗತಿಗಳನ್ನೂ ಮೆಟ್ಟಿ ನಿಲ್ಲುವಂಥ ನೈತಿಕ ಸಂಗತಿಗಳಲ್ಲಿ. ನೈತಿಕ ಬಲ, ಶಿಸ್ತು, ನಾಯಕತ್ವ, ಒಗ್ಗಟ್ಟು ಇವು ಎಷ್ಟು ದೊಡ್ಡ ಸೇನೆ ಹಾಗೂ ಎಷ್ಟು ಸಲಕರಣೆಗಳಿವೆ ಎಂಬುದಕ್ಕಿಂತ ಮುಖ್ಯವಾಗುತ್ತದೆ. ಅಫ್ಘಾನಿಸ್ತಾನಕ್ಕೆ ಹೊರಗಿನವರಾಗಿ ನಾವು ವಸ್ತುಗಳನ್ನು ಒದಗಿಸಬಹುದು, ಆದರೆ ಸೈನ್ಯಕ್ಕೆ ಅಗತ್ಯವಾಗಿ ಬೇಕಾದ ನೈತಿಕ ಬಲದ ಸಂಗತಿಯನ್ನು ಒದಗಿಸುವುದಕ್ಕೆ ಸಾಧ್ಯವಿರುವುದು ಆಫ್ಘನ್ನರಿಗೆ ಮಾತ್ರ," ಎಂದಿದ್ದಾರೆ.
ಅಫ್ಘನ್‌ನಲ್ಲಿ ತಾಲಿಬಾನ್ ನುಸುಳುಕೋರರ ಸಂಖ್ಯೆ ಚಿಕ್ಕದಿದೆ. ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಲ್ಲ. ಇನ್ನು ವಾಯುಸೇನೆ ಕೂಡ ಇಲ್ಲ. ಆದರೂ ಅಫ್ಘಾನಿಸ್ತಾನ ಸೇನೆಗಿಂತ ತಾಲಿಬಾನ್ಗಳ ಕೈ ಮೇಲಾಗಿದೆ. ಅಮೆರಿಕ ಗುಪ್ತಚರ ಸಂಸ್ಥೆಯು ತಾಲಿಬಾನ್ ಸಾಮರ್ಥ್ಯವನ್ನು ಅಂದಾಜು ಮಾಡುವಲ್ಲಿ ಎಡವಿದೆ.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದಕ್ಕೆ
ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತೇವೆ ಎಂದು ಕಳೆದ ಏಪ್ರಿಲ್ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಘೋಷಣೆ ಮಾಡಿದಾಗ, ತಾಲಿಬಾನ್‌ಗಳು ಎದ್ದು ನಿಲ್ಲಬಹುದು ಎಂಬ ಸಣ್ಣ ಸುಳಿವು ಕೂಡ ಅಮೆರಿಕಾದ ಗುಪ್ತಚರ ಸಂಸ್ಥೆಗೆ ಗೋಚರಿಸಲಿಲ್ಲ. ಕಳೆದ ಏಪ್ರಿಲ್ನಲ್ಲಿ ಜೋ ಬಿಡೆನ್ ತನ್ನ ಅಮೆರಿಕ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಘೋಷಣೆ ಮಾಡಿದಾಗಲೇ ಆಫ್ಘನ್ ಸೇನೆ ಸೋಲುವುದಕ್ಕೆ ಆರಂಭವಾಗಿತ್ತು.

ಆಫ್ಘನ್‌ಗಾಗಿ ಅಮೆರಿಕ ಖರ್ಚು ಮಾಡಿದ್ದೇಷ್ಟು?
ಆಫ್ಘನ್ ಸೇನೆಯನ್ನು ಕಟ್ಟಿದ್ದು ಅಮೆರಿಕ. ಆಫ್ಘನ್ ಸೇನಾ ತುಕಡಿಗಳಿಗೂ ಪೆಂಟಗನ್ನಿಂದ ವೇತನ ಬರುತ್ತಿತ್ತು. ಅಮೆರಿಕವು ಅಫ್ಘಾನಿಸ್ತಾನದ ಸೈನ್ಯವನ್ನು ಕಟ್ಟಲು ಖರ್ಚು ಮಾಡಿದ್ದು, ಅಂದಾಜು 14,500 ಕೋಟಿ ಡಾಲರ್. ಇದನ್ನು ಹೊರತುಪಡಿಸಿ ಅಮೆರಿಕವು 2001ರ ನಂತರ ಯುದ್ಧಕ್ಕಾಗಿ ಮಾಡಿರುವ ವೆಚ್ಚ 83,700 ಕೋಟಿ ಅಮೆರಿಕನ್ ಡಾಲರ್.
ಪತ್ರಕರ್ತ ಕ್ರೆಗ್ ವೈಟ್ಲಾಕ್ ತಮ್ಮ ಪುಸ್ತಕ 'ಅಫ್ಘಾನಿಸ್ತಾನ್ ಪೇಪರ್ಸ್'ನಲ್ಲಿ, ಅಮೆರಿಕದ ತೆರಿಗೆ ಪಾವತಿದಾರರ ಹಣವು ನಿಜಕ್ಕೂ ಅರ್ಹ ಸೈನ್ಯದ ಮೇಲೆ ಹೂಡಿಕೆ ಆಗುತ್ತಿದೆಯಾ ಎಂಬ ಪ್ರಶ್ನೆ ಎತ್ತಿದ್ದರು. "ಅಮೆರಿಕದ ಯುದ್ಧ ತಂತ್ರವು ಆಫ್ಘನ್ ಸೇನೆಯ ಪ್ರದರ್ಶನದ ಮೇಲೆ ಆಧಾರವಾಗಿದೆ. ಆಫ್ಘನ್ನರು ತಮ್ಮ ಸರ್ಕಾರಕ್ಕಾಗಿ ಪ್ರಾಣ ನೀಡಲು ಸಿದ್ಧರಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಪೆಂಟಗನ್ ಸ್ವಲ್ಪವಾದರೂ ಗಮನ ನೀಡಬಹುದಾ," ಎಂದು ಬರೆದಿದ್ದರು.












Click it and Unblock the Notifications