ಎಬಿಪಿ-ಸಿ ವೋಟರ್ ಸಮೀಕ್ಷೆ: ಯುಪಿಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
ಲಕ್ನೋ, ಜನವರಿ 10: ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಮೊದಲ ಹಂತದ ಮತದಾನ ಫೆಬ್ರವರಿ 10ರಂದು ನಿಗದಿಯಾಗಿದೆ. ಮಾರ್ಚ್ 10ರಂದು ಎಲ್ಲಾ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರಲಿದೆ. ಈ ನಡುವೆ ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಉತ್ತರ ಪ್ರದೇಶ ಜನರ ಅಭಿಪ್ರಾಯವನ್ನು ಸಮೀಕ್ಷೆ ಮೂಲಕ ಮುಂದಿಟ್ಟಿದೆ.
ಡಿಸೆಂಬರ್ 18ರಂದು ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ವರದಿ ಪ್ರಕಟವಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಇದುವರೆಗೂ ಪ್ರಕಟವಾದ ಸಮೀಕ್ಷೆಗಳು ಸಹ ಇದನ್ನೇ ಹೇಳಿದ್ದವು.
ಉತ್ತರಪ್ರದೇಶದ ಜೊತೆಗೆ ಉತ್ತರಾಖಂಡ್, ಗೋವಾ, ಮಣಿಪುರ, ಪಂಜಾಬ್ ರಾಜ್ಯಗಳಿಗೂ ಚುನಾವಣೆ ನಿಗದಿಯಾಗಿದೆ. ಎಲ್ಲಾ ರಾಜ್ಯಗಳಲ್ಲಿನ ಜನಾಭಿಪ್ರಾಯ ಸಂಗ್ರಹ ನಡೆಸಿರುವ ಎಬಿಪಿ -ಸಿ ವೋಟರ್ ಸಂಸ್ಥೆ ಸಮೀಕ್ಷೆ ವರದಿಗಳನ್ನು ಪ್ರಕಟಿಸುತ್ತಿದೆ.

ಚುನಾವಣಾ ಪೂರ್ವ ಸಮೀಕ್ಷೆಯ ವರದಿ
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಲ್ಲಿ ಯಾವ ಪಕ್ಷ ಹೆಚ್ಚು ಮತಗಳನ್ನು ಗಳಿಸಬಹುದು ಎಂದು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಬಿಜೆಪಿಗೆ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಸಮೀಕ್ಷೆಯ ವರದಿಯಿಂದ ತಿಳಿದುಬಂದಿದೆ.
ಜನವರಿ 10ರಂತೆ ಬಿಜೆಪಿ ಶೇ 41.5ರಷ್ಟು ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ 33.3 ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಡಿಸೆಂಬರ್ ತಿಂಗಳಲ್ಲಿ ಹೊರ ಬಂದ ಸಮೀಕ್ಷೆಯಲ್ಲಿ ಬಿಜೆಪಿ ಶೇ 40ರಷ್ಟು ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ 34ರಷ್ಟು ಮತ ಪಡೆಯಲಿದೆ ಎಂದು ವರದಿ ಬಂದಿತ್ತು. ರಾಜ್ಯದಲ್ಲಿ ಬಿಎಸ್ಪಿ ಶೇ 13, ಕಾಂಗ್ರೆಸ್ ಶೇ 7, ಇತರರು ಶೇ 7ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳಿತ್ತು.
ಬಿಜೆಪಿ ಮತ್ತೆ ಅಧಿಕಾರಕ್ಕೆ
ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಆದರೆ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನಗಳಲ್ಲಿ ಪಕ್ಷ ಜಯಗಳಿಸಲಿದೆ. ಭಾರತೀಯ ಜನತಾ ಪಕ್ಷ 223-235 ಸ್ಥಾನ ಗೆಲ್ಲಲಿದ್ದು, ಅಧಿಕಾರ ಗಳಿಸಲಿದೆ. ಅಖಿಲೇಶ್ ಯಾದವ್ ಪಕ್ಷ 145-157 ಸ್ಥಾನ ಗೆಲ್ಲಬಹುದು, 2017ಕ್ಕೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ ಎಂದಿದೆ. ಮಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು ತನ್ನ ನೆಲೆ ಕಳೆದುಕೊಂಡಿದ್ದು, 8 ರಿಂದ 16 ಸ್ಥಾನ ಗೆದ್ದರೆ ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಶೇಕಡಾವಾರು ಮತ ಗಳಿಕೆ:
2017ರಲ್ಲಿ ಶೇ 41.4 ರಷ್ಟು ಮತ ಗಳಿಸಿದ್ದ ಬಿಜೆಪಿ 2022ರ ಜನವರಿಯ ಸಮೀಕ್ಷೆಯಂತೆ ಶೇ 41.5 ರಷ್ಟು ಮತ ಗಳಿಸಲಿದೆ. ಮಿಕ್ಕಂತೆ ಸಮಾಜವಾದಿ ಪಕ್ಷ ಶೇ 33.3(2017ರಲ್ಲಿ ಶೇ 23.6), ಬಹುಜನ ಸಮಾಜ ವಾದಿ ಪಕ್ಷ ಶೇ 12.9 (ಶೇ 22.2), ಕಾಂಗ್ರೆಸ್ ಶೇ 7.1 (ಶೇ 6.3), ಇತರೆ ಶೇ 5.3( ಶೇ 6.5) ಮತಗಳಿಸುವ ನಿರೀಕ್ಷೆಯಿದೆ.
ಅವಧ್ ಪ್ರಾಂತ್ಯ
ಬಿಜೆಪಿ 73, ಎಸ್ಪಿ 42, ಬಿಎಸ್ಪಿ 1, ಕಾಂಗ್ರೆಸ್ 1, ಇತರೆ 1
ಬುಂದೇಲ್ ಖಂಡ್
ಬಿಜೆಪಿ 15, ಎಸ್ಪಿ 4, ಬಿಎಸ್ಪಿ 0, ಕಾಂಗ್ರೆಸ್ 0, ಇತರೆ 0
ಪೂರ್ವಾಂಚಲ್
ಬಿಜೆಪಿ 68, ಎಸ್ಪಿ 50, ಬಿಎಸ್ಪಿ 6, ಕಾಂಗ್ರೆಸ್ 2, ಇತರೆ 4
ಪಶ್ಚಿಮ ಉತ್ತರ ಪ್ರದೇಶ
ಬಿಜೆಪಿ 73, ಎಸ್ಪಿ 55, ಬಿಎಸ್ಪಿ 5, ಕಾಂಗ್ರೆಸ್ 2, ಇತರೆ 1
ಉತ್ತರ ಪ್ರದೇಶ ಚುನಾವಣೆಯ ಸಂಬಂಧ ಹಲವು ಚುನಾವಣಾಪೂರ್ವ ಸಮೀಕ್ಷೆಯನ್ನು ವಿವಿಧ ಸಂಸ್ಥೆಗಳು ನಡೆಸಿವೆ. ಎಲ್ಲದರಲ್ಲೂ ಬಿಜೆಪಿಯು ಮುನ್ನಡೆಯನ್ನು ಸಾಧಿಸಿಕೊಂಡು ಬರುತ್ತಿದೆ. ಕಳೆದ ಬಾರಿಯಷ್ಟು ಸೀಟು ಗೆಲ್ಲಲಾಗದಿದ್ದರೂ, ಅಲ್ಲಿ ಮತ್ತೆ ಬಿಜೆಪಿಯದ್ದೇ ಸರಕಾರ ಎಂದು ಸಮೀಕ್ಷೆಗಳು ಹೇಳುತ್ತಿವೆ.












Click it and Unblock the Notifications