ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲವನ್ನೂ ನೀವು ಇಲ್ಲೇ ಪಡೆದಿದ್ದೀರಿ, ಸ್ವಲ್ಪವಾದರೂ ಹಂಚಿ ನೆಮ್ಮದಿಯಾಗಿರಿ

By ಆರ್.ಟಿ. ವಿಠ್ಢಲಮೂರ್ತಿ
|
Google Oneindia Kannada News

ಪ್ರತಿಯೊಬ್ಬರು ಹುಟ್ಟಿನಿಂದ ಸಾಯುವವರೆಗೆ ಕಾಲಚಕ್ರದ ಜೊತೆ ಉರುಳುತ್ತಲೇ ಇರಬೇಕು, ಹಲವಾರು ಸಿಹಿಕಹಿ ಅನುಭವಗಳಿಗೆ ಮೈಯನ್ನು ಒಡ್ಡಿಕೊಳ್ಳಲೇಬೇಕು. ಆಗಲೇ ನಮ್ಮ ಬಾಳು ಕೂಡ ಪಕ್ವವಾಗುವುದು. ಈ ಅನುಭವಗಳನ್ನು ಪ್ರಬುದ್ಧ ಬರವಣಿಗೆಯ ಮೂಲಕ ಕಣ್ಣಿಗೆ ಕಟ್ಟುವಂತೆ ಕಥಾರೂಪದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಹೇಳುವವರಲ್ಲಿ ಅಗ್ರಗಣ್ಯ ಪತ್ರಕರ್ತರಲ್ಲಿ ಒಬ್ಬರು ಆರ್ ಟಿ ವಿಠ್ಠಲಮೂರ್ತಿಯವರು. ತಮ್ಮ ಬಾಲ್ಯದ ಹುಡುಗಾಟದಿಂದ ಹಿಡಿದು, ಮೂರು ದಶಕಗಳ ಕಾಲಾವಧಿಯಲ್ಲಿ ಹದಿನೇಳು ಮುಖ್ಯಮಂತ್ರಿಗಳನ್ನು ಮಾತನಾಡಿಸಿ ಬರೆದಿರುವ ಲೇಖನಗಳನ್ನು '50 ನಾಟ್ ಔಟ್' ಎಂಬ ಪುಸ್ತಕರೂಪದಲ್ಲಿ ಹೊರತರುತ್ತಿದ್ದಾರೆ. ಈ ರಸವತ್ತಾದ ಕಥೆಗಳನ್ನು ಒನ್ಇಂಡಿಯಾ ಕನ್ನಡ ಸರಣಿ ರೂಪದಲ್ಲಿ ಪ್ರಕಟಿಸುತ್ತಿದೆ - ಸಂಪಾದಕ.

ಹೊರಗೆ ದಟ್ಟ ಕತ್ತಲು... ಭರ್ರೋ ಅಂತ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಅದೇಕೋ ಏನೋ ಇದ್ದಕ್ಕಿದ್ದಂತೆ ಪಾಂಡು ನೆನಪಿಗೆ ಬಂದ.

ಎಲ್ಲ ಪಕ್ಷಗಳ ಆತ್ಮವಿಶ್ವಾಸ ನೋಡಿದರೆ ನೆನಪಾಗುವುದೇ ಎಬಿಸಿಡಿ!ಎಲ್ಲ ಪಕ್ಷಗಳ ಆತ್ಮವಿಶ್ವಾಸ ನೋಡಿದರೆ ನೆನಪಾಗುವುದೇ ಎಬಿಸಿಡಿ!

ಅವನು ನನ್ನ ತಮ್ಮ. ಹಲವು ಸಲ ನಾನು, ನನ್ನಣ್ಣ ಮಹೇಂದ್ರ ಸೇರಿ ಅವನನ್ನು, ರಿಯಲ್ ಸೋಷಲಿಸ್ಟ್ ಅಂದರೆ ನೀನೇ ಕಣೋ ಅಂತ ತಮಾಷೆ ಮಾಡುತ್ತಿರುತ್ತೇವೆ. ಈಗ ನಿಜವಾಗಿಯೂ ಅವನದು ಸಮಾಜವಾದಿ ಮನಸ್ಸೇ. ಅಂದರೆ ಏನೇ ಇದ್ದರೂ ಹಂಚಿಕೊಂಡು ತಿನ್ನುವುದು, ನನ್ನದೇನಿಲ್ಲ. ಎಲ್ಲವೂ ನಿಮ್ಮದೇ ಅಂತ ಇರುವುದನ್ನು ಹಂಚಿ ಕೈ ತೊಳೆದುಕೊಂಡು ಬಿಡುವುದು.

50 not out : Life and journey with politicians by RT Vittal Murthy

ಆದರೆ ಬಾಲ್ಯದಲ್ಲಿ ಅವನ ಸಮಾಜವಾದೀ ಮನ:ಸ್ಥಿತಿ ನಮ್ಮನ್ನು ತುಂಬ ಸಲ ಪೇಚಿಗೆ ಸಿಲುಕಿಸಿಬಿಡುತ್ತಿತ್ತು. ಚಿಕ್ಕವನಿದ್ದಾಗ ಸಾಗರದ ಸಂತ ಜೋಸೆಫರ ಕಾನ್ವೆಂಟ್ ಶಾಲೆಯಲ್ಲಿ ನಮ್ಮಣ್ಣ ಮಹೇಂದ್ರ, ನಾನು ಮತ್ತು ಪಾಂಡು ಓದುತ್ತಿದ್ದೆವು. ಎರಡನೇ ತರಗತಿಗೆ ಬಂದಾಗ ಅವನಿಗೊಂದು ವಿಶೇಷ ಖಯಾಲಿ ಆರಂಭವಾಗಿತ್ತು. ಅದೆಂದರೆ ಮಳೆಗಾಲದಲ್ಲಿ ಮಧ್ಯಾಹ್ನ ಊಟಕ್ಕೆ ಬರುವಾಗ ಅವನ ಎರಡೂ ಬಗಲುಗಳಲ್ಲಿ ಬಣ್ಣ ಬಣ್ಣದ ಕೊಡೆಗಳಿರುತ್ತಿದ್ದವು. ಅದರಲ್ಲೂ ನೀಲಿ-ಹಳದಿ ಬಣ್ಣದ ಕೊಡೆಗಳು.

ಬರು-ಬರುತ್ತಿದ್ದಂತೆಯೇ ಅವನು, ಮಹೇಂದ್ರಣ್ಣ ನಿನಗೆರಡು, ವಿಠ್ಠಣ್ಣನಿಗೆರಡು ಛತ್ರಿ ತಂದಿದ್ದೇನೆ. ನನಗೂ ಎರಡೇ ಕಣ್ರೋ ಅನ್ನುತ್ತಿದ್ದ. ಆಗೆಲ್ಲ ಮಲೆನಾಡಿನ ಮಳೆ ಎಂದರೆ ಅಯ್ಯೋ, ಅದು ಸುರಿಯುವ ರಭಸಕ್ಕೆ ಚರಂಡಿಗಳು ತುಂಬಿ, ರಸ್ತೆಯುದ್ದ ಹರಡಿ ನದಿಯೇ ಹರಿಯುತ್ತಿದೆಯೇನೋ ಅನ್ನಿಸುತ್ತಿತ್ತು. ಮಳೆಯ ರಭಸ ಹಾಗಿರುತ್ತಿತ್ತು. ಮಳೆಯ ಹೊಡೆತಕ್ಕೆ ಚರಂಡಿ ಪಕ್ಕದಲ್ಲೇ ಊಟೆಗಳು ಒಡೆದು, ಕಾರಂಜಿಯಂತೆ ಚಿಮ್ಮಿ, ಚಿಟಗುಪ್ಪೆಗಳು ಚಿಳ್ ಪಿಳ್ ಅಂತ ನೆಗೆಯುತ್ತಿದ್ದರೆ ಅದೆಂತಹ ಮನಮೋಹಕ ದೃಶ್ಯ ಅನ್ನುತ್ತೀರಿ? ವಿಪರ್ಯಾಸವೆಂದರೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಅದನ್ನು ನೋಡಲೇ ನನಗೆ ಸಾಧ್ಯವಾಗಿಲ್ಲ.

ಅಂದ ಹಾಗೆ, ನಮಗೋ ಆ ಮಳೆಯಿಂದ ಬಚಾವಾಗಲು ಬಣ್ಣ ಬಣ್ಣದ ಛತ್ರಿ ತೆಗೆದುಕೊಳ್ಳಬೇಕು ಎಂಬ ಆಸೆ. ಆದರೆ ಕೊಡಿಸಲು ಅಪ್ಪನ ಬಳಿ ಅಷ್ಟು ದುಡ್ಡಿರುತ್ತಿರಲಿಲ್ಲ. ಹೀಗಾಗಿ ಪ್ಲಾಸ್ಟಿಕ್ ರೈನ್ ಕೋಟು ಕೊಡಿಸುತ್ತಿದ್ದರು. ಪಾಂಡುಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಅಪ್ಪ ಕೊಡಿಸದಿದ್ದರೇನು? ತಗೊಳ್ರಣ. ನಾನು ತಂದಿದೀನಿ ಅಂತ, ಒಂದಲ್ಲ, ಎರಡು ಛತ್ರಿಗಳನ್ನು ಕೊಟ್ಟು ಬಿಡುತ್ತಿದ್ದ. ಅವ್ಯಾವುವೂ ಅವನವಲ್ಲ.

50 not out : Life and journey with politicians by RT Vittal Murthy

ಆಗೆಲ್ಲ ಮಳೆಗಾಲದಲ್ಲಿ ದುಡ್ಡಿದ್ದವರ ಮಕ್ಕಳು ಶಾಲೆಗೆ ತೆಗೆದುಕೊಂಡು ಬರುತ್ತಿದ್ದ ಛತ್ರಿಗಳು. ಕ್ಲಾಸ್ ರೂಮಿಗೆ ಎಂಟ್ರಿ ಆಗುತ್ತಿದ್ದಂತೆಯೇ ನಾಲ್ಕಡಿ, ನಾಲ್ಕಡಿ ಗಾತ್ರದ ಮರದ ಚೌಕಟ್ಟೊಂದರಲ್ಲಿ ಅದನ್ನಿಟ್ಟು ಪಾಠ ಕೇಳಲು ವಿದ್ಯಾರ್ಥಿಗಳು ಒಳಗೆ ಹೋದರೆ, ಇವನು ಮಧ್ಯಾಹ್ನ ಬರುವಾಗ ನಿರಾಯಾಸವಾಗಿ ಅವುಗಳ ಪೈಕಿ ಹಲವನ್ನು ಎತ್ತಿಕೊಂಡು ಬಂದು ಬಿಡುತ್ತಿದ್ದ.

ಶುರುವಿನಲ್ಲಿ ನಮಗೆ ಗಲಿಬಿಲಿ. ಆದರೆ ಕ್ರಮೇಣ ಅದು ಅಭ್ಯಾಸವಾಗಿ ಹೋಯಿತು. ಅವನು ಛತ್ರಿ ತರುವುದು, ನಾವು ಅವನ ತರಗತಿಗೆ ಹೋಗಿ ವಾಪಸ್ಸು ಅದೇ ಜಾಗದಲ್ಲಿ ಇಟ್ಟು ಏನೂ ಗೊತ್ತಿಲ್ಲದಂತೆ ಬಂದು ಬಿಡುವುದು. ಒಂದೊಂದು ಸಲ ಅವನು ರೊಚ್ಚೆ ಹಿಡಿದು ಬಿಡುತ್ತಿದ್ದ. ಅರೇ, ದುಡ್ಡಿದ್ದರೆ ನಾವೂ ಅಂತಹ ಛತ್ರಿಯನ್ನೇ ತೆಗೆದುಕೊಳ್ಳುತ್ತಿದ್ದಿವಿ. ಆದರೆ ನಮ್ಮಪ್ಪನ ಬಳಿ ದುಡ್ಡಿಲ್ಲ. ಹೀಗಾಗಿ ಎತ್ತಿಕೊಂಡು ಬರುತ್ತೇನೆ. ತಪ್ಪೇನು? ಅನ್ನುತ್ತಿದ್ದ.

ಆದರೆ ಅದು ಕಳ್ಳತನ ಪಾಂಡು. ತಪ್ಪು ಕಣೋ ಅಂತ ಮನವರಿಕೆ ಮಾಡಿಕೊಡುವುದರಲ್ಲಿ ನಮಗೆ ಸಾಕು ಬೇಕಾಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆಯೇ ಆ ಪಾಂಡು ಬದಲಾಗಿ ಬಿಟ್ಟ. ಹೊರಗಿನಿಂದ ಹೊತ್ತುಕೊಂಡು ಬರುವುದನ್ನು ಬಿಟ್ಟು, ತನ್ನಲ್ಲಿರುವುದನ್ನೇ ಮತ್ತೊಬ್ಬರಿಗೆ ಕೊಟ್ಟು ಖುಷಿ ಪಡುವುದನ್ನು ರೂಢಿ ಮಾಡಿಕೊಂಡ. ಹೇಗಿದ್ದವನು ಹೇಗಾದ? ಎಂತಹ ಮನಸ್ಸು ಬೆಳೆಸಿಕೊಂಡ ಅಂತ ನೆನಪಿಗೆ ಬಂದಾಗಲೆಲ್ಲ ಅಚ್ಚರಿಯಾಗುತ್ತದೆ.

50 not out : Life and journey with politicians by RT Vittal Murthy

ಅವನು ಅಂತಲ್ಲ, ನಾವು, ನಮ್ಮ ಓರಗೆಯ ಹಲ ಮಂದಿಯನ್ನು ನೋಡಿ ಮುಖ ವಾರೆ ಮಾಡಿ ನಗುತ್ತಿದ್ದ ಜನರಿದ್ದರು. ಇವು ಉದ್ದಾರ ಆಗುವ ಜಾಯಮಾನದವೇ ಅಲ್ಲ ಎನ್ನುತ್ತಿದ್ದರು. ಬೇರೆ ಯಾರೂ ಅಲ್ಲ. ನಮ್ಮವರು ಅಂತ ಅಂದುಕೊಂಡವರೇ ಅಂತಹ ವ್ಯಂಗ್ಯದ ಮಾತುಗಳನ್ನಾಡಿ ಬಿಡುತ್ತಿದ್ದರು. ನಮ್ಮ ವಿಷಯದಲ್ಲಿ ಅಂತಹ ಮಾತುಗಳು ಕೇಳಿ ಬಂದಾಗ ನಮ್ಮ ತಾಯಿ ಕಣ್ಣೀರು ಹಾಕಿಕೊಂಡು, ದೇವರೇ, ಈ ಮಕ್ಕಳನ್ನು ಹೇಗಾದರೂ ದಡ ದಾಟಿಸಪ್ಪ, ದಡ ದಾಟುವ ತನಕ ಸಲಹುವ ಶಕ್ತಿ ಕೊಡಪ್ಪಾ ಅಂತ ಬೇಡಿಕೊಳ್ಳುತ್ತಿದ್ದರು.

ಮುಂದೆ ಬದುಕಿಗಾಗಿ ಪರದಾಡಿದ ದಿನಗಳನ್ನು ನೆನೆದರೆ ಇವತ್ತು ಅಚ್ಚರಿಯಾಗುತ್ತದೆ. ಆದರೆ ಒಂದಂತೂ ನಿಜ. ಆ ಬಡತನದಲ್ಲಿ ಇದ್ದ ಸುಖ, ಇವತ್ತು ನಿಶ್ಚಿತವಾಗಿಯೂ ಇಲ್ಲ. ಒಂದು ಸಲ ನಾನು, ಗೆಳೆಯ ಜಿ.ಎಂ.ಕುಮಾರ್(ಈಗ ಬಿಟಿವಿ ಮುಖ್ಯಸ್ಥರು)ವಿಧಾನಸೌಧದಲ್ಲಿ ತಿರುಗುತ್ತಿರುವಾಗ ಸಿದ್ಧರಾಮಯ್ಯ ಅವರ ಕೊಠಡಿಗೆ ಹೋದೆವು. ಆಗವರು ರಾಜ್ಯದ ಉಪಮುಖ್ಯಮಂತ್ರಿ.

ನಮ್ಮನ್ನು ನೋಡುತ್ತಲೇ, ಬರ್ರಯ್ಯ, ಒಳ್ಳೇ ಹುಳ್ಳಿ ಕಟ್ಟು (ಹುರುಳಿ ಕಟ್ಟು) ಸಾರು ಇದೆ. ಊಟ ಮಾಡಿ ಎಂದರು ಸಿದ್ಧರಾಮಯ್ಯ. ನಮಗೆ ಆಗೆಲ್ಲ ಹಸಿವು ಎಂದರೆ ಹಸಿವು. ಅವರು ಹೇಳುವುದೇ ತಡ, ಸರಿ ಸಾರ್ ಎನ್ನುತ್ತಿದ್ದೆವು. ಒಂದೊಂದು ಸಲ ಹುರುಳಿ ಕಟ್ಟು ಸಾರು, ಪಲ್ಯ, ಅನ್ನವಾದರೆ, ಒಂದೊಂದು ಸಲ ಬಸ್ಸಾರು, ಮುದ್ದೆ ಜತೆಯಾಗುತ್ತಿತ್ತು. ನಾವು ಹೊಟ್ಟೆ ತುಂಬ ಊಟ ಮಾಡುತ್ತಿದ್ದೆವು. ಸಿದ್ಧರಾಮಯ್ಯ ಅದನ್ನು ನೋಡಿ ಸಂತೋಷಪಡುತ್ತಿದ್ದರು. ಸಾಕು ಎಂದರೂ ಬಿಡದೆ, ಲೇಯ್, ಆ ಹುಡುಗರಿಗೆ ಇನ್ನೂ ಸ್ವಲ್ಪ ಬಡಿಸ್ರೋ ಎಂದು ಸಹಾಯಕರಿಗೆ ಹೇಳುತ್ತಿದ್ದರು.

50 not out : Life and journey with politicians by RT Vittal Murthy

ಸಾರ್, ಎಲ್ಲ ನಾವೇ ಊಟ ಮಾಡಿದರೆ ನಿಮಗೆಲ್ಲ ಏನು ಸಾರ್? ಅಂತ ನಾವು ಪ್ರಶ್ನಿಸಿದರೆ, ಬದುಕಿನಲ್ಲಿ ನಾವೇನೂ ತಂದಿರಲ್ಲ. ಹೀಗಾಗಿ ಪಡೆದಿದ್ದರಲ್ಲಿ ಸ್ವಲ್ಪವಾದರೂ ಹಂಚಿ ಸು:ಖ ಪಡಬೇಕು. ಅದಕ್ಕೇ ಹೇಳಿದೆ ಎಂದು ಗಂಭೀರವಾಗಿ ಹೇಳುತ್ತಿದ್ದರು.

ವಿಠ್ಠಲಮೂರ್ತಿ ಕಾಲಂ : ಸಂಕಟ ಹಾಗೂ ಸಂತಸದ ಮಧ್ಯೆ ಸಿದ್ದುವಿಠ್ಠಲಮೂರ್ತಿ ಕಾಲಂ : ಸಂಕಟ ಹಾಗೂ ಸಂತಸದ ಮಧ್ಯೆ ಸಿದ್ದು

ಅಂದ ಹಾಗೆ ಸಿದ್ಧರಾಮಯ್ಯ ಅವರ ಖಾಯಂ ಬಾಣಸಿಗ ಪುಟ್ಟೇಗೌಡ ಅಂತಿದ್ದಾರೆ. ಪುಣ್ಯಾತ್ಮನ ಕೈಗೆ ಅದೇನು ಅಮೃತವೇ ಮೆತ್ತಿಕೊಂಡಿದೆಯೋ ಏನೋ? ಅದೆಷ್ಟು ದಿವ್ಯವಾದ ಅಡುಗೆ ಎನ್ನುತ್ತೀರಿ? ಹೀಗಾಗಿ ಸಿದ್ಧರಾಮಯ್ಯ ಅವರ ಜತೆ ಊಟ ಮಾಡುವ ಅವಕಾಶ ಸಿಕ್ಕಾಗ ನಾವು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ.

ಯಾಕೆಂದರೆ ಬಜೆಟ್ ವಿಷಯದ ಬಗ್ಗೆ ಏನೇ ಅನುಮಾನಗಳಿದ್ದರೂ ನಾವು ಸಿದ್ಧರಾಮಯ್ಯ ಅವರ ಬಳಿ ಓಡುತ್ತಿದ್ದಿವಿ. ಸಹಜವಾಗಿಯೇ ಆಗೆಲ್ಲ ಪುಟ್ಟೇಗೌಡರ ಅಮೃತ ಮೆತ್ತಿದ ಕೈಯಡುಗೆ ಸಿಗುತ್ತಿತ್ತು. ಅಂದ ಹಾಗೆ ಸಿದ್ಧರಾಮಯ್ಯ, ಹರಟೆ ಕೊಚ್ಚುತ್ತಾ ಕೂರುವ ಜಾಯಮಾನದವರಲ್ಲ. ಆದರೆ ಸಾರ್, ಬಜೆಟ್ ಬಗ್ಗೆ ಇಂತಹ ವಿಷಯ ನಮಗೆ ಅರ್ಥವಾಗುತ್ತಿಲ್ಲ ಎಂದರೆ ಒಬ್ಬ ಮೇಷ್ಟ್ರ ರೀತಿಯಲ್ಲಿ : ಬಜೆಟ್ ಹೇಗಿರಬೇಕು? ಎಂಬುದರಿಂದ ಹಿಡಿದು, ಬಜೆಟ್ ನಲ್ಲಿ ವಿಂಗಡಿಸುವ ಪ್ಲಾನ್ ಅಂದರೆ ಏನು? ನಾನ್ ಪ್ಲಾನ್ ಅಂದರೆ ಏನು? ಪ್ಲಾನ್ ಗೇ ಯಾಕೆ ಹೆಚ್ಚು ದುಡ್ಡನ್ನು ಮೀಸಲಿಡಬೇಕು? ಇಡದಿದ್ದರೆ ರಾಜ್ಯದ ಅಭಿವೃದ್ಧಿ ಹೇಗೆ ಕುಂಠಿತವಾಗುತ್ತದೆ? ಅಂತ ನಮ್ಮ ಮಿದುಳಿನಲ್ಲಿ ಸೆಟ್ಲ್ ಆಗುವ ರೀತಿ ವಿವರಿಸುತ್ತಿದ್ದರು. ವಿರೋಧ ಪಕ್ಷದ ನಾಯಕರಾದಾಗಲೂ ಅಷ್ಟೇ.

ನಾನು, ಶಿವರಾಜು ಸೇರಿದಂತೆ ಹಲವರು ಕುಮಾರಪಾರ್ಕ್ ನಲ್ಲಿದ್ದ ಅವರ ಮನೆಗೆ ಹೋಗಿ ಬಿಡುತ್ತಿದ್ದೆವು. ಅವರ ಸ್ವಭಾವವೆಂದರೆ, ಏನೇ ಇದ್ದರೂ ನೇರವಾಗಿ ಕೇಳಿಬಿಡಬೇಕು. ಸಾರ್, ಈ ವಿಷಯ ನಮಗೆ ಗೊತ್ತಾಗುತ್ತಿಲ್ಲ. ಹೇಳಿ ಎಂದು ಸ್ಪಷ್ಟವಾಗಿ ಕೇಳಿದರೆ, ಅಷ್ಟೇ ಅಸ್ಖಲಿತವಾಗಿ ವಿವರಿಸುತ್ತಾ ಹೋಗುತ್ತಿದ್ದರು. ಬಜೆಟ್ ವಿಷಯದಲ್ಲಂತೂ ಅವರ ವಿವರಣೆ ಎಷ್ಟು ಅದ್ಭುತವಾಗಿರುತ್ತಿತ್ತು ಎಂದರೆ ಸುಮ್ಮನೆ ಕೇಳುತ್ತಾ ಕೂತು ಬಿಡುತ್ತಿದ್ದೆವು.

ಆಗೆಲ್ಲ, ಸಿದ್ಧರಾಮಯ್ಯ ಅವರ ಆಪ್ತರಾದ ನಾರಾಯಣ್ ಅರ್ಧ ಗಂಟೆಗೊಮ್ಮೆ ಟೀ ತಂದುಕೊಡುತ್ತಿದ್ದರು, ಹೀಗೆ ಮೂರ್ನಾಲ್ಕು ಬಾರಿ ಅದು ರಿಪೀಟ್ ಆಗುವಂತೆ ಸಿದ್ಧರಾಮಯ್ಯ ಅವರ ಆಪ್ತ ಸಹಾಯಕ ವೆಂಕಟೇಶ್ ನೋಡಿಕೊಳ್ಳುತ್ತಿದ್ದರು. ಅದೂ ಅಷ್ಟೇ ದಿವ್ಯವಾದ ಟೀ. ನಾವು ಆ ಅದ್ಭುತ ಟೀ ಕುಡಿಯುತ್ತಾ, ಸಿದ್ಧರಾಮಯ್ಯ ಅವರ ಬಳಿ ಬಜೆಟ್ ಪಾಠ ಕೇಳಿಸಿಕೊಳ್ಳುತ್ತಾ ಎಷ್ಟೋ ಹೊತ್ತು ಕುಂತಿರುತ್ತಿದ್ದೆವು.

ಬಾಲ್ಯದಲ್ಲಂತೂ ನಾನು ಹೆಚ್ಚು ಪಾಠ ಕೇಳಿಸಿಕೊಂಡವನೇ ಅಲ್ಲ. ಕಾನ್ವೆಂಟ್ ನಲ್ಲಿ ಓದುತ್ತಿದ್ದಾಗ ಮೇರಿ ಟೀಚರ್ ಶ್ರಮದಿಂದಾಗಿ ಅಚ್ಚುಕಟ್ಟಾಗಿ ಕನ್ನಡ ಕಲಿತೆ. ಪಿಯೂಸಿಗೆ ಬಂದಾಗ ಕರಿಯಪ್ಪ ಅವರ ಪಾಠ ಕೇಳಿ ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಐ ಕ್ಯೂ ಕಡಿಮೆ ಇದ್ದರೂ ತೊಂದರೆಯಿಲ್ಲ. ಆದರೆ ಎಂತಹ ಸಂದರ್ಭದಲ್ಲೂ ನುಗ್ಗಬೇಕು ಎಂಬ ಆತ್ಮವಿಶ್ವಾಸವನ್ನು ಇಂಗ್ಲೀಷ್ ಪ್ರಾಧ್ಯಾಪಕ ವಿ.ಗಣೇಶ್ ಅವರಿಂದ ಬೆಳೆಸಿಕೊಂಡೆ.

ಸಾಗರದ ಎಲ್.ಬಿ.ಕಾಲೇಜಿಗೆ ಬಂದಾಗ ನನಗೆ ಇಷ್ಟವಾಗುತ್ತಿದ್ದ ಲೆಕ್ಚರರ್ ಅಂದರೆ ಜಿ.ಎಸ್.ಭಟ್ಟರು. ಅವರು ನನ್ನ ಬರವಣಿಗೆಯನ್ನು ನೋಡಿ, ನೀನು ಏನನ್ನಾದರೂ ಸಾಧಿಸಬಲ್ಲೆ ಎಂದು ಧೈರ್ಯ ತುಂಬುತ್ತಿದ್ದರು. ಹೀಗೆ ಅವರೆಲ್ಲ ನನ್ನ ಬದುಕಿನ ಒಂದೊಂದು ಹಂತವನ್ನು ತಮ್ಮ ಅನುಭವ, ಪ್ರೀತಿಯ ಮೂಲಕ ದಾಟಿಸಿದರು.

ಪತ್ರಕರ್ತನಾಗಿ ಕೆಲಸ ಮಾಡುವಾಗ, ಅದರಲ್ಲೂ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನಂತೆ (ಪತ್ರಿಕೆಗೆ ಏಕೈಕ ಕರೆಸ್ಟಾಂಡೆಂಟು) ಆದಾಗ ಬಜೆಟ್ ಎಂಬುದು ಕಬ್ಬಿಣದ ಕಡಲೆಯಂತಾಗಿ ಬಿಡುತ್ತದೆ. ಹೀಗಾಗಿ ಅದನ್ನು ಅರ್ಥ ಮಾಡಿಕೊಳ್ಳಲೇ ಹಲವು ವರ್ಷಗಳು ಬೇಕಾಗುತ್ತವೆ. ಆದರೆ ಸಿದ್ಧರಾಮಯ್ಯ ಬಜೆಟ್ ಎಂಬ ಟಫ್ ವಿಷಯವನ್ನು ಎಷ್ಟು ಚಂದಗೆ ಅರ್ಥ ಮಾಡಿಸಿದರು ಎಂದರೆ, ನಾವೀಗ ಇಡೀ ಬಜೆಟ್ ಓದಿ, ಸುದ್ದಿ ಮಾಡಲು ಮೂರರಿಂದ ನಾಲ್ಕು ಗಂಟೆ ಮಾತ್ರ ತೆಗೆದುಕೊಳ್ಳುತ್ತೇವೆ.

ನೋ, ಡೌಟ್. ನಿಶ್ಚಿತವಾಗಿಯೂ ಆ ವಿಷಯ ನಮಗೆ ಸುಲಿದ ಬಾಳೇಹಣ್ಣಿನ ತರ ನಿರಾಳವಾಗುವಂತೆ ಮಾಡಿದವರು ಸಿದ್ಧರಾಮಯ್ಯ. ನಾವು ಪತ್ರಿಕೆಯಲ್ಲಿ ಬರೆಯುವಾಗ ಅವರು ಕೈಗೊಳ್ಳುವ ಕೆಲ ನಿರ್ಧಾರಗಳನ್ನು ಒಪ್ಪಬಹುದು, ಬಿಡಬಹುದು, ಟೀಕಿಸಬಹುದು. ಆದರೆ ಅವರಲ್ಲಿರುವ ಸಾಮಾಜಿಕ ನ್ಯಾಯದ ಕಳಕಳಿಯನ್ನು ಮಾತ್ರ ಒಪ್ಪದೇ ಇರಲು ಸಾಧ್ಯವಿಲ್ಲ.

ಯಾವುದೇ ವ್ಯಕ್ತಿಯಲ್ಲಿ ಒಪ್ಪಲಾಗದ ಅಂಶಗಳು ಇದ್ದಾಗ ಹೇಗೆ ಮುಲಾಜಿಲ್ಲದೆ ಹೇಳಬೇಕೋ? ಹಾಗೆಯೇ ಮೆಚ್ಚುವ ಅಂಶಗಳನ್ನೂ ಮುಕ್ತವಾಗಿ ಹೇಳಿಬಿಡಬೇಕು. ಯಾಕೆಂದರೆ ಪತ್ರಕರ್ತ ಎಂದರೆ ಕನ್ನಡಿಯೇ ಹೊರತು, ಸ್ವಯಂಭೂ ಲಿಂಗವಲ್ಲ. ಹಾಗಂತಲೇ ಇದನ್ನೆಲ್ಲ ಹೇಳಬೇಕೆನ್ನಿಸಿತು.

English summary
Everybodies life is like an open book. You have to fill the empty sheets with your life experience. R T Vittal Murthy, one of the best writers in Kannada journalism arena, has shared his rich experience and association with 17 chief minister of Karnataka. The articles will be published in '50 Not Out' book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X