Maha Kumbh Mela: ₹3,000 ಕೋಟಿ ಆಸ್ತಿ ಬಿಟ್ಟು ಬಂದ ಈ ಬಿಸಿನೆಸ್‌ಮನ್ ಬಾಬಾ ಕಥೆ ಗೊತ್ತಾ?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಹಲವು ಅಪರೂಪಗಳಿಗೆ ಸಾಕ್ಷಿಯಾಗಿದೆ. ಇಲ್ಲಿಗೆ ಬರುತ್ತಿರುವ ಭಕ್ತಾದಿಗಳ ಪೈಕಿ ಹಲವರು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿವರೆಗೆ ಐಐಟಿ ಬಾಬಾ, ಮೊನಾಲಿಸಾ ಸಖತ್ ಫೇಮಸ್ ಆಗಿದ್ದರು. ಇದೀಗ ಬಿಸಿನೆಸ್‌ಮನ್ ಬಾಬಾ ಹೆಸರಲ್ಲಿ ಮತ್ತೊಬ್ಬರು ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿದ್ದಾರೆ. ಇವರು ಬರೋಬ್ಬರಿ 3,000 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಉದ್ಯಮಿ ಎಂದು ಹೇಳಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಿಸಿನೆಸ್‌ಮನ್ ಬಾಬಾ ಹೆಸರು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಯಶಸ್ವಿ ಉದ್ಯಮಿಯಾಗಿದ್ದ ಇವರು ಆಧ್ಯಾತ್ಮಿಕ ಅನ್ವೇಷಕರಾಗಿ ಪರಿವರ್ತನೆಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಮೇಲೆ ಕೇಸರಿ ವಸ್ತ್ರಗಳನ್ನು ಧರಿಸಿ ಮತ್ತು ರುದ್ರಾಕ್ಷಿಯಿಂದ ಅಲಂಕರಿಸಲ್ಪಟ್ಟ ಅವರು ಹಿಂದೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಹೊಂದಿದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಅವರ ಅದ್ದೂರಿ ಜೀವನಶೈಲಿಯ ನಡುವೆಯೂ ಹಣವೊಂದೇ ನಿಜವಾದ ಶಾಂತಿ ತರಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಇವರ ಸಂದರ್ಶನದ ವಿಡಿಯೋವೊಂದು ವೈರಲ್ ಆಗುತ್ತಿದೆ. "ಕುಂಭಮೇಳದಲ್ಲಿ ಉದ್ಯಮಿಯಿಂದ ಉದ್ಯಮಿ ಬಾಬಾವರೆಗೆ" ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಅವರು ಮಹಾಕುಂಭಮೇಳದ ಮೈದಾನದಲ್ಲಿ ನಡೆಯುವುದು, ಭಕ್ತರೊಂದಿಗೆ ಮಾತನಾಡುವುದು, ಬಡವರಿಗೆ ತಮ್ಮ ಶಾಲನ್ನು ಉಡುಗೊರೆಯಾಗಿ ನೀಡುವುದು, ಸಾಧುಗಳಿಗೆ ಕಂಬಳಿಗಳನ್ನು ಹಂಚುವುದು ವಿಡಿಯೋದಲ್ಲಿದೆ.
ಈ ಬಾಬಾ ಬಗ್ಗೆ ಹಲವರು ಪರ ವಿರೋಧದ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರು ಎಂದಿಗೂ ನಿಜವಾದ ಬಡತನವನ್ನು ನೋಡಲಿಲ್ಲ, ಅದಕ್ಕಾಗಿಯೇ ಶ್ರೀಮಂತನಾಗಿ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಬಿಸಿನೆಸ್‌ಮನ್ ಆಗಿ ಸಾವಿರಾರು ಕೋಟಿ ಇದ್ದರೂ, ಅವರು ಒಂದು ಕಾಲದಲ್ಲಿ ಕಾರ್ಪೊರೇಟ್ ಪ್ರಪಂಚದ ಯಜಮಾನನಾಗಿದ್ದರೂ ಎಲ್ಲವನ್ನೂ ಬಿಟ್ಟುಬಿಡಲು ಅವರಿಗೆ ಏನು ಪ್ರೇರೇಪಿಸಿತು? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ. ಅಲ್ಲದೆ ಬೋರ್ಡ್‌ರೂಂಗಳಲ್ಲಿದ್ದ ಅವರು ಇಂದು ಭಜನೆಯ ಹಾದಿಯಲ್ಲಿರುವುದು ನಿಜಕ್ಕೂ ಕುತೂಹಲಕಾರಿ ಸಂಗತಿ ಎಂದಿದ್ದಾರೆ. ಆದರೆ ಆ ವ್ಯಕ್ತಿಯ ಸಂಪೂರ್ಣ ಹೆಸರು ಹಾಗೂ ಹೆಚ್ಚಿನ ವಿವರ ಗುಟ್ಟಾಗಿಯೇ ಇದೆ.
ನಿನ್ನೆ ಕುಂಭಮೇಳ ಪ್ರದೇಶದಲ್ಲಿ ಎರಡು ಅಗ್ನಿ ಅವಘಡಗಳು ವರದಿಯಾಗಿದ್ದು, ಯಾವುದೇ ಸಾವುನೋವು ದಾಖಲಾಗಿಲ್ಲ. ಸೆಕ್ಟರ್ 6ರ ಬಿಂದು ಮಾಧವ್ ಮಾರ್ಗದಲ್ಲಿರುವ ಪೊಲೀಸ್ ಲೈನ್ ಕ್ಯಾಂಪ್ ಕಚೇರಿಯಲ್ಲಿ ಮೊದಲ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಕಾವಲು ಗೋಪುರದಲ್ಲಿ ನಿಯೋಜಿಸಲಾಗಿದ್ದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕೆ ವ್ಯಕ್ತವಾಗಿದೆ.
ಇಂದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ ಕುಂಭಮೇಳ ಪ್ರಾರಂಭವಾದಾಗಿನಿಂದ 491.4 ದಶಲಕ್ಷಕ್ಕೂ ಹೆಚ್ಚು ಭಕ್ತರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.












Click it and Unblock the Notifications