ಬೆಂಗಳೂರಿನಲ್ಲಿ ನಿಮ್ಮ ಜಾಗ ಭೂ ಒತ್ತುವರಿ ರಾಕೆಟ್ ಸುಳಿಗೆ ಸಿಲುಕಿರಬಹುದು ಹುಷಾರ್!
ಬೆಂಗಳೂರು, ಸೆ. 03: ರಾಜಧಾನಿಯಲ್ಲಿ ಯಾರದ್ದೋ ಆಸ್ತಿಗೆ ಇನ್ಯಾರೋ ಮಾಲೀಕರನ್ನು ಸೃಷ್ಟಿಸುವುದು ಆ ದುರಾಳ ಗ್ಯಾಂಗ್ ಗೆ ಐದು ನಿಮಿಷದ ಕೆಲಸ. ಇನ್ನೂ ಕೊಟ್ಟಿ ದಾಖಲೆಗಳನ್ನು ಹಿಡಿದು ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ತಮ್ಮದೇ ಆಸ್ತಿ ಎಂಬಂತೆ ಆದೇಶವನ್ನು ಪಡೆಯುವಲ್ಲಿ ನಿಸ್ಸೀಮರು. ಈ ಖತರ್ ನಾಕ್ ಗ್ಯಾಂಗ್‌ಗೆ ಕೈ ಜೋಡಿಸುವ ದುರಾಸೆಯುಳ್ಳ ಸಾರ್ವಜನಿಕ ಅಭಿಯೋಜಕರೇ ಸಾಥ್! ಬೆವರು ಹನಿ ಹರಿಸಿ ಸಂಪಾದಿಸಿದ ಆಸ್ತಿಗೆ ನಕಲಿ ವ್ಯಕ್ತಿಗಳೇ ರಿಯಲ್ ಮಾಲೀಕರನ್ನಾಗಿ ಮಾಡುವ ಈ ಜಾಲದ ಬಗ್ಗೆ ಎಚ್ಚರವಿರಲಿ. ನಿಮ್ಮದು ಬೆಂಗಳೂರಿನಲ್ಲಿ ಆಸ್ತಿ ಇದ್ದರೆ, ನಿಮ್ಮ ಆಸ್ತಿ ಬಗ್ಗೆ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆಯಾ ಮೊದಲು ಪರಿಶೀಲಿಸಿ ಎಚ್ಚೆತ್ತುಕೊಳ್ಳಿ. ಯಾಕೆಂದರೆ ನ್ಯಾಯ ವ್ಯವಸ್ಥೆಗೆ ಮಣ್ಣೆರಚುವ ಭೂ ಲೂಟಿ ಗ್ಯಾಂಗ್‌ನ ಜಾಲಕ್ಕೆ ಸಿಲುಕಿದೆ ಆಸ್ತಿ ಉಳಿಸಿಕೊಳ್ಳಲು ಜೀವ ಪಣಕ್ಕೆ ಇಡಬೇಕಾದೀತು !
ಹೌದು. ಬೆಂಗಳೂರಿನಲ್ಲಿ ಯಾರದ್ದೋ ಅಸ್ತಿಗೆ ನಕಲಿ ದಾಖಲೆಗಳನ್ನು ಸಿವಿಲ್ ವ್ಯಾಜ್ಯ ಇತ್ಯರ್ಥ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಆಸ್ತಿ ಲಪಟಾಯಿಸುವ ಸಕ್ರಿಯ ಜಾಲ ಸಿಐಡಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಭೂ ವ್ಯಾಜ್ಯ ಪ್ರಕರಣದಲ್ಲಿ ಈ ಭೂ ಲೂಟಿ ಗ್ಯಾಂಗ್ ಕಾರ್ಯ ಜಾಲವನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪತ್ತೆ ಮಾಡಿದ್ದರು. ಇದೇ ರೀತಿ ನಡೆದಿರುವ ಅಕ್ರಮ ಬಗ್ಗೆ ತನಿಖೆ ನಡೆಸುವಂತೆ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದೀಗ ಸಿಐಡಿ ಪೊಲೀಸರು ಕೊಟ್ಟಿ ದಾಖಲೆ ಮಾಡಿ ಲಾಸ್ತಿ ಲಪಟಾಯಿಸುವ ಲೂಟಿ ಗ್ಯಾಂಗ್ ಬೆನ್ನಿಗೆ ಬಿದ್ದಿದ್ದಾರೆ. ಮಾತ್ರವಲ್ಲ ಈವರೆಗೂ ಹನ್ನೆರಡು ಮಂದಿಯನ್ನು ಬಂಧಿಸಿದ್ದಾರೆ. ಅದರಲ್ಲಿ ಒಬ್ಬ ನಿವೃತ್ತ ಸರ್ಕಾರಿ ಅಭಿಯೋಜಕ ಸೇರಿ ಕೆಲ ವಕೀಲರು ಶಾಮೀಲಾಗಿರುವುದನ್ನು ಪತ್ತೆ ಮಾಡಿದ್ದಾರೆ. ಡಜನ್ ಗಟ್ಟಲೇ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದಾರೆ.
ಲೂಟಿಗೆ ಸಿಂಪಲ್ ಪ್ಲಾನ್: ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಅಸಹಕಾಕರು ಮಾಲೀಕರಾಗಿರುವ ಆಸ್ತಿಗಳನ್ನು ಪತ್ತೆ ಮಾಡುತ್ತಾರೆ. ಅದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಮೂಲ ಮಾಲೀಕರೇ ಒತ್ತುವರಿದಾರರು ಎಂದು ಸಿವಿಲ್ ನ್ಯಾಯಾಲಯದಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವು ಮಾಡುವಂತೆ ಕೋರಿ ಕೋರ್ಟ್ ಮೊರೆ ಹೋಗುತ್ತಾರೆ. ತಮ್ಮ ಪ್ರಭಾವ ಬೀರಿ ತಮಗೆ ಅನುಕೂಲ ಆಗುವಂತಹ ಆದೇಶವನ್ನು ಪಡೆಯುತ್ತಾರೆ. ಈ ಆದೇಶವನ್ನು ಹಿಡಿದು ಪೊಲೀಸರ ನೆರವಿನಿಂದಲೇ ಅಸಲಿ ಮಾಲೀಕರನ್ನು ಹೊರ ಹಾಕುತ್ತಾರೆ.

ಆನಂತರ ಇತ್ಯರ್ಥ ಕ್ಕೆ ಬಂದರೆ ವಿವಾದ ಬಗೆ ಹರಿಸಿಕೊಂಡು ಹಣ ಸುಲಿಗೆ ಮಾಡುತ್ತಾರೆ. ಇಲ್ಲವೇ ಆಸ್ತಿಯನ್ನೇ ಲಪಟಾಯಿಸಿ ಟೋಪಿ ಹಾಕುತ್ತಾರೆ. ಕೋರ್ಟ್ ನಲ್ಲಿ ಕೊಡುವ ಆದೇಶವನ್ನೇ ಇಟ್ಟುಕೊಂಡು ಆಟ ಆಡುವ ಈ ಗ್ಯಾಂಗ್ ಗೆ ನೂರಾರು ಆಸ್ತಿ ಮಾಲೀಕರು ನರಕ ಅನುಭವಿಸುತ್ತಿದ್ದಾರೆ. ಇಂತಹ ಬರೋಬ್ಬರಿ 118 ಕೇಸುಗಳ ಈವರೆಗೂ ದಾಖಲಾಗಿವೆ. ಸುಮಾರು 118 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈವರೆಗೂ ಮೋಸ ಮಾಡಿರುವುದು ಬೆಳಕಿಗೆ ಬಂದಿವೆ. ಬೆಳಕಿಗೆ ಬರದ ಅದೆಷ್ಟು ಪ್ರಕರಣಗಳು ಇನ್ನೂ ಇವೆಯೋ ದೇವರೇ ಬಲ್ಲ. ಸದ್ಯ ಸಿಐಡಿ ಪೊಲೀಸರು ಕಳೆದ ಒಂದು ವರ್ಷದಿಂದ 118 ಪ್ರಕರಣ ಪತ್ತೆ ಮಾಡಿ ಮೂಲ ಆಸ್ತಿ ಮಾಲೀಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಜಾಲದಲ್ಲಿ ಸಕ್ರಿಯವಾಗಿದ್ದ ಹನ್ನೆರಡು ಮಂದಿಯನ್ನು ಬಂಧಿಸಿದ್ದಾರೆ.
ಈ ಜಾಲ ಬೆಳಕಿಗೆ ತಂದ ಹೈಕೋರ್ಟ್: ಕೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿ ಲಪಟಾಯಿಸುವ ಜಾಲ ಬೆಳಕಿಗೆ ಬಂದಿದ್ದು ಒಂದು ಭೂ ವ್ಯಾಜ್ಯದಿಂದ. ಹೈಕೋರ್ಟ್‌ನ ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಇದೀಗ ಅನೇಕ ಮಂದಿ ಕಳೆದುಕೊಂಡ ಆಸ್ತಿಯನ್ನು ಪಡೆಯುವ ಖುಷಿಯಲ್ಲಿದ್ದಾರೆ. ಅಂದಹಾಗೆ 2020 ನವೆಂಬರ್‌ನಲ್ಲಿ ಶಾ ಹರಿಲಾಲ್ ಕಂಪನಿ ಬೆಂಗಳೂರು ಉತ್ತರ ತಾಲೂಕಿನಲ್ಲಿ ಹೊಂದಿದ್ದ 100 x 56 ವಿಸ್ತೀರ್ಣದ ಜಾಗವನ್ನು 1954 ರಿಂದಲೂ ಹೊಂದಿತ್ತು.

ಈ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಸಿವಿಲ್ ನ್ಯಾಯಾಲಯದಲ್ಲಿ ಡಿಕ್ರಿ ಪಡೆದಿದ್ದ ಗ್ಯಾಂಗ್, ದಾವೆ ಹೂಡಿದ ಕೆಲವೇ ದಿನಗಳಲ್ಲಿ ತನ್ನ ಹೆಸರಿಗೆ ಡಿಕ್ರಿ ಪಡೆದಿತ್ತು. ಆ ಬಳಿಕ ಜಾಗದಲ್ಲಿರುವ ಅತಿಕ್ರಮಣದಾರರನ್ನು ಪೊಲೀಸರ ಸಹಾಯದಿಂದ ತೆರವುಗೊಳಿಸುವಂತೆ ಮತ್ತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಾಗ ತೆರವುಗೊಳಿಸುವಂತೆ ಮಾಡಿದ್ದ ಆದೇಶ ನೋಡಿ ಹರಿಲಾಲ್ ಕಂಪನಿ ಮಾಲೀಕರು ಗಾಬರಿಯಾಗಿದ್ದರು. ಒತ್ತುವರಿ ತೆರವುಗೊಳಿಸುವುದನ್ನು ತಡೆಯುವಂತೆ ಪೊಲೀಸ್ ಮೊರೆ ಹೊಗಿದ್ದ ಕಂಪನಿ ಆ ಬಳಿಕ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಭೂ ಒತ್ತುವರಿ ತೆರವು ಮಾಡುವಂತೆ ಹಾಕಿದ್ದ ಅರ್ಜಿಯ ವಿಲೇವಾರಿ ಕುರಿತ ಕೋರ್ಟ್ ಪ್ರಕ್ರಿಯೆಯ ಬಗ್ಗೆ ಅನುಮಾನಗೊಂಡಿದ್ದರು. ಕೋರ್ಟ್ ನ ಕೆಲವು ಸಿಬ್ಬಂದಿಯ ಕೈವಾಡದ ಬಗ್ಗೆ ಅನುಮಾನಗೊಂಡು ಪೊಲೀಸ್ ತನಿಖೆ ಮಾಡಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳು ಸಿವಿಲ್ ಭೂ ವ್ಯಾಜ್ಯ ನ್ಯಾಯಾಲಯದ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿದ್ದರು.

ನ್ಯಾಯಾಲಯದಲ್ಲಿರುವರೇ ಶಾಮೀಲಾಗಿರುವ ಅನುಮಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಅಕ್ರಮ ಕುರಿತು ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಪೊಲೀಸ್ ದೂರು ನೀಡಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಆರಂಭದಲ್ಲಿ ಪ್ರಕರಣದಲ್ಲಿ ಯವುದೇ ಪ್ರಗತಿ ಕಾಣಲಿಲ್ಲ. ಈ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯವೇ ನಿರ್ವಹಣೆ ಮಾಡಿತು.

ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಈ ಅಕ್ರಮ ಕುರಿತು ಆ. 17 ರಂದು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, 71 ಪ್ರಕರಣಗಳಲ್ಲಿ ದಾಖಲೆಗಳನ್ನು ನೀಡುವಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ನೋಟಿಸ್ ನೀಡಿರುವ ಅಂಶ ಬಹಿರಂಗವಾಗಿದೆ. ಇದರಲ್ಲಿ ಶಾಮೀಲಾಗಿದ್ದ ನಿವೃತ್ತ ಸರ್ಕಾರಿ ಅಭಿಯೋಜಕ ಇದೀಗ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ. ಈ ಅಕ್ರಮ ಗೊತ್ತಿದ್ದು ದುರುದ್ದೇಶ ಪೂರ್ವಕವಾಗಿ ಪ್ರಕರಣಗಳನ್ನು ನಿರ್ವಹಣೆ ಮಾಡಿದ ವಕೀಲರಿಗೂ ತನಿಖೆ ಬಿಸಿ ಎದುರಾಗಿದೆ. ಈ ರೀತಿಯ ಭೂ ಲೂಟಿ ಮಾಡುವ ಪ್ರಕರಣಗಳು ಅರ್ಜಿ ಹಾಕಿದ ಎರಡು ತಿಂಗಳ್ಲಲೇ ಇತ್ಯರ್ಥ ಆಗಿದ್ದು, ಈ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ.












Click it and Unblock the Notifications