ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಮಂಜಮ್ಮ ಇನ್ನಿಲ್ಲ
ಇತ್ತೀಚಿಗಷ್ಟೇ ಜ್ಯೂರಿ ಮೆಂಬರ್ ಕನ್ನಡ ಸಂಗೀತ ಲೋಕದ ದಿಗ್ಗಜ, ಬಹು ವಾದ್ಯ ಪರಿಣಿತರಾದ ಎಸ್. ಬಾಲಿ ಅವರನ್ನು ಕಳೆದುಕೊಂಡ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಸರಿಗಮಪ ಕಾರ್ಯಕ್ರಮದಲ್ಲಿ ವಿಶಿಷ್ಟ ಗಾಯನದ ಮೂಲಕ ಜನಪ್ರಿಯತೆ ಗಳಿಸಿದ್ದ ಮಂಜಮ್ಮ ವಿಧಿವಶರಾಗಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಮಧುಗಿರಿಯ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ಜೋಡಿಯಾಗಿ ಹಾಡುತ್ತಿದ್ದರು. ಕಡು ಬಡತನದಲ್ಲಿದ್ದ ಈ ಸೋದರಿಯರು ದೇವಸ್ಥಾನದಲ್ಲಿ ಹಾಡುಗಳನ್ನು ಹಾಡಿ ಹಣ ಸಂಗ್ರಹಿಸಿ ಬದುಕು ನಡೆಸುತ್ತಿದ್ದರು. ಈ ಅಂಧ ಸಹೋದರಿಯರ ಹಾಡನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಮಂಜಮ್ಮ ಹಾಗೂ ರತ್ನಮ್ಮ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಸಂಗೀತ ಕ್ಷೇತ್ರದ ವಿಶೇಷ ಕಾರ್ಯಕ್ರಮವಾದ ಸರಿಗಮಪ ತಂಡಕ್ಕೆ ತಲುಪಿತ್ತು. ಬಳಿಕ ತಂಡದ ಸಹಾಯ ಪಡೆದು ಸರಿಗಮಪ ವೇದಿಕೆ ಬಂದ ಮಂಜಮ್ಮ ಹಾಗೂ ರತ್ನಮ್ಮ ಎಲ್ಲಾ ರೀತಿಯ ಹಾಡುಗಳನ್ನು ಹಾಡಿ ಜನರಿಂದ ಮೆಚ್ಚುಗೆ ಪಡೆದಿದ್ದರು.
ಸುಸಜ್ಜಿತ ಮನೆಯಿಲ್ಲದೇ ಕಷ್ಟಪಡುತ್ತಿದ್ದ ಈ ಅಂಧ ಸಹೋದರಿಯರಿಗೆ ನವರಸ ನಾಯಕ ಜಗ್ಗೇಶ್ ಸಹಾಯ ಮಾಡಿದ್ದರು. ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಬಳಿಕ ಮತ್ತೆ ಮಧುಗಿರಿ ತಾಲೂಕಿನ ದೇವಸ್ಥಾನದ ಬಳಿ ಹಾಗೂ ಕೆಲವು ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಾ ಮಂಜಮ್ಮ ಹಾಗೂ ರತ್ನಮ್ಮ ಜೀವನದ ನಡೆಸುತ್ತಿದ್ದರು. ಆದರೆ ಇತ್ತೀಚಿಗೆ ಮಂಜಮ್ಮಗೆ ಅನಾರೋಗ್ಯ ಹೆಚ್ಚಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಂಜಮ್ಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಮಂಜಮ್ಮಳನ್ನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications