ಮೋಸ ಮಾಡುವುದು ಒಂದು ಆಯ್ಕೆ, ತಪ್ಪಲ್ಲ: ನಟ ಯುವ ಪತ್ನಿ ಶ್ರೀದೇವಿ ಅಚ್ಚರಿ ಉತ್ತರ
ನಟ ರಾಜ್‌ಕುಮಾರ್ ಕುಟುಂಬದ ಕುಡಿ, ನಟ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದಂಪತಿಯ ಡಿವೋರ್ಸ್‌ಗೆ ಮುಂದಾದ ವಿಚಾರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ ಡಿಢೀರ್ ದೂರವಾಗಲು ನಿರ್ಧರಿಸಿದ್ದು ಎಲ್ಲರಿಗೂ ಆಘಾತ ನೀಡಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ನೀಡಿದ್ದ ಶ್ರೀದೇವಿ ಅವರು ಯುವ ವಿರುದ್ಧ ಗಂಭೀರ ಆರೋಪಗಳನ್ನು ಸಹ ಮಾಡಿದ್ದರು. ಸದ್ಯ ವಿದೇಶದಲ್ಲಿರುವ ಅವರು, ಸೋಷಿಯಲ್ ಮೀಡಿಯಾದಲ್ಲಿ ಜನರು ಪತಿ ಯುವ ಬಗ್ಗೆ ಕೇಳಿದ್ದಕ್ಕೆ ಅಚ್ಚರಿ ಉತ್ತರಗಳನ್ನು ನೀಡಿದ್ದಾರೆ. "ಮೋಸ ಮಾಡುವುದು ಒಂದು ಆಯ್ಕೆ, ತಪ್ಪಲ್ಲ" ಎಂದಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ನಟಿಯೊಬ್ಬರ ಕಾರಣಕ್ಕೆ ಯುವ ಹಾಗೂ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ನಟಿ ಹಾಗೂ ಪತಿ ನಡುವೆ ಸಂಬಂಧವಿತ್ತು ಎಂದೆಲ್ಲ ಆರೋಪಗಳು ಕೇಳಿಬಂದಿದ್ದವು. 2019ರಲ್ಲಿ ಶ್ರೀದೇವಿ ಭೈರಪ್ಪ ಹಾಗೂ ಯುವ ರಾಜ್‌ಕುಮಾರ್ ಮದುವೆಯಾಗಿದ್ದರು. ಆದರೆ ನಾಲ್ಕೇ ವರ್ಷಕ್ಕೆ ಡಿವೋರ್ಸ್ ಪಡೆಯುವ ನಿರ್ಧಾರ ಮಾಡಿದ್ದು ಅನುಮಾನ ಮೂಡಿಸಿತ್ತು. ಇಬ್ಬರ ನಡುವೆ ವೈಮನಸ್ಸು ಮೂಡಿದ್ದಲ್ಲದೆ, ಪರಸ್ಪರ ಆರೋಪಗಳನ್ನು ಸಹ ಮಾಡಿಕೊಂಡಿದ್ದರು. ಸದ್ಯ ಇವರ ವಿಚ್ಛೇದನದ ಪ್ರಕರಣ ಕೋರ್ಟ್‌ನಲ್ಲಿದೆ.

ಇನ್ನು ನಟಿ ರಮ್ಯಾ ತನ್ನ ವಿರುದ್ಧದ ಕೆಟ್ಟ ಕಾಮೆಂಟ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ನಿಂತಾಗ ದೊಡ್ಮನೆಯ ಶಿವಣ್ಣ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿ ಪೋಸ್ಟ್ ಹಂಚಿಕೊಂಡಿದ್ದ ಶ್ರೀದೇವಿ ಅವರು, "ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತಾಡುವುದು ನೋಡುವಾಗ ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತನಾಡದೆ ಸುಮ್ಮನೆ ಇದ್ರಲ್ಲ, ಆವಾಗ ನಿದ್ದೆ ಮಾಡ್ತಾ ಇದ್ರ ಎಲ್ಲ?" ಎಂದು ಟಾಂಗ್ ನೀಡಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶ್ರೀದೇವಿ ಮತ್ತೊಮ್ಮೆ ಯುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಶ್ರೀದೇವಿ ಅವರು ಇನ್‌ಸ್ಟಾಗ್ರಾಂನಲ್ಲಿ ask me anything (ಏನನ್ನಾದರೂ ಕೇಳಿ) ಎಂದು ಚರ್ಚೆಗೆ ಆಹ್ವಾನಿಸಿದ್ದರು. ಆಗ ಅನೇಕರು ಇವರ ವೈಯಕ್ತಿಕ ವಿಚಾರಗಳನ್ನು ಕೇಳಿದರು. ಒಬ್ಬರು "ಯುವ ಬಗ್ಗೆ ಏನ್ ಹೇಳ್ತೀರಾ?" ಎಂದು ಕೇಳಿದಾಗ "ಮೋಸ ಮಾಡುವುದು ಒಂದು ಆಯ್ಕೆ, ತಪ್ಪಲ್ಲ" (cheating is a choice not a mistake) ಎಂದು ಉತ್ತರಿಸಿದ್ದಾರೆ. ಅಲ್ಲದೆ ಇದಕ್ಕೆ "ಕರ್ಮದ ಕಲ್ಲನು" ಹಾಡನ್ನ ಸಹ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಯುವ ನಿಮ್ಮನ್ನು ಬಿಟ್ಟಿದ್ದು ಒಳ್ಳೆಯದಾಯ್ತು ಎಂದಾಗ, "ನಮ್ಮ ತಂದೆ-ತಾಯಿ ಅಪ್ರಾಮಾಣಿಕ ಮತ್ತು ಮೋಸವನ್ನ ಸಹಿಸಿಕೊಂಡು ಇರಲು ಹೇಳಿಕೊಟ್ಟಿಲ್ಲ. ನಿಮ್ಮ ಮಕ್ಕಳಿಗೆ ನೀವು ಇದನ್ನೇ ಕಲಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ" ಎಂದು ಶ್ರೀದೇವಿ ಖಡಕ್ ಉತ್ತರ ಕೊಟ್ಟಿದ್ದಾರೆ.
ಎರಡನೇ ಮದುವೆ ಬಗ್ಗೆ ಶ್ರೀದೇವಿ ಏನಂದ್ರು?
ಅಭಿಮಾನಿಯೊಬ್ಬರು ಯುವ ಬಗ್ಗೆ ಏನ್ ಹೇಳ್ತೀರಾ? ಎನ್ನುವ ಪ್ರಶ್ನೆಗೆ "ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆ ಎಲ್ಲಿ ಕೊನೆಯಿದೆ, ನಿಧಾನಿಸು, ನಿಧಾನಿಸು.." ಹಾಡನ್ನು ಶ್ರೀದೇವಿ ಹಾಕಿಕೊಂಡಿದ್ದಾರೆ. "ನಿಮ್ಮ ಮದುವೆ ಯಾವಾಗ?" ಎಂದು ಮತ್ತೊಬ್ಬರು ಕೇಳಿದ್ದಕ್ಕೆ ಸ್ಮೈಲಿ ಎಮೋಜಿ ಹಾಕಿ, ಮದುವೆಯ ಸಹವಾಸವೇ ಬೇಡ ಎಂಬರ್ಥದ ವಿಡಿಯೋ ಶೇರ್ ಮಾಡಿದ್ದಾರೆ. ಇದು ಮತ್ತೆ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications