Toxic Movie: ಹಾಲಿವುಡ್ ಮೇಲೆ ಯಶ್ ಕಣ್ಣು! ಟಾಕ್ಸಿಕ್ ಶೂಟಿಂಗ್ ರಹಸ್ಯ ಬಯಲು
ಕೆಜಿಎಫ್-2 ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ದ ಯಶ್ ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮೂಲಕ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ. ಕೆಜಿಎಫ್ 2 ಬಳಿಕ ತುಂಬಾ ಗ್ಯಾಪ್ ತೆಗೆದುಕೊಂಡಿದ್ದ ಯಶ್ ಕೊನೆಗೂ 2023ರ ಡಿಸೆಂಬರ್ ತಿಂಗಳಿನಲ್ಲಿ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದ್ದರು.
ಟಾಕ್ಸಿಕ್ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಕೂಡ ಬಂಡವಾಳ ಹಾಕುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್‌ದಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮುಂಬೈನಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿದ್ದು, ಇದೀಗ ಚಿತ್ರತಂಡ ಮತ್ತೊಮ್ಮೆ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿದೆ.

ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಹುಟ್ಟುಹಬ್ಬದ ದಿನ ಟಾಕ್ಸಿಕ್ ಸಿನಿಮಾದ ಟೀಸರ್ ಮಾದರಿಯ ವಿಡಿಯೋ ಕೂಡ ಬಿಡುಗಡೆ ಮಾಡಿತ್ತು. ಯಶ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಹಾಲಿವುಡ್‌ನತ್ತ ಯಶ್?
ಯಶ್ ಏನೇ ಮಾಡಿದ್ರೂ ತುಂಬಾ ಯೋಚನೆ ಮಾಡಿ ಮಾಡ್ತಾರೆ, ಅವರ ಲೆಕ್ಕಾಚಾರ ಮಿಸ್ ಆಗಲ್ಲ ಎನ್ನುವುದು ಅವರ ಅಭಿಮಾನಿಗಳ ಮಾತು. ಕೆಜಿಎಫ್ ಮೂಲಕ ಭಾರತ ಚಿತ್ರರಂಗದಲ್ಲೇ ಸದ್ದು ಮಾಡಿದ್ದ ಯಶ್, ಇದೀಗ ವಿಶ್ವ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.
ಟಾಕ್ಸಿಕ್ ಸಿನಿಮಾವನ್ನು ಭಾರತದ ಪ್ರಮುಖ ಭಾಷೆಗಳ ಜೊತೆಗೆ ವಿದೇಶೀ ಭಾಷೆಗಳಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ ಎನ್ನುವುದು ಹಳೆಯ ಸುದ್ದಿ, ಆದರೆ ಇದೀಗ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿರುವ ವಿಚಾರ ಹೊರಬಿದ್ದಿದೆ.
ಪಿಂಕ್‌ವಿಲ್ಲಾ ವರದಿ ಮಾಡಿರುವ ಪ್ರಕಾರ ಟಾಕ್ಸಿಕ್ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏಕಕಾಲದಲ್ಲಿ ಶೂಟಿಂಗ್ ಮಾಡಲಾಗುತ್ತಿದ್ದು, ಇದು ಸಿನಿಮಾ ಬಜೆಟ್ ಅನ್ನು 40% ಹೆಚ್ಚಿಸಿದೆ. ಆದರೂ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಎಲ್ಲೂ ರಾಜಿಯಾಗದೆ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಸಿನಿಮಾಗೆ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ. ಜಾನ್ ವಿಕ್‌ನಂತಹ ಹಾಲಿವುಡ್ ಸಿನಿಮಾಗೆ ಆಕ್ಷನ್ ಕೊರಿಯೋಗ್ರಫಿ ಮಾಡಿರುವ ಜೆಜೆ ಪೆರ್‍ರಿ ಟಾಕ್ಸಿಕ್ ಸಿನಿಮಾಗಾಗಿ ಆಕ್ಷನ್ ಸಂಯೋಜನೆ ಮಾಡಿದ್ದಾರೆ.
ಇದೀಗ ಹೊಸ ಸುದ್ದಿ ಕೇಳಿರುವ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದು ಟಾಕ್ಸಿಕ್ ಸಿನಿಮಾಗೆ ಕಾತರದಿಂದ ಕಾಯುವಂತೆ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು, ಆದರೆ ದೊಡ್ಡ ತಾರಾಗಣ ಇರುವ ಕಾರಣ ಡೇಟ್ ಹೊಂದಿಕೆಯಾಗಲು ಸಿನಿಮಾ ತಂಡ ಕಾಯಬೇಕಾಗಿ ಬಂದಿದ್ದರಿಂದ ಡಿಸೆಂಬರ್ ನಲ್ಲಿ ಸಿನಿಮಾವನ್ನು ತೆರೆಗೆ ತರುವ ಸಾಧ್ಯತೆ ಇದೆ.












Click it and Unblock the Notifications