ಜೈಲಿನಿಂದ ನಗು ನಗುತ್ತಾ ಜಾಲಿಯಾಗಿ ಹೊರಬಂದ ರಜತ್-ವಿನಯ್ ಗೌಡ
ಕೈಯಲ್ಲಿ ಲಾಂಗು-ಮಚ್ಚು ಹಿಡಿದು ರೀಲ್ಸ್ ಮಾಡಿದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಮೂರು ದಿನಗಳ ಕಾಲ ಅವರನ್ನು ಕಸ್ಟಡಿಗೂ ನೀಡಲಾಗಿತ್ತು. ಶುಕ್ರವಾರ ಇಬ್ಬರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ರಜತ್ ಹಾಗೂ ವಿನಯ್ ಇಬ್ಬರೂ ಜೈಲಿನಿಂದ ಇಂದು ರಿಲೀಸ್ ಆಗಿದ್ದಾರೆ. ಜೈಲಿನಿಂದ ನಗುತ್ತಲೇ ಇಬ್ಬರೂ ಹೊರಬಂದಿದ್ದಾರೆ.
ಲಾಂಗ್ ಹಿಡಿದು ರೀಲ್ಸ್ ಮಾಡಿದ ಆರೋಪದ ಮೇರೆಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ರಜತ್ ಹಾಗೂ ವಿನಯ್ ಗೌಡ ಅವರನ್ನ ಬಂಧಿಸಲಾಗಿತ್ತು. ಮಾರ್ಚ್ 26ರಿಂದ 28ರವರೆಗೆ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು. ಇದರ ನಡುವೆ ಅವರು ಕೋರ್ಟ್‌ಗೆ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದರು. ಇದಕ್ಕೆ ಕೋರ್ಟ್ ಕೂಡ ಜಾಮೀನು ನೀಡಲು ಒಪ್ಪಿತ್ತು. ಜಾಮೀನು ಪ್ರಕ್ರಿಯೆ ಮುಗಿದ ಕಾರಣ ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ.

ಇಂದು ಜೈಲಿನಿಂದ ರಜತ್ ಹಾಗೂ ವಿನಯ್ ಖುಷಿಯಿಂದ ನಗುತ್ತಲೇ ಹೊರಬಂದಿದ್ದಾರೆ. ರಜತ್ ಎಂದಿನಂತೆ ಜಾಲಿಯಾಗಿ ಜೈಲಿನಿಂದ ಬಂದಿದ್ದು, ಈ ವೇಳೆ ಅಲ್ಲಿದ್ದ ಪೊಲೀಸರಿಗೆ ರೀಲ್ಸ್ ಕೇಸು ಸಾರ್....ಎಂದು ನಗುತ್ತಲೇ ಹೇಳಿದ್ದಾರೆ. ವಿನಯ್ ಕೂಡ ನಂದೂ ಅದೇ ಕೇಸು ಎಂದು ಸಹಜವಾಗಿ ಹೊರಬಂದರು. ಬಳಿಕ ಮಾಧ್ಯಮಗಳ ಬಳಿ ಪ್ರತಿಕ್ರಿಯೆಗೆ ನಿರಾಕರಿಸಿದ ಇಬ್ಬರೂ ಈಗ ಬೇಡ ಬಿಡಿ ಸರ್ ಎಂದು ಕಾರು ಹತ್ತಿ ಮನೆಗಳತ್ತ ತೆರಳಿದ್ದಾರೆ.
ಈ ರೀಲ್ಸ್ ಪ್ರಕರಣದಲ್ಲಿ 24ನೇ ಎಸಿಎಂಎಂ ನ್ಯಾಯಾಲಯ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪೊಲೀಸರ ಕೈಗೆ ಬೇಲ್ ಪ್ರತಿ ಸಿಕ್ಕಿದ್ದು ತಡವಾದ್ದರಿಂದ ಇಂದು ರಜತ್ ಹಾಗೂ ವಿನಯ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಮಾಡಲಾಯಿತು. ಅಲ್ಲಿಂದ ಹೊರಬರುತ್ತಿದ್ದಂತೆ ಕೆಲವರಿಗೆ ಸೆಲ್ಫಿಗೆ ಪೋಸ್ ಕೂಡ ನೀಡಿದ್ದಾರೆ.

ಏನಿದು ಪ್ರಕರಣ?: ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಹಾಗೂ ವಿಜಯ್ ಗೌಡ ಅವರು ರೀಲ್ಸ್ ಮಾಡಿದ್ದರು. ಇದರಲ್ಲಿ ರಜತ್ ಅವರು ನಟ ದರ್ಶನ್ ಅವರ ರೀತಿಯಲ್ಲಿ ಡಿ ಬಾಸ್ ಹೆಸರಿನ ಶರ್ಟ್ ಹಾಗೂ ಅವರ ಸಿನಿಮಾಗಳ ಹೆಸರಿದ್ದ ಪ್ಯಾಂಟ್ ಧರಿಸಿ ಸಖತ್ ಪೋಸ್ ಕೂಡ ನೀಡಿದ್ದಾರೆ. ಆದರೆ ಕೈಯಲ್ಲ ಲಾಂಗು ಹಿಡಿದು ರೀಲ್ಸ್ ಮಾಡಿದ್ದರು. ವಿನಯ್ ಗೌಡ ಹಾಗೂ ರಜತ್ ಕೂಡ ಮಚ್ಚನ್ನು ಕೈಯಿಂದ ಕೈಗೆ ಬದಲಿಸಿಕೊಂಡು ಖಡಕ್ ರೀಲ್ಸ್ ಮಾಡಿದ್ದರು. ಇದು ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿತ್ತು.
ಬಳಿಕ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಲಾಯಿತು. ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ ರೀಲ್ಸ್‌ನಲ್ಲಿದ್ದ ಮಚ್ಚಿಗೂ ಅವರು ತೋರಿಸಿದ ಮಚ್ಚಿಗೂ ವ್ಯತ್ಯಾಸವಿತ್ತು. ಬಳಿಕ ಫೈಬರ್ ಮಚ್ಚನ್ನು ನೀಡಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇದೇ ಆರೋಪದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಆ ಮಚ್ಚು ಈವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ. ಇದಕ್ಕಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದು, ಇತ್ತ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ.












Click it and Unblock the Notifications