ಆ ನಟಿ ಇಲ್ಲದಿದ್ರೆ ನಾನು ಹೀರೋ ಆಗುತ್ತಿರಲಿಲ್ಲ: ಅಚ್ಚರಿ ವಿಚಾರ ಹೇಳಿದ ಉಪೇಂದ್ರ
ಉಪೇಂದ್ರ ಅವರ ನಟನೆ ಹಾಗೂ ನಿರ್ದೇಶನಕ್ಕೆ ಇಡೀ ಭಾರತೀಯ ಚಿತ್ರರಂಗವೇ ತಲೆಬಾಗಿದೆ. ಈಗಿನ ಅದೆಷ್ಟೋ ಸ್ಟಾರ್ ನಿರ್ದೇಶಕರು ಕೂಡ ನನ್ನ ನೆಚ್ಚಿನ ನಿರ್ದೇಶಕ ಉಪೇಂದ್ರ, ಅವರೇ ನನಗೆ ಪ್ರೇರಣೆ ಎಂದು ಕೊಂಡಾಡಿದ್ದಾರೆ. ಅಷ್ಟರಮಟ್ಟಿಗೆ ಹವಾ ಸೃಷ್ಟಿಸಿದ್ದಾರೆ ಉಪ್ಪಿ. ಮೊದಲಿಗೆ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರು, ಬಳಿಕ ಹೀರೋ ಆಗಿಯೂ ಮಿಂಚುತ್ತಿದ್ದಾರೆ. ಆದರೆ ಆ ನಟಿಯೊಬ್ಬರು ಇಲ್ಲದೇ ಇದ್ದಿದ್ದರೆ ನಾನು ಆವತ್ತು ಹೀರೋ ಆಗಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಉಪ್ಪಿ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಅಂದ ಹಾಗೆ ಉಪೇಂದ್ರ ಅವರು ಎ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು. ತಾವೇ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ ಇಂದಿಗೂ ಅಚ್ಚಳಿಯದೆ ಎಲ್ಲರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಈ ನಿರ್ದೇಶನಕ್ಕೆ ಇಂದಿನ ನಿರ್ದೇಶಕರು ಕೂಡ ಸಲಾಂ ಹೊಡೆಯುತ್ತಾರೆ. ಆದರೆ ಅಸಲಿಗೆ ಈ ಸಿನಿಮಾ ರಿಲೀಸ್‌ಗೆ ಭಾರಿ ತೊಡಕುಗಳು ಎದುರಾಗಿತ್ತು ಎಂಬ ವಿಚಾರವನ್ನು ಉಪ್ಪಿ ಹೇಳಿದ್ದಾರೆ.
ನಾನು ಅಭಿನಯಿಸಿ, ನಿರ್ದೇಶಿಸಿದ ಎ ಸಿನಿಮಾ ಸೆನ್ಸಾರ್ ಆಗುವ ಸಂದರ್ಭದಲ್ಲಿ ಭಾರಿ ದೊಡ್ಡ ಸಮಸ್ಯೆ ಎದುರಾಗಿತ್ತು. ಈ ಸಿನಿಮಾ ನೋಡಿ ಕೆಲ ಪ್ರಮುಖ ದೃಶ್ಯಗಳನ್ನು ತೆಗೆಯಬೇಕು ಎಂದು ಸೆನ್ಸಾರ್ ಮಂಡಳಿ ಸದಸ್ಯರು ಹೇಳುತ್ತಿದ್ದರು. ಈ ಸಿನಿಮಾ ರಿಲೀಸ್‌ಗೆ ಅನ್‌ಫಿಟ್ ಎಂದಿದ್ದರು. ಆಗ ನನ್ನ ಸಹಾಯಕ್ಕೆ ಬಂದಿದ್ದು ಆ ನಟಿ, ಅಲ್ಲದೆ ನನ್ನ ಸಿನಿಮಾವನ್ನು ಮೊದಲಿಗೆ ಮೆಚ್ಚಿ ಹೊಗಳಿದ್ದು ಕೂಡ ಅದೇ ನಟಿ. ಅವರು ಬೇರೆ ಯಾರೂ ಅಲ್ಲ ಬಿ.ಸರೋಜಾದೇವಿ ಅಮ್ಮ ಎಂದು ಉಪ್ಪಿ ಸ್ಮರಿಸಿದ್ದಾರೆ.

ಎ ಸಿನಿಮಾ ದೃಶ್ಯಗಳಿಗೆ ಕತ್ತರಿ ಹಾಕಬೇಕು ಅಂದ್ರು
ಇಂದು ನಡೆದ ಸರೋಜಾ ದೇವಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಉಪ್ಪಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಾನು ಹೀರೋ ಆಗಲು ಸರೋಜಾ ದೇವಿ ಅಮ್ಮನೇ ಕಾರಣ. ಎ ಸಿನಿಮಾ ಅಂದು ಸೆನ್ಸಾರ್ ಆಗುವ ಸಮಯದಲ್ಲಿ ಕಮಿಟಿ ಸದಸ್ಯರಲ್ಲಿ ಸರೋಜಾ ದೇವಿ ಅಮ್ಮ ಕೂಡ ಇದ್ದರು. ಆ ಸಂದರ್ಭ ಕೆಲ ಸದಸ್ಯರು ಚಿತ್ರದ ಕೆಲ ಸೀನ್ಗಳನ್ನು ತೆಗೆಯಬೇಕು ಎಂದಾಗ ಸರೋಜಾ ಅಮ್ಮ ನನಗೆ ತುಂಬಾ ಸಪೋರ್ಟ್ ಮಾಡಿದ್ದರು. ಎ ಸಿನಿಮಾವನ್ನು ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ. ಅಂದು ಅವರು ಇಲ್ಲದೇ ಇದ್ದಿದ್ರೆ ಎ ಸಿನಿಮಾ ರಿಲೀಸ್ ಆಗುತ್ತಿರಲಿಲ್ಲ. ಎ ಸಿನಿಮಾಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇಂದು ನಾನು ಹೀರೋ ಕೂಡ ಆಗಿರಲು ಸಾಧ್ಯ ಇರುತ್ತಿರಲಿಲ್ಲ ಎಂದು ನೆನೆದಿದ್ದಾರೆ.
ಹಲವು ವರ್ಷಗಳಿಂದ ಸರೋಜಾದೇವಿ ಅಮ್ಮನವರೊಂದಿಗೆ ಒಳ್ಳೆಯ ನಂಟು ಹೊಂದಿದ್ದೇವೆ. ಸರ್ಕಾರ ಈಗ ಡಾ.ರಾಜ್ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದೆ. ಅದೇ ರೀತಿ ಬಿ.ಸರೋಜಾ ದೇವಿ ಅವರ ಹೆಸರಲ್ಲಿಯೂ ಪ್ರಶಸ್ತಿ ನೀಡಬೇಕು ಎಂದು ಉಪ್ಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications