Malaika Vasupal: 'ವಿದ್ಯಾಪತಿ'ಗೆ ಜೋಡಿಯಾದ ಉಪಾಧ್ಯಕ್ಷನ ಸುಂದರಿ ಮಲೈಕಾ ವಸುಪಾಲ್
ಬೆಂಗಳೂರು, ಫೆಬ್ರವರಿ.28: ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಅನೇಕ ಕಲಾವಿದರು ಇಂದು ಸಿನಿಮಾ ರಂಗದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ಇದ್ದಾರೆ.
ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಯಶಸ್ಸು ಗಳಿಸಿರುವ ನಟಿ ಮಲೈಕಾ ವಸೂಪಾಲ್ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿವೆ. ಈಗ ಡಾಲಿ ಪಿಕ್ಚರ್ಸ್ ಅವರ ಬಹನಿರೀಕ್ಷಿತ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ದೊಡ್ಡ ಪ್ರಾಜೆಕ್ಟ್‌ಗೆ ಸೆಲೆಕ್ಟ್ ಆಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ.

ವಿದ್ಯಾಪತಿಗೆ ಉಪಾಧ್ಯಕ್ಷನ ಚೆಲುವೆ ಜೋಡಿ
ಟಗರು ಪಲ್ಯದ ರುಚಿ ಬಡಿಸಿದ್ದ ನಟ ನಾಗಭೂಷಷ್ ಈಗ ವಿದ್ಯಾಪತಿಯಾಗಿದ್ದಾರೆ. ಅವರಿಗೆ ಸದ್ಯಕ್ಕೆ ಜೋಡಿ ಸಿಕ್ಕಾಗಿದೆ. ಉಪಾಧ್ಯಕ್ಷ ಸುಂದರಿ ಈಗ ಡಾಲಿ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ಟಗರು ಪಲ್ಯ ಸಕ್ಸಸ್ ಬಳಿಕ ನಾಗಭೂಷಣ ಅವರನ್ನು ನಾಯಕರನ್ನಾಗಿಸಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ.
ಮತ್ತೊಮ್ಮೆ ಧನಂಜಯ್ ಹಾಗೂ ನಾಗಭೂಷಣ್ ಒಂದಾಗಿದ್ದು, ಈ ಚಿತ್ರಕ್ಕೆ ವಿದ್ಯಾಪತಿ ಎಂಬ ಟೈಟಲ್ ಇಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಈಗ ನಾಯಕಿಯನ್ನು ಪರಿಚಯಿಸಿದೆ. ಹಾಸ್ಯ ನಟ ಚಿಕ್ಕಣ್ಣ ಅವರೊಂದಿಗಿನ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡಿರುವ ಮಲೈಕಾ ವಸೂಪಾಲ್, ವಿದ್ಯಾಪತಿ ಸಿನಿಮಾಕ್ಕೆ ನಾಯಕಿ.
ಲೀಲಾ... ಅಂಜಲಿ... ಈಗ ವಿದ್ಯಾ...!
ಹಾಸ್ಯನಟನಾಗಿ ಚಂದನವನದಲ್ಲಿ ಕಂಪು ಪಸರಿಸುತ್ತಿದ್ದ ನಟ ಚಿಕ್ಕಣ್ಣ, ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಚಿಕ್ಕಣ್ಣನಿಗೆ ನಾಯಕಿಯಾಗಿ ಮಿಂಚಿದ್ದ ಮಲೈಕಾ ವಸೂಪಾಲ್ ಈಗ ವಿದ್ಯಾಪತಿಗೆ ಜೋಡಿಯಾಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ ಉಪಾಧ್ಯಕ್ಷ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ.

ಉಪಾಧ್ಯಕ್ಷ ಸಿನಿಮಾದಲ್ಲಿ ಮಲೈಕಾ ಅವರ ನಟನೆ ನೋಡಿ ಮೆಚ್ಚಿಕೊಂಡಿರುವ ವಿದ್ಯಾಪತಿ ತಂಡ ಅವರನ್ನು ಸಿನಿಮಾ ಅಂಗಳಕ್ಕೆ ಸ್ವಾಗತಿಸಿದೆ. ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ವಿದ್ಯಾಪತಿಯಾದ ನಾಗಭೂಷಣ
ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಚಿತ್ರದಲ್ಲಿ ನಾಗಭೂಷಣ್ ವಿಭಿನ್ನ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ವಸೂಪಾಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.












Click it and Unblock the Notifications