Toxic Movie: ಯಶ್ 'ಟಾಕ್ಸಿಕ್' ಲೋಕಕ್ಕೆ ರೆಬೆಕ್ಕಾ ಆಗಿ ಎಂಟ್ರಿ ಕೊಟ್ಟ ನಟಿ ತಾರಾ ಸುತಾರಿಯಾ
ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಪಾತ್ರಗಳು ಒಂದೊಂದಾಗಿ ರಿವೀಲ್ ಆಗುತ್ತಿವೆ. ಇತ್ತೀಚೆಗೆ ಈ ಸಿನಿಮಾದಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ನಯನತಾರಾ ಅವರ ಫಸ್ಟ್ ಲುಕ್ ಬಿಡುಗಡೆಯಾಯಿತು. ಈಗ ನಟಿ ತಾರಾ ಸುತಾರಿಯಾ ಅವರ ಪೋಸ್ಟರ್ ಕೂಡ ಅನಾವರಣಗೊಂಡಿದ್ದು, ರೆಬೆಕ್ಕಾ ಎನ್ನುವ ಪವರ್‌ಫುಲ್ ಪಾತ್ರದಲ್ಲಿ ಸುತಾರಿಯಾ ಕಾಣಿಸಿಕೊಂಡಿದ್ದಾರೆ.
ಯಶ್ ಮತ್ತು ಟಾಕ್ಸಿಕ್ ಚಿತ್ರದ ನಿರ್ಮಾಪಕರು ಇಂದು ತಾರಾ ಸುತಾರಿಯಾ ಅವರ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ, ಅವರ ಪಾತ್ರದ ಹೆಸರನ್ನು ಸಹ ಬಹಿರಂಗಪಡಿಸಲಾಗಿದೆ. ಅವರು ಈ ಚಿತ್ರದಲ್ಲಿ ರೆಬೆಕ್ಕಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಟಾಕ್ಸಿಕ್ ಚಿತ್ರದ ಹೊಸ ಪೋಸ್ಟರ್‌ನಲ್ಲಿ, ತಾರಾ ಸುತಾರಿಯಾ ಉಗ್ರ ನೋಟದಲ್ಲಿ, ಬಂದೂಕು ಹಿಡಿದು, ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ.

ಟಾಕ್ಸಿಕ್ ಚಿತ್ರದ ನಿರ್ಮಾಪಕರು ಇತ್ತೀಚೆಗೆ ನಯನತಾರಾ, ಹುಮಾ ಖುರೇಷಿ ಮತ್ತು ಕಿಯಾರಾ ಅಡ್ವಾಣಿ ಅವರ ಪಾತ್ರಗಳನ್ನು ರಿವೀಲ್ ಮಾಡಿದ್ದರು. ಪ್ರತಿಯೊಬ್ಬ ನಟಿಯ ಪೋಸ್ಟರ್‌ಗಳು ಕೂಡ ವಿಶಿಷ್ಟವಾಗಿ ಗಮನ ಸೆಳೆದಿದ್ದು, ಟಾಕ್ಸಿಕ್‌ನಲ್ಲಿ ಅವರ ಪಾತ್ರಗಳು ಸಾಕಷ್ಟು ಪ್ರಬಲವಾಗಿರುತ್ತವೆ ಎಂಬ ಸುಳಿವು ನೀಡಿದೆ. ಅಲ್ಲದೆ ಒಂದೇ ಸಿನಿಮಾದಲ್ಲಿ ಘಟಾನುಘಟಿ ನಟಿಯರು ಕಾಣಿಸಿಕೊಂಡಿರುವುದರಿಂದಲೂ ಕುತೂಹಲ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಹಿಳಾ ಪಾತ್ರವರ್ಗವು ಕಥೆಗೆ ಪ್ರಮುಖವಾಗಿದೆ.
ಇದೇ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಾಲ್ಕು ವರ್ಷಗಳ ನಂತರ ಯಶ್ ದೊಡ್ಡ ಪರದೆಯ ಮೇಲೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದು, ಇದು ಮೆಗಾ-ಬಜೆಟ್ ಚಿತ್ರವಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರದೊಂದಿಗೆ ಸ್ಪರ್ಧಿಸಲಿದೆ. 'ಟಾಕ್ಸಿಕ್' ಯಶ್ ನಟನೆಯ 19ನೇ ಚಿತ್ರವಾಗಿದ್ದು, ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ಈ ಪ್ಯಾನ್-ಇಂಡಿಯಾ ಆಕ್ಷನ್ ಗ್ಯಾಂಗ್‌ಸ್ಟರ್ ಸಿನಿಮಾ ಆಗಿದೆ. ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಇದು ಕರ್ನಾಟಕದ ಅತಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದ್ದು, ಭಾರತದ ದೊಡ್ಡ ಸಿನಿಮಾಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.
ತಾರಾ ಸುತಾರಿಯಾ ಹಿನ್ನೆಲೆ
ತಾರಾ ಸುತಾರಿಯಾ ಒಬ್ಬ ಭಾರತೀಯ ನಟಿ, ಗಾಯಕಿ ಮತ್ತು ನರ್ತಕಿ. ಡಿಸ್ನಿ ಇಂಡಿಯಾ ಕಾರ್ಯಕ್ರಮಗಳಾದ 'ಬಿಗ್ ಬಡಾ ಬೂಮ್' ಮತ್ತು 'ಓಯೆ ಜಾಸ್ಸಿ' ಯೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿ, 2019ರಲ್ಲಿ ತೆರೆಕಂಡ 'ಸ್ಟೂಡೆಂಟ್ ಆಫ್ ದಿ ಇಯರ್ 2' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ನಂತರ ಮಾರ್ಜಾವಾನ್, ಏಕ್ ವಿಲನ್ ರಿಟರ್ನ್ಸ್ ಮತ್ತು ಅಪೂರ್ವದಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಗಾಯನ ಮತ್ತು ನೃತ್ಯದಲ್ಲಿ ತರಬೇತಿ ಪಡೆದ ಪ್ರತಿಭಾನ್ವಿತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.












Click it and Unblock the Notifications