Toxic Tabaahi Song: ಟಾಕ್ಸಿಕ್ ಸಿನಿಮಾದ ಮೊದಲ ಹಾಡು "ತಬಾಹಿ" ರಿಲೀಸ್: ಬೀಚ್‌ನಲ್ಲಿ ಯಶ್-ಕಿಯಾರಾ ಬೋಲ್ಡ್ ಅವತಾರ
ಕೆಜಿಎಫ್ ಸರಣಿಯ ನಂತರ ಇಡೀ ವಿಶ್ವವೇ ಎದುರು ನೋಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' (Toxic) ಸಿನಿಮಾದಿಂದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಸಿನಿಮಾದ ಬಹುನಿರೀಕ್ಷಿತ ಮೊದಲ ಹಾಡು 'ತಬಾಹಿ' (Tabaahi) ಕೊನೆಗೂ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.
ನಾದಿಯಾ ಜೊತೆ "ಟಿಕೆಟ್" ರೊಮ್ಯಾನ್ಸ್
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಟಿಕೆಟ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದು, ಜೋಡಿಯಾಗಿ ನಟಿಸಿರುವ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ 'ನಾದಿಯಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರತಂಡ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಯಶ್ ಶರ್ಟ್‌ಲೆಸ್ ಲುಕ್‌ನಲ್ಲಿ ಅಬ್ಬರಿಸಿದ್ದರೆ, ಕಿಯಾರಾ ಅವರನ್ನು ತಬ್ಬಿಕೊಂಡು ಬೀಚ್ ಬಳಿ ಒರಗಿಕೊಂಡಿರುವ ಪೋಸ್ಟರ್‌ಗಳು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿವೆ.

ಪಂಚಭಾಷೆಗಳಲ್ಲಿ 'ತಬಾಹಿ'
ವಿಶಾಲ್ ಮಿಶ್ರಾ ಸಂಗೀತ ನೀಡಿ ಧ್ವನಿಯಾಗಿರುವ ಈ ಹಾಡು ಐದೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಪ್ರತಿ ಭಾಷೆಯಲ್ಲೂ ದಿಗ್ಗಜ ಸಾಹಿತಿಗಳು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಹಾಡು ರಿಲೀಸ್ ಆಗಿದ್ದು, ಕನ್ನಡ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಹಿಂದಿಯಲ್ಲಿ ರಾಜ್ ಶೇಖರ್, ತೆಲುಗು ಭಾಷೆಯಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳು ಆವೃತ್ತಿಗೆ ವಿಘ್ನೇಶ್ ಶಿವನ್, ಮಲಯಾಳಂಗೆ ರಫೀಕ್ ಅಹಮದ್ ಈ ಹಾಡಿಗೆ ಜೀವ ತುಂಬಿದ್ದಾರೆ.
ಟೀಸರ್‌ಗಳಲ್ಲಿ ಯಶ್ ಬೋಲ್ಡ್ ಅವತಾರ
ಈ ಹಿಂದೆ ಟಾಕ್ಸಿಕ್ ಸಿನಿಮಾದ ಮೊದಲ ಇಂಟ್ರೋ ಹಾಗೂ ಟೀಸರ್ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೊದಲ ಟೀಸರ್‌ನಲ್ಲಿ ಯಶ್ ನಟಿಯೊಬ್ಬರ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ವಿವಾದದ ಸ್ವರೂಪವೂ ತಾಳಿತ್ತು. ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಚಿತ್ರತಂಡ ಮತ್ತೊಂದು ಟೀಸರ್‌ನಲ್ಲಿಯೂ ಯಶ್ ಅವರ ಹಸಿಬಿಸಿ ದೃಶ್ಯಗಳನ್ನು ತೋರಿಸಿತ್ತು. ಆದರೆ ಈ ಬಾರಿ ಯಶ್ ಜೊತೆ ಬೋಲ್ಡ್ ಅವತಾರದಲ್ಲಿದ್ದ ನಟಿಯ ಮುಖ ಪರಿಚಯ ಮಾಡಿಲ್ಲ.
ಹೀಗಾಗಿ ಆ ನಟಿ ಯಾರು? ಎಂಬ ಕುತೂಹಲವೂ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ನಟಿಯರ ದಂಡೇ ಇರುವ ಕಾರಣ ಯಶ್ ಜೊತೆ ಆ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಯಾರಿರಬಹುದು? ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಇದರ ನಡುವೆ ಯಶ್-ಕಿಯಾರಾ ಅವರ ರೊಮ್ಯಾಂಟಿಕ್ ತಬಾಹಿ ಹಾಡು ಗಮನ ಸೆಳೆಯುತ್ತಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ (KVN) ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. 'ಟಾಕ್ಸಿಕ್' ಸಿನಿಮಾ ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಟೀಸರ್ ಬಿಡುಗಡೆಯಾದ ಸುದೀರ್ಘ ಕಾಯುವಿಕೆಯ ನಂತರ ಸಿಕ್ಕ ಈ ಹಾಡು ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಯಶ್ ಅವರ ಈ ಹೊಸ ಅವತಾರ ಈಗ ಸಿನಿಪ್ರೇಮಿಗಳ ನಡುವೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.












Click it and Unblock the Notifications