ಮೈಕ್ ಕಿತ್ಕೊಂಡು ಮೀಡಿಯಾದವರ ಮೇಲೆ ಖ್ಯಾತ ನಟ ಅಟ್ಯಾಕ್, ಎಫ್‌ಐಆರ್ ದಾಖಲು
ಖ್ಯಾತ ನಟ ಕೌಟುಂಬಿಕ ಜಗಳ ಇದೀಗ ಬೀದಿಗೆ ಬಂದಿದೆ. ಟಾಲಿವುಡ್‌ನಲ್ಲಿ ಪ್ರಖ್ಯಾತಿ ಗಳಿಸಿದ್ದ ಹಿರಿಯ ನಟ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ಮನೋಜ್ ಅವರ ನಡುವಿನ ಜಗಳ ತಾರಕಕ್ಕೇರಿದೆ. ಇನ್ನು ಈ ಸುದ್ದಿ ಬಿತ್ತರಿಸುತ್ತಿದ್ದ ಮಾಧ್ಯಮಗಳ ಮೇಲೆ ಮೋಹನ್ ಬಾಬು ಹಲ್ಲೆ ನಡೆಸಿದ್ದಾರೆ. ಮೈಕ್ ಕಿತ್ತುಕೊಂಡು ಏಕಾಏಕಿ ಮಾಧ್ಯಮ ಸಿಬ್ಬಂದಿಯನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಆಸ್ತಿ ವಿಚಾರಕ್ಕೆ ಸಿನಿ ಕುಟುಂಬದ ತಂದೆ-ಪುತ್ರನ ನಡುವೆ ವಿವಾದ ಹುಟ್ಟಿಕೊಂಡಿದೆ ಎನ್ನಲಾಗಿದ್ದು, ಇಬ್ಬರ ಮೇಲೂ ದೂರು ದಾಖಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಈ ಹೈಡ್ರಾಮಾ ನಡೆಯುತ್ತಲೇ ಇದ್ದು, ನಟ ಮಂಚು ಮನೋಜ್ ಅವರನ್ನು ತಂದೆ ಮೋಹನ್ ಬಾಬು ಅವರು ಥಳಿಸಿದ್ದಾರೆ ಎಂದು ದೂರಿದ್ದರು. ಇದರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಪಡೆದಿದ್ದು, ಬಲವಾದ ಗಾಯಗಳಾಗಿತ್ತು ಎನ್ನಲಾಗಿದೆ.

ಮೋಹನ್ ಬಾಬು ಕೂಡ ಪುತ್ರನ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ. ಹಿರಿಯ ಪುತ್ರ ಮಂಚು ವಿಷ್ಣು ಅವರು ದುಬೈನಿಂದ ಬಂದಿದ್ದು, ಇದೀಗ ಜಗಳ ತಾರಕಕ್ಕೇರಿದೆ. ನಿನ್ನೆ ಮಾಧ್ಯಮಗಳು ಮೋಹನ್ ಬಾಬು ಅವರ ಬಳಿ ಮಾಹಿತಿ ಕೇಳಿದಾಗ ಮೊದಲಿಗೆ ಕೈಮುಗಿಯುತ್ತಾ ಬಂದ ಮೋಹನ್ ಬಾಬು ಅವರು ಏಕಾಏಕಿ ಮಾಧ್ಯಮಗಳ ಮೈಕ್ ಕಸಿದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿದೆ.
ಈ ಘಟನೆಯನ್ನು ತೆಲಂಗಾಣ ಮಾಧ್ಯಮ ಒಕ್ಕೂಟ ಬಲವಾಗಿ ಖಂಡಿಸಿದೆ. ಇನ್ನು ಮೋಹನ್ ಬಾಬು ಅವರ ಹಲ್ಲೆಯಿಂದ ಮಾಧ್ಯಮ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಂತರ ಮಾಧ್ಯಮದವರು ನಟ ಮೋಹನ್ ಬಾಬು ಮನೆಯ ಎದುರು ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಹಲ್ಲೆ ಸಂಬಂಧ ಹಿರಿಯ ನಟ ಮೋಹನ್‌ಬಾಬು ವಿರುದ್ಧ ಪಹಾಡಿಶರೀಫ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸುದ್ದಿವಾಹಿನಿಯೊಂದರ ವರದಿಗಾರ ರಂಜಿತ್ ಅವರು ವರದಿಗಾರಿಕೆಗೆ ತೆರಳಿದ್ದಾಗ ಹೈದರಾಬಾದ್‌ನ ಜಲಪಲ್ಲಿಯಲ್ಲಿರುವ ಮೋಹನ್ ಬಾಬು ಅವರ ನಿವಾಸದಲ್ಲಿ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಬಳಿಕ ಬೌನ್ಸರ್‌ಗಳನ್ನು ಬಿಟ್ಟು ಮಾಧ್ಯಮದವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಂದೆ ಮಗನ ದೂರು-ಪ್ರತಿದೂರು
ನಟ ಮೋಹನ್‌ಬಾಬು ಅವರು ರಾಚಕೊಂಡ ಕಮಿಷನರ್ ಜಿ.ಸುಧೀರ್ ಬಾಬು ಅವರಿಗೆ ಇಮೇಲ್ ಮೂಲಕ ದೂರು ದಾಖಲಿಸಿದ್ದಾರೆ. ತಮ್ಮ ಪುತ್ರ ಮನೋಜ್ ಮಂಚು ಹಾಗೂ ಅವರ ಸೊಸೆ ಮೋನಿಕಾ ಅವರು ತಮ್ಮ ನಿವಾಸವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ನನಗೆ ರಕ್ಷಣೆ ನೀಡುವಂತೆ ಅವರು ಆರೋಪಿಸಿದ್ದಾರೆ.
ಮತ್ತೊಂದೆಡೆ ಪುತ್ರ ಮಂಚು ಮನೋಜ್ ಕೂಡ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಗೃಹ ಸಚಿವೆ ಅನಿತಾ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ಡಿಜಿಪಿ ಅವರಿಗೆ ಈ ದೂರು ಸಂಬಂಧ ಪಾರದರ್ಶಕ ಮತ್ತು ನ್ಯಾಯಯುತ ತನಿಖೆ ಮೂಲಕ ನ್ಯಾಯ ಒದಗಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications