Kiccha Sudeep: ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಪವನ್ ಕಲ್ಯಾಣ್ ಸಂತಾಪ
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಇಂದು ಮಾತೃವಿಯೋಗವಾಗಿದೆ. ಸುದೀಪ್ ಅವರ ತಾಯಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಸುದೀಪ್ ತಾಯಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಈ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿರುವ ಪವನ್ ಕಲ್ಯಾಣ್, ಸುದೀಪ್ ಅವರ ಕುಟುಂಬಕ್ಕೆ ತೀವ್ರ ಸಂತಾಪಗಳು ಎಂದಿದ್ದಾರೆ. ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಶ್ರೀಮತಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಹಾಗೂ ಪ್ರೋತ್ಸಾಹವಿದೆ ಎಂದು ಸುದೀಪ್ ಅವರು ಹೇಳಿದ್ದರು. ಈಗ ಅವರು ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಎಂದು ಪವನ್ ಕಲ್ಯಾಣ್ ಪತ್ರದಲ್ಲಿ ತಿಳಿಸಿದ್ದಾರೆ. ಸುದೀಪ್ ಹಾಗೂ ಪವನ್ ಕಲ್ಯಾಣ್ ನಡುವೆ ಉತ್ತಮ ಒಡನಾಟವಿದೆ. ಹಾಗಾಗಿ ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವೂ ಇದೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಹಾಗೂ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸದ್ಯ ನಟ ಕಿಚ್ಚ ಸುದೀಪ್ ಅವರ ಕುಟುಂಬವು ಶೋಕಸಾಗರದಲ್ಲಿ ಮುಳುಗಿದೆ.

ಸುದೀಪ್ ಅವರ ತಾಯಿ ಸರೋಜಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಇಂದು ಇಹಲೋಕ ತ್ಯಜಿಸಿದ್ದಾರೆ. ಸದ್ಯ ಈ ಕಹಿಸುದ್ದಿಯು ಕಿಚ್ಚ ಸುದೀಪ್ ಮತ್ತು ಅವರ ಆಪ್ತರು, ಅಭಿಮಾನಿಗಳಿಗೆ ಶಾಕ್ ನೀಡಿದೆ.
ಮೊದಲಿಗೆ ಸರೋಜಾ ಅವರ ಮೃತದೇಹವನ್ನು ಜೆಪಿ ನಗರದ ಸುದೀಪ್ ಅವರ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಸಿನಿರಂಗದ ಕಲಾವಿದರಿಗೆ, ರಾಜಕೀಯ ನಾಯಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತ ಸರೋಜಾ ಅವರು ಸುದೀಪ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೂಲಗಳ ಪ್ರಕಾರ ಇಂದು ಸಂಜೆಯೇ ಸರೋಜಾ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಸಂದರ್ಭದಲ್ಲಿ ಸುದೀಪ್ ಅವರ ತಾಯಿ ಭಾವುಕವಾಗಿದ್ದರು. ಅಂದು ವೇದಿಕೆ ಮೇಲೆ ಮಗನನ್ನು, ಮೊಮ್ಮಗನನ್ನು ಕಂಡು ಅವರು ಕಣ್ಣೀರು ಕೂಡ ಹಾಕಿದ್ದರು. ಬಿಗ್ ಬಾಸ್ 11ನೇ ಸೀಸನ್ ನಡೆಸಿಕೊಡುತ್ತಿರುವ ನಟ ಕಿಚ್ಚ ಸುದೀಪ್ ಅವರು, ಇತ್ತೀಚೆಗೆ ಬಿಗ್ ಬಾಸ್ ವೇದಿಕೆ ಮೇಲೂ ತನ್ನ ತಾಯಿಯನ್ನು ನೆನೆದಿದ್ದರು. ನವರಾತ್ರಿ ಪಯುಕ್ತ ಅಮ್ಮನನ್ನು ನೋಡಿ ಬರಿಗಾಲಲ್ಲಿ ಬಂದಿದ್ದೇನೆ. ಹಬ್ಬದ ವಿಶೇಷ ಉಡುಗೆಯಲ್ಲಿ ಬಂದಿರುವುದಾಗಿ ಸುದೀಪ್ ತಿಳಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಮಾತೃವಿಯೋಗ ಆಗಿದೆ.












Click it and Unblock the Notifications