ನನ್ನ ನಾದಿನಿಗೂ ಅಶ್ಲೀಲ ಫೋಟೋಸ್, ಮೆಸೇಜ್ ಕಳಿಸಿದ್ದಾರೆ: ನಟ ಪ್ರಜ್ವಲ್ ದೇವರಾಜ್
Prajwal Devaraj: ಕನ್ನಡ ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ದರ್ಶನ್ ಅಭಿಮಾನಿಗಳನ್ನು ಪೊಲೀಸರು ಬಂಧಿಸಿ, ಬೆಂಡೆತ್ತುತ್ತಿದ್ದಾರೆ. ಇತ್ತೀಚೆಗೆ ರಮ್ಯಾ ಅವರಿಗೆ ಹಲವರು ಡಿಬಾಸ್ ಅಭಿಮಾನಿಗಳೆಂದು ಕೆಟ್ಟ ಹಾಗೂ ಅಶ್ಲೀಲವಾಗಿ ಕಾಮೆಂಟ್‌ಗಳನ್ನು ಮಾಡಿದ್ದರು. ಈ ಸಂಬಂಧ ರಮ್ಯಾ ಅವರು ಪೊಲೀಸರಿಗೆ ದೂರು ನೀಡಿದ್ದರು. ರಮ್ಯಾ ಅವರಿಗೆ ಕಾಮೆಂಟ್ ಮಾಡಿದ್ದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟ, ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ತಮ್ಮ ಕುಟುಂಬದ ಯುವತಿಗೆ ಕೆಟ್ಟ ಮೆಸೇಜ್ ಹಾಗೂ ಅಶ್ಲೀಲ ಫೋಟೋ ಕಳಿಸಿದ್ದ ವಿಚಾರ ಹೇಳಿಕೊಂಡಿದ್ದಾರೆ.
ಮೊದಲಿಗೆ ರಮ್ಯಾ ಅವರಿಗೆ ಕೆಟ್ಟ ಕಾಮೆಂಟ್ ಮಾಡಿರುವ ಬಗ್ಗೆ ಪ್ರಜ್ವಲ್ ಗರಂ ಆಗಿದ್ದಾರೆ. 'ಯಾರ ಫ್ಯಾನ್ಸ್ ಆದರೂ ಒಂದು ಜವಾಬ್ದಾರಿ ಇರಬೇಕು. ಈಗ ಎಲ್ಲರ ಕೈಯಲ್ಲೂ ಫೋನ್ ಇದೆ. ಎಲ್ಲರಿಗೂ ನಾವು ಏನು ಬೇಕಾದ್ರೂ ನಮ್ಮನ್ನ ಯಾರೂ ಬಂದು ಕೇಳಲ್ಲ ಅನ್ನೋ ಧೈರ್ಯ ಇದೆ. ಹಿಂದೆ ನಿಂತು ಯಾರು ಏನಾದ್ರೂ ಮಾಡಬಹುದು. ಆದರೆ ಧೈರ್ಯ ಇದ್ರೆ ಮುಂದೆ ಬಂದು ಮಾತಾಡಬೇಕು' ಎಂದು ಪ್ರಜ್ವಲ್ ಕೆಟ್ಟ ಕಾಮೆಂಟ್ ಮಾಡುವವರಿಗೆ ಸವಾಲ್ ಹಾಕಿದ್ದಾರೆ.

'ನಾನು ಕೂಡ ದೂರು ಕೊಡ್ತೀನಿ'
ಇನ್ನು ರಮ್ಯಾಗೆ ಕೆಟ್ಟ ಕಾಮೆಂಟ್ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸುವಾಗ ತಮ್ಮ ನಾದಿನಿಗೆ ಕೆಟ್ಟ ಮೆಸೇಜ್, ಫೋಟೋಸ್ ಕಳುಹಿಸಿರುವ ವಿಚಾರವನ್ನೂ ಪ್ರಜ್ವಲ್ ರಿವೀಲ್ ಮಾಡಿದ್ದಾರೆ. 'ನಿಜ ಹೇಳಬೇಕಂದ್ರೆ ನನ್ನ ಪತ್ನಿ ರಾಗಿಣಿ ತಂಗಿ (ನಾದಿನಿ) ಕನ್ನಿಕಾಗೂ ಅವರ ಸ್ಟುಡಿಯೋ ನಂಬರ್ ಇದೆ. ಅದಕ್ಕೆ ಯಾರೋ ಒಬ್ಬ 280 ಫೋನ್ ಕಾಲ್ ಮಾಡಿದ್ದ. ಅಷ್ಟೇ ಅಲ್ಲ ಇತ್ತೀಚೆಗೆ ಅಶ್ಲೀಲವಾದ ಫೋಟೋಗಳನ್ನ ಕೂಡ ಕಳುಹಿಸಿದ್ದಾನೆ. ಆದರೆ ನಾವು ಏನೇ ಮಾಡಿದರೂ ಅದು ಲೀಗಲ್ ಆಗಿ ಹೋಗಬೇಕು. ಈ ಬಗ್ಗೆ ನಾನೂ ಮಾತನಾಡಿದ್ದೀನಿ, ದೂರು ಕೊಡಬೇಕು ಎಂದುಕೊಂಡಿದ್ದೀನಿ. ಹಾಗಾಗಿ ಯಾರದ್ದೇ ಅಭಿಮಾನಿಗಳಾದರೂ ಜವಾಬ್ದಾರಿಯಿಂದ ಇರಿ' ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
'ಇದೇ ವರ್ಷ ಸಿನಿಮಾ ರಿಲೀಸ್'
ಪ್ರಜ್ವಲ್ ಅಭಿನಯದ ಕರಾವಳಿ ಸಿನಿಮಾದ ಶೂಟಿಂಗ್ ಶೇ 90ರಷ್ಟು ಮುಗಿದಿದ್ದು, ಡಬ್ಬಿಂಗ್ ಮಾಡಲಾಗುತ್ತಿದೆ. ಇದೇ ವರ್ಷ ತೆರೆಗೆ ಬರಲಿದೆ ಎಂದಿದ್ದಾರೆ. ಇತ್ತೀಚೆಗೆ ತೆರೆಕಂಡ ರಾಜ್ ಬಿ.ಶೆಟ್ಟಿ ಅವರ ಸು ಫ್ರಮ್ ಸೋ ಸಿನಿಮಾ ವೀಕ್ಷಿಸಿದ ಅವರು ಒಳ್ಳೆಯ ಸಿನಿಮಾಗಳಿಗೆ ಜನರು ಯಾವಾಗಲೂ ಸಪೋರ್ಟ್ ಮಾಡಿದ್ದಾರೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ ಎಂದಿದ್ದಾರೆ.
'ವರ್ಷಕ್ಕೆ ನನಗೂ ನಾಲ್ಕು ಸಿನಿಮಾ ಮಾಡಬೇಕು ಅನ್ನೋ ಆಸೆ. ಈ ಹಿಂದೆ ಅದನ್ನ ನಾನು ಮಾಡಿದ್ದೇನೆ. ಈಗ ಓಟಿಟಿ ವೇದಿಕೆಗಳಲ್ಲಿ ಬರುತ್ತಿರುವ ಕಂಟೆಂಟ್ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಇದೆ. ಮೊದಲೆಲ್ಲ ಆ ಭಾಷೆ, ಆ ಚಿತ್ರರಂಗದ ಜೊತೆ ಫೈಟ್ ಅಂತಿದ್ರು. ಈಗಿನ ಚಿಕ್ಕ ಮಕ್ಕಳೆಲ್ಲ ಕೊರಿಯನ್ ಸಿನಿಮಾಗಳ ಡೈಲಾಗ್ ಹೇಳುತ್ತವೆ. ಹಾಗಾಗಿ ನಾವು ಕೂಡ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಲು ಪ್ರಯತ್ನ ಮಾಡ್ತೀನಿ' ಎಂದಿದ್ದಾರೆ ಡೈನಮಿಕ್ ಪ್ರಿನ್ಸ್.












Click it and Unblock the Notifications