Fun Bucket Bhargav: ಖ್ಯಾತ ಯೂಟ್ಯೂಬರ್‌ಗೆ 20 ವರ್ಷ ಜೈಲು ಶಿಕ್ಷೆ
ತೆಲುಗಿನಲ್ಲಿ ಟಿಕ್ ಟಾಕ್ ಮತ್ತು ಯೂಟ್ಯೂಬ್ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಭಾರ್ಗವ್‌ಗೆ ಬರೋಬ್ಬರಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಫನ್ ಬಕೆಟ್ ಭಾರ್ಗವ್ ಹೆಸರಿನಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಮೇಲೆ 14 ವರ್ಷದ ಬಾಲಕಿಯ ಮೇಲೆ ಹಲ್ಲೆ, ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ.
2021ರಲ್ಲಿ ಫನ್ ಬಕೆಟ್ ಭಾರ್ಗವ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ವಿಜಯವಾಡದ ವಿಶೇಷ ನ್ಯಾಯಾಲಯ ಜನವರಿ 10 ರಂದು ಆರೋಪಿಯನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೂಡ ಆದೇಶಿಸಿದೆ.

ಯೂಟ್ಯೂಬರ್ ಭಾರ್ಗವ್‌ರನ್ನು 2021ರಲ್ಲಿ ವಿಜಯವಾಡ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ಹಲವು ದಿನಗಳ ನ್ಯಾಯಾಂಗ ಬಂಧನದ ಬಳಿಕ ಅವರಿಗೆ ಜಾಮೀನು ನೀಡಲಾಯಿತು. ಸತತವಾಗಿ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಆರು ತಿಂಗಳ ಬಳಿಕ ಅವರ ಜಾಮೀನನ್ನು ನ್ಯಾಯಾಲಯ ರದ್ದುಗೊಳಿಸಿದ್ದರಿಂದ ಅವರನ್ನು ಮತ್ತೆ ಬಂಧಿಸಲಾಗಿತ್ತು.
ಪೋಕ್ಸೋ ಕಾಯ್ದೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟ ವಿವಿಧ ಕಾಯ್ದೆಗಳ ಅಡಿಯಲ್ಲಿ ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಈಗ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಭಾರ್ಗವ್ ಮೇಲಿದ್ದ ಆರೋಪಗಳೇನು?
ಟಿವಿ ಧಾರವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದ್ದ ಭಾರ್ಗವ್, ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ. ಭಾರ್ಗವ್‌ನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾದ ಸಂದರ್ಭದಲ್ಲಿ ತಾಯಿಗೆ ವಿಚಾರ ತಿಳಿಸಿದ್ದರಿಂದ ಈ ವಿಚಾರ ಬಹಿರಂಗವಾಯಿತು. ಸಂತ್ರೆಸ್ತೆ ತಾಯಿ ಕೂಡಲೇ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದರು.
ಟಿಕ್‌ಟಾಕ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್
ಟಿಕ್ ಟಾಕ್‌ನಲ್ಲಿ ಫನ್ ಬಕೆಟ್ ಭಾರ್ಗವ್ ತಮ್ಮ ಕಾಮಿಡಿ ವಿಡಿಯೋಗಳಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿಕೊಂಡಿದ್ದರು. ಅವರ ವಿಡಿಯೋಗಳು ಕೋಟಿಗಟ್ಟಲೆ ವೀಕ್ಷಣೆಗಳನ್ನು ಕೂಡ ಪಡೆಯುತ್ತಿದ್ದವು. ಅದರಲ್ಲೂ ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಫನ್ ಬಕೆಟ್ ಭಾರ್ಗವ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ತಮ್ಮ ಕಾಮಿಡಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು.
ಆತ ಫೇಸ್‌ಬುಕ್‌ನಲ್ಲಿ 9.4 ಲಕ್ಷ ಹಿಂಬಾಲಕರನ್ನು ಹೊಂದಿದ್ದಾನೆ. ಯೂಟ್ಯೂಬ್‌ನಲ್ಲಿ ಕೂಡ ಈತನ ವಿಡಿಯೋಗಳಿಗೆ ಲಕ್ಷ ಲಕ್ಷ ವೀಕ್ಷಣೆಗಳು ಬರುತ್ತಿದ್ದವು. ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಆತ ತೆಲುಗು ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು, ಹಣ ಮಾಡುವ ಅವಕಾಶವಿತ್ತು, ಆದರೆ ಸಿಕ್ಕ ಅವಕಾಶವನ್ನು ಮಾಡಬಾರದ ಕೆಲಸಕ್ಕೆ ಬಳಸಿಕೊಂಡಿದ್ದರಿಂದ ಜೀವನವಿಡಿ ಜೈಲಿನಲ್ಲಿ ಕಳೆಯುವಂತಾಗಿದೆ.












Click it and Unblock the Notifications