Actor Passed Away: ಸಿನಿಮಾರಂಗದಲ್ಲಿ 20 ವರ್ಷ ಮಿಂಚಿದ್ದ ಖ್ಯಾತ ನಟ ಇನ್ನಿಲ್ಲ!
ತೆಲುಗು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ಫಿಶ್ ವೆಂಕಟ್ ಖ್ಯಾತಿಯ ನಟ ಮಂಗಳಂಪಲ್ಲಿ ವೆಂಕಟೇಶ್ ಅವರು ಬಹು ಅಂಗಾಗ ವೈಫಲ್ಯದಿಂದ ನಿಧನರಾಗಿದ್ದಾರೆ. ಮೂತ್ರಪಿಂಡ ಮತ್ತು ಲಿವರ್ ವೈಫಲ್ಯದಿಂದ ವೆಂಕಟ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಕಟ್ ಅವರನ್ನು ಕಸಿ ಸರ್ಜರಿಗೆ ಆರ್ಥಿಕ ನೆರವು ಕೋರಿದ್ದರು. ಟಾಲಿವುಡ್‌ನ ಕೆಲ ನಟರು ಇವರ ಚಿಕಿತ್ಸೆ ಹಣಕಾಸಿನ ನೆರವು ಕೂಡ ನೀಡಿದ್ದರು. ಆದರೂ ಚಿಕಿತ್ಸೆ ಫಲಿಸದೆ ಅವರು 53ನೇ ವಯಸ್ಸಿನಲ್ಲಿ ನಿಧನರಾದರು.
ಇವರು ಹೆಚ್ಚಾಗಿ ಕಾಮಿಡಿ ಹಾಗೂ ವಿಲನ್ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದರು. ಚಿತ್ರರಂಗದಲ್ಲಿ ಇವರು ಫಿಶ್ ವೆಂಕಟ್ ಎಂದೇ ಕರೆಯಲ್ಪಡುತ್ತಿದ್ದರು. ವೆಂಕಟ್ ಭಾರತದ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿ ಜನಿಸಿದರು. ಅವರು ಮೀನುಗಾರರನ್ನು ನೆನಪಿಸುವ ತೆಲಂಗಾಣ ಉಪಭಾಷೆಯನ್ನು ಬಲವಾಗಿ ಬಳಸುತ್ತಿದ್ದರು. ಹೀಗಾಗಿ ಅವರಿಗೆ ಫಿಶ್ ವೆಂಕಟ್ ಎಂಬ ಹೆಸರು ಬಂದಿತ್ತು.

ತೆಲುಗು ಚಿತ್ರರಂಗದ ಬಹುತೇಕ ದೊಡ್ಡ ಸ್ಟಾರ್ ನಟರ ಜೊತೆ ವೆಂಕಟ್ ತೆರೆ ಹಂಚಿಕೊಂಡಿದ್ದರು. ಫಿಶ್ ವೆಂಕಟ್ ಅವರು ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ರೋಗ ದೀರ್ಘಕಾಲದಿಂದ ಇತ್ತು. ಇತ್ತೀಚೆಗೆ ಇದು ತೀವ್ರ ಸ್ಥಿತಿಗೆ ಕಂಡುಬಂದಿದ್ದರಿಂದ ಅವರು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳ ಚೇತರಿಕೆಯ ನಂತರ ಮತ್ತೆ ಅವರ ಆರೋಗ್ಯ ಹದಗೆಟ್ಟಿತ್ತು. ನಂತರ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ವೆಂಕಟ್ ಅವರ ಬದುಕು ಮುಶೀರಾಬಾದ್‌ನ ಮೀನು ಮಾರ್ಕೆಟ್‌ನಲ್ಲಿ ಮೀನು ವ್ಯಾಪಾರದಿಂದ ಪ್ರಾರಂಭವಾಯಿತು. ಈ ಕಾರಣದಿಂದಲೇ "ಫಿಶ್ ವೆಂಕಟ್" ಎಂಬ ಹೆಸರು ಹುಟ್ಟಿಕೊಂಡಿತು. ನಂತರ ನಟ ಶ್ರೀಹರಿ ಮೂಲಕ ತೆಲುಗು ಸಿನಮಾ ರಂಗಕ್ಕೆ ಅವರು ಕಾಲಿಟ್ಟರು. 20 ವರ್ಷಕ್ಕೂ ಅಧಿಕ ಕಾಲ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಇವರ ನಿಧನವು ತೆಲುಗು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದ್ದು, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರಿಗೆ ನಗು ಮೂಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ವೆಂಕಟ್ ಅವರಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಸ್ಟಾರ್ ನಟರಿಂದ ಆರ್ಥಿಕ ನೆರವು
ವೆಂಕಟ್ ತೀವ್ರ ಮೂತ್ರಪಿಂಡ ಮತ್ತು ಲಿವರ್ ವೈಫಲ್ಯದಿಂದ ಬಳಲುತ್ತಿದ್ದರು. ಅವರ ಮೂತ್ರಪಿಂಡ ಕಸಿಗೆ 50 ಲಕ್ಷ ರೂಪಾಯಿ ಅಗತ್ಯವಿದೆ ಎಂದು ವೆಂಕಟ್ ಕುಟುಂಬ ಬೇಡಿಕೊಂಡಿತ್ತು. ಬಳಿಕ ವೆಂಕಟ್ ಅವರ ಚಿಕಿತ್ಸೆಗೆ ಪವರ್ ಸ್ಟಾರ್ ಹಾಗು ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ನಟ ವಿಶ್ವಕ್ ಸೇನ್ ಮತ್ತು ತೆಲಂಗಾಣ ಸರ್ಕಾರದ ಸಚಿವರು ಸೇರಿ ಹಲವರು ಆರ್ಥಿಕ ಸಹಾಯ ಮಾಡಿದ್ದರು. ಆದರೆ ದುರದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಯಾವುದೇ ಮೂತ್ರಪಿಂಡ ದಾನಿ ಸಿಗಲಿಲ್ಲ. ನಟ ಪ್ರಭಾಸ್ ಕೂಡ ಸಹಾಯಕ್ಕೆ ನಿಂತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಆದರೆ ಇದನ್ನು ವೆಂಕಟ್ ಅವರ ಕುಟುಂಬ ನಿರಾಕರಿಸಿತ್ತು.












Click it and Unblock the Notifications