Ajith Kumar: ದುಬೈ ಕಾರ್ ರೇಸ್‌ನಲ್ಲಿ ನಟ ಅಜಿತ್ ಕುಮಾರ್ ಭರ್ಜರಿ ಗೆಲುವು
ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದವರು, ಆರ್ಥಿಕವಾಗಿಯೂ ಸಬಲರಾದವರು ಮತ್ತೊಂದು ಕ್ಷೇತ್ರದ ಕಡೆ ಗಮನ ಹರಿಸುವುದು ತೀರಾ ಕಡಿಮೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಹಿಟ್ ಆದವರಂತೂ ರಾಜಕೀಯ ಬಿಟ್ಟರೆ ಬೇರೆ ಇತರ ಕ್ಷೇತ್ರಗಳತ್ತ ಮುಖ ಮಾಡುವುದು ಕಡಿಮೆ. ಆಸೆ, ಕನಸುಗಳಿದ್ದರೂ ಕೂಡ ರಿಸ್ಕ್ ಬೇಡ ಎನ್ನುವ ದೃಷ್ಟಿಯಿಂದ ತಮ್ಮ ಕ್ಷೇತ್ರದಲ್ಲೇ ಮುಂದುವರಿಯುತ್ತಾರೆ. ಆದರೆ ಇಲ್ಲೊಬ್ಬ ಸ್ಟಾರ್ ನಟ ನಟನೆ ಮಾತ್ರವಲ್ಲದೇ ತಮ್ಮ ಕನಸಿಗೆ ಜೀವ ತುಂಬಿ ಇದೀಗ ಕಾರ್ ರೇಸ್‌ನಲ್ಲಿ ಗೆದ್ದು ಸಂಭ್ರಮಿಸಿದ್ದಾರೆ.
ಹೌದು ತಮಿಳು ನಟ ಅಜಿತ್ ಕುಮಾರ್ ಬರೋಬ್ಬರಿ ಹದಿನೈದು ವರ್ಷಗಳ ನಂತರ ಕಾರ್ ರೇಸ್‌ಗೆ ಇಳಿದು ಗೆದ್ದು ಬೀಗಿದ್ದಾರೆ. ದುಬೈ 24H ಕಾರ್ ರೇಸ್‌ನ 911 ಜಿಟಿ3R ವಿಭಾಗದಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರ ರೇಸಿಂಗ್ ತಂಡ ಮೂರನೇ ಸ್ಥಾನ ಗಳಿಸಿದೆ.

ಅಜಿತ್ ಕುಮಾರ್ ಮೊದಲಿನಿಂದೂ ರೇಸರ್ ಆಗಿದ್ದು, ಕಾರು ಹಾಗೂ ಬೈಕ್ ರೇಸ್‌ಗಳ ಮೇಲೆ ಅವರಿಗೆ ಅತಿಯಾದ ಆಸಕ್ತಿ ಇತ್ತು. ಆದರೆ ನಟನೆಗೆ ಬಂದ ಅಜಿತ್ ಈ ಕ್ಷೇತ್ರದಲ್ಲಿ ಸಖತ್ ಬ್ಯೂಸಿಯಾದರು. ಹಿಟ್ ಸಿನಿಮಾಗಳನ್ನೇ ನೀಡುತ್ತಾ ನಟನಾ ಕ್ಷೇತ್ರದಲ್ಲಿ ಸಾಧಿಸಿದ ಮೇಲೆ ಅಜಿತ್ ಕುಮಾರ್ ಮತ್ತೆ ತಮ್ಮ ಕನಸಿನ ಬೆನ್ನು ಹತ್ತಿದ್ದಾರೆ. 2010ರ ನಂತರ ಕಾರ್ ರೇಸಿಂಗ್‌ನಿಂದ ಹೊರ ಉಳಿದಿದ್ದ ಅಜಿತ್ ಕುಮಾರ್ ಬರೋಬ್ಬರಿ 15 ವರ್ಷಗಳ ನಂತರ ಮತ್ತೆ ರೇಸ್ ಟ್ರಾಕ್‌ಗೆ ಇಳಿದಿದ್ದಾರೆ.
ದುಬೈ 24H ಕಾರ್ ರೇಸ್‌ನಲ್ಲಿ ಭಾಗವಹಿಸಲು ಸಜ್ಜಾದ ಅಜಿತ್ ಕುಮಾರ್ ಮೊದಲು ಬಲಿಷ್ಠ ತಂಡವನ್ನು ಕಟ್ಟಿಕೊಂಡರು. ಬಳಿಕ ತಾವು ವೈಯಕ್ತಿಕವಾಗಿ ಸಿದ್ಧರಾಗಬೇಕಿದ್ದ ಕಾರಣ ತೂಕ ಇಳಿಸಿಕೊಂಡಿದ್ದರು. ಕಳೆದ ಅನೇಕ ದಿನಗಳಿಂದ ರೇಸ್ ತರಬೇತಿ ಪಡೆಯುತ್ತಿದ್ದ ಅಜಿತ್ ಕುಮಾರ್ ತರಬೇತಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದರು. ಈ ಅಪಘಾತ, ನೋವಿಗೂ ಕ್ಯಾರೆ ಎನ್ನದೇ ರೇಸ್‌ಗಿಳಿದ ಅಜಿತ್ ಕುಮಾರ್ ಹಾಗೂ ಅವರ ತಂಡ ಇದೀಗ ಗೆದ್ದು ಬೀಗಿದ್ದಾರೆ.

ದುಬೈ 24H ಕಾರ್ ರೇಸ್‌ನ 911 ಜಿಟಿ3R ವಿಭಾಗದಲ್ಲಿ ಮೂರು ಅಥವಾ ನಾಲ್ಕು ಜನರ ತಂಡವು ನಿರಂತರವಾಗಿ 24 ಗಂಟೆಗಳ ಕಾಲ ಕಾರನ್ನು ಓಡಿಸಬೇಕು. ಇದರಲ್ಲಿ ಅಜಿತ್ ಅವರ ತಂಡವು 24 ಗಂಟೆಗಳಲ್ಲಿ 26 ಬಾರಿ ಕಾರು ನಿಲ್ಲಿಸಿದ್ದು, 568 ಸುತ್ತುಗಳನ್ನು ಓಡಿಸುವ ಮೂಲಕ 3ನೇ ಸ್ಥಾನ ಗಳಿಸಿದೆ. ನಟ ಅಜಿತ್ ಸಾಧನೆ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದು, ಎಲ್ಲೆಡೆ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದೆ.












Click it and Unblock the Notifications