ತಾನು ಜೈಲಿನಲ್ಲಿದ್ದು ಪ್ರೇಯಸಿಗೆ ಜೆಟ್ ಗಿಫ್ಟ್ ಕೊಟ್ಟ ಪ್ರಿಯತಮ
ಪ್ರೇಮಿಗಳ ದಿನದಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸುಕೇಶ್ ಚಂದ್ರಶೇಖರ್ ಖಾಸಗಿ ಜೆಟ್ ಉಡುಗೊರೆಯಾಗಿ ನೀಡಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಸ್ತುತ ಹಣ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆದರೂ ಕೂಡ ತಮ್ಮ ಪ್ರೇಯಸಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಜೈಲಿನಿಂದಲೇ ಜೆಟ್ ಉಡುಗೊರೆಯಾಗಿ ನೀಡಿದ್ದಾರೆ. ಜೆಟ್ ನೋಂದಣಿ ಸಂಖ್ಯೆ ಕೂಡ ಜಾಕ್ವೆಲಿನ್ ಹುಟ್ಟಿದ ದಿನಾಂಕವಾಗಿದೆ. ಈ ವಿಚಾರ ತಿಳಿದು ಪಡ್ಡೆ ಹುಡುಗರು ಪ್ರೀತಿ ಅಂದರೆ ಹೀಗಿರಬೇಕು ಎನ್ನುತ್ತಿದ್ದಾರೆ.
ಹೌದು... ಜೈಲಿನಲ್ಲಿ ಇರುವ ಸುಕೇಶ್ ಆಗಾಗ ಜಾಕ್ವೆಲಿನ್‌ಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾರೆ. ಇದೀಗ ಪ್ರೇಮಿಗಳ ದಿನದಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಪ್ರಣಯ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಪ್ರೀತಿಯಿಂದ 'ಪುಟ್ಟಿ' ಎಂದು ಸಂಬೋಧಿಸಿ, ಅವರ ಮೇಲಿನ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸುಕೇಶ್ ಬರೆದು ಆ ಪ್ರೇಮ ಪತ್ರದಲ್ಲಿ ಏನಿದೆ?

ಸುಕೇಶ್ ಬರೆದ ಪತ್ರದಲ್ಲಿ, 'ಪುಟ್ಟಿ, ಮೊದಲನೆಯದಾಗಿ ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು, ಈ ವರ್ಷ ನಮಗೆ ಬಹಳಷ್ಟು ಸಕಾರಾತ್ಮಕತೆ ಮತ್ತು ವಿಶೇಷ ವಿಷಯಗಳೊಂದಿಗೆ ಪ್ರಾರಂಭವಾಗಿದೆ. ಈ ಪ್ರೇಮಿಗಳ ದಿನವು ತುಂಬಾ ವಿಶೇಷವಾಗಿದೆ. ಏಕೆಂದರೆ ಇದು ನಮ್ಮ ಜೀವನದ ಉಳಿದ ಪ್ರೇಮಿಗಳ ದಿನಗಳನ್ನು ಒಟ್ಟಿಗೆ ಕಳೆಯಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ನಾನು ನಿನ್ನನ್ನು ನಿಜವಾಗಿಯೂ ತುಂಬಾ ಪ್ರೀತಿಸುತ್ತೇನೆ, ನೀನು ಜಗತ್ತಿನ ಅತ್ಯುತ್ತಮ ವ್ಯಾಲೆಂಟೈನ್ ಡೇ, ನಾನು ನಿನ್ನನ್ನು ಹುಚ್ಚನಂತೆ ಪ್ರೀತಿಸುತ್ತೇನೆ' ಎಂದಿದ್ದಾರೆ.
ಜೆಟ್ ಮೇಲೆ ನಟಿ ಹೆಸರು
ನಟಿಯ ಹೆಸರಿನ ಮೊದಲ ಅಕ್ಷರಗಳನ್ನು ಜೆಟ್ ಮೇಲೆ ಬರೆಯಲಾಗಿದೆ. ಜೆಟ್‌ನ ನೋಂದಣಿ ಸಂಖ್ಯೆ ಜಾಕ್ವೆಲಿನ್ ಅವರ ಜನ್ಮ ದಿನಾಂಕ ಆಗಿದೆ ಎಂದು ಸುಕೇಶ್ ಹೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಜೆಟ್ ಕೊಟ್ಟು ಸುಕೇಶ್ ಮತ್ತಷ್ಟು ಬರೆದಿದ್ದಾರೆ, 'ಈಗ ಈ ಜೆಟ್‌ನೊಂದಿಗೆ ನೀನು ಯಾವಾಗಲೂ ಚಿತ್ರೀಕರಣಕ್ಕಾಗಿ ಪ್ರಪಂಚದಾದ್ಯಂತ ಹಾರಾಡುತ್ತಲೇ ಇರುತ್ತೀಯ. ನಿನ್ನ ಆಯ್ಕೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ನಿನ್ನ ಪ್ರಯಾಣ ತುಂಬಾ ಸುಲಭವಾಗುತ್ತದೆ' ಎಂದಿದ್ದಾರೆ.
"ನಾನು ಮತ್ತೆ ಹುಟ್ಟಿದರೆ, ನಿನ್ನ ಹೃದಯವಾಗಿ ಹುಟ್ಟಲು ಬಯಸುತ್ತೇನೆ"
ಪತ್ರದಲ್ಲಿ ಇನ್ನೂ ಸಾಕಷ್ಟು ವಿಷಯಗಳನ್ನು ಸುಕೇಶ್ ಬರೆದಿದ್ದಾರೆ. "ಈ ಪ್ರೇಮಿಗಳ ದಿನದಂದು ನನಗೆ ಒಂದೇ ಒಂದು ಆಸೆ ಇದೆ. ನಾನು ಮತ್ತೆ ಹುಟ್ಟಿದರೆ, ನಿನ್ನೊಳಗೆ ನಿನ್ನ ಹೃದಯವಾಗಿ ಹುಟ್ಟಬೇಕೆಂದು ನಾನು ಬಯಸುತ್ತೇನೆ. ನನ್ನ ಗೊಂಬೆ ನಿನ್ನನ್ನು ಪಡೆದ ನಾನು ಅತ್ಯಂತ ಅದೃಷ್ಟಶಾಲಿ ವ್ಯಕ್ತಿ. ನಿನ್ನನ್ನು ನನ್ನ ವ್ಯಾಲೆಂಟೈನ್ ಆಗಿ ಈ ಜೀವನದಲ್ಲಿ ನಾನು ಅತ್ಯಂತ ಸುಂದರ, ಅದ್ಭುತ ವ್ಯಕ್ತಿಯನ್ನು ಕಂಡುಕೊಂಡೆ" ಎಂದು ಪತ್ರ ಕೊನೆಗೊಳಿಸಿದ್ದಾರೆ.
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್
ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಆಗಾಗ್ಗೆ ವಿಶೇಷ ಸಂದರ್ಭಗಳಲ್ಲಿ ಸುಖೇಶ್ ಜಾಕ್ವೆಲಿನ್‌ಗೆ ಬರೆದ ಪ್ರೇಮ ಪತ್ರವು ಜೈಲಿನಿಂದ ಬಹಿರಂಗಗೊಳ್ಳುತ್ತದೆ. ಜಾಕ್ವೆಲಿನ್ ಸುಕೇಶ್ ಜೊತೆಗಿನ ಯಾವುದೇ ಪ್ರಣಯ ಸಂಬಂಧವನ್ನು ನಿರಾಕರಿಸಿದ್ದಾರೆ.












Click it and Unblock the Notifications