CCL 2025: ಇಂದು ಕರ್ನಾಟಕ ಬುಲ್ಡೋಜರ್ಸ್‌ಗೆ ಪಂಜಾಬ್ ದಿ ಶೇರ್ ಸವಾಲು; ಗೆಲುವಿನ ವಿಶ್ವಾಸದಲ್ಲಿ ಸುದೀಪ್ ಪಡೆ!
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025ರ ಲೀಗ್ ಹಂತದ ಕೊನೆಯ ಪಂದ್ಯಗಳು ಫೆಬ್ರವರಿ 22 ಮತ್ತು 23 ರಂದು ನಡೆಯಲಿವೆ. ಈಗಾಗಲೇ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಕರ್ನಾಟಕ ಬುಲ್ಡೋಜರ್ಸ್ ನಾಲ್ಕನೇ ಪಂದ್ಯವನ್ನಾಡಲು ಸಜ್ಜಾಗಿದೆ.
ಕರ್ನಾಟಕ ಬುಲ್ಡೋಜರ್ಸ್ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವ ಸಾಧಿಸುವ ಮೂಲಕ ಸಿಸಿಎಲ್ 2025ರ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿತ್ತು. ಬಳಿಕ ಹೈದರಾಬಾದ್‌ನಲ್ಲಿ ನಡೆದ ಪಂದ್ಯಗಳಲ್ಲಿ ಚೆನ್ನೈ ರ್‍ಹಿನೋಸ್ ಮತ್ತು ಮುಂಬೈ ಹೀರೋಸ್ ವಿರುದ್ಧ ಜಯ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಶನಿವಾರ (ಫೆಬ್ರವರಿ 22) ರಂದು ನಡೆಯುವ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಸೂರತ್‌ನ ಲಾಲ್‌ಭಾಯಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಸಂಜೆ 6.30ಕ್ಕೆ ಆರಂಭವಾಗಲಿದೆ.
ಭರ್ಜರಿ ಫಾರ್ಮ್‌ನಲ್ಲಿ ಬುಲ್ಡೋಜರ್ಸ್
ಕರ್ನಾಟಕ ಬುಲ್ಡೋಜರ್ಸ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಮುಂಬೈ ಹೀರೋಸ್ ವಿರುದ್ಧ ಡಾರ್ಲಿಂಗ್ ಕೃಷ್ಣ 36 ಎಸೆತಗಳಲ್ಲೇ 111 ರನ್ ಗಳಿಸುವ ಮೂಲಕ ಅಬ್ಬರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಒಂದು ಶತಕ ಗಳಿಸಿರುವ ಅವರು ಬುಲ್ಡೋಜರ್ಸ್‌ನ ಬ್ಯಾಟಿಂಗ್‌ಗೆ ಬಲ ತುಂಬಿದ್ದಾರೆ. ರಾಜೀವ್ ಹನು, ಮಂಜುನಾಥ್ ಗೌಡ, ಕರಣ್ ಆರ್ಯನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಚಂದನ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್ ಉತ್ತಮ ಪ್ರದರ್ಶನ ನೀಡುತ್ತಿದ್ದು ಪಂಜಾಬ್ ದಿ ಶೇರ್ ವಿರುದ್ಧ ಇದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಈ ಬಾರಿ ಸಿಸಿಎಲ್ 2025ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯುತ್ತಿದ್ದು ಕರ್ನಾಟಕದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮಾರ್ಚ್ 1 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮಾರ್ಚ್ 2ರಂದು ಫೈನಲ್ ಪಂದ್ಯ ನಡೆಯಲಿದೆ. ಸಿಸಿಎಲ್ 2025ರ ಎಲ್ಲಾ ಪಂದ್ಯಗಳನ್ನು ಜಿಯೋಹಾಟ್‌ಸ್ಟಾರ್ ನಲ್ಲಿ ವೀಕ್ಷಿಸಬಹುದಾಗಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ ಬುಲ್ಡೋಜರ್ಸ್: ಸುದೀಪ್ (ನಾಯಕ), ರಾಜೀವ್ ಹನು, ಡಾರ್ಲಿಂಗ್ ಕೃಷ್ಣ, ಜಯರಾಮ್ ಕಾರ್ತಿಕ್, ಗೋಲ್ಡನ್ ಸ್ಟಾರ್ ಗಣೇಶ್, ಮಂಜುನಾಥ್ ಗೌಡ, ಕರಣ್ ಆರ್ಯನ್,ಸುನೀಲ್ ರಾವ್, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ಅನೂಪ್ ಭಂಡಾರಿ.
ಪಂಜಾಬ್ ದಿ ಶೇರ್: ಹಾರ್ಡಿ ಸಂಧು (ನಾಯಕ), ಮಯೂರ್ ಮೆಹ್ತಾ, ಅನುಜ್ ಖುರಾನ, ರಾಹುಲ್ ಜೈಟ್ಲಿ, ನಿಂಜಾ, ದಕ್ಷ್ ಸಿಂಗ್, ಬಬ್ಬಲ್ ರಾಜ್, ಸುಯ್ಯಶ್ ರೈ, ರೌನಕ್ ಭಿಂದರ್, ಜಸ್ಸೀ ಗಿಲ್, ಕರಣ ವಾಹಿ.












Click it and Unblock the Notifications