Srinivasa Rao Death: ಶಿವಣ್ಣರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ
ಖ್ಯಾತ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಅವರು, ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭಾವಂತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, ಪ್ರಯೋಗಾತ್ಮಕ ಹಾಗೂ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ನೀಡಿದ್ದರು.

Srinivasa Rao: ಶಿವಣ್ಣರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ
ಕನ್ನಡ ಚಿತ್ರರಂಗದಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೊಡುಗೆ ವಿಶೇಷವಾಗಿದೆ. ಶಿವರಾಜ್‌ಕುಮಾರ್ ಅವರನ್ನು 'ಆನಂದ್' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ಡಾ. ರಾಜ್‌ಕುಮಾರ್ ಅವರ ಹಲವು ಜನಪ್ರಿಯ ಸಿನಿಮಾಗಳಿಗೂ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. 'ಚಲಿಸುವ ಮೋಡಗಳು', 'ಹಾಲು ಜೇನು', 'ಭಾಗ್ಯದ ಲಕ್ಷ್ಮೀ ಬಾರಮ್ಮ', 'ಎರಡು ನಕ್ಷತ್ರಗಳು', 'ಶ್ರಾವಣ ಬಂತು' ಹಾಗೂ 'ಶ್ರುತಿ ಸೇರಿದಾಗ' ಸೇರಿದಂತೆ ಹಲವು ಗಮನಾರ್ಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಚಿರಂಜೀವಿ ಸುಧಾಕರ್' ಹಾಗೂ ಜಗ್ಗೇಶ್ ಅಭಿನಯದ 'ಮೇಕಪ್' ಸಿನಿಮಾಗಳಿಗೂ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು. 1988ರಲ್ಲಿ ಕಮಲ್ ಹಾಸನ್ ಅಭಿನಯದ 'ಪುಷ್ಪಕ ವಿಮಾನ' ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದರು. ಯಾವುದೇ ಸಂಭಾಷಣೆ ಇಲ್ಲದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರೊಂದಿಗೆ ಸಿಂಗೀತಂ ಅವರ ವಿಭಿನ್ನ ನಿರ್ದೇಶನ ಶೈಲಿಗೆ ಸಾಕ್ಷಿಯಾಗಿತ್ತು.
Srinivasa Rao: ಹಲವು ಜನಪ್ರಿಯ ಸಿನಿಮಾ ನಿರ್ದೇಶನ
ತೆಲುಗು ಚಿತ್ರರಂಗದಲ್ಲಿಯೂ ಸಿಂಗೀತಂ ಶ್ರೀನಿವಾಸ ರಾವ್ ಅವರದ್ದು ದೊಡ್ಡ ಕೊಡುಗೆ. 'ಆದಿತ್ಯ 369', 'ಭೈರವ ದ್ವೀಪಂ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ನಂದಮೂರಿ ಬಾಲಕೃಷ್ಣ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಅವರು ಕೆಲಸ ಮಾಡಿದ್ದಾರೆ.
ಸಿಂಗೀತಂ ಶ್ರೀನಿವಾಸ ರಾವ್ ಅವರ ಪ್ರತಿಭೆಗೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ನಂದಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳು ಸಂದಿವೆ.
ವಯಸ್ಸು 90ರ ಗಡಿ ದಾಟಿದ ಬಳಿಕವೂ ಅವರ ಸಿನಿಮಾ ಮೇಲಿನ ಆಸಕ್ತಿ ಕಡಿಮೆಯಾಗಿರಲಿಲ್ಲ. ತಮ್ಮ 94ನೇ ವಯಸ್ಸಿನಲ್ಲಿಯೂ ಮತ್ತೆ ಸಿನಿಮಾ ನಿರ್ದೇಶನಕ್ಕೆ ಮರಳಿದ್ದ ಅವರು, ಕೊನೆಯವರೆಗೂ ಚಿತ್ರರಂಗದೊಂದಿಗೆ ತಮ್ಮ ನಂಟನ್ನು ಮುಂದುವರಿಸಿದ್ದರು. ಪ್ರಯೋಗಾತ್ಮಕ ಸಿನಿಮಾಗಳಿಗೆ ಹೊಸ ಆಯಾಮ ನೀಡಿದ, ಹಲವು ಭಾಷೆಗಳ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಹಿರಿಯ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ.


Click it and Unblock the Notifications
