ಕಿರುತೆರೆಗೆ ಮರಳಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ: ಪ್ರತಿ ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು?
ಬಿಜೆಪಿ ಪ್ರಭಾವಿ ನಾಯಕಿ ಸ್ಮೃತಿ ಇರಾನಿ ಅವರು ಕಿರುತೆರೆಗೆ ಮರಳಿದ್ದಾರೆ. ಮೊದಲಿಗೆ ನಟಿಯಾಗಿದ್ದ ಸ್ಮೃತಿ ಅವರು ರಾಜಕಾರಣಿಯಾಗಿ ಮಿಂಚಿದ್ದರು. ದಶಕಗಳ ಬಳಿಕ ಅವರು ಮತ್ತೆ ತಮ್ಮ ಪಾತ್ರಕ್ಕೆ ಮರಳುತ್ತಿದ್ದು, ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2000ರಲ್ಲಿ ಮನೆಮಾತಾಗಿದ್ದ ಈ ಧಾರಾವಾಹಿಯು ಹೊಸ ರೂಪದಲ್ಲಿ ಬರಲಿದ್ದು, ಬಹುತೇಕ ಆಗಿನ ತಾರಾಗಣವನ್ನೇ ಒಳಗೊಂಡಿರುತ್ತದೆ ಎನ್ನಲಾಗಿದೆ. ಸ್ಮೃತಿ ಅವರು "ತುಳಸಿ ವಿರಾಣಿ" ಪಾತ್ರದಲ್ಲಿ ಮತ್ತೆ ಮಿಂಚಲಿದ್ದು, ಸೀರಿಯಲ್ ಸೆಟ್‌ನಲ್ಲಿರುವ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಸ್ಮೃತಿ ಇರಾನಿ ಅವರ ಸಂಭಾವನೆ ಬಗ್ಗೆಯೂ ಎಲ್ಲರ ಹುಬ್ಬೇರಿಸಿದೆ.
ಸ್ಮೃತಿ ಇರಾನಿ ಅವರ ನಟಿಸುತ್ತಿರುವ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯು ಇದೇ ಜುಲೈ 29ರಂದು ರಾತ್ರಿ 10:30ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗಲಿದೆ. ತಮ್ಮ ಪಾತ್ರಕ್ಕೆ ವಾಪಸ್ ಆಗುವ ಬಗ್ಗೆ ಸ್ಮೃತಿ ಇರಾನಿ ಖಚಿತಪಡಿಸಿದ್ದು, ಕೆಲವು ಪ್ರಯಾಣಗಳು ಪೂರ್ಣ ವೃತ್ತಕ್ಕೆ ಬರುತ್ತವೆ. ಈ ಧಾರಾವಾಹಿಗೆ ಮರಳುವುದು ಕೇವಲ ಒಂದು ಪಾತ್ರಕ್ಕೆ ಹಿಂತಿರುಗುವ ಹೆಜ್ಜೆಯಲ್ಲ, ಆದರೆ ಭಾರತೀಯ ದೂರದರ್ಶನವನ್ನು ಮರು ವ್ಯಾಖ್ಯಾನಿಸಿದ ಮತ್ತು ನನ್ನ ಸ್ವಂತ ಜೀವನವನ್ನು ಮರುರೂಪಿಸಿದ ಕಥೆಗೆ ಮರಳುವುದು. ಇದು ನನಗೆ ಯಶಸ್ಸಿಗಿಂತ ಹೆಚ್ಚಿನದನ್ನು ನೀಡಿತು. ಇದು ಲಕ್ಷಾಂತರ ಮನೆಗಳಿಗೆ ಸಂಪರ್ಕವನ್ನು ನೀಡಿತು, ಒಂದು ಪೀಳಿಗೆಯ ಭಾವನಾತ್ಮಕ ರಚನೆಯಲ್ಲಿ ಒಂದು ಸ್ಥಾನ ನೀಡಿತು ಎಂದು ಸಂತಸ ಹಂಚಿಕೊಂಡಿದ್ದಾರೆ.

ಮೊದಲ-ಈಗಿನ ಸಂಭಾವನೆ ಎಷ್ಟು?
ವರದಿಗಳ ಪ್ರಕಾರ, ಸ್ಮೃತಿ ಇರಾನಿ ಅವರು ಹಲವು ವರ್ಷಗಳ ಬಳಿಕ ಕಿರುತೆರೆಗೆ ವಾಪಸ್ ಆಗುತ್ತಿರುವುದು, ರಾಜಕೀಯದಲ್ಲೂ ಅವರ ಜನಪ್ರಿಯತೆ ಹೆಚ್ಚಿರುವುದರಿಂದ ಸಂಭಾವನೆ ಗಗನಕ್ಕೇರಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ 2000ರಲ್ಲಿ ಪ್ರತಿ ಸಂಚಿಕೆಗೆ ಸ್ಮೃತಿ ಅವರು 1,800 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಈಗ ಹೊಸ ರೂಪದಲ್ಲಿ ಬರಲಿರುವ ಧಾರಾವಾಹಿಯ ಪ್ರತಿ ಎಪಿಸೋಡ್‌ಗೆ ಬರೋಬ್ಬರಿ ₹14 ಲಕ್ಷ ರೂಪಾಯಿ ಪಡೆಯಲಿದ್ದಾರೆ ಎನ್ನಲಾಗಿದೆ. ಎರಡು ದಶಕಗಳಲ್ಲಿ ಅವರ ಸಂಭಾವನೆ ಕೂಡ ಭಾರೀ ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸೀರಿಯಲ್‌ನಲ್ಲಿ ಸ್ಮೃತಿ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಅವರ ಸಂಭಾವನೆ 14 ಲಕ್ಷ ರೂಪಾಯಿ ಎನ್ನುವುದು ಅಧಿಕೃತವಾಗಿ ಖಚಿತವಾಗಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಇರುವ ಕ್ರೇಜ್‌ನಿಂದಾಗಿ ಭಾರಿ ಡಿಮ್ಯಾಂಡ್‌ನಲ್ಲಿದೆ ಎಂದು ಹೇಳಲಾಗುತ್ತಿದೆ.
ಹಳೆಯ ಫೋಟೋ ಹಂಚಿಕೊಂಡ ಸ್ಮೃತಿ
25 ವರ್ಷಗಳ ಹಿಂದೆ ಒಂದು ಕಥೆ ಭಾರತೀಯ ಮನೆಗಳನ್ನು ಪ್ರವೇಶಿಸಿ ಅಸಂಖ್ಯಾತ ಜೀವನಗಳ ಭಾಗವಾಯಿತು. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಕೇವಲ ಒಂದು ಪ್ರದರ್ಶನವಾಗಿರಲಿಲ್ಲ. ಅದು ಭಾವನೆ, ನೆನಪು, ಆಚರಣೆ. ಕುಟುಂಬಗಳು ಒಟ್ಟಿಗೆ ಕುಳಿತುಕೊಳ್ಳಲು ಎಲ್ಲವನ್ನೂ ವಿರಾಮಗೊಳಿಸಿದ ಸಮಯ. ಅಳುವುದು, ನಗುವುದು, ಭರವಸೆ ಇತ್ತು. ತುಳಸಿಯನ್ನು ತಮ್ಮ ಸ್ವಂತ ಕುಟುಂಬದ ಭಾಗವನ್ನಾಗಿ ಮಾಡಿದ ಪ್ರತಿಯೊಬ್ಬ ವೀಕ್ಷಕರಿಗೂ ಧನ್ಯವಾದಗಳು. ಈ ಪ್ರಯಾಣ ನನ್ನದು ಮಾತ್ರ ಅಲ್ಲ, ನಮ್ಮದು. ಅದು ಯಾವಾಗಲೂ ಇರುತ್ತದೆ ಎಂದು ಸ್ಮೃತಿ ಇರಾನಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ನಾನು ಮೊದಲು "ತುಳಸಿ" ಪ್ರಪಂಚಕ್ಕೆ ಕಾಲಿಟ್ಟಾಗ, ಅವಳ ಕಥೆ ಎಷ್ಟು ದೂರ ಪ್ರಯಾಣಿಸುತ್ತದೆ ಎಂದು ನಾನು ಊಹಿಸಲೂ ಸಾಧ್ಯವಾಗಲಿಲ್ಲ. ಕೇವಲ ವಾಸದ ಕೋಣೆಗಳಿಗೆ ಮಾತ್ರವಲ್ಲ, ಭಾರತದಾದ್ಯಂತ ಲಕ್ಷಾಂತರ ಜನರ ಹೃದಯಗಳಿಗೆ, ತುಳಸಿ ಕೇವಲ ಒಂದು ಪಾತ್ರವಾಗಿರಲಿಲ್ಲ. ಅವಳು ಮಗಳು, ತಾಯಿ, ಸ್ನೇಹಿತೆ ಮತ್ತು ಅನೇಕರಿಗೆ ಅವರ ಸ್ವಂತ ಶಕ್ತಿ, ತ್ಯಾಗ ಮತ್ತು ದೃಢಸಂಕಲ್ಪದ ಪ್ರತಿಬಿಂಬವಾದಳು ಎಂದು ಸ್ಮೃತಿ ನೆನೆದಿದ್ದಾರೆ.












Click it and Unblock the Notifications