ಕನ್ನಡಿಗರ ‘ಕೆಜಿಎಫ್’ ಎದುರು ಭೀಕರ ಸೋಲು, 2023ರಲ್ಲಿ ‘ಹ್ಯಾಟ್ರಿಕ್’ ಹಿಟ್ ಕೊಟ್ಟ ಬಾಲಿವುಡ್ ಬಿಗ್ ಸ್ಟಾರ್!
ಇನ್ನೇನು ಬಾಲಿವುಡ್ ಕಥೆ ಮುಗಿದೇ ಹೋಯ್ತು, ಬಾಲಿವುಡ್ ಸಿನಿಮಾಗಳು ಓಡೋದಿಲ್ಲ. ಹಿಂದಿ ಸಿನಿಮಾ ರಂಗಕ್ಕೆ ಸಂಕಷ್ಟ ಎದುರಾಗಿದೆ ಅನ್ನೋ ಆರೋಪಗಳ ನಡುವೆ 2023ರಲ್ಲಿ ಬಾಲಿವುಡ್ ಭರ್ಜರಿ ಕಂಬ್ಯಾಕ್ ಮಾಡಿದೆ. ಅದರಲ್ಲೂ 2018 ರಲ್ಲಿ ಕನ್ನಡಿಗರ 'ಕೆಜಿಎಫ್' ಎದುರು ಭೀಕರ ಸೋಲು ಕಂಡಿದ್ದ ಬಾಲಿವುಡ್‌ನ ಸ್ಟಾರ್ ನಟ 2023ರಲ್ಲಿ ಭರ್ಜರಿಯಾಗಿ, ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ.
ಬಾಲಿವುಡ್ ಸೊರಗಿ ಹೋಗಿತ್ತು, ಅದರಲ್ಲೂ 2018 ರಲ್ಲಿ ಕನ್ನಡಿಗರ 'ಕೆಜಿಎಫ್' ಅಬ್ಬರ ಶುರುವಾದ ನಂತರ ಹೊಸ ಅಲೆ ಎದ್ದಿತ್ತು. ಹೀಗಿದ್ದಾಗ ಒಂದು ಸಣ್ಣ ಗೆಲುವಿಗಾಗಿ ಹಿಂದಿ ಚಿತ್ರರಂಗ ಪರದಾಡಿತ್ತು. ಸಾಲು ಸಾಲು ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಸೋತು, ಸೋತು ಸುಣ್ಣವಾಗಿದ್ದವು. ಹೀಗಾಗಿ ಮತ್ತೆ ಹಿಂದಿ ಸಿನಿಮಾ ರಂಗ ಗೆದ್ದು ಬರಲ್ಲ, ಬಾಲಿವುಡ್ ಇನ್ನೇನು ಇತಿಹಾಸದ ಪುಟ ಸೇರಲಿದೆ ಎನ್ನುವಷ್ಟರಲ್ಲಿ 2023ರಲ್ಲಿ ಅಬ್ಬರಿಸಿದ್ದಾರೆ ಶಾರುಖ್ ಖಾನ್. ಅದ್ರಲ್ಲೂ ಒಂದೆ ವರ್ಷದಲ್ಲಿ 3 ಭರ್ಜರಿ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ ಕಿಂಗ್ ಖಾನ್.

ಕೆಜಿಎಫ್ ಎದುರು ದೊಡ್ಡ ಸೋಲು
ಅದು 2018ರ ಡಿಸೆಂಬರ್ ತಿಂಗಳ 2ನೇ ವಾರ, ಯಾರೂ ಊಹೆ ಮಾಡಿರದ ಸಾಧನೆ ನಡೆದೇ ಹೋಗಿತ್ತು. ಕನ್ನಡಿಗರ ಸಿನಿಮಾ 'ಕೆಜಿಎಫ್-1' ಟ್ರೇಲರ್ ರಿಲೀಸ್ ಆಗಿದ್ದೇ ತಡ ಸಂಚಲನ ಸೃಷ್ಟಿಯಾಗಿತ್ತು. ಹೀಗಿದ್ದಾಗಲೇ ನಟ ಶಾರುಖ್ ಖಾನ್ ಅವರ 'ಜೀರೋ' ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿತ್ತು. ಆದ್ರೆ 'ಕೆಜಿಎಫ್-1' ಟ್ರೇಲರ್ ನೋಡಿದ್ದವರು, ಈಗ 'ಜೀರೋ' ರಿಲೀಸ್ ಮಾಡಬೇಡಿ ಎಂಬ ಸಲಹೆ ನೀಡಿದ್ದರು. ಯಾಕಂದ್ರೆ ಕೆಜಿಎಫ್ ಚಾಪ್ಟರ್ 1 ಗೆದ್ದು ಬೀಗೋದು ಪಕ್ಕಾ, ಹೀಗಾಗಿ ಶಾರುಖ್ ಖಾನ್ ಅವರಿಗೆ ಹಿನ್ನಡೆ ಆಗಬಹುದು ಎಂಬ ಮಾತು ಕೇಳಿಬಂದಿತ್ತು.
ಹಾಕಿದ್ದು 200 ಕೋಟಿ ರೂಪಾಯಿ, ಬಂದಿದ್ದು?
ಏನೇ ಹೇಳಿದರೂ ಜೀರೋ ಸಿನಿಮಾ ರಿಲೀಸ್ ಡೇಟ್ ಮುಂದೂಡದ ಸಿನಿಮಾ ತಂಡ, ಆಗ ಭೀಕರ ಸೋಲು ಕಂಡಿತ್ತು. 200 ಕೋಟಿ ರೂಪಾಯಿ ಬಂಡವಾಳದಲ್ಲಿ ತಯಾರಾಗಿದ್ದ ಈ ಸಿನಿಮಾ, 191.43 ಕೋಟಿ ಗಳಿಸಿತ್ತು. ಹೀಗೆ ಒಂದು ಸೋಲು ಬಾಲಿವುಡ್ ಬಾದ್ ಷಾ ಎಂಬ, ದೊಡ್ಡ ಬಿರುದು ಪಡೆದು ಹೆಸರು ಮಾಡಿದ್ದ ಶಾರುಖ್ ಅವರಿಗೆ ದೊಡ್ಡ ಹಿನ್ನಡೆ ಉಂಟು ಮಾಡಿತ್ತು. ಆದರೆ ಅದನ್ನೆಲ್ಲಾ ಈಗ ಗೆದ್ದು ಬಂದಿದ್ದಾರೆ ನಟ ಶಾರುಖ್ ಖಾನ್.

ಗೆದ್ದು ಬಂದರು ನಟ ಶಾರುಖ್!
'ಜೀರೊ' ಸಿನಿಮಾ ಸೋಲಿನ ಬಳಿಕ ಸ್ವಲ್ಪ ದಿನ ತೆರೆ ಹಿಂದೆ ಇದ್ದ ನಟ ಶಾರುಖ್ ಖಾನ್ ಈ ವರ್ಷ 'ಪಠಾಣ್' ಆಗಿ ಖಡಕ್ ಕಂಬ್ಯಾಕ್ ಮಾಡಿದ್ರು. ಈ ಚಿತ್ರ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿತ್ತು. ಆ ನಂತರ ಬಂದಿದ್ದ ಜವಾನ್ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗಾಗಿ 'ಡಂಕಿ' ಸಿನಿಮಾ ಬಗ್ಗೆ ಸಹಜವಾಗಿ ಕ್ರೇಜ್ ಹೆಚ್ಚಾಗಿತ್ತು. ಈ ಎಲ್ಲಾ ನಿರೀಕ್ಷೆ ನಿಜವಾಗಿ, ಶಾರುಖ್ ಖಾನ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ.
256 ಕೋಟಿ ಗಳಿಸಿದ 'ಡಂಕಿ' ಸಿನಿಮಾ!
ಹೌದು ಬಿಡುಗಡೆ ಆದ 5 ದಿನದಲ್ಲಿ ಶಾರುಖ್ ಖಾನ್ ಅವರ 'ಡಂಕಿ' ಸಿನಿಮಾ ಬರೋಬ್ಬರಿ 256 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಈ ಮೂಲಕ ಹೊಸ ದಾಖಲೆ ಬರೆದಿದೆ ಬಾಲಿವುಡ್‌ನ ಬಾದ್ ಷಾ ಶಾರುಖ್ ಖಾನ್ ಅವರ ಮೂವಿ. ಹಾಗೇ ಒಂದೇ ವರ್ಷದಲ್ಲಿ 3 ಸೂಪರ್ ಹಿಟ್ ಸಿನಿಮಾ ನೀಡಿದ ಕೀರ್ತಿಗೂ ಅವರು ಈಗ ಪಾತ್ರರಾಗಿದ್ದಾರೆ. ಇನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ ಡಂಕಿ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ.
ಕ್ರಿಸ್‌ಮಸ್ ಸಂಭ್ರಮದ ಜೊತೆ ಶಾರುಖ್ ಖಾನ್ ಫ್ಯಾನ್ಸ್‌ಗೆ ಸಖತ್ ಸರ್ಪ್ರೈಸ್ ಸಿಕ್ಕಿದೆ. ಇನ್ನೇನು ಹೊಸ ವರ್ಷ ಕೂಡ ಬರಲಿದ್ದು, ಮತ್ತೆ ಸಾಲು ಸಾಲು ರಜೆಗಳು ಎದುರಾಗಲಿವೆ. ಹೀಗಾಗಿ 'ಡಂಕಿ' ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳು ದಟ್ಟವಾಗಿವೆ. ಹಾಗೇ ಈ ಸಿನಿಮಾ ಕೂಡ 1000 ಕೋಟಿ ಕ್ಲಬ್ ಸೇರಬಹುದಾ? ಎಂಬ ಕುತೂಹಲ ಮೂಡಿದೆ.












Click it and Unblock the Notifications