Jaggesh: ನಟ ಜಗ್ಗೇಶ್ ಮದುವೆಗೆ ಖರ್ಚಾಗಿದ್ದು ಕೇವಲ ₹750, ಆ ದಿನ ಹೇಗಿತ್ತು ಸಂಭ್ರಮ?
ಸ್ಯಾಂಡಲ್‌ವುಡ್‌ನ ನವರಸನಾಯಕ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಲವ್‌ಸ್ಟೋರಿ ಎಲ್ಲರಿಗೂ ಗೊತ್ತಿದೆ. ಪರಿಮಳ ಅವರನ್ನು ವಿವಾಹವಾದ ವಿಚಾರದ ಬಗ್ಗೆ ಅವರು ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಆದರೆ ಅವರ ಮದುವೆಗೆ ಖರ್ಚಾಗಿದ್ದೆಷ್ಟು ಎಂಬು ಸ್ವಾರಸ್ಯಕರ ವಿಚಾರ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಇಂದು ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಈ ವಿಚಾರವನ್ನು ಜಗ್ಗೇಶ್ ರಿವೀಲ್ ಮಾಡಿದ್ದಾರೆ. ಇಷ್ಟಕ್ಕೂ ಜಗ್ಗೇಶ್ ಅವರ ಮದುವೆಗೆ ಆಗ ಖರ್ಚೆಷ್ಟು ಎಂದು ತಳಿದರೆ ನೀವಂತೂ ಶಾಕ್ ಆಗೋದು ಗ್ಯಾರಂಟಿ!
ಈಗೆಲ್ಲ ಮದುವೆ ಅಂದರೆ ತಮಾಷೆಯ ಮಾತಲ್ಲ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆಯಂತೆ ಇದು ಅಷ್ಟು ಸುಲಭವಲ್ಲ. ಮದುವೆ ಅಂದಾಕ್ಷಣ ಎಷ್ಟೆಲ್ಲ ಖರ್ಚು? ಅಬ್ಬಬ್ಬಾ, ಹೇಗಪ್ಪಾ ನಿಭಾಯಿಸೋದು ಅಂತ ತಲೆಮೇಲೆ ಕೈಇಟ್ಕೋತಾರೆ ಜನ. ಸ್ಥಿತಿವಂತರಂತೂ ಕೋಟಿ ಕೋಟಿ ಸುರಿದು ಅದ್ಧೂರಿ ಮದುವೆಯಾಗ್ತಾರೆ. ಇನ್ನೂ ಕೆಲವರು ಬಡವಾ..ನೀನು ಇಟ್ಟಂತಿರು ಅನ್ಕೊಂಡು ಇರೋದ್ರಲ್ಲೇ ಸಿಂಪಲ್ಲಾಗಿ ಮದುವೆ ಮಾಡ್ಕೋತಾರೆ. ಮತ್ತೆ ಕೆಲವರು ಮೈತುಂಬಾ ಸಾಲ ಮಾಡಿಕೊಂಡು ಮದುವೆ ಹಸೆಮಣೆ ಏರುತ್ತಾರೆ. ಆದರೆ, ನಟ ಜಗ್ಗೇಶ್ ಅವರ ಮದುವೆ ಹೇಗಾಯ್ತು ಎಂಬ ಕುತೂಹಲಕಾರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಅಂದಹಾಗೆ ನಟ ಜಗ್ಗೇಶ್ ಹಾಗೂ ಪರಿಮಳ ಅವರ ವಿವಾಹವು 1984ರಲ್ಲಿ ನೆರವೇರಿತ್ತು. ಇಂದು ಅವರು ತಮ್ಮ 41ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಜಗ್ಗೇಶ್ ಅವರು ತಮ್ಮ ಮದುವೆ ಕುರಿತಾದ ಅಚ್ಚರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅವರ ಮದುವೆ ಆದ ಖರ್ಚಿನ ವಿಚಾರವೇ ಟ್ವಿಸ್ಟ್ ನೀಡುವಂತಿದೆ.
750 ರೂಪಾಯಿ ಕೂಡ ಸಾಲ!
"ತಾಳಿಕಟ್ಟಿದ ಶುಭವೇಳೆಗೆ ಇಂದು 41 ವರ್ಷ. 1984ರಲ್ಲಿ ಈ ದಿನ 9 ಗಂಟೆ ಶುಭ ಮುಹೂರ್ತದಲ್ಲಿ ರಾಯರ ಗ್ರಂಥದ ನಾಮಾಂಕಿತೆ "ಪರಿಮಳ" ಅವರಿಗೆ ತಾಳಿ ಕಟ್ಟಿದ ಕ್ಷಣ ಎಂದು ಜಗ್ಗೇಶ್ ಅವರು ತಮ್ಮ ಮದುವೆಯಾದ ದಿನವನ್ನು ಮೆಲುಕು ಹಾಕಿದ್ದಾರೆ. ಕೇವಲ 4 ಜನ ಸ್ನೇಹಿತರೇ ಜನಸಾಗರ ಎಂದು ಹಾಸ್ಯವಾಗಿ ಹೇಳಿಕೊಂಡಿದ್ದಾರೆ. ಇನ್ನು ಮದುವೆಗೆ ಖರ್ಚಾಗಿದ್ದು 750 ರೂಪಾಯಿ. ಅದು ಕೂಡ ಸ್ವಂತದ್ದಲ್ಲ, ಸಾಲ ಎಂದು ಆ ದಿನಗಳನ್ನು ನೆನೆದಿದ್ದಾರೆ ಜಗ್ಗೇಶ್. ಮದುವೆ ಊಟದ ವ್ಯವಸ್ಥೆ 2 ಪ್ಲೇಟ್ ಪೂರಿ ಹಾಗೂ 2 ಕಾಫಿ ಎಂದಿದ್ದಾರೆ. ಮುಂದೆ ನಡೆದ ಎಲ್ಲಾ ಪವಾಡ ರಾಯರ ಕೃಪೆಯಿಂದ ಎಂದು ಸ್ಮರಿಸಿದ್ದಾರೆ. ಶುದ್ಧವಿದ್ದವ ಗೆದ್ದವ" ಎನ್ನುವ ಮೂಲಕ ಜಗ್ಗೇಶ್ ಅವರು ತಮ್ಮ ವೈವಾಹಿಕ ಜೀವನದ ಪುಟಗಳನ್ನು ತಿರುವಿದ್ದಾರೆ.

ಜಗ್ಗೇಶ್ ಅವರು ಸ್ಯಾಂಡಲ್‌ವುಡ್‌ನ ಹಾಸ್ಯ ನಟರಾಗಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದಲೇ ಅವರನ್ನು ನವರಸನಾಯಕ ಎಂದು ಕರೆಯಲಾಗುತ್ತಿದೆ. ತಮ್ಮ ಲವ್‌ಸ್ಟೋರಿ, ವಿವಾಹ, ಚಿತ್ರರಂಗದಲ್ಲಿನ ಅವರ ಜರ್ನಿ ಎಲ್ಲವನ್ನೂ ಅವರು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ರಾಜಕೀಯದ ಕಡೆಗೆ ಮುಖಮಾಡಿ ಬಿಜೆಪಿ ಪಕ್ಷದಿಂದ ರಾಜ್ಯಸಭಾ ಸಂಸದರೂ ಆಗಿದ್ದಾರೆ. ಇದರೊಂದಿಗೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಜಗ್ಗೇಶ್ ಮಿಂಚುತ್ತಿದ್ದಾರೆ.












Click it and Unblock the Notifications