ಅಡುಗೆ ಮಾಡೋಕೆ ಗೊತ್ತಿರುವ ಒಳ್ಳೆ ಹುಡುಗರೇ ಬಿ ಅಲರ್ಟ್! ಸಾಯಿ ಪಲ್ಲವಿ ಮದುವೆ ಆಗೋ ಚಾನ್ಸ್ ಸಿಕ್ರೂ ಸಿಗಬಹುದು
ನಟಿ ಸಾಯಿ ಪಲ್ಲವಿ (Sai Pallavi) ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಒಂದೆಡೆ ತನ್ನ ಜೀವನ ಸಂಗಾತಿ ಹೇಗಿರಬೇಕು ಎಂಬುದನ್ನು ಹೇಳಿಕೊಂಡು ಅಡುಗೆ ಮಾಡೋಕೆ ಗೊತ್ತಿರುವ ಹುಡುಗರ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ರಾವಣನ ಬಗ್ಗೆ ನೀಡಿದ ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಹೀಗಾಗಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಈಗ ಎರಡು ಕುತೂಹಲಗಳು. ಅಡುಗೆ ಮಾಡುವ ಒಳ್ಳೆಯ ಹುಡುಗ ಸಿಕ್ಕರೆ ಮದುವೆಗೆ ಓಕೆ ಎನ್ನಬಹುದಾ? ಹಾಗಾದರೆ ರಾವಣನ ಬಗ್ಗೆ ಅವರು ಹೇಳಿದ್ದೇನು?

ಅಡುಗೆ ಮಾಡೋಕೆ ಗೊತ್ತಿರುವ ಹುಡುಗರೇ ಗಮನಿಸಿ!
ಸಾಯಿ ಪಲ್ಲವಿ ಮದುವೆ ಬಗ್ಗೆ ಏನಾದರೂ ಮಾತನಾಡಿದರೆ ಅಭಿಮಾನಿಗಳಿಗೆ ಕುತೂಹಲ ಮೂಡುವುದು ಸಹಜ. ಆದರೆ ಈ ಬಾರಿ ಅವರ ಮಾತಿನಲ್ಲಿ ದೊಡ್ಡ ನಿರೀಕ್ಷೆಗಳ ಪಟ್ಟಿಯೇನೂ ಇರಲಿಲ್ಲ. ಬದಲಿಗೆ, ಒಳ್ಳೆಯ ಮನುಷ್ಯನಾಗಿರಬೇಕು, ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಗುಣವಿರಬೇಕು, ಅಷ್ಟೇ ಅಲ್ಲ, ಅಡುಗೆ ಮಾಡುವುದೂ ಗೊತ್ತಿದ್ದರೆ ಇನ್ನೂ ಒಳ್ಳೆಯದು ಎಂಬ ಮಾತು ಹೇಳಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರೌಡಿ ಬೇಬಿ
ಅಮಿತಾಭ್ ಬಚ್ಚನ್ (amitabh bachchan) ನಡೆಸಿಕೊಡುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 18ರ ವಿಶೇಷ ಸಂಚಿಕೆಯಲ್ಲಿ ಸಾಯಿ ಪಲ್ಲವಿ ಭಾಗವಹಿಸಿದ್ದರು. ತನ್ನ ಮುಂಬರುವ 'ರಾಮಾಯಣ' ಸಿನಿಮಾದ ಸಹನಟರಾದ ರಣಬೀರ್ ಕಪೂರ್ ಮತ್ತು ರವಿ ದುಬೆ ಅವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಸಾಯಿ ಪಲ್ಲವಿಗೆ, ಜೀವನ ಸಂಗಾತಿಯಲ್ಲಿ ಯಾವ ಗುಣಗಳನ್ನು ಬಯಸುತ್ತೀರಿ ಎಂದು ಅಮಿತಾಭ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಾಯಿ ಪಲ್ಲವಿ, ʻಮೊದಲಿಗೆ ಅವರು ಒಳ್ಳೆಯ ಮನುಷ್ಯರಾಗಿರಬೇಕುʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತನ್ನೊಬ್ಬನ ಬಗ್ಗೆಯೇ ಅತಿಯಾಗಿ ಯೋಚಿಸುವ ಸ್ವಾರ್ಥದ ಗುಣ ಇರಬಾರದು. ತನ್ನ ನಡೆನುಡಿಗಳನ್ನು ತಾನೇ ಪರಿಶೀಲಿಸಿಕೊಳ್ಳುವ, ತಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿರಬೇಕು ಎಂದಿದ್ದಾರೆ.
ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನೆ ಮನುಜಾ ಕಣೋ
ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಮನಸ್ಸಿರಬೇಕು. ಮಾಡಿದ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡಬಾರದು ಎಂಬುದು ಸಾಯಿ ಪಲ್ಲವಿ ಅವರ ಅಭಿಪ್ರಾಯ. ಹಂಸಲೇಖ ಬರೆದಿರುವ ಫೇಮಸ್ ಹಾಡು, ʻತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನೆ ಮನುಜ ಕಣೋʼ ದಂತೆ ಸಾಯಿಪಲ್ಲವಿಗೂ ತಪ್ಪು ಮಾಡಿದ್ರೂ ತಿದ್ದಿ ನಡೆಯೋ ಹುಡುಗ ಬೇಕಂತೆ.
ಅಡುಗೆ ಗೊತ್ತಿದ್ರೆ ಸಾಕಂತೆ ನೋಡಿ!
ಇಷ್ಟೆಲ್ಲ ಹೇಳಿದ ಬಳಿಕ, ದೊಡ್ಡದಾದ ಬೇಡಿಕೆಗಳ ಪಟ್ಟಿಯೇನೂ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಗಾತಿಗೆ ಅಡುಗೆ ಮಾಡಲು ಗೊತ್ತಿದ್ದರೆ ಇನ್ನೂ ಚೆನ್ನಾಗಿರುತ್ತದೆ ಎಂದು ನಗುತ್ತಾ ಹೇಳಿದ್ದಾರೆ. ಇದು ಈಗ ವೈರಲ್ ಆಗಿದೆ. ಹಿಂದಿನಿಂದಲೂ ಸಾಯಿಪಲ್ಲವಿ ಮದುವೆ ಬಗ್ಗೆ ಸಂದರ್ಶಕರು ಪ್ರಶ್ನೆ ಕೇಳುತ್ತಲೇ ಬಂದಿದ್ದರು. ಆ ಕ್ಷಣಕ್ಕೆ ತೋಚಿದ್ದನ್ನು ಸಾಯಿ ಪಲ್ಲವಿ ಹೇಳಿ ಸುಮ್ಮನಾಗುತ್ತಿದ್ದರು. ಆದರೆ ಇದೀಗ ಅವರ ಮಾತಿನ ವರಸೆ ನೋಡಿದರೆ ನಿಜಕ್ಕೂ ಮದುವೆಯಾಗಲು ಮನಸ್ಸು ಮಾಡಿರುವಂತಿದೆ ಅನ್ನುವ ಮಾತು ಕೇಳಿಬರುತ್ತಿದೆ. ಜೊತೆಗೆ ಎರಡು ವರ್ಷಗಳ ಹಿಂದೆ ಅವರು ಮದುವೆಯ ಬಗ್ಗೆ ಮಾತನಾಡಿರೋ ತಮಿಳು ಸಂದರ್ಶನವೊಂದು ಮತ್ತೆ ಜೀವ ಪಡೆದುಕೊಂಡು ವೈರಲ್ ಆಗಿದೆ.
ಹುಡುಗ್ರು ರೆಸ್ಯೂಮ್ ರೆಡಿ ಮಾಡ್ಕೋಬಹುದು
ಸಾಯಿ ಪಲ್ಲವಿ ಸೂಚಿಸಿರುವ ಗುಣಗಳನ್ನ ನೋಡಿದ್ರಲ್ಲಾ, ಈಗ ಅಡುಗೆ ಗೊತ್ತಿರುವ ಹುಡುಗರು ಅಲರ್ಟ್ ಆಗಬಹುದು. ಯಾರಿಗೊತ್ತು, ರೌಡಿಬೇಬಿ ಸಾಯಿಪಲ್ಲವಿ ಲೈಫ್ ಪಾರ್ಟನರ್ ಆಗೋ ಚಾನ್ಸ್ ನಿಮಗೆ ಸಿಕ್ಕರೂ ಸಿಗಬಹುದು! ಒಳ್ಳೆಯ ಮನಸ್ಸು, ತಪ್ಪು ತಿದ್ದಿಕೊಳ್ಳುವ ಗುಣದ ಜೊತೆಗೆ ರುಚಿರುಚಿಯಾದ ಅಡುಗೆಯನ್ನೂ ಮಾಡಬಲ್ಲೆ ಎಂದು ಹೇಳಿಕೊಳ್ಳುವ ಹುಡುಗರಿಗೆ ಸಾಯಿ ಪಲ್ಲವಿಯಿಂದ ಗುಡ್ ನ್ಯೂಸ್ ಬಂದರೂ ಬರಬಹುದು ಅನ್ನೋ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿವೆ.
ಒಳ್ಳೆಯ ಹುಡುಗನಾದರೆ ಸಾಲದು, ಅಡುಗೆಯೂ ಬರಬೇಕು!
ಇಂದಿನ ದಿನಗಳಲ್ಲಿ ಜೀವನ ಸಂಗಾತಿಯ ಆಯ್ಕೆಯಲ್ಲಿ ಹಣ, ಹುದ್ದೆ, ಹೆಸರು, ಸೌಂದರ್ಯ ಹೀಗೆ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಆದರೆ ಸಾಯಿ ಪಲ್ಲವಿ ಹೇಳಿರುವುದರಲ್ಲಿ ವ್ಯಕ್ತಿತ್ವಕ್ಕೆ ಹೆಚ್ಚಿನ ಆದ್ಯತೆ ಇದೆ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪ್ರಬುದ್ಧತೆ ಮತ್ತು ಸ್ವಾರ್ಥವಿಲ್ಲದ ಮನಸ್ಸು ಸಂಬಂಧವನ್ನು ಗಟ್ಟಿಯಾಗಿಡಲು ಮುಖ್ಯ ಎಂಬ ಸಂದೇಶವೂ ಅವರ ಮಾತಿನಲ್ಲಿದೆ. ಅದರ ಜೊತೆಗೆ ಅಡುಗೆ ಬಲ್ಲ ಸಂಗಾತಿ ಬೇಕೆಂಬ ಮಾತು ಕೇಳಿ ಅಭಿಮಾನಿಗಳು ತಮಾಷೆ ಮಾಡಿಕೊಳ್ಳುವುದಕ್ಕೂ ಅವಕಾಶ ಸಿಕ್ಕಿದೆ. ಮದುವೆಯಾದ ಮೇಲೆ ಅಡುಗೆ ಮನೆಯ ಜವಾಬ್ದಾರಿ ಒಬ್ಬರ ಮೇಲೆಯೇ ಇರಬೇಕೆಂದಿಲ್ಲ. ಇಬ್ಬರೂ ಕೆಲಸ ಹಂಚಿಕೊಂಡು ಬದುಕು ನಡೆಸಿದರೆ ಸಂಬಂಧವೂ ಚೆನ್ನಾಗಿರುತ್ತದೆ, ಊಟವೂ ಸಮಯಕ್ಕೆ ಸಿದ್ಧವಾಗುತ್ತದೆ!
ಆದರೆ ಸಾಯಿ ಪಲ್ಲವಿ ಅವರ ಮನಸ್ಸು ಗೆಲ್ಲಲು ಅಡುಗೆ ಒಂದೇ ಸಾಕಾಗುವುದಿಲ್ಲ. ಅವರು ಹೇಳಿರುವಂತೆ ಒಳ್ಳೆಯ ವ್ಯಕ್ತಿತ್ವವೂ ಇರಬೇಕು. ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಗುಣವೂ ಇರಬೇಕು. ಅಡುಗೆ ಚೆನ್ನಾಗಿದ್ದರೂ ಸದಾ ತನ್ನದೇ ಸರಿ ಎಂದು ವಾದಿಸುವ ಸ್ವಭಾವವಿದ್ದರೆ ಅಲ್ಲಿ ಸಮಸ್ಯೆ ಶುರುವಾಗಬಹುದು.
ರಾಮಾಯಣ ಪ್ರೀಮಿಯರ್‌ನಲ್ಲಿ ಸಾಯಿ ಪಲ್ಲವಿ!
ಒಂದು ಕಡೆ ಸಂಗಾತಿಯ ಗುಣಗಳ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, ಇನ್ನೊಂದು ಕಡೆ 'ರಾಮಾಯಣ' ಸಿನಿಮಾದ ಜಾಗತಿಕ ಪ್ರೀಮಿಯರ್‌ನಲ್ಲಿ ರಾವಣನ ಕುರಿತು ನೀಡಿದ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಅಕ್ಟೋಬರ್ 27ರಂದು ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಶನ್ ಪಿಕ್ಚರ್ಸ್‌ನಲ್ಲಿ ಚಿತ್ರದ ಪ್ರೀಮಿಯರ್ ನಡೆದಿದ್ದು, ಈ ಸಂದರ್ಭದಲ್ಲಿ ಸಾಯಿ ಪಲ್ಲವಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ಸಂಸ್ಕೃತಿ ಮತ್ತು ಮಹಾಕಾವ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಈ ಸಿನಿಮಾ ಹೇಗೆ ನೆರವಾಗಬಹುದು ಎಂಬುದರ ಕುರಿತು ಮಾತನಾಡಿದ ಅವರು, ರಾಮಾಯಣದಿಂದ ವ್ಯಕ್ತಿಯೊಬ್ಬ ತನ್ನೊಳಗಿನ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಗುರುತಿಸಿಕೊಳ್ಳುವ ಪಾಠ ಕಲಿಯಬಹುದು ಎಂದು ಹೇಳಿದ್ದಾರೆ.
ರಾವಣ ಕೆಟ್ಟವನಲ್ಲ ಅಂದ ಸ್ಟಾರ್ ನಟಿ Sai Pallavi
"ರಾವಣ ಅಷ್ಟೊಂದು ಕೆಟ್ಟವನಲ್ಲ. ನಮ್ಮೊಳಗಿನ ರಾವಣನನ್ನು ಗುರುತಿಸಿ, ಕಾಲಕ್ರಮೇಣ ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ" ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರ ಈ ಹೇಳಿಕೆಯೇ ಈಗ ಚರ್ಚೆಯ ಕೇಂದ್ರವಾಗಿದೆ. ಕೆಲವರು ಅವರ ಮಾತುಗಳನ್ನು ಟೀಕಿಸಿದ್ದು, ಸೀತೆಯನ್ನು ಅಪಹರಿಸಿದ ರಾವಣನ ಬಗ್ಗೆ ಹೀಗೆ ಹೇಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಟಿಯ ಮಾತಿನ ಸಂದರ್ಭವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ರಾವಣನ ಕೃತ್ಯಗಳನ್ನು ಸಮರ್ಥಿಸುವ ಉದ್ದೇಶದಿಂದ ಮಾತನಾಡಿಲ್ಲ; ಪ್ರತಿಯೊಬ್ಬರೂ ತಮ್ಮೊಳಗಿನ ಕೆಟ್ಟ ಗುಣಗಳನ್ನು ಗುರುತಿಸಿಕೊಂಡು ಬದಲಾವಣೆಗೆ ಪ್ರಯತ್ನಿಸಬೇಕು ಎಂಬ ಸಂದೇಶ ನೀಡಿದ್ದಾರೆ ಎಂಬುದು ಅವರನ್ನು ಬೆಂಬಲಿಸುವವರ ವಾದ.
ಚರ್ಚೆಯಲ್ಲಿರುವ ರಾವಣ
'ರಾವಣ' ಎಂಬ ಹೆಸರೇ ಈಗ ಸೋಷಿಯಲ್ ಮೀಡಿಯಾದಲ್ಲಿ (social media) ದೊಡ್ಡ ಚರ್ಚೆಗೆ ಆಹಾರವಾಗಿದೆ. ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸಿರುವ ಯಶ್ ಒಂದು ಕಡೆ ಗಮನ ಸೆಳೆಯುತ್ತಿದ್ದರೆ, ಆ ಪಾತ್ರದ ನೈತಿಕ ಆಯಾಮದ ಕುರಿತು ಸಾಯಿ ಪಲ್ಲವಿ ನೀಡಿದ ಹೇಳಿಕೆ ಮತ್ತೊಂದು ಕಡೆ ಸುದ್ದಿಯಾಗುತ್ತಿದೆ.
ರಾಮಾಯಣ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ
'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' (ramayana) ಮೊದಲ ಭಾಗ ಮುಂದಿನ ತಿಂಗಳು ಅಂದರೆ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಎರಡನೇ ಭಾಗ 2027ರ ದೀಪಾವಳಿಗೆ ತೆರೆಕಾಣುವ ಸಾಧ್ಯತೆಯಿದೆ.


Click it and Unblock the Notifications
