ಫೌಂಡೇಷನ್ ಹಾಕಿದ್ರೆ ನನಗೆ ನಾನೇ ಬೇರೆಯವರ ಥರ ಕಾಣ್ತೀನಿ ಎಂದ ಸಾಯಿ ಪಲ್ಲವಿ! ಸೀತೆ ಪಾತ್ರಕ್ಕೆ ಮೇಕಪ್ ಮಾಡಿಲ್ವಂತೆ
ಸಿನಿಮಾ ನಟಿಯರು ಅಂದ್ರೆ ಮೇಕಪ್, ಸ್ಟೈಲಿಶ್ ಲುಕ್, ಗ್ಲಾಮರ್ ಇದೆಲ್ಲಾ ಕಾಮನ್. ಆದರೆ ಕೆಲವರು ಮಾತ್ರ ತಮ್ಮ ನ್ಯಾಚುರಲ್ ಲುಕ್‌ನಿಂದಲೇ ಜನರ ಮನಸ್ಸು ಗೆಲ್ಲುತ್ತಾರೆ. ಅಂತಹ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಮುಖಕ್ಕೆ ಹೆಚ್ಚು ಮೇಕಪ್ ಮಾಡಿಕೊಳ್ಳದೆ, ಸಹಜ ಸೌಂದರ್ಯದಲ್ಲೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಈಗ ಮತ್ತೆ ತನ್ನ ಮೇಕಪ್ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಫೌಂಡೇಷನ್ ಅಥವಾ ಕನ್ಸೀಲರ್ ಹಾಕಿಕೊಂಡರೆ ನನಗೆ ನಾನೇ ಬೇರೆಯವರಂತೆ ಕಾಣುತ್ತದೆ ಎಂದು ಹೇಳಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ನ್ಯಾಚುರಲ್ ಲುಕ್‌ಗೆ ಫ್ಯಾನ್ಸ್ ಫಿದಾ
ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ, ಈಗ ಸಿನಿಮಾದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಅವರ ನಟನೆ ಮಾತ್ರವಲ್ಲ, ಮೇಕಪ್ ಇಲ್ಲದ ನ್ಯಾಚುರಲ್ ಲುಕ್ ಕೂಡ ಸಾಕಷ್ಟು ಚರ್ಚೆಯಾಗಿದೆ. ಸೆಲೆಬ್ರಿಟಿ ಆಗಿದ್ದರೂ ಸಾಮಾನ್ಯ ಹುಡುಗಿಯಂತೆ ಕಾಣಿಸಿಕೊಳ್ಳುವ ಅವರ ಸ್ಟೈಲ್‌ಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ಶುರುವಲ್ಲಿ ಇನ್‌ಸೆಕ್ಯೂರಿಟಿ ಫೀಲ್ ಇತ್ತು
ಇತ್ತೀಚೆಗೆ ಪತ್ರಕರ್ತೆ ಬರ್ಖಾ ದತ್ ಜೊತೆಗಿನ ಸಂಭಾಷಣೆಯಲ್ಲಿ ಸಾಯಿ ಪಲ್ಲವಿ ತಮ್ಮ ಈ ಆಯ್ಕೆಯ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆರಂಭದಲ್ಲಿ ತನಗೂ ತನ್ನ ಲುಕ್ ಬಗ್ಗೆ ಇನ್‌ಸೆಕ್ಯೂರಿಟಿ ಫೀಲಿಂಗ್ ಇತ್ತು ಅಂತ ಒಪ್ಪಿಕೊಂಡಿದ್ದಾರೆ. ಆದರೆ ಸಮಯ ಕಳೆದಂತೆ ಪ್ರೇಕ್ಷಕರು ರಿಯಲ್ ಲುಕ್ ಆಂಡ್ ಫೀಲ್ ಅನ್ನು ಹೆಚ್ಚು ಇಷ್ಟು ಪಡುತಾರೆ, ಸಹಜವಾಗಿ ಕಾಣುವ ಪಾತ್ರಗಳನ್ನು ಲೈಕ್ ಮಾಡುತ್ತಾರೆ ಅನ್ನೋದು ಅರ್ಥವಾಯಿತು ಎಂದಿದ್ದಾರೆ.
ರಿಯಲ್ ಲೈಫ್ ಪಾತ್ರಗಳಿಗೆ ಕೃತಕತೆ ಬೇಡ
ಸಿನಿಮಾದಲ್ಲಿ ತಾನು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ರಿಯಲ್ ಲೈಫ್ ಹೆಣ್ಣುಮಕ್ಕಳನ್ನು ಹೋಲುತ್ತವೆ. ಅಂತಹ ಪಾತ್ರಗಳಿಗೆ ಅತಿಯಾದ ಮೇಕಪ್ ಮಾಡಿ, ಮುಖವನ್ನು ಫಿಲ್ಟರ್ ಮಾಡಿದಂತೆ ತೋರಿಸಿದರೆ ಪ್ರೇಕ್ಷಕರಿಗೆ ಪಾತ್ರದ ಜೊತೆ ಕನೆಕ್ಟ್ ಆಗಲು ಕಷ್ಟವಾಗಬಹುದು. ಅದಕ್ಕಾಗಿಯೇ ಪಾತ್ರಕ್ಕೆ ಹೇಗಿರಬೇಕೋ ಹಾಗೆಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ಲಿಪ್ ಗ್ಲಾಸ್, ಐಲೈನರ್ ಮತ್ತು ಮಾಯಿಶ್ಚರೈಸರ್
ವೈಯಕ್ತಿಕ ಮೇಕಪ್ ಅಭ್ಯಾಸದ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ. ʻಈಗ ತುಟಿಗಳಿಗೆ ಸ್ವಲ್ಪ ಗ್ಲಾಸ್, ಐಲೈನರ್ ಮತ್ತು ಮಾಯಿಶ್ಚರೈಸರ್ ಬಳಸುತ್ತೇನೆ. ಆದರೆ ಮುಖಕ್ಕೆ ಫೌಂಡೇಷನ್ ಅಥವಾ ಕನ್ಸೀಲರ್‌ನ ಒಂದು ಪದರ ಹಾಕಿಕೊಂಡರೆ ನಾನೇ ಬೇರೆ ವ್ಯಕ್ತಿಯಂತೆ ಅನಿಸುತ್ತದೆ. ಅದು ನನಗೆ ಸೂಟ್ ಆಗೋದಿಲ್ಲ. ಅಷ್ಟೇ ಸರಳವಾದ ಕಾರಣʼ ಎಂದು ಹೇಳಿದ್ದಾರೆ.
ಮೇಕಪ್ ಬಗ್ಗೆ ವಿರೋಧ ಇಲ್ಲ
ಆದರೆ ಮೇಕಪ್ ಮಾಡಿಕೊಳ್ಳುವವರನ್ನು ಸಾಯಿ ಪಲ್ಲವಿ ವಿರೋಧಿಸಿಲ್ಲ. ಯಾರಿಗೆ ಮೇಕಪ್ ಇಷ್ಟವೋ ಅವರು ಮಾಡಿಕೊಳ್ಳಬಹುದು. ತಮ್ಮನ್ನು ತಾವು ಒಂದು ನಿರ್ದಿಷ್ಟ ರೀತಿಯಲ್ಲಿ ತೋರಿಸಿಕೊಳ್ಳಬೇಕು ಎಂದು ಯಾರೂ ಒತ್ತಡಕ್ಕೆ ಒಳಗಾಗಬಾರದು. ಪ್ರತಿಯೊಬ್ಬರೂ ತಮಗೆ ಆರಾಮವಾಗಿರುವ ರೀತಿಯಲ್ಲಿ ಇರಬೇಕು ಎಂಬುದು ಅವರ ಅಭಿಪ್ರಾಯ.
ಇದೀಗ ಸಾಯಿ ಪಲ್ಲವಿ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ, ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಎಆರ್ ರೆಹಮಾನ್ ಹಾಗೂ ಹಾನ್ಸ್ ಜಿಮ್ಮರ್ ಸಂಗೀತ ನೀಡಿದ್ದಾರೆ.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಕಲೆಕ್ಷನ್ 2000 ಕೋಟಿ ರೂಪಾಯಿಯನ್ನೂ ಮೀರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ಸಹಜ ಸೌಂದರ್ಯ ಮತ್ತು ಸರಳತೆಯಿಂದ ಸುದ್ದಿಯಲ್ಲಿದ್ದಾರೆ. ಗ್ಲಾಮರ್ ಜಗತ್ತಿನಲ್ಲಿ ಮೇಕಪ್ ಇಲ್ಲದೆ ಕಾಣಿಸಿಕೊಳ್ಳುವುದೇ ಒಂದು ವಿಶೇಷತೆ ಆಗಿರುವಾಗ, ಅದನ್ನೇ ತಮ್ಮ ಆಯ್ಕೆಯಾಗಿ ಉಳಿಸಿಕೊಂಡಿರುವ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.




Click it and Unblock the Notifications
