Empuraan: 'ಎಂಪುರಾನ್' ಸುತ್ತ ಹೊತ್ತಿಕೊಂಡ ವಿವಾದ, ಮೋಹನ್‌ಲಾಲ್-ಪೃಥ್ವಿರಾಜ್ ಸಂಬಂಧದಲ್ಲಿ ಬಿರುಕು
ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂನ L2 ಎಂಪುರಾನ್ ಸಿನಿಮಾವು ವಿಶ್ವದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಾ ದಾಖಲೆಗಳನ್ನು ಬರೆಯುತ್ತಿದೆ. ಮೋಹನ್ ಲಾಲ್ ನಟಿಸಿ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಸಿನಿಮಾದ ವಿಚಾರವಾಗಿ ವಿವಾದದ ಕಿಡಿಯೂ ಜೋರಾಗಿ ಹೊತ್ತಿ ಉರಿಯುತ್ತಿದೆ. ಇದೇ ವಿಚಾರವಾಗಿ ಈ ಸಿನಿಮಾ ನಟರಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ನಟ ಮೋಹನ್ ಲಾಲ್ ನಡುವೆ ಬಿರುಕು ಕೂಡ ಮೂಡಿದೆ ಎಂದು ವರದಿಯಾಗಿದೆ. ಸದ್ಯ ವಿವಾದದ ಸುಳಿಯಲ್ಲಿ ಎಂಪುರಾನ್ ಸಿಲುಕಿಕೊಂಡಿದೆ. ಏನು ಈ ವಿವಾದ ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ..
ಎಂಪುರಾನ್ ಸಿನಿಮಾಗೆ ವಿರೋಧ ಕೇಳಿ ಬರುತ್ತಲೇ ಇದೆ. ಸಿನಿಮಾದಲ್ಲಿ ಹಿಂದೂ ವಿರೋಧಿ ಅಂಶಗಳು ಹೆಚ್ಚಾಗಿವೆ ಎಂದು ಬಿಜೆಪಿ ಯುವ ಮೋರ್ಚಾ ಆರೋಪಿಸಿತ್ತು. ಈ ಸಂಬಂಧ ದೇಶದೆಲ್ಲೆಡೆ ವಿರೋಧ ಹಾಗೂ ವಿವಾದದ ಕೂಗು ಕೇಳಿಬಂದ ಕಾರಣ ನಟ ಮೋಹನ್ ಲಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿ ಕ್ಷಮೆ ಕೂಡ ಕೇಳಿದ್ದಾರೆ ಎನ್ನಲಾಗಿದೆ. ಎಂಪುರಾನ್ ಸಿನಿಮಾವನ್ನು ಬಲಪಂಥೀಯರು ಹಿಂದೂ ವಿರೋಧಿ ಎಂದು ಕರೆದಿದ್ದಾರೆ. ಆದರೆ, ಎಡಪಂಥೀಯರ ಒಂದು ವರ್ಗವು ಮೋಹನ್ ಲಾಲ್ ಅವರು ಸಂಘ ಪರಿವಾರದ ಒತ್ತಡದಿಂದ ಕ್ಷಮೆಯಾಚಿಸಿದ್ದಾರೆ ಎಂದು ದೂರಿದೆ.

ಈ ಸಿನಿಮಾದಲ್ಲಿ ಗುಜರಾತ್ ರಾಜ್ಯದಲ್ಲಿ 2002ರ ಮುಸ್ಲಿಂ ವಿರೋಧಿ ಗಲಭೆ ಉಲ್ಲೇಖಿಸುವಂತಹ ಕೆಲವು ದೃಶ್ಯಗಳ ಕುರಿತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಸೇರಿದಂತೆ ಹಿಂದೂ ಗುಂಪುಗಳು ಖಂಡಿಸಿವೆ. ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳಿಂದ ಟೀಕೆಗೆ ಗುರಿಯಾದ ನಂತರ ಮೋಹನ್ ಲಾಲ್ ಕ್ಷಮೆಯಾಚಿಸಿದ್ದಾರೆ. "ಒಬ್ಬ ಕಲಾವಿದನಾಗಿ, ನನ್ನ ಯಾವುದೇ ಚಿತ್ರಗಳು ಯಾವುದೇ ರಾಜಕೀಯ ಚಳುವಳಿ, ಸಿದ್ಧಾಂತ ಅಥವಾ ಧಾರ್ಮಿಕ ಗುಂಪಿಗೆ ಪ್ರತಿಕೂಲವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ" ಎಂದು ಮೋಹನ್ ಲಾಲ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅಲ್ಲದೆ ಈ ಹೊಸ ಚಿತ್ರದಿಂದ ಕೆಲವು ದೃಶ್ಯಗಳನ್ನು ತೆಗೆದುಹಾಕಲು ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.
ನನ್ನ ಪ್ರೀತಿಪಾತ್ರರಿಗೆ ಉಂಟಾದ ತೊಂದರೆಗೆ ನಾನು ಮತ್ತು ಎಂಪುರಾನ್ ತಂಡವು ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಅದರ ಜವಾಬ್ದಾರಿ ಚಿತ್ರದಲ್ಲಿ ಕೆಲಸ ಮಾಡಿದ ನಮ್ಮೆಲ್ಲರ ಮೇಲಿದೆ ಎಂದು ಅರಿತುಕೊಂಡು, ಅಂತಹ ವಿಷಯಗಳು ಹಾಗೂ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಇದು ರಾಜಕೀಯವಾಗಿಯೂ ತಿರುವು ಪಡೆದುಕೊಂಡಿದೆ. ಬಿಜೆಪಿಯು ಈ ಸಿನಿಮಾವನ್ನು ತೀವ್ರವಾಗಿ ವಿರೋಧಿಸುತ್ತಿದ್ದರೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಸೇರಿದಂತೆ ಎಡ ಪಕ್ಷಗಳು ಸಿನಿಮಾ ನಿರ್ಮಾಪಕರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ಆರೋಪಿಸಿವೆ. ಅಲ್ಲದೆ ಈ ವಿವಾದವು ಕಲಾತ್ಮಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯನ್ನು ಕೂಡ ಹುಟ್ಟುಹಾಕಿದೆ.
ವಿವಾದ ಹುಟ್ಟಿಕೊಂಡಿದ್ದೇಗೆ?
L2: ಎಂಪುರಾನ್ ಸಿನಿಮಾದಲ್ಲಿ ನಿರ್ದೇಶಕ ಪೃಥ್ವಿರಾಜ್ ಅವರು ಜಾಯೆದ್ ಮಸೂದ್ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರವು ಭಾರತದ ಒಂದು ಸ್ಥಳದಲ್ಲಿ ನಡೆದ ಗಲಭೆಯನ್ನು ವಿವರಿಸಿದ್ದು, 2002ರಲ್ಲಿ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಧಾರ್ಮಿಕ ಹಿಂಸಾಚಾರಕ್ಕೆ ಹೋಲುತ್ತವೆ ಎಂದು ಹೇಳಲಾಗಿದೆ. ಈ ಹಿಂಸಾಚಾರದ ಸಮಯದಲ್ಲಿ ಹಿಂದೂಗಳು ಮುಸ್ಲಿಮರ ವಿರುದ್ಧ ಹಿಂಸಾತ್ಮಕ ಅಪರಾಧಗಳನ್ನು ಎಸಗುವ ಗ್ರಾಫಿಕ್ ದೃಶ್ಯಗಳನ್ನು ಕೂಡ ತೋರಿಸಲಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.

ಅಲ್ಲದೆ ಈ ಹಿಂಸಾಚಾರದ ಅಪರಾಧಿಗಳಲ್ಲಿ ಒಬ್ಬರು ಹೇಗೆ ಹೆಚ್ಚು ಶಕ್ತಿಶಾಲಿಯಾಗುತ್ತಾರೆ ಹಾಗೂ ಕೇರಳದ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸಹ ಇಲ್ಲಿ ತೋರಿಸಲಾಗಿದೆ. ಈಗ ಇದೇ ದೃಶ್ಯಗಳು ಕೋಲಾಹಲ ಸೃಷ್ಟಿಸಿವೆ.
ಈ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರತಂಡಕ್ಕೆ ಶುಭ ಹಾರೈಸಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಈ ಸಿನಿಮಾದಲ್ಲಿ ಮೋಹನ್ ಲಾಲ್ ಅಭಿಮಾನಿಗಳು ಮತ್ತು ಇತರ ಪ್ರೇಕ್ಷಕರ ಭಾವನೆಗೆ ಧಕ್ಕೆಯಾಗುವ ವಿಷಯಗಳಿವೆ ಎಂದು ತಿರುಗಿಬಿದ್ದಿದ್ದಾರೆ. ಒಂದು ಸಿನಿಮಾವನ್ನ ಸಿನಿಮಾವಾಗಿಯೇ ನೋಡಬೇಕು. ಅದನ್ನು ಇತಿಹಾಸವಾಗಿ ನೋಡಲು ಸಾಧ್ಯವಿಲ್ಲ. ಆದರೆ ಸತ್ಯವನ್ನು ವಿರೂಪಗೊಳಿಸುವ ಮೂಲಕ ಕಥೆಯನ್ನು ಹೇಳಲು ಪ್ರಯತ್ನಿಸುವ ಯಾವುದೇ ಸಿನಿಮಾ ವಿಫಲಗೊಳ್ಳುತ್ತದೆ, ನಾನು ಕೂಡ ಈ ಸಿನಿಮಾ ನೋಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಕಟಿಸಿದ ಆರ್ಗನೈಸರ್‌ನಲ್ಲೂ ಈ ಸಿನಿಮಾವನ್ನ ಟೀಕಿಸಲಾಗಿದೆ. ಎಂಪುರಾನ್ ಕೇವಲ ಕೆಟ್ಟ ಚಿತ್ರವಲ್ಲ, ಇದು ನಂಬಿಕೆಯ ಮೇಲೆ, ರಾಜಕೀಯ ಬಹುತ್ವದ ಮೇಲೆ ಮತ್ತು ಕಥೆ ಹೇಳುವಿಕೆಯ ಆತ್ಮದ ಮೇಲಿನ ದಾಳಿ ಎಂದು ವಿಮರ್ಶಿಸಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ಸಿನಿಮಾವನ್ನ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಇನ್ನು ಈ ವಿವಾದ ಭುಗಿಲೆದ್ದ ಬಳಿಕ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ನಡುವೆ ಬಿರುಕು ಮೂಡಿ ಎಂದು ಹೇಳಲಾಗುತ್ತಿದೆ. ಎಂಪುರಾನ್ ಪಾತ್ರವರ್ಗ ಹಾಗೂ ತಂಡದ ವಿರುದ್ಧ ನಡೆದ ಆನ್‌ಲೈನ್ ದಾಳಿಯನ್ನು ಕೇರಳದ ಪ್ರಬಲ ಚಲನಚಿತ್ರ ಸಂಸ್ಥೆಯಾದ ಕೇರಳ ಚಲನಚಿತ್ರ ನೌಕರರ ಒಕ್ಕೂಟ (ಫೆಫ್ಕಾ) ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫೆಫ್ಕಾ, ಎಂಪುರಾನ್ ಚಿತ್ರದ ಸುತ್ತಲಿನ ವಿವಾದಗಳು ಮತ್ತು ಚಿತ್ರದ ನಿರ್ದೇಶಕ ಪೃಥ್ವಿರಾಜ್ ಮತ್ತು ನಾಯಕ ನಟ ಮೋಹನ್ ಲಾಲ್ ಅವರ ಮೇಲಿನ ಸಾಮಾಜಿಕ ಮಾಧ್ಯಮ ದಾಳಿಗಳು ದುರದೃಷ್ಟಕರ ಮತ್ತು ಖಂಡನೀಯ ಎಂದು ಹೇಳಿದೆ.
ವಿನಾಶಕಾರಿ ಟೀಕೆ, ವೈಯಕ್ತಿಕ ದಾಳಿ, ಬೆದರಿಕೆ ಸ್ವೀಕರಿಸಲು ಸಾಧ್ಯವಿಲ್ಲ. ಮನುಷ್ಯನನ್ನು ನಾಶಪಡಿಸಬಹುದು. ಆದರೆ ಸೋಲಿಸಲು ಸಾಧ್ಯವಿಲ್ಲ. ಇದು ಕಲೆ ಮತ್ತು ಕಲಾವಿದರು ಯುಗಗಳಿಂದ ಪುನರುಚ್ಚರಿಸುತ್ತಿರುವ ಸಂದೇಶ ಎಂದು ರಾಜಕೀಯ ನಾಯಕರಿಗೆ ಟಾಂಗ್ ನೀಡಿದೆ. ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಾಯಕರು ಕೂಡ ಈ ಸಿನಿಮಾದ ಮೇಲಿನ ದಾಳಿಯನ್ನು ಟೀಕಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಅವರು ʼಸಂಘ ಪರಿವಾರ ಸೃಷ್ಟಿಸಿದ ಭಯದ ವಾತಾವರಣ ಎಂದು ಕರೆದಿದ್ದಾರೆ.












Click it and Unblock the Notifications