Rashmika Mandanna: ತೆರಿಗೆ ಪಾವತಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಕೊಡಗು ಜಿಲ್ಲೆಗೆ ಮೊದಲ ಸ್ಥಾನ
ಕೊಡಗು: ದೇಶದೆಲ್ಲೆಡೆ ಅಪಾರ ಜನಪ್ರಿಯತೆ ಹೊಂದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ವಿಭಿನ್ನ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಸಿನಿಮಾ ಪರದೆಯ ಮೇಲೆ ಮಾತ್ರವಲ್ಲದೆ, ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಅವರು, ಕೊಡಗು ಜಿಲ್ಲೆಯಲ್ಲೇ ಆದಾಯ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿ ಹೊರಹೊಮ್ಮಿದ್ದಾರೆ.
'ರಶ್ಮಿಕಾ ಮಂದಣ್ಣ ಎಲ್ಎಲ್‌ಪಿ' ಮೂಲಕ ತೆರಿಗೆ ಪಾವತಿ
ರಶ್ಮಿಕಾ ಮಂದಣ್ಣ ಅವರು ಕೊಡಗಿನಲ್ಲಿ ತಮ್ಮ ಆದಾಯ ತೆರಿಗೆಯನ್ನು 'ರಶ್ಮಿಕಾ ಮಂದಣ್ಣ ಎಲ್ಎಲ್‌ಪಿ' ಹೆಸರಿನಲ್ಲಿ ಪಾವತಿಸುತ್ತಿದ್ದಾರೆ. ಈವರೆಗೆ ಅವರು ಒಟ್ಟು 4.69 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿರುವುದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. ಇದು ಕೊಡಗು ಜಿಲ್ಲೆಯ ತೆರಿಗೆ ಪಾವತಿದಾರರಲ್ಲಿ ಅತಿ ಹೆಚ್ಚು ಮೊತ್ತ ಎನ್ನಲಾಗಿದ್ದು, ತೆರಿಗೆ ಪಾವತಿದಾರರ ಪೈಕಿ ರಶ್ಮಿಕಾ ಟಾಪ್ ಸ್ಥಾನದಲ್ಲಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ ಮೂರು ತ್ರೈಮಾಸಿಕಗಳಲ್ಲಿ ರಶ್ಮಿಕಾ ಮಂದಣ್ಣ ಅವರು ತೆರಿಗೆ ಪಾವತಿ ಮಾಡಿದ್ದಾರೆ. ಈ ಮೂರು ಅವಧಿಗಳಲ್ಲಿಯೂ ಅವರು ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನೂ ಮಾರ್ಚ್ ತಿಂಗಳವರೆಗೆ ನಾಲ್ಕನೇ ತ್ರೈಮಾಸಿಕ ತೆರಿಗೆ ಪಾವತಿ ಮಾಡಲಿದ್ದಾರೆ ಎನ್ನಲಾಗಿದ್ದು, ಒಟ್ಟು ತೆರಿಗೆ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು, ತಮ್ಮ ಆದಾಯದ ತೆರಿಗೆಯನ್ನು ಕೊಡಗಿನಲ್ಲೇ ಪಾವತಿಸುವ ಮೂಲಕ ಜಿಲ್ಲೆಗೆ ಗೌರವ ತಂದಿದ್ದಾರೆ. ಕನ್ನಡ ಚಿತ್ರರಂಗ ಪ್ರವೇಶಿಸಿ, ಇಂದು ಬಹುಭಾಷೆಗಳಲ್ಲಿ ಬೇಡಿಕೆಯ ನಟಿಯಾಗಿರುವ ರಶ್ಮಿಕಾ ದೇಶದ ಬೇರೆ ನಗರಗಳಲ್ಲಿ ವಾಸವಿದ್ದರೂ, ತಮ್ಮ ಮೂಲ ನೆಲೆಯನ್ನು ಮರೆತಿಲ್ಲ. ಎಲ್ಲೇ ಎತ್ತರಕ್ಕೆ ಬೆಳೆದರೂ ಹುಟ್ಟೂರಿನಲ್ಲೇ ತೆರಿಗೆ ಪಾವತಿ ಮಾಡುತ್ತಿರುವ ಅವರ ನಡೆ ಸ್ಥಳೀಯರ ಮೆಚ್ಚುಗೆಗೂ ಪಾತ್ರವಾಗಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಶ್ಮಿಕಾ ಮಂದಣ್ಣ, ದೇಶದಾದ್ಯಂತ ದೊಡ್ಡ ಆದಾಯ ಹೊಂದಿದ್ದರೂ ತಮ್ಮ ತೆರಿಗೆ ಮೂಲವನ್ನು ಕೊಡಗು ಜಿಲ್ಲೆಯಲ್ಲೇ ಉಳಿಸಿಕೊಂಡಿದ್ದಾರೆ. ಇದು ಯುವ ಪೀಳಿಗೆಗೆ ಮಾದರಿಯ ನಡೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೆಲೆಬ್ರಿಟಿಗಳಿಗೆ ಮಾದರಿ
ಸಾಮಾನ್ಯವಾಗಿ ದೊಡ್ಡ ಮಟ್ಟದ ಸೆಲೆಬ್ರಿಟಿಗಳು ತಮ್ಮ ತೆರಿಗೆ ಪಾವತಿಯನ್ನು ಮೆಟ್ರೋ ನಗರಗಳಿಗೆ ಸೀಮಿತಗೊಳಿಸುವ ಈ ಸಂದರ್ಭದಲ್ಲಿ, ರಶ್ಮಿಕಾ ಮಂದಣ್ಣ ಅವರು ತಮ್ಮ ಹುಟ್ಟೂರಿನ ಜಿಲ್ಲೆಗೆ ಆದ್ಯತೆ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಇದರಿಂದ ಕೊಡಗು ಜಿಲ್ಲೆಯ ಆರ್ಥಿಕ ಬಲವರ್ಧನೆಗೂ ಸಹಕಾರಿಯಾಗಲಿದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರ ಈ ನಡೆಯಿಂದ ಅವರು ಜಿಲ್ಲೆಯ ನಂಬರ್ ಒನ್ ತೆರಿಗೆ ಪಾವತಿದಾರರು ಆಗಿರುವುದು ಕೇವಲ ಸಾಧನೆಯಷ್ಟೇ ಅಲ್ಲ, ಜವಾಬ್ದಾರಿಯುತ ನಾಗರಿಕರಾಗಿ ಮತ್ತು ತಮ್ಮ ಮೂಲ ನೆಲೆಯ ಮೇಲಿನ ಗೌರವದ ಪ್ರತೀಕವಾಗಿಯೂ ಗಮನ ಸೆಳೆದಿದ್ದಾರೆ.












Click it and Unblock the Notifications