ಸಿನಿಮಾ ಬೇಕಾದ್ರೆ ಬಿಡ್ತೀನಿ, ಆ ಕೆಲಸ ಮಾತ್ರ ಮಾಡಲ್ಲ: ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?
ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸಿನಿಮಾಗಳಿಗೆ ಎದುರಾದ ಟೀಕೆಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ರಶ್ಮಿಕಾ ಅವರು ಮನೆಮಾತಾಗಿದ್ದು, ಈಗ ತೆಲುಗು, ತಮಿಳು ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಫುಲ್ ಡಿಮ್ಯಾಂಡ್ ಸೃಷ್ಟಿಸಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವ ರಶ್ಮಿಕಾ ಇದೀಗ ದಿಢೀರ್ ಸಿನಿಮಾಗಳನ್ನೇ ಬಿಡುತ್ತೇನೆ ಎಂದು ಮಾತುಗಳನ್ನಾಡಿದ್ದಾರೆ. ಒಂದು ವೇಳೆ ಸಿನಿಮಾಗಳನ್ನ ಬೇಕಾದ್ರೆ ಬಿಡುತ್ತೇನೆ, ಆದರೆ ಅಂತಹ ಕೆಲಸ ಮಾಡುವುದಿಲ್ಲ ಎಂದು ರಶ್ಮಿಕಾ ನೇರವಾಗಿ ಹೇಳಿದ್ದಾರೆ.
ಇತ್ತೀಚೆಗೆ ವಿ ದಿ ವುಮೆನ್ ಕಾರ್ಯಕ್ರಮದಲ್ಲಿ ರಶ್ಮಿಕಾ ಕೂಡ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ. 'ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವಾಗಲೂ ಕೆಲ ವಿಚಾರಗಳಲ್ಲಿ ಸ್ಪಷ್ಟತೆ ಹೊಂದಿರುತ್ತೇನೆ. ಕೆಲ ಕಂಡೀಷನ್‌ಗಳನ್ನು ನಾನು ಮುಂದಿಡುತ್ತೇನೆ. ನನಗೆ ಧೂಮಪಾನ ಇಷ್ಟವಾಗುವುದಿಲ್ಲ, ಅದನ್ನು ನಾನು ಪ್ರೋತ್ಸಾಹಿಸುವುದೂ ಇಲ್ಲ' ಎಂದು ರಶ್ಮಿಕಾ ನೇರವಾಗಿ ಹೇಳಿದ್ದಾರೆ.

'ವೈಯಕ್ತಿಕವಾಗಿ ನಾನು ಧೂಮಪಾನವನ್ನು ಪ್ರೋತ್ಸಾಹಿಸಲ್ಲ. ನಾನು ಕೂಡ ಅಂತಹ ದೃಶ್ಯಗಳಲ್ಲಿ ನಟಿಸಲು ಬಯಸುವುದೂ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಒಂದು ವೇಳೆ ಯಾರಾದರೂ ನನ್ನ ಪಾತ್ರಕ್ಕೆ ಅನುಗುಣವಾಗಿ ಧೂಮಪಾನದಂತಹ ದೃಶ್ಯಗಳಲ್ಲಿ ನಟಿಸುವಂತೆ ಕೇಳಿದರೆ, ನಾನು ಬೇಕಾದರೆ ಆ ಸಿನಿಮಾದಿಂದ ಹೊರನಡೆಯಲು ಹಿಂಜರಿಯುವುದಿಲ್ಲ' ಎಂದು ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ.
ಸಿನಿಮಾನ ಸಿನಿಮಾ ರೀತಿ ನೋಡಿ!
'ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ "ಅನಿಮಲ್" ಬಾಲಿವುಡ್‌ನ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದು. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಕುರಿತು ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆಯೂ ಉತ್ತರಿಸಿರುವ ರಶ್ಮಿಕಾ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಪಾತ್ರವನ್ನು ಸಮರ್ಥಿಸಿಕೊಂಡಿದ್ದಾರೆ. ಯಾರೂ ಯಾರನ್ನೂ ಯಾವುದೇ ಚಲನಚಿತ್ರವನ್ನು ನೋಡಲು ಒತ್ತಾಯಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಅನಿಮಲ್ ಸಿನಿಮಾ ಹಾಗೂ ಅದಕ್ಕೆ ಬಂದಿರುವ ಟೀಕೆಗಳ ಬಗ್ಗೆ ಮಾತನಾಡಿದ ರಶ್ಮಿಕಾ, ನಾನು ಅನಿಮಲ್ ಅನ್ನು ಒಂದು ಸಿನಿಮಾದಂತೆ ನೋಡಿದ್ದೇನೆ. ಒಬ್ಬ ನಟ ಪರದೆಯ ಮೇಲೆ ಧೂಮಪಾನ ಮಾಡುವಾಗ, ಅವನು ಇತರರನ್ನು ಹಾಗೆ ಮಾಡಲು ಪ್ರಭಾವಿಸುತ್ತಿದ್ದಾನೆ ಎಂದು ಜನ ಹೇಳುತ್ತಾರೆ. ಆದರೆ ಇಂದು ಸಮಾಜದಲ್ಲಿ ಜನರು ಧೂಮಪಾನ ಮಾಡುವುದು ತುಂಬಾ ಸಾಮಾನ್ಯ. ಹಾಗಾಗಿ ಯಾವುದೇ ರೀತಿಯಲ್ಲಿ ಪ್ರಭಾವಿತಳಾಗಲು ನಾನು ಸಿನಿಮಾ ನೋಡುವುದಿಲ್ಲ' ಎಂದಿದ್ದಾರೆ.
'ಇನ್ನು ವೈಯಕ್ತಿಕವಾಗಿ ನಾನು ಎಂದಿಗೂ ಪರದೆಯ ಮೇಲೆ ಧೂಮಪಾನ ಮಾಡುವುದಿಲ್ಲ. ನಾನು ಅನಿಮಲ್ ಚಿತ್ರದ ಭಾಗವಾಗಿದ್ದರಿಂದ ನಾನು ಸಿನಿಮಾವನ್ನು ಸಿನಿಮಾದಂತೆಯೇ ನೋಡಿ ಎಂದು ಹೇಳುತ್ತೇನೆ. ಈಗ ಯಾರಾದರೂ ಸಿನಿಮಾದಿಂದ ಪ್ರಭಾವಿತರಾಗುತ್ತಿದ್ದರೆ ನಿಮ್ಮ ನೆಚ್ಚಿನ ಸಿನಿಮಾಗಳನ್ನೇ ನೋಡಿ. ಯಾರೂ ಯಾರನ್ನೂ ಸಿನಿಮಾ ನೋಡುವಂತೆ ಒತ್ತಾಯಿಸುವುದಿಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಪ್ರತಿಯೊಂದು ಸಿನಿಮಾನೂ ಬ್ಲಾಕ್‌ಬಸ್ಟರ್ ಆಗುತ್ತಿತ್ತು' ಎಂದು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
'ನಾವು ಅನಿಮಲ್ ಸಿನಿಮಾ ಮಾಡಿದ್ದೇವೆ, ಅದು ಯಶಸ್ವಿ ಕೂಡ ಆಗಿದೆ. ಜನರು ಅದನ್ನು ಇಷ್ಟಪಟ್ಟಿದ್ದಾರೆ ಅಥವಾ ಇಷ್ಟಪಡಲಿಲ್ಲ ಎನ್ನುವುದು ಅವರ ವೈಯಕ್ತಿಕ ವಿಷಯ. ಜನರು ನಿಜವಾಗಿಯೂ ಸಿನಿಮಾವನ್ನ ಸಿನಿಮಾ ರೀತಿಯೇ ನೋಡಬೇಕು. ಈ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ನಟನನ್ನು ಟೀಕಿಸಬಾರದು. ಇದನ್ನು ಒಂದು ಕಾರಣಕ್ಕಾಗಿ ನಟನೆ ಎಂದು ಕರೆಯಲಾಗುತ್ತದೆ' ಎಂದು ಅಭಿಪ್ರಾಯ ತಿಳಿಸಿದ್ದಾರೆ.












Click it and Unblock the Notifications