Ranya Rao: ದುಬೈನಿಂದ ಚಿನ್ನ ತಂದುಕೊಡಲು ರನ್ಯಾ ರಾವ್ ಪಡೆಯುತ್ತಿದ್ದ ಹಣ ಎಷ್ಟು ಗೊತ್ತಾ?
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸದ್ಯ ರನ್ಯಾ ರಾವ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಆರ್‌ಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು ಹಲವು ಸಂಗತಿಗಳು ಬಯಲಾಗುತ್ತಿವೆ. ತಾನು ಪೊಲೀಸ್ ಅಧಿಕಾರಿ ಮಗಳು ಎಂದು ಹೇಳಿಕೊಂಡು ವಿಮಾನ ನಿಲ್ದಾಣದಲ್ಲಿ ಸುಲಭವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಸೋಮವಾರ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹12.56 ಕೋಟಿ ಮೌಲ್ಯದ ಮತ್ತು 14.2 ಕೆಜಿ ಚಿನ್ನದ ಗಟ್ಟಿಗಳನ್ನು ಕಳ್ಳಸಾಗಾಣೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಸಂಬಂಧಿ ರನ್ಯಾ ರಾವ್ ಎಂದು ಬಳಿಕ ತಿಳಿದುಬಂದಿದೆ. ಕಳೆದ ಒಂದು ವರ್ಷದಲ್ಲಿ ದುಬೈಗೆ ಹಲವು ಬಾರಿ ಭೇಟಿ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಬಳಿಕ ಡಿಆರ್‌ಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ರನ್ಯಾ ರಾವ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ರನ್ಯಾ ರಾವ್ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿಯ ಸಂದರ್ಭದಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ₹2.67 ಕೋಟಿ ಮೌಲ್ಯದ ನಗದನ್ನು ವಶಕ್ಕೆ ಪಡೆಯಲಾಗಿದೆ.
ರನ್ಯಾ ರಾವ್ ದುಬೈನಿಂದ ಚಿನ್ನವನ್ನು ಕಳ್ಳ ಸಾಗಾಣೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ ಕಳೆದ ಒಂದು ವರ್ಷದಲ್ಲಿ ಅವರು 30 ಬಾರಿ ದುಬೈಗೆ ಭೇಟಿ ನೀಡಿದ್ದಾರೆ.
ಒಂದು ಕೆ.ಜಿ ಚಿನ್ನಕ್ಕೆ 1 ಲಕ್ಷ!
ರನ್ಯಾ ರಾವ್ ಅವರು ಚಿನ್ನವನ್ನು ಸ್ವಂತಕ್ಕಾಗಿ ಕಳ್ಳಸಾಗಾಣೆ ಮಾಡಿಲ್ಲ ಎನ್ನಲಾಗಿದೆ. ಅವರು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದು ಚಿನ್ನ ತಂದುಕೊಡಲು ಅವರಿಗೆ ಭಾರಿ ಹಣವನ್ನು ನೀಡಲಾಗುತ್ತಿತ್ತು ಎಂದು ವರದಿಯಾಗಿದೆ. ಒಂದು ಕೆಜಿ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಾಣೆ ಮಾಡಲು 1 ಲಕ್ಷ ರೂಪಾಯಿ ಪಡೆಯುತ್ತಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಚಿನ್ನ ಕಳ್ಳ ಸಾಗಾಣೆ ಮಾಡಲು ಅವರು ವಿಶೇಷವಾಗಿ ವಿನ್ಯಾಸ ಮಾಡಿದ್ದ ಜಾಕೆಟ್‌ಗಳು ಮತ್ತು ಸೊಂಟದ ಪಟ್ಟಿಗಳನ್ನು ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪದೇ ಪದೇ ದುಬೈಗೆ ಹೋಗಿ ಬರುತ್ತಿದ್ದ ಕಾರಣ ಡಿಆರ್ ಐ ಅಧಿಕಾರಿಗಳು ಅವರ ಮೇಲೆ ಕಣ್ಣಿಟ್ಟಿದ್ದರು. ಈ ಬಾರಿ ಅವರು ದುಬೈನಿಂದ ಬಂದ ಬಳಿಕ ತಪಾಸಣೆ ಮಾಡಿದಾಗ ಚಿನ್ನದ ಕಳ್ಳ ಸಾಗಾಣಿಕೆ ಕೃತ್ಯ ಬಹಿರಂಗವಾಗಿದೆ.
ಸ್ಥಳೀಯ ಪೊಲೀಸ್ ಕಾನ್‌ಸ್ಟೇಬಲ್ ಆಕೆಯನ್ನು ಹೆಚ್ಚಿನ ತಪಾಸಣೆ ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಡಿಆರ್‌ಐ ರನ್ಯಾ ರಾವ್ ಅವರನ್ನು ತಡೆದಾಗ, ಕಾನ್‌ಸ್ಟೆಬಲ್ ಮಧ್ಯಪ್ರವೇಶಿಸಿ ಆಕೆ ಡಿಜಿಪಿಯ ಮಗಳು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ, ಆದರೆ ಮೊದಲೇ ಮಾಹಿತಿ ಇದ್ದ ಕಾರಣ ಅಧಿಕಾರಿಗಳು ತಪಾಸಣೆ ಮಾಡಿ ವಶಕ್ಕೆ ಪಡೆದರು.












Click it and Unblock the Notifications