Kantara Controversy: ಕಾಂತಾರ ದೈವದ ಬಗ್ಗೆ ಅಪಹಾಸ್ಯ ಪ್ರಕರಣ: ಕ್ಷಮೆಯಾಚನೆ ಹಿನ್ನೆಲೆ ನಟ ರಣವೀರ್ ಸಿಂಗ್ ವಿರುದ್ಧದ ಕೇಸ್ ರದ್ದು

ನಟ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರದ ದೈವದ ಕೂಗನ್ನು ಮಿಮಿಕ್ರಿ ಮಾಡಿ ಕನ್ನಡಿಗರ ಹಾಗೂ ದೈವಾರಾಧಕರ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದ ಬಾಲಿವುಡ್‌ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಶನಿವಾರ ರಿಲೀಫ್‌ ನೀಡಿದೆ. ರಣವೀರ್‌ ಸಲ್ಲಿಸಿದ ಬೇಷರತ್ ಕ್ಷಮಾಪಣೆಯನ್ನು ಪುರಸ್ಕರಿಸಿದ ನ್ಯಾಯಾಲಯವು ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದೆ.

ಘಟನೆಯ ಹಿನ್ನೆಲೆ

ಗೋವಾದಲ್ಲಿ ನಡೆದ 2025ರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ರಣವೀರ್ ಸಿಂಗ್ ಅವರು 'ಕಾಂತಾರ: ಚಾಪ್ಟರ್ 1' ಚಿತ್ರದ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮಿಮಿಕ್ರಿ ಮಾಡಿದ್ದರು. ಇದು ಕರಾವಳಿಯ ಪವಿತ್ರ ದೈವಾರಾಧನೆಯ ನಂಬಿಕೆಗೆ ಮಾಡಿದ ಅಪಚಾರ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ನಟನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಾಗಿತ್ತು.

Kantara Controversy

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ರಣವೀರ್ ಪರ ವಕೀಲರು ಬೇಷರತ್ ಕ್ಷಮಾಪಣಾ ಪತ್ರವನ್ನು ಸಲ್ಲಿಸಿದರು. ರಣವೀರ್ ಸಿಂಗ್ ಅವರು ಅರಿವಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಲ್ಲದೆ, ವೈಯಕ್ತಿಕವಾಗಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಕ್ಷಮೆ ಕೇಳುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ರಣವೀರ್ ಅವರ 'ಧುರಂಧರ್' ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆಯ ಭೀತಿ ಇರುವುದರಿಂದ, ದೇವಸ್ಥಾನಕ್ಕೆ ಭೇಟಿ ನೀಡುವ ನಿಖರ ದಿನಾಂಕವನ್ನು ಸದ್ಯಕ್ಕೆ ತಿಳಿಸಲು ಸಾಧ್ಯವಿಲ್ಲ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ನ್ಯಾಯಾಲಯವು ರಣವೀರ್ ಅವರ ಕ್ಷಮೆಯಾಚನೆಯನ್ನು ಪುರಸ್ಕರಿಸಿ, ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರಿಗೆ ಎಚ್ಚರಿಕೆಯನ್ನು ನೀಡಿದೆ. "ದೈವಾರಾಧನೆಯು ಅನೇಕರ ಅಚಲ ನಂಬಿಕೆಯಾಗಿದೆ" ಎಂದು ಅರ್ಜಿದಾರರ ವಾದವನ್ನು ಗಮನಿಸಿದ ನ್ಯಾಯಾಲಯ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಈ ತೀರ್ಪಿನ ಮೂಲಕ ರಣವೀರ್ ಸಿಂಗ್ ಮೇಲಿದ್ದ ಕಾನೂನು ತೂಗುಗತ್ತಿ ದೂರಾದಂತಾಗಿದ್ದು, ಶೀಘ್ರದಲ್ಲೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹರಕೆ ತೀರಿಸಲಿದ್ದಾರೆ.

ನೀವು ಸೂಪರ್‌ಸ್ಟಾರ್ ಆಗಿರಬಹುದು

ರಣವೀರ್ ಸಿಂಗ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನಟನಿಗೆ ಎಚ್ಚರಿಕೆ ನೀಡುವುದರ ಜೊತೆಗೆ ಪ್ರಕರಣವನ್ನು ರದ್ದುಗೊಳಿಸಿದೆ. ವಿಚಾರಣೆಯ ವೇಳೆ ನ್ಯಾಯಪೀಠವು ನಟನ ಬೇಜವಾಬ್ದಾರಿತನದ ವರ್ತನೆಯನ್ನು ಖಂಡಿಸಿತು. "ನೀವು ಸೂಪರ್‌ಸ್ಟಾರ್ ಆಗಿರಬಹುದು, ಅದಕ್ಕೆ ನಮಗೆ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನೀವು ರಣವೀರ್ ಸಿಂಗ್ ಆಗಿರಲಿ ಅಥವಾ ಯಾರೇ ಆಗಿರಲಿ, ನಾಲಿಗೆಯ ಮೇಲೆ ಹಿಡಿತವಿರಲಿ. ಪವಿತ್ರ ದೈವದ ಬಗ್ಗೆ ಮಾಹಿತಿಯಿಲ್ಲದೆ ಮಾತನಾಡುವುದು ಸರಿಯಲ್ಲ. ಅದನ್ನು 'ಹೆಣ್ಣು ಭೂತ' (Female Ghost) ಎಂದು ಕರೆದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ನಿಮಗಿಲ್ಲ" ಎಂದು ಕೋರ್ಟ್ ಖಡಕ್ ಆಗಿ ಹೇಳಿತು.

ನಟ ದೇವಸ್ಥಾನಕ್ಕೆ ಭೇಟಿ ನೀಡುವ ದಿನಾಂಕವನ್ನು ಮುಂಚಿತವಾಗಿ ಅಧಿಕಾರಿಗಳಿಗೆ ತಿಳಿಸಬೇಕು ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿಗಳು, ಮುಂದಿನ ನಾಲ್ಕು ವಾರಗಳ ಒಳಗಾಗಿ ರಣವೀರ್ ಸಿಂಗ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶದಲ್ಲಿ ದಾಖಲಿಸುವುದಾಗಿ ತಿಳಿಸಿದರು. ಈಗ ರಣವೀರ್ ಸಿಂಗ್ ಅವರು ಬೇಷರತ್ ಕ್ಷಮೆಯಾಚಿಸಿರುವ ಕಾರಣ ಮತ್ತು ದೇವಸ್ಥಾನಕ್ಕೆ ಭೇಟಿ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಲಾಗಿದೆ. ಚಿತ್ರರಂಗದ ತಾರೆಯರು ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದು ಕೋರ್ಟ್‌ ಈ ತೀರ್ಪಿನ ಮೂಲಕ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+