ಖ್ಯಾತ ನಟನ ಸಿನಿಮಾ ಶೂಟಿಂಗ್ ವೇಳೆ ಭಾರೀ ಅವಘಡ; 120 ಮಂದಿ ಆಸ್ಪತ್ರೆಗೆ ದಾಖಲು, ಆಗಿದ್ದೇನು?
ಖ್ಯಾತ ನಟನ ಸಿನಿಮಾ ಚಿತ್ರೀಕರಣದ ವೇಳೆ ಭಾರೀ ದುರಂತ ಸಂಭವಿಸಿದೆ. ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಬರೋಬ್ಬರಿ 120 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಲೇಹ್‌ನಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ವಿಷ ಆಹಾರ ಸೇವನೆಯಿಂದ ಈ ಘಟನೆ ನಡೆದಿದೆ. ಭಾನುವಾರ ಶೂಟಿಂಗ್ ನಡೆಯುವಾಗ ಇದು ಸಂಭವಿಸಿದ್ದು, ಕೂಡಲೇ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್' ಸೆಟ್‌ನಲ್ಲಿ ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಚಿತ್ರತಂಡದ 100ಕ್ಕೂ ಹೆಚ್ಚು ಸಿಬ್ಬಂದಿ ಲೇಹ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಆಹಾರ ಸೇವನೆಯಿಂದ ಇವರೆಲ್ಲ ಅಸ್ವಸ್ಥರಾಗಿದ್ದು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಚಿತ್ರೀಕರಣದ ಸಮಯದಲ್ಲಿ ಹಲವಾರು ಮಂದಿ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು, ವಾಂತಿ ಮತ್ತು ತಲೆನೋವಿನಿಂದ ಬಳಲುತ್ತಿದ್ದರು. ಅವರನ್ನು ತಕ್ಷಣವೇ ಲೇಹ್‌ನಲ್ಲಿರುವ ಸಜಲ್ ನರ್ಬು ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಪರಿಶೀಲಿಸಿದಾಗ ವಿಷಪೂರಿತ ಆಹಾರ ಸೇವನೆ ಮಾಡಿರುವುದು ದೃಢಪಟ್ಟಿದೆ.

ರಣವೀರ್ ಸಿಂಗ್ ನಟನೆಯ 'ಧುರಂಧರ್' ಶೂಟಿಂಗ್ ವೇಳೆ ತಮ್ಮ ತಂಡದ ನೂರಕ್ಕೂ ಹೆಚ್ಚು ಮಂದಿಗೆ ಲೇಹ್‌ನಲ್ಲಿ ಆಹಾರ ವಿತರಣೆ ಮಾಡಲಾಗಿತ್ತು. ಸುಮಾರು 600 ಮಂದಿಗೆ ಆಹಾರ ನೀಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಠಾತ್ ಆರೋಗ್ಯ ಭೀತಿಯಿಂದಾಗಿ ಶೂಟಿಂಗ್‌ಗೆ ಅಡ್ಡಿಯಾಗಿದ್ದು, ಎಲ್ಲ ನಿರ್ಮಾಣ ಚಟುವಟಿಕೆಗಳು ಬಂದ್ ಆಗಿವೆ. ಲೇಹ್ ಶೆಡ್ಯೂಲ್‌ಗಾಗಿ ಹಾಜರಿದ್ದ 600 ಸಿಬ್ಬಂದಿಯಲ್ಲಿ ಸುಮಾರು 120 ಮಂದಿ ಅಸ್ವಸ್ಥರಾಗಿದ್ದಾರೆ, ಅವರು ಪ್ರಸ್ತುತ ಎಸ್‌ಎನ್‌ಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ.
ನೂರಾರು ಮಂದಿಗೆ ನೀಡಲಾದ ಊಟದಲ್ಲಿ ವಿಷಪೂರಿತ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಯ ನಿಖರ ಕಾರಣವನ್ನು ನಿರ್ಧರಿಸಲು ವಿವರವಾದ ವಿಶ್ಲೇಷಣೆಗಾಗಿ ಆ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ. ಏಕಾಏಕಿ ರೋಗಿಗಳೆಲ್ಲರೂ ವಾರ್ಡ್‌ನಲ್ಲಿ ತುಂಬಿಕೊಂಡಿದ್ದರಿಂದ ಅವರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಪೊಲೀಸರ ಸಹಾಯದಿಂದ ರೋಗಿಗಳನ್ನು ನಿಯಂತ್ರಿಸಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಪ್ರತಿಕ್ರಿಯೆ ನೀಡದ ಚಿತ್ರತಂಡ
ನಟ ರಣವೀರ್ ಸಿಂಗ್ ಅಥವಾ ನಿರ್ಮಾಪಕರಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಈ ವಿಷಯದ ಬಗ್ಗೆ ರಣವೀರ್ ಆಗಲಿ ಅಥವಾ ನಿರ್ಮಾಣ ತಂಡವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಆರ್.ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಅಭಿನಯಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ರಣವೀರ್ ಹುಟ್ಟುಹಬ್ಬದಂದು ಟೀಸರ್ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರಲಿದೆ.












Click it and Unblock the Notifications