Ramayana: "ರಾಮಾಯಣ" ಮೊದಲ ಭಾಗ ನೋಡಲು ಕಾಯುತ್ತಿರುವ ಯಶ್ ಅಭಿಮಾನಿಗಳಿಗೆ ನಿರಾಸೆ
ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಅವರು ಬಿಗ್ ಬಜೆಟ್‌ನ 'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಮುಖ್ಯವಾಗಿ ಶ್ರೀರಾಮನ ಪಾತ್ರದಲ್ಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾವಣನ ಪಾತ್ರದಲ್ಲಿರುವ ಯಶ್ ನಡುವಿನ ಜಿದ್ದಾಜಿದ್ದಿನ ದೃಶ್ಯಗಳನ್ನು ಬೆಳ್ಳಿತೆರೆಯ ಮೇಲೆ ನೋಡಲು ಇಡೀ ದೇಶವೇ ಕಾಯುತ್ತಿದೆ. ಆದರೆ ರಾಮಾಯಣ ಮೊದಲ ಭಾಗ ನೋಡುವ ಯಶ್ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡುವುದು ಪಕ್ಕಾ ಆಗಿದೆ.
ಇಬ್ಬರೂ ಮುಖಾಮುಖಿಯಾಗಲ್ಲ
ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದ ಪ್ರಚಾರದ ವೇಳೆ ನಟ ಯಶ್ ಒಂದು ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಮೊದಲ ಭಾಗದಲ್ಲಿ ಶ್ರೀರಾಮ ಮತ್ತು ರಾವಣನ ನಡುವೆ ಯಾವುದೇ ಮುಖಾಮುಖಿ ಅಥವಾ ಜಿದ್ದಾಜಿದ್ದಿನ ದೃಶ್ಯಗಳಿಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. 'ಫ್ಯಾಂಡಾಂಗೋ' (Fandango) ಜೊತೆಗಿನ ಸಂದರ್ಶನದಲ್ಲಿ ರಣಬೀರ್ ಕಪೂರ್ ಜೊತೆಗಿನ ನಟನೆಯ ಅನುಭವದ ಬಗ್ಗೆ ಕೇಳಿದಾಗ, "ಈ ಚಿತ್ರದ ಮೊದಲ ಭಾಗದಲ್ಲಿ ನಾವಿಬ್ಬರೂ ಒಟ್ಟಿಗೆ ಪರದೆಯ ಮೇಲೆ ಕಾಣಿಸಿಕೊಂಡಿಲ್ಲ. ಇದು ಎರಡು ಭಾಗಗಳ ಸಿನಿಮಾ. ಮೊದಲ ಭಾಗದಲ್ಲಿ ರಾವಣನಾಗಿ ನನಗೆ ನನ್ನದೇ ಆದ ಸಾಮ್ರಾಜ್ಯವಿದೆ, ರಾಮನಿಗೆ ಆತನದ್ದೇ ಆದ ರಾಜ್ಯವಿದೆ" ಎಂದು ಯಶ್ ಗುಟ್ಟು ಬಿಚ್ಚಿಟ್ಟಿದ್ದಾರೆ.

ತೆರೆಯ ಮೇಲೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಚಿತ್ರೀಕರಣದ ವೇಳೆ ರಣಬೀರ್ ಅವರನ್ನು ಭೇಟಿಯಾಗಿರುವುದಾಗಿ ಯಶ್ ತಿಳಿಸಿದ್ದಾರೆ. "ನಾವಿಬ್ಬರೂ ಒಂದೆರಡು ಬಾರಿ ಭೇಟಿಯಾಗಿದ್ದೇವೆ. ರಣಬೀರ್ ಅದ್ಭುತ ನಟ. ನಮ್ಮ ನಡುವೆ ಪರಸ್ಪರ ಗೌರವವಿದೆ. 'ರಾಮಾಯಣ'ದಂತಹ ಮಹತ್ವಾಕಾಂಕ್ಷೆಯ ಚಿತ್ರವನ್ನು ಮಾಡಲು ಹೊರಟಾಗ, ಈ ಕಥೆಯನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸುವುದು ನಮ್ಮೆಲ್ಲರ ಏಕೈಕ ಉದ್ದೇಶವಾಗಿರುತ್ತದೆ. ನಮ್ಮ ದೃಷ್ಟಿಕೋನಗಳು ಒಂದೇ ಆಗಿರುವುದರಿಂದ ನಮ್ಮ ನಡುವಿನ ಕೆಮಿಸ್ಟ್ರಿ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ, ನಾವು ಈ ಪ್ರಕ್ರಿಯೆಯನ್ನು ಆನಂದಿಸುತ್ತಿದ್ದೇವೆ ಎಂದೂ ಯಶ್ ಹೇಳಿದ್ದಾರೆ.
ರಾವಣ ವಿಲನ್ ಅಲ್ಲ
ಇದೇ ಸಂದರ್ಭದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರು ತಮ್ಮ ಚಿತ್ರದಲ್ಲಿ ರಾವಣನ ಪಾತ್ರವನ್ನು ಹೇಗೆ ಚಿತ್ರಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. "ರಾವಣನ ಜೀವನದಲ್ಲಿ ಅನೇಕ ಮಗ್ಗಲುಗಳಿವೆ. ಆತ ಕೇವಲ ನೆಗೆಟಿವ್ ಪಾತ್ರವಲ್ಲ. ಆತ ಒಬ್ಬ ಶ್ರೇಷ್ಠ ಯೋಧ, ನಿಪುಣ ಸಂಗೀತಗಾರ, ಮಹಾನ್ ಪಂಡಿತ ಮತ್ತು ಪ್ರಜೆಗಳ ಮೇಲೆ ಪ್ರೀತಿಯುಳ್ಳ ರಾಜನಾಗಿದ್ದ. ಅಷ್ಟೇ ಅಲ್ಲದೆ, ಆತ ಪರಮ ಶಿವಭಕ್ತ ಕೂಡ ಆಗಿದ್ದ. ಕೇವಲ ಕೆಟ್ಟ ಪಾತ್ರ ಎನ್ನುವುದಕ್ಕಿಂತ ಮೀರಿದ ವ್ಯಕ್ತಿತ್ವ ಆತನದ್ದಾಗಿತ್ತು" ಎಂದು ತಿಳಿಸಿದ್ದಾರೆ. ಆದರೆ, ಈಗ ಹೊರಬಿದ್ದಿರುವ ಸುದ್ದಿ ಯಶ್ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ. ಚಿತ್ರದ ಮೊದಲ ಭಾಗದಲ್ಲಿ ಯಶ್ ಮತ್ತು ರಣಬೀರ್ ಒಟ್ಟಿಗೆ ಕಾಣಿಸಿಕೊಳ್ಳುವ ಒಂದೇ ಒಂದು ದೃಶ್ಯವೂ ಇಲ್ಲವಂತೆ.

ಸಂದರ್ಶನದಲ್ಲಿ ಸ್ವತಃ ಯಶ್ ಅವರೇ ಈ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. "ರಾಮಾಯಣ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಮೊದಲ ಭಾಗದಲ್ಲಿ ರಾಮನಿಗೆ ತನ್ನದೇ ಆದ ಸಾಮ್ರಾಜ್ಯದ ಕಥೆಯಿದೆ, ರಾವಣನಾಗಿ ನನಗೆ ನನ್ನದೇ ಆದ ಲಂಕಾ ಸಾಮ್ರಾಜ್ಯದ ಹಿನ್ನೆಲೆಯಿದೆ. ಹೀಗಾಗಿ ಮೊದಲ ಭಾಗದಲ್ಲಿ ನಾವಿಬ್ಬರೂ ಪರದೆಯನ್ನು ಹಂಚಿಕೊಂಡಿಲ್ಲ" ಎಂದು ಯಶ್ ಹೇಳಿದ್ದಾರೆ. ಇದರ ಅರ್ಥ, ಮೊದಲ ಭಾಗದಲ್ಲಿ ಯಶ್ ಅವರ ಪಾತ್ರದ ವ್ಯಾಪ್ತಿ ಕಡಿಮೆ ಇರಲಿದೆಯೇ ಅಥವಾ ಕೇವಲ ರಾವಣನ ಸಾಮ್ರಾಜ್ಯದ ಪರಿಚಯಕ್ಕೆ ಸೀಮಿತವಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ.
ಇನ್ನು ರಾಮ ಮತ್ತು ರಾವಣನ ನಡುವಿನ ಅಸಲಿ ಯುದ್ಧ ಮತ್ತು ಮುಖಾಮುಖಿಯ ದೃಶ್ಯಗಳು ಬರುವುದು ಚಿತ್ರದ ಎರಡನೇ ಭಾಗದಲ್ಲಿ ಮಾತ್ರ. ಅಂದರೆ, ರಣಬೀರ್ ಮತ್ತು ಯಶ್ ಅವರ ನಡುವಿನ 'ಪವರ್‌ಫುಲ್' ಕೆಮಿಸ್ಟ್ರಿ ಮತ್ತು ಫೈಟಿಂಗ್ ನೋಡಲು ಅಭಿಮಾನಿಗಳು ಇನ್ನೂ ದೀರ್ಘಕಾಲ ಕಾಯಬೇಕು. ಮೊದಲ ಭಾಗದಲ್ಲಿ ಕೇವಲ ರಾವಣನ ವೈಭವವನ್ನು ನೋಡಿ ತೃಪ್ತಿಪಡಬೇಕಿದೆ. ನಿರ್ದೇಶಕ ನಿತೇಶ್ ತಿವಾರಿ ಅವರು ರಾವಣನನ್ನು ಕೇವಲ ವಿಲನ್ ರೀತಿ ತೋರಿಸುತ್ತಿಲ್ಲ. ರಾವಣನಲ್ಲಿದ್ದ ಪಾಂಡಿತ್ಯ, ಶಿವಭಕ್ತಿ ಮತ್ತು ಶೌರ್ಯವನ್ನು ಅದ್ಧೂರಿಯಾಗಿ ಚಿತ್ರಿಸಲಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಯಶ್ ಪಾತ್ರ ಕೂಡ ರಾಮನಷ್ಟೇ ಹೈಲೈಟ್ ಆಗಲಿದೆ.












Click it and Unblock the Notifications