Rajinikanth: ವಿಜಯ್ ಮೇಲೆ ನನಗೆ ಅಸೂಯೆಯಿಲ್ಲ, ನಾನು ಅಷ್ಟು ಚೀಪ್ ಕೂಡ ಅಲ್ಲ: ನಟ ರಜನಿಕಾಂತ್ ಸ್ಪಷ್ಟನೆ
ತಮಿಳುನಾಡು ರಾಜಕೀಯದಲ್ಲಿ ಇತ್ತೀಚೆಗೆ ಭಾರಿ ಬದಲಾವಣೆ ಗಾಳಿ ಬೀಸಿದ್ದು, ನಟ ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಈ ಬೆನ್ನಲ್ಲೇ ತಮಿಳು ಚಿತ್ರರಂಗದ ತಲೈವಾ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಸಿಎಂ ವಿಜಯ್ ಮತ್ತು ತಮ್ಮ ನಡುವಿನ ಸಂಬಂಧದ ಕುರಿತು ಕೇಳಿಬರುತ್ತಿರುವ ಟೀಕೆಗಳಿಗೆ ಹಾಗೂ ವದಂತಿಗಳಿಗೆ ಖಡಕ್ ಉತ್ತರ ನೀಡಿದ್ದಾರೆ. "ನನ್ನ ಮೇಲೆ ಟೀಕೆಗಳು ಕೇಳಿಬರುತ್ತಿವೆ. ನಾನು ಮುಖ್ಯಮಂತ್ರಿ ವಿಜಯ್ ಅವರ ಮೇಲೆ ಅಸೂಯೆ ಪಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನನಗೆ ನಮ್ಮ ಸಿಎಂ ವಿಜಯ್ ಕಂಡರೆ ಯಾವುದೇ ಅಸೂಯೆಯಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ನಾನು ರಾಜಕೀಯದಲ್ಲೇ ಇಲ್ಲ, ಅಸೂಯೆ ಏಕೆ?"
ತಮ್ಮ ಮತ್ತು ವಿಜಯ್ ನಡುವಿನ ಹೋಲಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ ರಜನಿಕಾಂತ್, "ಮೊದಲನೆಯದಾಗಿ ನಾನು ಸಕ್ರಿಯ ರಾಜಕೀಯದಲ್ಲಿಯೇ ಇಲ್ಲ. ಹಾಗಿರುವಾಗ ನಾನು ಅವರ ಮೇಲೆ ಅಸೂಯೆ ಪಡಲು ಹೇಗೆ ಸಾಧ್ಯ? ನನಗೂ ಮತ್ತು ವಿಜಯ್‌ಗೂ ಒಂದು ತಲೆಮಾರಿನ ಅಂತರವಿದೆ. ನಾನು ಅವನಿಗಿಂತ ಬರೋಬ್ಬರಿ 28 ವರ್ಷ ದೊಡ್ಡವನು" ಎಂದು ವಯಸ್ಸಿನ ವ್ಯತ್ಯಾಸವನ್ನು ನೆನಪಿಸಿದ್ದಾರೆ.

ಮುಖ್ಯಮಂತ್ರಿ ವಿಜಯ್ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ತಲೈವಾ, "ಅವರ ಮೇಲೆ ನನಗೆ ಅಸೂಯೆ ಪಡಲು ಯಾವುದೇ ಕಾರಣವಿಲ್ಲ. ವಿಜಯ್ ಅವರ ಈ ಸಾಧನೆ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷ ತಂದಿದೆ. ಜನರ ನಿರೀಕ್ಷೆಗಳು ಅವರ ಮೇಲೆ ಹೆಚ್ಚಾಗಿವೆ. ನನ್ನ ಕಡೆಯಿಂದ ಮುಖ್ಯಮಂತ್ರಿ ವಿಜಯ್ ಅವರಿಗೆ ಎಲ್ಲ ರೀತಿಯ ಶುಭ ಹಾರೈಕೆಗಳು" ಎಂದಿದ್ದಾರೆ.
ಸ್ಟಾಲಿನ್ ಭೇಟಿ ಕುರಿತು ರಜನಿ ಸ್ಪಷ್ಟನೆ
ಇದೇ ವೇಳೆ, ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದಾಗ ಕೇಳಿಬಂದಿದ್ದ ಟೀಕೆಗಳಿಗೂ ರಜನಿಕಾಂತ್ ಉತ್ತರಿಸಿದ್ದಾರೆ. ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಹೋಗಿ ಭೇಟಿಯಾದೆ. ಅದು ಕೂಡ ದೊಡ್ಡ ಮಟ್ಟದ ವಿವಾದ ಮತ್ತು ಟೀಕೆಗೆ ಒಳಗಾಯಿತು. ಆದರೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಸ್ಟಾಲಿನ್ ಮತ್ತು ನನ್ನ ನಡುವಿನ ಸ್ನೇಹ ರಾಜಕೀಯವನ್ನು ಮೀರಿದ್ದು. ಅದಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯುವುದು ಬೇಡ" ಎಂದು ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

ವಿಜಯ್‌ಗೆ ಮೊದಲೇ ಶುಭ ಹಾರೈಸಿದ್ದೆ
ವಿಜಯ್ ಮುಖ್ಯಮಂತ್ರಿಯಾದಾಗ ರಜನಿಕಾಂತ್ ಅವರು ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂಬ ವದಂತಿಗಳಿಗೆ ಉತ್ತರಿಸಿದ ಅವರು, "ನಾನು ಏರ್‌ಪೋರ್ಟ್‌ನಲ್ಲಿ ವಿಜಯ್‌ಗೆ ಅಭಿನಂದನೆ ಸಲ್ಲಿಸಲಿಲ್ಲ ಎಂಬ ಟೀಕೆಗಳು ಕೇಳಿಬಂದವು. ಆದರೆ, ವಿಜಯ್ ಚುನಾವಣೆಯಲ್ಲಿ ಗೆದ್ದ ತಕ್ಷಣವೇ ನಾನು ನನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದೆ. ನಾನು ಈಗಾಗಲೇ ರಾಜಕೀಯದಿಂದ ದೂರ ಸರಿದಿದ್ದೇನೆ. ಹಾಗಿರುವಾಗ ನಾನು ಅವರ ಮೇಲೆ ಅಸೂಯೆ ಪಡಲು ಹೇಗೆ ಸಾಧ್ಯ? ಯಾರಿಗೆ ಯಾವುದು ಬರೆದಿದೆಯೋ ಅದು ಖಂಡಿತಾ ಸಂಭವಿಸುತ್ತದೆ, ಬರೆಯದಿದ್ದುದ್ದು ಸಿಗುವುದಿಲ್ಲ" ಎಂದಿದ್ದಾರೆ.
ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್ ಅವರು ಸೋಲನ್ನನುಭವಿಸಿದ್ದು ನನಗೆ ವೈಯಕ್ತಿಕವಾಗಿ ತುಂಬಾ ಬೇಸರ ಮೂಡಿಸಿತು. ಅದಕ್ಕಾಗಿಯೇ ನಾನು ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ. ಬೇರೆ ಯಾವುದೇ ವಿಷಯಗಳ ಬಗ್ಗೆ ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಚೀಪ್ ಅಥವಾ ಕೀಳು ಮಟ್ಟದ ವ್ಯಕ್ತಿಯಲ್ಲ" ಎಂದು ತಮ್ಮ ವಿರೋಧಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.













Click it and Unblock the Notifications