ನನ್ನ ಸಿನಿಮಾಗಳಿಗೆ ಕನ್ನಡದ ಆ ನಟನೇ ಸ್ಫೂರ್ತಿ ಎಂದ 'ಪುಷ್ಪ' ಡೈರೆಕ್ಟರ್
ಕನ್ನಡ ಚಿತ್ರರಂಗವನ್ನು ಮೊದಲೆಲ್ಲ ಬೇರೆ ಚಿತ್ರರಂಗಗಳು ಕೀಳಾಗಿ ನೋಡುತ್ತವೆ ಎನ್ನುವ ಮಾತಿತ್ತು. ಆದರೆ ಇದಕ್ಕೆ ಸೆಡ್ಡು ಹೊಡೆಯುವಂತೆ ಕನ್ನಡದ ಕಲಾವಿದರು ತಮ್ಮ ಹವಾ ತೋರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಕನ್ನಡದ ಕೆಜಿಎಫ್, ಕಾಂತಾರ ಸಿನಿಮಾಗಳು ಕೂಡ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ದಿಟ್ಟಿಸಿ ನೋಡುವಂತೆ ಮಾಡಿದ್ದವು. ಇನ್ನು ಟಾಲಿವುಡ್ ವಿಚಾರಕ್ಕೆ ಬಂದರೆ ಪುಷ್ಪ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಆದರೆ, ಪುಷ್ಪ (pushpa 2) ಸಿನಿಮಾದ ನಿರ್ದೇಶಕ ಸುಕುಮಾರ್ (Sukumar) ಅವರ ಸಿನಿಮಾಗಳಿಗೆ ಕನ್ನಡದ ಖ್ಯಾತ ನಟರೊಬ್ಬರು ಸ್ಫೂರ್ತಿಯಂತೆ. ಈ ವಿಚಾರವನ್ನು ಖುದ್ದಾಗಿ ಸುಕುಮಾರ್ ಅವರೇ ಹೇಳಿದ್ದಾರೆ.
ಹೌದು ಅಲ್ಲು ಅರ್ಜುನ್ ನಟನೆಯ ಪುಷ್ಪ ಸರಣಿಗಳು ಭಾರತದಾದ್ಯಂತ ಭರ್ಜರಿ ಹಿಟ್ ಕಂಡಿವೆ. ಇದರಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಕೂಡ ಬಣ್ಣ ಹಚ್ಚಿದ್ದರು. ಆದರೆ ಈ ಸಿನಿಮಾ ನಿರ್ದೇಶಿಸಿರುವ ಟಾಲಿವುಡ್‌ನ ಟಾಪ್ ಡೈರೆಕ್ಟರ್ ಸುಕುಮಾರ್ ಅವರ ಸಿನಿಮಾಗಳಿಗೆ ಕನ್ನಡದ ನಟರೊಬ್ಬರು ದೊಡ್ಡ ಸ್ಫೂರ್ತಿ ಎಂದು ರಿವೀಲ್ ಮಾಡಿದ್ದಾರೆ. ಯಾರು ಆ ಕನ್ನಡದ ನಟ ಗೊತ್ತಾ?

ಹೈದರಾಬಾದ್‌ನಲ್ಲಿ ನಡೆದ ಸೀತಾ ಪಯಣಂನ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುಕುಮಾರ್ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ನಾನು ಕನ್ನಡದಲ್ಲಿರುವ ಅವರಂತಹ ನಿರ್ದೇಶಕರನ್ನು ಬೇರೆ ಎಲ್ಲೂ ನೋಡಿಲ್ಲ. ಅವರ ಸಿನಿಮಾಗಳಲ್ಲಿ ಇರುವ ಹುಚ್ಚು, ಉನ್ಮಾದವನ್ನ ನಾನು ಬೇರೆ ಯಾವ ನಿರ್ದೇಶಕರಲ್ಲೂ ಕಂಡಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಸಿನಿಮಾಗಳನ್ನ ನಿರ್ದೇಶಿಸಿದ್ದರೆ, ನಾನು ನಿಜಕ್ಕೂ ಸಂತೋಷದಿಂದ ನಿವೃತ್ತಿ ಹೊಂದುತ್ತಿದ್ದೆ ಎಂದು ಕನ್ನಡದ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಸುಕುಮಾರ್ ಕೊಂಡಾಡಿದ್ದಾರೆ.
ನನ್ನ ಮೇಲೆ ಆ ಮೂರು ಸಿನಿಮಾಗಳ ಪ್ರಭಾವ
ಉಪೇಂದ್ರ ಅವರ ಕಲ್ಟ್ ಕ್ಲಾಸಿಕ್ ಸಿನಿಮಾಗಳಾದ ʼಓಂʼ, ʼಎʼ ಹಾಗೂ ʼಉಪೇಂದ್ರʼ ಅವರ ಸಿನಿಮಾಗಳು ನನ್ನ ಮೇಲೆ ಪ್ರಭಾವ ಬೀರಿದೆ. ಪ್ರತಿಯೊಬ್ಬ ನಿರ್ದೇಶಕರು ಕೂಡ ಉಪೇಂದ್ರ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಇಂದು ನನ್ನ ಚಲನಚಿತ್ರಗಳಲ್ಲಿ ನೀವು ಗಮನಿಸುವ ಯಾವುದೇ ಚಿತ್ರಕಥೆ ಕೂಡ ಉಪೇಂದ್ರ ಅವರ ಆ ಮೂರು ಕಲ್ಟ್ ಕ್ಲಾಸಿಕ್ ಸಿನಿಮಾಗಳಿಂದ ಪ್ರಭಾವಿತವಾಗಿದೆ. ನಾನು ನಾಚಿಕೆಯಿಲ್ಲದೆ ಅವರಿಂದ ಇದನ್ನು ಎರವಲು ಪಡೆದಿದ್ದೇನೆ ಎಂದು ಸುಕುಮಾರ್ ಹೇಳಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ ಉಪೇಂದ್ರ ಅವರು ಸುಕುಮಾರ್ ಮಾತಿಗೆ ನಮಸ್ಕರಿಸಿದರು. ಅಲ್ಲದೆ ಸುಕುಮಾರ್ ಅವರ ಬಗ್ಗೆ ನಾನೇನು ಮಾತನಾಡಬೇಕೋ ತಿಳಿಯುತ್ತಿಲ್ಲ. ಈಗಾಗಲೇ ಬಹುತೇಕರು ನಿಮಗೆ ಫ್ಯಾನ್ ಆಗಿದ್ದಾರೆ. ಒಂದು ಡಿಫರೆಂಟ್ ವಿಷಯವನ್ನ ಕಮರ್ಷಿಯಲ್ ಆಗಿ ಹೇಗೆ ಪಂಚ್ ಕೊಡಬೇಕು? ತಗ್ಗೋದೆ ಇಲ್ಲ ಎಂದು ತೋರಿಸಿದವರು ಸುಕುಮಾರ್ ಅವರು ಎಂದು ಉಪೇಂದ್ರ ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಅವರನ್ನು ಕೂಡ ಉಪ್ಪಿ ಹೊಗಳಿದ್ರು. ಅಲ್ಲ ನಾವು ಬಾಲ್ಯದಲ್ಲಿ ನಮಗೆ ಆಕ್ಷನ್ ಕಿಂಗ್ ಅಂದ್ರೆ ಅದು ಅರ್ಜುನ್ ಸರ್ಜಾ ಅವರೇ, ಕರ್ನಾಟಕದಲ್ಲಿ ಅವರಿಗೆ ಹೆಚ್ಚು ಕ್ರೇಜ್ ಇತ್ತು. ಅವರು ಭಾರತದ ಬ್ರೂಸ್‌ಲೀ ಆಗಿದ್ರು ಎಂದು ನೆನೆದಿದ್ದಾರೆ.












Click it and Unblock the Notifications