ಸೌಂದರ್ಯ ಜಗದೀಶ್ ಪವಿತ್ರಾ ಗೌಡಗೆ 2 ಕೋಟಿ ಕೊಟ್ಟಿರುವುದು ನಿಜನಾ? ಪತ್ನಿ ಹೇಳಿದ್ದೇನು?
ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ವಿಧಿವಶರಾಗಿ ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ ಅವರ ಪತ್ನಿ, ಮಗ ಸೇರಿದಂತೆ ಕುಟುಂಬಸ್ಥರು ನಿನ್ನೆ ಮೇ 1ರಂದು ಮೊದಲ ವರ್ಷದ ಪುಣ್ಯ ತಿಥಿ ನೆರವೇರಿಸಿದ್ದಾರೆ. ಈ ವೇಳೆ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಮಾಧ್ಯಮಗಳ ಜೊತೆ ಮಾತನಾಡಿ ಗೊಂದಲ ಹುಟ್ಟು ಹಾಕಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ವ್ಯವಹಾರದಲ್ಲಿ ಸೌಂದರ್ಯ ಜಗದೀಶ್ ಅವರಿಗೆ ಆದ ಮೋಸಗಳ ಬಗ್ಗೆ ಮಾತನಾಡಿದ ಅವರು, 'ನಮಗೆ ಅನೇಕ ಜನರಿಂದ ಮೋಸ ಆಗಿರುವುದು ಖಂಡಿತ ಸತ್ಯ. ನಮ್ಮ ಯಜಮಾನರೇ ಅದನೆಲ್ಲಾ ಬರೆದು ಇಟ್ಟಿದ್ದಾರೆ. ನಾನು ಇಪ್ಪತ್ತು ಮೂವತ್ತು ವರ್ಷ ಅವರ ಜೊತೆ ಬಾಳಿದ್ದೇನೆ. ಹೀಗಾಗಿ ಪ್ರತಿಯೊಂದು ನನಗೆ ಗೊತ್ತು. ಯಾರ್ಯಾರು ಏನೇನು ಮೋಸ ಮಾಡಿದ್ದಾರೆ ಎನ್ನುವುದು ಎಲ್ಲಾ ಗೊತ್ತಾಗಿದೆ. ಅವತ್ತು ನಾವು ಆರೋಪ ಮಾಡಿರುವುದು ಸತ್ಯ. ನಾವು ಸುಪ್ರೀಂ ಕೋರ್ಟ್‌ಗೆ ಹೋಗಿರುವುದು ಸತ್ಯ. ಅಲ್ಲಿಂದ ನಮಗೆ ನ್ಯಾಯ ಸಿಕ್ಕಿರುವುದು ಸತ್ಯ. ತನಿಖೆ ನಡೆಯುತ್ತಿದೆ. ಅದರಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗೇ ಆಗುತ್ತದೆ' ಎಂದರು.

ಇನ್ನು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆಪ್ತರಾಗಿದ್ದರು. ಹೀಗಾಗಿ ದರ್ಶನ್ ಜೈಲಿನಿಂದ ಬಂದ ಬಳಿಕ ಸೌಂದರ್ಯ ಜಗದೀಶ್ ಕುಟುಂಬವನ್ನು ಭೇಟಿಯಾಗಿದ್ದಾರಾ ಎನ್ನುವ ಪ್ರಶ್ನೆ ಉತ್ತರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ, ದರ್ಶನ್ ಅವರು ಜೈಲಿನಿಂದ ಬಂದ ಬಳಿಕ ನಮ್ಮ ಕುಟುಂಬವನ್ನು ಭೇಟಿಯಾಗಿದ್ದಾರೆ ಎಂದರು.
'ದರ್ಶನ್ ಅವರು ನಮ್ಮನ್ನು ಭೇಟಿಯಾಗಿ ಧೈರ್ಯ ಹೇಳಿದ್ದಾರೆ. ಅಮ್ಮ-ಮಗ ಆರಾಮಾಗಿರಿ, ಟೆನ್ಷನ್ ಮಾಡಿಕೊಳ್ಳಬೇಡಿ. ಸೌಂದರ್ಯ ಜಗದೀಶ್ ಸರ್ ಹೆಸರು ಉಳಿಸಬೇಕು, ಚೆನ್ನಾಗಿರಿ ಎಂದು ಹೇಳಿದ್ದಾರೆ' ಎಂದರು. ಇನ್ನು ಇದೇ ವೇಳೆ ಪವಿತ್ರಾ ಗೌಡಗೆ ಸೌಂದರ್ಯ ಜಗದೀಶ್ ಎರಡು ಕೋಟಿ ಕೊಟ್ಟಿರುವುದು ನಿಜನಾ ಎನ್ನುವ ಪ್ರಶ್ನೆ ಉದ್ಭವಾಗುತ್ತಿದ್ದಂತೆ ಸೌಂದರ್ಯ ಜಗದೀಶ್ ಪತ್ನಿ 'ಇವತ್ತು ನಮ್ಮ ಮನೆಯವರ ಪೂಜೆ ಬೇರೆಯದೆಲ್ಲಾ ಮಾತನಾಡುವುದು ಬೇಡ' ಎಂದು ಹೇಳಿದ್ದಾರೆ.

ಪವಿತ್ರಾ ಗೌಡ ಎರಡು ಕೋಟಿ ಕೊಟ್ಟಿದ್ದಾರಾ ಸೌಂದರ್ಯ ಜಗದೀಶ್?
ಕನ್ನಡ ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಕಳೆದ ವರ್ಷ ಏಕಾಏಕಿ ಆತ್ಮಹತ್ಯೆಗೆ ಶರಣಾದರು. ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢವಾಗಿದ್ದರೂ ಕೂಡ, ಅವರ ಡೆತ್ ನೋಟ್‌ನಲ್ಲಿ ವ್ಯವಹಾರದಲ್ಲಿ 60 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಪಾಲುದಾರರೇ ಕಾರಣ ಎಂದು ಬರೆದಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಸೌಂದರ್ಯ ಜಗದೀಶ್, ಪವಿತ್ರಾ ಗೌಡಗೆ ಎರಡು ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿರುವುದು ಬಹಿರಂಗಗೊಂಡಿತ್ತು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಬಗ್ಗೆ ಅಸಲಿ ವಿಚಾರಗಳು ಈವರೆಗೂ ಬಹಿರಂಗಗೊಂಡಿಲ್ಲ.












Click it and Unblock the Notifications